2026-27ನೇ ಸಾಲಿನ ಕೇಂದ್ರ ಬಜೆಟ್ (Union Budget 2026-27) ಮಂಡನೆಗೆ ಇನ್ನೇನು ಒಂದು ವಾರ ಬಾಕಿ ಉಳಿದಿದೆ. ಅತ್ತ ಬಜೆಟ್ ಬಗ್ಗೆ ದೇಶದ ಜನರು ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ದೇಶವು ಕೇಂದ್ರ ಬಜೆಟ್‌ಗಾಗಿ ಕಾತುರದಿಂದ ಕಾದು ಕುಳಿತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಮೋದಿ ಸರ್ಕಾರ (Modi Govt) ಸತತ ಮೂರನೇ ಬಾರಿ ಅಧಿಕಾರ ವಹಿಸಿಕೊಂಡ ನಂತರ, ಎರಡನೇ ಪೂರ್ಣ ಬಜೆಟ್ ಇದಾಗಿದೆ. ಅಲ್ಲದೇ, ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಸತತ 9ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ಸೃಷ್ಟಿಸಲಿದ್ದಾರೆ.

ಇದೀಗ ಇತಿಹಾಸದಲ್ಲಿ ಮೊದಲ ಬಾರಿಗೆ ಭಾನುವಾರದಂದು ಬಜೆಟ್ ಮಂಡನೆ ಮಾಡಲಾಗುತ್ತಿದೆ. ಹಾಗಿದ್ರೆ ಈ ವರ್ಷದ ಬಜೆಟ್‌ನಲ್ಲಿ ಸಾಮಾನ್ಯ ಏನನ್ನು ನಿರೀಕ್ಷಿಸಬೇಕು? ತೆರಿಗೆ ವಿನಾಯಿತಿಗಳು ಮತ್ತು ಹೊಸ ಯೋಜನೆಗಳು ಘೋಷಣೆಯಾಗುತ್ತಾ ಎಂದು ಕಾತುರದಲ್ಲಿದ್ದಾರೆ.
ಆದಾಯ ತೆರಿಗೆ ವಿನಾಯಿತಿ ಸಿಗುತ್ತಾ?
ಹೆಚ್ಚುತ್ತಿರುವ ಬೆಲೆ ಏರಿಕೆ ಮತ್ತು ಜೀವನ ವೆಚ್ಚಗಳಿಂದಾಗಿ, ಆದಾಯದ ವಿಚಾರದಲ್ಲಿ ತೆರಿಗೆ ವಿನಾಯಿತಿಗಳನ್ನು ಬಜೆಟ್‌ನಿಂದ ಸಾಮಾನ್ಯ ಜನರು ನಿರೀಕ್ಷಿಸುತ್ತಿದ್ದಾರೆ. ಹೊಸ ತೆರಿಗೆ ಪದ್ಧತಿಗೆ ಒತ್ತು ನೀಡಿದರೂ, ಗಣನೀಯ ಇಳಿಕೆ ಸಿಗಲಿಲ್ಲ ಎಂಬ ಟೀಕೆಗಳು ಕೇಳುತ್ತಲೇ ಇದೆ. ಹೀಗಾಗಿ, ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಿಸುವುದು, ತೆರಿಗೆ ಸ್ಲ್ಯಾಬ್‌ಗಳನ್ನು ಅಪ್ಡೇಟ್ ಮಾಡುವುದು, ರಿಯಾಯಿತಿ ಮಿತಿಯನ್ನು ಹೆಚ್ಚಿಸುವ ಬೇಡಿಕೆಗಳು ಈ ವರ್ಷವೂ ಹೆಚ್ಚಾಗಿದೆ.
ಸಂಬಳ ಪಡೆಯುವವರು ಹಾಗೂ ಪಿಂಚಣಿದಾರರು ನೇರ ಪ್ರಯೋಜನಗಳನ್ನು ನಿರೀಕ್ಷಿಸುತ್ತಿದ್ದಾರೆ. ಪ್ರಸ್ತುತ ₹75,000 ಇರುವ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ₹1 ಲಕ್ಷಕ್ಕೆ ಹೆಚ್ಚಿಸಬೇಕೆಂದು ಬೇಡಿಕೆ ಇದೆ. ಇದು ಒಂದು ವೇಳೆ ಜಾರಿಯಾದರೆ, ಸಂಬಳದಾರರ ಮೇಲಿನ ತೆರಿಗೆ ಹೊರೆ ಗಣನೀಯವಾಗಿ ಕಡಿಮೆಯಾಗಲಿದೆ.
ರೈತರಿಗೆ ಸಿಗುತ್ತಾ ಗುಡ್‌ನ್ಯೂಸ್?
ಈ ಬಾರಿಯ ಬಜೆಟ್‌ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ಹೆಚ್ಚಿಸಲಾಗುತ್ತದೆಯೇ ಎಂದು ರೈತರು ಹಾಗೂ ಬಡವರು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ, ಅರ್ಹ ರೈತರಿಗೆ ವಾರ್ಷಿಕ ₹6,000 ರೂ. ಹಣವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಆದರೆ, ಗೊಬ್ಬರ, ಬೀಜ, ಕೂಲಿ, ಡೀಸೆಲ್‌ನಂತಹ ಕೃಷಿ ವೆಚ್ಚಗಳು ಏರಿಕೆಯಾಗಿದ್ದು, ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಕೂಗು ಕೇಳುತ್ತಿದೆ..
ಚುನಾವಣಾ ವರ್ಷವಾಗಿರುವುದರಿಂದ, ರೈತ ಸ್ನೇಹಿ ಘೋಷಣೆಗಳಿಗೆ ಕೇಂದ್ರ ಸರ್ಕಾರವು ಆದ್ಯತೆ ನೀಡುವ ಸಂಭವವಿದೆ. ಗ್ರಾಮೀಣ ಆದಾಯ ಹಾಗೂ ಬಳಕೆ ಹೆಚ್ಚಿಸುವುದು ಬಜೆಟ್‌ನ ಪ್ರಮುಖ ಉದ್ದೇಶಗಳಾಗಿರಬಹುದು. ಈ ಹಿನ್ನೆಲೆಯಲ್ಲಿ, ಪಿಎಂ ಕಿಸಾನ್ ಮೊತ್ತವನ್ನು ₹8,000 ಅಥವಾ ₹10,000 ಕ್ಕೆ ಏರಿಸುವ ಸಾಧ್ಯತೆ ಬಗ್ಗೆ ನಿರೀಕ್ಷೆಯಿದೆ.
ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಾ?
ಕಳೆದ ಕೆಲವು ತಿಂಗಳಿಂದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಹಣದುಬ್ಬರ ಇಳಿಕೆ ಕಂಡಿದೆ. ಇದು ಸ್ವಲ್ಪ ಮಟ್ಟಿಗೆ ಸರ್ಕಾರಕ್ಕೆ ಸಮಾಧಾನ ತಂದಿದೆ. ಈ ಹಿನ್ನೆಲೆ, ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಅಥವಾ ಜಿಎಸ್‌ಟಿ ದರಗಳಲ್ಲಿ ಬದಲಾವಣೆ ತಂದು ಸಾಮಾನ್ಯ ಜನರ ಕುಟುಂಬ ವೆಚ್ಚಗಳನ್ನು ತಗ್ಗಿಸಲು ಸರ್ಕಾರ ಮುಂದಾಗುವುದೇ ಎಂಬುದು ಕಾದುನೋಡಬೇಕಿದೆ.
ಹೊಸ ಯೋಜನೆಗಳು ಘೋಷಣೆಯಾಗುತ್ತಾ?
ಮಧ್ಯಮ ಹಾಗೂ ಬಡವರ್ಗದವರಿಗೆ ತೆರಿಗೆ ವಿನಾಯಿತಿ, ಉದ್ಯೋಗ ಸೃಷ್ಟಿಗಾಗಿ ಹೊಸ ಯೋಜನೆಗಳು, ಯುವಕರಿಗಾಗಿ ಸ್ಟಾರ್ಟ್‌ಅಪ್ ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಬಜೆಟ್‌ನಲ್ಲಿ ಘೋಷಣೆಯಾಗಬಹುದು ಎಂಬ ನಿರೀಕ್ಷೆಯಿದೆ. ಅಲ್ಲದೇ ಎಂಎಸ್‌ಎಂಇ ವಲಯಕ್ಕೆ ಕಡಿಮೆ ಬಡ್ಡಿಯ ಸಾಲಗಳು, ಮಹಿಳೆಯರು ಮತ್ತು ಸ್ವಯಂ ಉದ್ಯೋಗ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್‌ಗಳು ಸಹ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ..


Click it and Unblock the Notifications