ಬೆಂಗಳೂರು, ಆಗಸ್ಟ್ 9: ಗೃಹ ಸಾಲದ ಸಂದರ್ಭದಲ್ಲಿ ಇದೊಂದು ದೊಡ್ಡ ಪ್ರಶ್ನೆ ಎದುರಾಗುತ್ತದೆ. ಗೃಹ ಸಾಲಕ್ಕೂ ವಿಮೆ ಮಾಡಿಸಿಕೊಳ್ಳಬೇಕಾ? ಈ ಬಗ್ಗೆ ಪರಿಣಿತರು ಏನು ಹೇಳುತ್ತಾರೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.
ನೀವು ವಿಮೆ ಖರೀದಿಸುತ್ತಿಲ್ಲ ಎನ್ನುವ ಕಾರಣ ನೀಡಿ ಬ್ಯಾಂಕ್ ನಿಮ್ಮ ಲೋನ್ ಅಪ್ಲಿಕೇಷನ್ ಅನ್ನು ತಿರಸ್ಕರಿಸುವ ಹಾಗಿಲ್ಲ. ನೀವು ವಿಮೆ ಖರೀದಿಸಿ ಎಂದು ಬ್ಯಾಂಕ್ ನಿಮ್ಮನ್ನ ಕೋರಬಹುದೇ ಹೊರತು ನಿಮ್ಮನ್ನು ಬಲವಂತಪಡಿಸುವ ಹಾಗಿಲ್ಲ. ಇದು ಸಾಮಾನ್ಯ ಅಭ್ಯಾಸ ಆಗಿಬಿಟ್ಟಿದೆ. ಬ್ಯಾಂಕುಗಳು ವಿಮೆ ಮಾರಾಟ ಮಾಡುವುದ್ರಲ್ಲಿ ಆಸಕ್ತಿ ತೋರಿ ಗೃಹ ಸಾಲದ ಅರ್ಜಿ ಅನುಮೋದನೆ ಪ್ರಕ್ರಿಯೆಗೆ ವಿಮೆ ಖರೀದಿಸಬೇಕು ಎಂಬ ಷರತ್ತು ವಿಧಿಸುತ್ತಿವೆ.

ಇದಕ್ಕಿಂತ ಕಡಿಮೆ ಮೊತ್ತಕ್ಕೆ ಇನ್ಷುರೆನ್ಸ್ ಸಿಗುವುದಿಲ್ಲ ಎಂದು ಬ್ಯಾಂಕ್ ಹೇಳುತ್ತದೆ. ವಿಮಾ ಪ್ರೀಮಿಯಂ ಮೊತ್ತವನ್ನ ಸಾಲದ ಮೊತ್ತಕ್ಕೆ ಸೇರಿಸಲಾಗುತ್ತದೆ. ಉದಾಹರಣೆಗೆ ರಾಜೇಶ್ ಎಂಬುವವರು ಈ ವಿಮೆ ಪಡೆಯಲು ಅರ್ಜಿ ತುಂಬಿದರೆ, ಅವರು 30ಲಕ್ಷ ರೂಪಾಯಿ ಸಾಲಕ್ಕೆ ಒಂದು ಲಕ್ಷ ರೂಪಾಯಿ ವಿಮಾ ಪ್ರೀಮಿಯಂ ಪಾವತಿಸಬೇಕಾಗುತ್ತದೆ. (ಉದಾಹರಣೆಗೆ : ಟರ್ಮ್ ಪ್ಲಾನ್ಸ್, ಕ್ರಿಟಿಕಲ್ ಇಲ್ನೆಸ್ ಮತ್ತು ಹೋಂ ಇನ್ಷುರೆನ್ಸ್). ಹೀಗಾಗಿ ಸಾಲದ ಮೊತ್ತ 31 ಲಕ್ಷ ರೂಪಾಯಿ ಆಗುತ್ತದೆ. ಶೇಕಡ 8.5 ರಷ್ಟು ಬಡ್ಡಿ ಎಂದಾದರೆ, 20 ವರ್ಷಗಳಿಗೆ ಮಾಸಿಕ ಕಂತು - ಇಎಂಐ 27 ಸಾವಿರ ರೂಪಾಯಿಯಷ್ಟಾಗುತ್ತದೆ. ಬ್ಯಾಂಕುಗಳು ಸಾಲದ ಪ್ರಿನ್ಸಿಪಲ್ ಮೊತ್ತ ಹಾಗೇ ಇನ್ಷುರೆನ್ಸ್ ಮೊತ್ತದ ಮೇಲೂ ಬಡ್ಡಿಯನ್ನು ಪಡೆಯತ್ತವೆ. ಬ್ಯಾಂಕುಗಳು ವಿಮಾ ಕಂಪೆನಿಗಳಿಗೆ ಈ ಕಂತುಗಳನ್ನು ಮುಂಚಿತವಾಗಿಯೇ ಪಾವತಿ ಮಾಡಿರುತ್ತವೆ. ಪ್ರೀಮಿಯಂ ಮೊತ್ತ ಪ್ರಿನ್ಸಿಪಲ್ ಮೊತ್ತದಲ್ಲಿ ಸೇರಿರುತ್ತವೆ. ಬ್ಯಾಂಕುಗಳು ಸಾಲ ಪಡೆದವರಿಂದ ಒಟ್ಟು ಪ್ರಿನ್ಸಿಪಲ್ ಮೊತ್ತದ ಮೇಲೆ ಬಡ್ಡಿ ವಿಧಿಸುತ್ತವೆ.
ಸಾಲಕ್ಕೂ ವಿಮೆಗೂ ಏನ್ ಸಂಬಂಧ?:
ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎ) ಹೇಳುವಂತೆ ವಿಮೆಯನ್ನು ಕೆಲವೊಮ್ಮೆ ನಿಶ್ಚಿತ ಠೇವಣಿ ಹೆಸರಿನಲ್ಲೂ ಮಾರಾಟ ಮಾಡಲಾದ ದಾಖಲೆ ಇದೆ. ಗೃಹ ಸಾಲದೊಂದಿಗೆ ವಿಮೆ ಕಡ್ಡಾಯ ಎಂದು ಹೇಳುತ್ತಾ ಗ್ರಾಹಕರು ಪಾಲಿಸಿ ಖರೀದಿಸುವುದನ್ನು ಒತ್ತಾಯಿಸಿದ ಪ್ರಕರಣಗಳೂ ಇವೆ. ಬ್ಯಾಂಕ್ ಗಳು ತಮ್ಮ ಸಿಬ್ಬಂದಿ ಮೇಲೆ ಹೇರಿರುವ ಒತ್ತಡವೂ ಇದಕ್ಕೂ ಮುಖ್ಯ ಕಾರಣ ಎನ್ನಲಾಗುತ್ತದೆ.
ಲೋನ್ ಪಡೆಯುವಾ ಏನು ಮಾಡಬೇಕು?:
ಒಂದು ವೇಳೆ ಸಾಲ ಪಡೆದವರು ಅನಿರೀಕ್ಷಿತವಾಗಿ ಮೃತಪಟ್ಟರೆ, ಆಗ ಸಾಲ ಮರುಪಾವತಿ ಜವಾಬ್ದಾರಿ ಅವರ ಕುಟುಂಬದ ಮೇಲೆ ಬೀಳುತ್ತದೆ. ಅವರ ಕುಟುಂಬದವರು ಸಾಲ ತೀರಿಸಲು ಅಶಕ್ತರಾದರೆ ಆಗ ಅವರು ಆಸ್ತಿಯ ಒಡೆತನ ಕಳೆದುಕೊಳ್ಳಬೇಕಾಗುತ್ತದೆ. ಈ ಫೈನ್ಯಾನ್ಷಿಯಲ್ ರಿಸ್ಕ್ಅನ್ನ ಟರ್ಮ್ ಪ್ಲಾನ್ನಿಂದ ಕವರ್ ಮಾಡಬಹುದು. ಅದೇ ಜೀವ ವಿಮೆ. ಟರ್ಮ್ ಪ್ಲಾನ್ನಲ್ಲಿ, ಪಾಲಿಸಿದಾರ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಇಂತಿಷ್ಟು ಎಂದು ಮೊತ್ತ ಸಿಗುತ್ತದೆ.
ಹಾಗಿದ್ದರೆ ಈ ವಿಮಾ ಯೋಜನೆ ಹೇಗಿರಬೇಕು ಎಂದರೆ ಅದು ಲೋನ್ ಮೊತ್ತವನ್ನ ಕವರ್ ಮಾಡುವುದರ ಜೊತೆಗೆ ಕುಟುಂಬದ ಕಷ್ಟದ ಸಮಯದ ದೈನಂದಿನ ವೆಚ್ಚಗಳಿಗೂ ಹಣ ಹೊಂದಿಸಿಕೊಡುವ ತರಹದ್ದಾಗಿರಬೇಕು. ಠೇವಣಿಗಳನ್ನ ಸ್ವೀಕರಿಸುವುದು ಮತ್ತು ಸಾಲ ಕೊಡುವುದು ಬ್ಯಾಂಕ್ಗಳ ಕೆಲಸ ಎನ್ನುವುದನ್ನು ನಾವು ಮನಗಂಡಿರಬೇಕು. ಬ್ಯಾಂಕ್ ಗಳು ವಿಮಾ ಮಾರಾಟದ ಸವಾಲಿಗೆ ಕೈ ಹಾಕಬಾರದು. ನಿಮ್ಮ ಬಳಿ ಅಂದರೆ ಗೃಹಸಾಲ ಪಡೆಯುವವರ ಬಳಿ ಸಾಕಷ್ಟು ಮೊತ್ತದ ಟರ್ಮ್ ಇನ್ಶೂರೆನ್ಸ್ ಇದ್ದರೆ ಮತ್ತೆ ವಿಮೆ ಮಾಡಿಸಿಕೊಳ್ಳುವುದು ಬೇಕಾಗುವುದಿಲ್ಲ.


Click it and Unblock the Notifications