ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು 2026-27ನೇ ಸಾಲಿನ ಕೇಂದ್ರ ಬಜೆಟ್ (Union Budget 2026-27) ಮಂಡಿಸಿದರು. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರಕ್ಕೆ (Agriculture Sector) ಸಂಬಂಧಿಸಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ವಿಶೇಷವಾಗಿ ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಹೆಚ್ಚು ಉತ್ಪಾದಿಸುವ ಬೆಳೆಗಳಾದ ತೆಂಗು, ಶ್ರೀಗಂಧ, ಕೋಕೋ, ಗೇರುಬೀಜ, ಬಾದಾಮಿ, ವಾಲ್‌ನಟ್ಸ್, ಪೈನ್ ನಟ್ಸ್‌ನಂತಹ ಬೆಳೆಗಳನ್ನು ಉತ್ತೇಜಿಸುವ ಯೋಜನೆಗಳನ್ನು ಘೋಷಿಸಿದ್ದಾರೆ. ಇದರಿಂದ ಕೃಷಿ ಉತ್ಪನ್ನಗಳ ಅಭಿವೃದ್ಧಿ, ಉತ್ಪಾದಕತೆಯನ್ನು ಹೆಚ್ಚಿಸಿ, ರೈತರ ಆದಾಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

2026-27ರ ಕೇಂದ್ರ ಬಜೆಟ್‌ನಲ್ಲಿ ಉನ್ನತ ಮೌಲ್ಯದ ಕೃಷಿ, ತಂತ್ರಜ್ಞಾನ-ಚಾಲಿತ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತರ ಆದಾಯ ಹೆಚ್ಚಿಸಲು, ಗ್ರಾಮೀಣ ಉದ್ಯೋಗಾವಕಾಶ ಸೃಷ್ಟಿಸಲು ಮತ್ತು ಕೃಷಿ ಪದ್ಧತಿಗಳನ್ನು ಆಧುನೀಕರಿಸುವ ಉದ್ದೇಶದಿಂದ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.
ರೈತರ ಅಭಿವೃದ್ಧಿಗೆ ಕೇಂದ್ರ ಬಜೆಟ್!
ಭಾನುವಾರ ತಮ್ಮ ಬಜೆಟ್ ಭಾಷಣದಲ್ಲಿ, ಸರ್ಕಾರವು ತನ್ನ ಮೂರನೇ "ಕರ್ತವ್ಯ"ವು ಕೃಷಿ ಉತ್ಪಾದಕತೆ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸುವತ್ತ ಗಮನಹರಿಸುತ್ತದೆ ಎಂದು ಸೀತಾರಾಮನ್ ಘೋಷಣೆ ಮಾಡಿದರು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಶೇಷ ಗಮನ, ಯುವಕರಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದು, ದುರ್ಬಲ ವರ್ಗಗಳಿಗೆ ಬೆಂಬಲ ನೀಡುವುದು ಮತ್ತು ಹಿಂದುಳಿದ ರಾಜ್ಯಗಳು ಹಾಗೂ ಈಶಾನ್ಯ ಪ್ರದೇಶದಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸುವುದು ಇದರ ಮುಖ್ಯ ಗುರಿಗಳಾಗಿವೆ.
ಹೆಚ್ಚು ಮೌಲ್ಯದ ಬೆಳಗಳಿಗೆ ಬೆಂಬಲ
ಕೃಷಿ ಉತ್ಪನ್ನಗಳನ್ನು ವೈವಿಧ್ಯಗೊಳಿಸಲು ಮತ್ತು ಆದಾಯ ಹೆಚ್ಚಿಸಲು, ಸರ್ಕಾರವು ಅಧಿಕ ಮೌಲ್ಯದ ಬೆಳೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಉತ್ತೇಜನ ನೀಡಿದೆ. ಕರಾವಳಿ ಪ್ರದೇಶಗಳಲ್ಲಿ ತೆಂಗು, ಶ್ರೀಗಂಧ, ಕೊಕೊ ಮತ್ತು ಗೋಡಂಬಿ, ಈಶಾನ್ಯ ಭಾಗದಲ್ಲಿ ಅಗರವುಡ್, ಹಾಗೂ ವಾಲ್‌ನಟ್ಸ್, ಬಾದಾಮಿ ಮತ್ತು ಪೈನ್ ನಟ್ಸ್ ಬೆಳೆಗಳನ್ನು ಬೆಂಬಲಿಸಲಾಗುತ್ತದೆ. ಈ ಬೆಳೆಗಳನ್ನು ಉತ್ತೇಜಿಸಲು ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರಲಿದೆ. ಈ ಬೆಳೆಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯನ್ನು ಹೊಂದಿರುವುದರಿಂದ, ರೈತರ ಆದಾಯವೂ ಹೆಚ್ಚಾಗುವ ನಿರೀಕ್ಷೆಯಿದೆ.
ತೆಂಗು ಉತ್ತೇಜನಾ ಯೋಜನೆ:
ವಿಶ್ವದ ಅತಿದೊಡ್ಡ ತೆಂಗು ಉತ್ಪಾದಕ ರಾಷ್ಟ್ರವಾಗಿರುವ ಭಾರತದಲ್ಲಿ, ಹೊಸ ತೆಂಗು ಉತ್ತೇಜನ ಯೋಜನೆ (Coconut Promotion Scheme) ಜಾರಿಯಾಗಲಿದೆ. ಪ್ರಮುಖ ತೆಂಗು ಬೆಳೆಯುವ ರಾಜ್ಯಗಳಲ್ಲಿ ಕಡಿಮೆ ಉತ್ಪಾದನೆ ನೀಡುವ ಮರಗಳನ್ನು ಹೊಸ ತಳಿಗಳೊಂದಿಗೆ ಬದಲಾಯಿಸುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವುದು ಇದರ ಗುರಿ. ಸುಮಾರು 3 ಕೋಟಿ ಜನರು, ಇದರಲ್ಲಿ ಸುಮಾರು 10 ಮಿಲಿಯನ್ ರೈತರು, ತೆಂಗು ಕೃಷಿಯಿಂದ ಜೀವನೋಪಾಯ ನಡೆಸುತ್ತಿದ್ದಾರೆ.
ಗೋಡಂಬಿ ಮತ್ತು ಕೊಕೊ ಕಚ್ಚಾ ವಸ್ತುಗಳ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ದೇಶವನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಬಜೆಟ್‌ನಲ್ಲಿ ಪ್ರತ್ಯೇಕ ಕಾರ್ಯಕ್ರಮ ಯೋಜನೆಯನ್ನು ಘೋಷಿಸಿದೆ. 2030ರ ವೇಳೆಗೆ ಭಾರತೀಯ ಗೋಡಂಬಿ ಮತ್ತು ಕೊಕೊವನ್ನು ಪ್ರೀಮಿಯಂ ಜಾಗತಿಕ ಬ್ರ್ಯಾಂಡ್‌ಗಳಾಗಿ ಪರಿವರ್ತಿಸುವುದು ಈ ಯೋಜನೆಯ ಗುರಿಯಾಗಿದೆ.
ಶ್ರೀಗಂಧದ ಕೃಷಿ ಕೂಡ ಗಮನಾರ್ಹ ಬೆಂಬಲ ಪಡೆಯಲಿದೆ. ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ವೈಜ್ಞಾನಿಕ ಕೃಷಿ ಮತ್ತು ಸುಗ್ಗಿಯ ನಂತರದ ಸಂಸ್ಕರಣೆಯನ್ನು ಉತ್ತೇಜಿಸಲಾಗುವುದು. 'ಭಾರತೀಯ ಶ್ರೀಗಂಧ ಪರಿಸರ ವ್ಯವಸ್ಥೆ'ಯನ್ನು ಪುನಃಸ್ಥಾಪಿಸುವುದು ಸಹ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಮೀನುಗಾರಿಕಾ ಕ್ಷೇತ್ರದಲ್ಲಿ, 500 ಜಲಾಶಯಗಳು ಮತ್ತು ಇತರ ಜಲಮೂಲಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಯೋಜನೆಗಳನ್ನು ಪ್ರಸ್ತಾಪಿಸಿದೆ. ಇದು ಮೀನುಗಾರಿಕೆಯನ್ನು ಮತ್ತಷ್ಟು ಬಲಪಡಿಸಲಿದೆ. ಮುಖ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಸ್ಟಾರ್ಟ್‌ಅಪ್‌ಗಳು, ಮಹಿಳಾ ನೇತೃತ್ವದ ಗುಂಪುಗಳು ಮತ್ತು ಮೀನು ರೈತ ಉತ್ಪಾದಕ ಸಂಸ್ಥೆಗಳಿಗೆ ಬೆಂಬಲ ನೀಡಿ, ಮಾರುಕಟ್ಟೆ ಸಂಪರ್ಕಗಳನ್ನು ಸುಧಾರಿಸುವತ್ತ ಗಮನಹರಿಸಲಾಗುವುದು.
ತಂತ್ರಜ್ಞಾನ ಚಾಲಿತ ಕೃಷಿಯನ್ನು ಬೆಂಬಲಿಸಲು, ಬಹುಭಾಷಾ AI ಸಾಧನವಾದ "ಭಾರತ್ ವಿಸ್ತಾರ್" ಅನ್ನು ಪ್ರಾರಂಭಿಸಲು ಬಜೆಟ್ ಪ್ರಸ್ತಾಪಿಸಿದೆ. ಇದು ಅಗ್ರಿಸ್ಟಾಕ್ ಪೋರ್ಟಲ್‌ಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR)ಯ ಕೃಷಿ ಪದ್ಧತಿಗಳನ್ನು ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳೊಂದಿಗೆ ಸಂಯೋಜಿಸುತ್ತದೆ. ಈ ಪ್ಲಾಟ್‌ಫಾರ್ಮ್ ರೈತರಿಗೆ ಉತ್ತಮ, ದತ್ತಾಂಶ-ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಒಟ್ಟಾರೆ ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications