ಭಾರತೀಯ ಪ್ರಯಾಣಿಕರಿಗೆ (Indian Passengers) ಪ್ರಮುಖ ಸಾರಿಗೆ ಸೇವೆಗಳಲ್ಲಿ ರೈಲು ಸೇವೆ ಕೂಡಾ ಒಂದು. ಇದೀಗ ದಕ್ಷಿಣ ಭಾರತದ ಮೂರು ಮಹಾನಗರಗಳಾದ ಬೆಂಗಳೂರು, ಮೈಸೂರು ಮತ್ತು ಚೆನ್ನೈ ನಡುವೆ ಸಂಪರ್ಕವನ್ನು ಸುಧಾರಿಸುವ ಉದ್ದೇಶದಿಂದ ಮೈಸೂರು-ಬೆಂಗಳೂರು-ಚೆನ್ನೈ ಬುಲೆಟ್ ರೈಲು (Mysore-Bangalore-Chennai Bullet Train) ಯೋಜನೆಗೆ ಕೇಂದ್ರ ಸರ್ಕಾರ ಅಡಿಪಾಯ ಹಾಕಿದೆ. 463 ಕಿಲೋಮೀಟರ್ ಉದ್ದದ ಈ ಮಹತ್ವಾಕಾಂಕ್ಷೆಯ ಯೋಜನೆಯ ಕಾರ್ಯ ಇದೀಗ ವೇಗ ಪಡೆದುಕೊಂಡಿದೆ. ಈ ಬುಲೆಟ್ ರೈಲು (Bullet Train) ಒಂದು ವೇಳೆ ಕಾರ್ಯಾಚರಣೆ ಆರಂಭವಾದರೆ ಮೈಸೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯ ಕೇವಲ 1 ಗಂಟೆ 10 ನಿಮಿಷಗಳಿಗೆ ಇಳಿಯುವ ನಿರೀಕ್ಷೆಯಿದೆ. ಈ ಮೂಲಕ ಮೈಸೂರು-ಚೆನ್ನೈ ಮತ್ತಷ್ಟು ಹತ್ತಿರವಾಗಲಿದೆ.

ಪ್ರಸ್ತುತ, ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅತಿ ವೇಗದ ರೈಲಾಗಿದ್ದು, ಇದರ ಮೂಲಕ ಪ್ರಯಾಣಿಸಲು ಸುಮಾರು 6 ಗಂಟೆ 30 ನಿಮಿಷ ಸಮಯ ತಾಗುತ್ತದೆ. ಭಾರತದ ಅತಿ ವೇಗದ ರೈಲ್ವೇ ಜಾಲವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರ ಇದೀಘ ಮೈಸೂರು-ಚೆನ್ನೈ ಬುಲೆಟ್ ರೈಲು ಯೋಜನೆಯ ಕಾರ್ಯವನ್ನು ವೇಗಗೊಳಿಸಿದೆ. ಇದು ಕೇವಲ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ಆರ್ಥಿಕ ಬೆಳವಣಿಗೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
ಮೈಸೂರು-ಚೆನ್ನೈ ಬುಲೆಟ್ ರೈಲು!
ಮೈಸೂರು, ಬೆಂಗಳೂರು, ಮತ್ತು ಚೆನ್ನೈ ನಡುವಿನ ಈ ಕಾರಿಡಾರ್ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು, ಹಲವಾರು ಕಂಪನಿಗಳು, ಟೆಕ್ನೋಪಾರ್ಕ್‌ಗಳು, ಉತ್ಪಾದನಾ ಘಟಕಗಳು ಮತ್ತು ಟೌನ್‌ಶಿಪ್‌ಗಳು ಈ ಮಾರ್ಗದಲ್ಲಿವೆ. ಬುಲೆಟ್ ರೈಲು ಕಾರಿಡಾರ್ ಕಾರ್ಯರೂಪಕ್ಕೆ ಬಂದ ನಂತರ, ವೇಗದ ಸಂಪರ್ಕದ ಜೊತೆಗೆ ರಿಯಲ್ ಎಸ್ಟೇಟ್ ಅಭಿವೃದ್ಧಿಯ ಮೇಲೂ ಉತ್ತಮ ಪ್ರಭಾವ ಬೀರಬಹುದು. ಪ್ರಸ್ತುತ, ಭೂ ಸಮೀಕ್ಷೆಗಳು ನಡೆಯುತ್ತಿದ್ದು, ಯೋಜನೆಯ ಕೆಲಸ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.
ಶೀಘ್ರದಲ್ಲೇ ವೈಮಾನಿಕ ತಪಾಸಣೆ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ನ್ಯಾಷನಲ್ ಹೈ-ಸ್ಪೀಡ್ ರೈಲು ಕಾರ್ಪೊರೇಷನ್ ಲಿಮಿಟೆಡ್ (NHSRCL) ಈಗಾಗಲೇ ಸಾಮಾನ್ಯ ನಕ್ಷೆಗಳ ಅಭಿವೃದ್ಧಿ, ಸಮೀಕ್ಷೆ, ಮೇಲ್ಮೈ, ಅತಿ ನೆಲ ಮತ್ತು ಭೂಗತ ಉಪಯುಕ್ತತೆಗಳನ್ನು ಗುರುತಿಸುವುದು ಹಾಗೂ ಉಪಕೇಂದ್ರಗಳಿಗೆ ವಿದ್ಯುತ್ ಮೂಲದ ಆಯ್ಕೆಗಳನ್ನು ನಿರ್ಧರಿಸಲು ಅಗತ್ಯ ಗುತ್ತಿಗೆಗಳನ್ನು ನೀಡಿದೆ ಎನ್ನಲಾಗಿದೆ.
ಚೆನ್ನೈ-ಬೆಂಗಳೂರು-ಮೈಸೂರು ಅತಿ ವೇಗದ ರೈಲು ಮಾರ್ಗವು ಒಟ್ಟು 435 ಕಿಲೋಮೀಟರ್ ಉದ್ದವಿದ್ದು, ಮೂರು ಪ್ರಮುಖ ನಗರಗಳನ್ನು ಇದು ಸಂಪರ್ಕಿಸಲಿದೆ. ಇದು ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಒಟ್ಟು ಒಂಬತ್ತು ನಿಲುಗಡೆಗಳನ್ನು ಹೊಂದಿರುತ್ತದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ, ಹೊಸಕೋಟೆ ಮತ್ತು ಶ್ರೀಪೆರಂಬುದೂರು ಬಳಿ ಈ ಮಾರ್ಗ ಹಾದುಹೋಗಲಿದೆ. ಇದು ಚೆನ್ನೈನ ಎರಡನೇ ವಿಮಾನ ನಿಲ್ದಾಣವಾದ ಪರಂದೂರಿನಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿರಲಿದೆ.
ಇನ್ನು ಈ ಬುಲೆಟ್ ರೈಲು ಗರಿಷ್ಠ 350 ಕಿಲೋಮೀಟರ್ ಪ್ರತಿ ಗಂಟೆಗೆ (kmph) ವೇಗವನ್ನು ಹೊಂದಿದ್ದು, ಸರಾಸರಿ ವೇಗ 250 kmph ಇರಲಿದೆ ಎನ್ನಲಾಗಿದೆ. ಪ್ರತಿ ರೈಲು 750 ಜನರ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು ಪ್ರಸ್ತುತ 6 ಗಂಟೆ 30 ನಿಮಿಷವಿರುವ ಪ್ರಯಾಣದ ಸಮಯವನ್ನು ಕೇವಲ 2 ಗಂಟೆ 25 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಈ ರೀತಿಯಾಗಿ, ಮೈಸೂರು, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಪ್ರಮುಖ ನಗರಗಳಿಗೆ ವೇಗವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸುತ್ತದೆ. ಇದರಿಂದ ಪ್ರಯಾಣಿಕರಿಗೂ ಅನುಕೂಲವಾಗಲಿದೆ.


Click it and Unblock the Notifications