ನವದೆಹಲಿ, ಜೂನ್ 29: ಭಾರತದಲ್ಲಿ ಅತ್ಯಂತ ಐಷಾರಾಮಿ ಹಾಗೂ ದುಬಾರಿ ಕಾರುಗಳ ಸಂಗ್ರಹದ ಬಗ್ಗೆ ನಾವು ಮಾತನಾಡುವಾಗ ಸಾಮಾನ್ಯವಾಗಿ ಮುಖೇಶ್ ಅಂಬಾನಿ, ಗೌತಮ್ ಸಿಂಘಾನಿಯಾ, ರತನ್ ಟಾಟಾ ಮುಂತಾದ ಭಾರತೀಯ ಉದ್ಯಮಿಗಳ ಹೆಸರುಗಳು ನೆನಪಾಗುತ್ತದೆ. ಇದು ಬಿಟ್ಟರೆ ಬಾಲಿವುಡ್ ಅಥವಾ ಇತರ ಚಿತ್ರರಂಗದ ಖ್ಯಾತ ನಟನಟಿಯರ ಬಳಿ ದುಬಾರಿ ಕಾರುಗಳ ಸಂಗ್ರಹವಿರುವುದನ್ನು ನಾವು ನೋಡುತ್ತೇನೆ. ಬೆಂಟ್ಲಿ ಮುಲ್ಸಾನ್ನೆ EWB ಸೆಂಟಿನರಿ ಎಡಿಷನ್ ದೇಶದ ಅತ್ಯಂತ ದುಬಾರಿ ಕಾರಾಗಿದ್ದು ಇವುಗಳ ಬೆಲೆ 14 ಕೋಟಿ ರೂ., ಆಗಿದೆ.
ಭಾರತದಲ್ಲಿನ ಜನಪ್ರಿಯ ಬಿಲಿಯನೇರ್ ಗಳಾದ ಮುಖೇಶ್ ಅಂಬಾನಿ, ರತನ್ ಟಾಟಾ ಮತ್ತು ಗೌತಮ್ ಸಿಂಘಾನಿಯಾ ಅವರ ಒಡೆತನದ ರೋಲ್ಸ್ ರಾಯ್ಸ್ ಮತ್ತು ಫೆರಾರಿಸ್‌ಗಿಂತಲೂ ಹೆಚ್ಚು ದುಬಾರಿ ಕಾರು ಬೆಂಟ್ಲಿ ಮುಲ್ಸಾನ್ನೆ ಮಾಲೀಕರಾಗಿದ್ದಾರೆ ವಿ.ಎಸ್ ರೆಡ್ಡಿ. ಬೆಂಟ್ಲಿ ಮುಲ್ಸಾನ್ನೆ EWB ಸೆಂಟಿನರಿ ಆವೃತ್ತಿಯು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇದರ ಮಾಲೀಕರಾಗಿರುವ ವಿ.ಎಸ್ ರೆಡ್ಡಿ ಮತ್ತೊಂದು ದುಬಾರಿ ಕಾರು ಖರೀದಿಸಿ ಸುದ್ದಿಯಲ್ಲಿದ್ದಾರೆ.

ಭಾರತದ ಪ್ರಮುಖ ನ್ಯೂಟ್ರಾಸ್ಯುಟಿಕಲ್ ಕಂಪನಿಯಾದ ಬ್ರಿಟಿಷ್ ಬಯೋಲಾಜಿಕಲ್ಸ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು 'ದಿ ಪ್ರೊಟೀನ್ ಮ್ಯಾನ್ ಆಫ್ ಇಂಡಿಯಾ' ಎಂದು ಪ್ರೀತಿಯಿಂದ ಕರೆಯಲಾಗುವ ವಿಎಸ್ ರೆಡ್ಡಿ ಹೊಸ Mercedes-Maybach S680 ಗಾಗಿ ರೂ 3.34 ಕೋಟಿ ಖರ್ಚು ಮಾಡಿದ್ದಾರೆ.
ಅಂದಹಾಗೇ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಮೇಬ್ಯಾಕ್ ಎಸ್-ಕ್ಲಾಸ್‌ನ ಹೆಚ್ಚು ಪ್ರೀಮಿಯಂ ಆವೃತ್ತಿಯಾಗಿದೆ. ಸುಮಾರು 5.5 ಮೀಟರ್ ಉದ್ದದೊಂದಿಗೆ, ಮೇಬ್ಯಾಕ್ ಎಸ್ 680 ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಅತಿ ಉದ್ದದ ಕಾರುಗಳಲ್ಲಿ ಒಂದಾಗಿದೆ. ಇದು 6.0-ಲೀಟರ್ ಟರ್ಬೋಚಾರ್ಜ್ಡ್ ವಿ 12 ಎಂಜಿನ್ ಹೊಂದಿದೆ. ಈ ಎಂಜಿನ್ 610 ಬಿಹೆಚ್‌ಪಿ ಪವರ್ ಹಾಗೂ 900 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಹಲವು ವಿಶೇಷತೆಗಳುಳ್ಳ ಮರ್ಸಿಡೀಸ್ ಎಸ್ 680 ನಲ್ಲಿ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಸೀಟುಗಳು, ಬ್ಯಾಕ್ ಸೀಟ್ ನಲ್ಲಿ ಎಂಟರ್ಟೈನ್‌ಮೆಂಟ್ ಸ್ಕ್ರೀನ್‌ಗಳು, ಎಲ್ಲಾ ಸೀಟ್‌ಗಳಿಗೆ ರೆಕ್ಲೈನರ್ ಫಂಕ್ಷನ್, ವೆಂಟಿಲೇಟೆಡ್ ಸೀಟ್‌ಗಳೊಂದಿಗೆ ಮಸಾಜ್ ಫಂಕ್ಷನ್ ಮುಂತಾದ ಫೀಚರ್ ಒಳಗೊಂಡಿದೆ.
ಕರ್ನಾಟಕ ಮೂಲದ ವಿ ಎಸ್ ರೆಡ್ಡಿ ಅವರು 52 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಅವರು ವಿವಿಧ ವಯೋಮಾನದ ಜನರಿಗೆ ತಡೆಗಟ್ಟುವ ಪೋಷಣೆಯನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವ ಉದ್ದೇಶದಿಂದ ಬ್ರಿಟಿಷ್ ಬಯೋಲಾಜಿಕಲ್ಸ್ ಅನ್ನು ಪ್ರಾರಂಭಿಸಿದರು. ಬ್ರಿಟಿಷ್ ಬಯೋಲಾಜಿಕಲ್ಸ್ ವೆಬ್‌ಸೈಟ್ ಪ್ರಕಾರ, ಇದು ಸಂಶೋಧನೆ-ಆಧಾರಿತ ಹೆಲ್ತ್‌ಕೇರ್ ನ್ಯೂಟ್ರಾಸ್ಯುಟಿಕಲ್ ಕಂಪನಿಯಾಗಿದೆ.
ವಿಎಸ್ ರೆಡ್ಡಿ ಅವರು ಆಟೋಮೋಟಿವ್ ಉತ್ಸಾಹಿಯಾಗಿದ್ದು ಇವೊ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ದೇಶದ ಎಲ್ಲಾ ಬ್ರಾಂಡ್‌ಗಳನ್ನು ಸಂಗ್ರಹಿಸುವುದು ಅವರ ಬಾಲ್ಯದ ಕನಸು ಎಂದು ಹೇಳಿಕೊಂಡಿದ್ದರು.


Click it and Unblock the Notifications