ಬೆಂಗಳೂರಲ್ಲಿ ಬೇಸಿಗೆ ಬಂದ್ರೆ ಭಯ ಆಗೋದು ಎರಡೇ ವಿಚಾರಕ್ಕೆ. ಒಂದು ತಾಪಮಾನ, ಮತ್ತೊಂದು ಪರದಾಟ..ಬೇಸಿಗೆ ಧಗೆಯಲ್ಲಿ ಜನ ಸಾಮಾನ್ಯರಿಗೆ ಅತಿಹೆಚ್ಚು ಅಗತ್ಯವಿರುವುದೇ ನೀರು. ಹೀಗಿರುವಾಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಅದೇನೆಂದರೆ ಫ್ರೆಶ್ ಕಾವೇರಿ ನೀರಿನ ಸಂಪರ್ಕ ಒದಗಿಸಬೇಕು ಎಂದರೆ, ಭಾರಿ ಮೊತ್ತವನ್ನು ನೀಡಬೇಕು ಎಂಬ ಬೇಡಿಕೆ ಹೊತ್ತು ಬಂದಿದೆ. ಮೊನ್ನೆಯಷ್ಟೇ ಕಾರು ತೊಳೆಯರು, ತೋಟಕಾರಿಕೆಗೆ ಬಳಸಲು ಕುಡಿಯುವ ನೀರು ಬಳಸುವಂತಿಲ್ಲ ಎಂಬ ಆದೇಶದ ಬೆನ್ನಲ್ಲೇ, BWSSBಯ ಈ ಬೇಡಿಕೆ ಮತ್ತೆ ಶಾಕ್ ನೀಡಿದೆ.

ಸದ್ಯ ನಗರದ ಹಲವಾರು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಇದೊಂದು ಭಾರವಾದ ಹೊರೆಯಾಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಜನರು, ನಾವು 2BHK, 3BHK ಎಂಬುದನ್ನೂ ಲೆಕ್ಕಿಸದೇ ಎಲ್ಲಾ ತರದ ಮನೆಗೂ, ಪ್ರತಿ ಚದರ ಮೀಟರ್ಗೆ 400 ರೂ. ಪಾವತಿಸಬೇಕಿದೆ ಎನ್ನುತ್ತಿದ್ದಾರೆ. ಅಲ್ಲದೇ ನಿವಾಸಿಯೊಬ್ಬರು, ನಾನು ಇರುವ ಫ್ಲಾಟ್ 1,955 ಚದರ ಅಡಿ ಇದೆ. ಅಂದರೆ ಒಟ್ಟು 1.2 ಲಕ್ಷ ರೂ.ಗಿಂತ ಹೆಚ್ಚು ಪಾವತಿಸಬೇಕಾಗುತ್ತದೆ. ಒಟ್ಟಾರೆ 500 ಅಪಾರ್ಟ್‌ಮೆಂಟ್‌ಗಳು ಸೇರಿ 3.6 ಕೋಟಿ ರೂ. ಹಣ ನೀಡಬೇಕು ಎಂದು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೇಡಿಕೆ ಇಟ್ಟಿದೆ ಎಂದು ಕಿಡಿ ಕಾರಿದ್ದಾರೆ.
ಅಲ್ಲದೇ ನೀರು ಸಂಪರ್ಕ ಒದಗಿಸಲು ಹಣ ಸಂಗ್ರಹಿಸಿದ ಬಳಿಕ, ಹಲವು ವರ್ಷಗಳ ಹಿಂದೆ ಬಿಲ್ಡರ್‍ಗಳು ಹಸ್ತಾಂತರಿಸಿರುವ ಅಪಾರ್ಟ್‌ಮೆಂಟ್ ಸಂಕೀರ್ಣಗಳಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಎಷ್ಟೇ ಸಮಸ್ಯೆಗಳು ಎದುರಾದರೂ ಬಿಲ್ಡರ್‍ಗಳು ಮಾತ್ರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಹೀಗಾಗಿ ಈ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು, ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ ಜೊತೆ ಸಭೆ ನಡೆಸಲಾಗುವುದು ಎಂದು BWSSB ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು BWSSB ಹೊಸ ಕೊಳವೆ ನೀರಿನ ಸಂಪರ್ಕ ಕಲ್ಪಿಸಲು ಆರಂಭಿಸಿ, 15ಕ್ಕಿಂತ ಹೆಚ್ಚು ದಿನಗಳಾಗಿವೆ. ಈವರೆಗೂ 15,000 ಕೊಳವೆ ನೀರಿನ ಸಂಪರ್ಕ ನೀಡಲಾಗಿದೆ. ಹೀಗಿರುವಾಗ ಬಿಲ್ಡರ್‍ಗಳು ನಮಗಾಗಿ ಹೋರಾಟ ನಡೆಸಬೇಕು ಎಂದು ಬೆಳ್ಳಂದೂರು ನಿವಾಸಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಮಸ್ಯೆಗಳನ್ನು ಪರಿಹರಿಸಲು ಹೋರಾಡಬೇಕಿರುವ ಬಿಲ್ಡರ್‍ಗಳೇ ಎಲ್ಲಿಯೂ ಕಾಣುತ್ತಿಲ್ಲ. ಇದರಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಹೀಗಿರುವಾಗ ಬೆಂಗಳೂರಿನಲ್ಲಿ ಬೇಸಿಗೆಯನ್ನು ಕಳೆಯಲು ಕಾವೇರಿ ನೀರು ಅತಿಮುಖ್ಯ ಎಂದು ತಿಳಿದಿರುವ BWSSB ದೊಡ್ಡ ಮೊತ್ತದ ಬೇಡಿಕೆಯನ್ನು ಹೊತ್ತು ಬಂದಿದೆ ಎಂದು ಕಿಡಿ ಕಾರಿದ್ದಾರೆ.
ಇನ್ನು 2016ರಲ್ಲಿ ಗೋಕುಲಂ ಅಪಾರ್ಟ್‌ಮೆಂಟ್‌ನಲ್ಲಿರುವ 608 ಫ್ಲಾಟ್‌ಗಳಿಗೆ, BWSSB ನೀರಿನ ಸಂಪರ್ಕ ಕಲ್ಪಿಸಲು ಪ್ರತಿ ಚದರ ಮೀಟರ್ಗೆ 250 ರೂ.ನಂತೆ ಕೇಳಿತ್ತು. ಅಂದರೆ ಒಟ್ಟು ಮೊತ್ತ 3.8 ಕೋಟಿ ರೂ.ಗಳನ್ನು ಕೇಳಿತ್ತು. ಆದರೆ ಈ ಹಣವನ್ನು ಗುತ್ತಿಗೆದಾರರು ಒಂದು ದಿನ ತಡವಾಗಿ ಕಟ್ಟಿದ ಕಾರಣ, ಮೊತ್ತವನ್ನು ದುಪ್ಪಟ್ಟು ಕೇಳಿತ್ತು. ಅಂದರೆ ಕಾವೇರಿ ನೀರು ಸಂಪರ್ಕಕ್ಕೆ 7.8 ಕೋಟಿ ನೀಡುವಂತೆ ಕೇಳಲಾಗಿತ್ತು ಎನ್ನಲಾಗಿದೆ. ಇತ್ತ 2020ರ ಮಾರ್ಚ್ ನಲ್ಲಿ ವಸತಿ ಕಟ್ಟಡಗಳಿಗೆ ನೀರಿನ ಸಂಪರ್ಕ ಕಲ್ಪಿಸಲು, ಪ್ರತಿ ಚದರ ಮೀಟರ್ಗೆ 250 ರೂ.ನಿಂದ 400 ರೂ.ಗೆ ಠೇವಣಿಗಳನ್ನು ಪರಿಷ್ಕರಿಸಿದೆ ಎನ್ನಲಾಗಿದೆ.
ಇದಲ್ಲದೇ ಎಲ್ಲಾ ಇತ್ತೀಚೆಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಅಪಾರ್ಟ್‌ಮೆಂಟ್‌ಗಳು ಕಾವೇರಿ ಸಂಪರ್ಕವನ್ನು ತೆಗೆದುಕೊಳ್ಳುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಘೋಷಿಸಿದ್ದರು. ಅಲ್ಲದೇ ಸುಮಾರು 20 ಸಾವಿರ ಕಾಂಪ್ಲೆಕ್ಸ್‌ಗಳು ಈ ಸೌಲಭ್ಯಗಳಿಂದ ಹಿಂದೆ ಜರಿದಿರುವ ಬಗ್ಗೆಯೂ ಮಾತನಾಡಿದ್ದರು.


Click it and Unblock the Notifications