ನವದೆಹಲಿ, ಏಪ್ರಿಲ್ 23: 'ಬೈಜುಸ್' ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ, ಒಂದು ಕಾಲದಲ್ಲಿ ದೈತ್ಯವಾಗಿ ಬೆಳೆದು ನಿಂತಿತ್ತು. ಆದರೆ ನಂತರದ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ ಕಾರಣ, 'ಬೈಜುಸ್' ಸಂಸ್ಥೆಗೆ ದೊಡ್ಡ ಗಂಡಾಂತರ ಎದುರಾಗಿತ್ತು. ಹೀಗಾಗಿ ಹಲವು ತಿಂಗಳ ಕಾಲ ತನ್ನ ನೌಕರರಿಗೆಲ್ಲಾ ಸಂಬಳವನ್ನೇ ಕೊಟ್ಟಿರಲಿಲ್ಲ 'ಬೈಜುಸ್'.
ಹೀಗೆ 'ಬೈಜುಸ್' ಸಂಸ್ಥೆ ತನ್ನ ನೌಕರರಿಗೆ ಸಂಬಳ ಬಾಕಿ ಉಳಿಸಿಕೊಂಡಿರುವ ಬಗ್ಗೆ ಭಾರಿ ದೊಡ್ಡ ಪ್ರಮಾಣದ ಚರ್ಚೆ ನಡೆದಿತ್ತು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹಲವು ವಿಡಿಯೋಗಳು ಕೂಡ ಓಡಾಡಿದ್ದವು. 'ಬೈಜುಸ್' ಸಂಸ್ಥೆ ನೌಕರರು ಕಚೇರಿ ಒಳಗೆ ಸಂಬಳಕ್ಕಾಗಿ ಕಿತ್ತಾಡಿದ ಘಟನೆಗಳು ನಡೆದಿದ್ದವು. ಹೀಗೆ ಎಲ್ಲ ಅಲ್ಲೋಲ, ಕಲ್ಲೋಲವಾಗಿ ಪರದಾಡಿದ್ದ ಬೈಜುಸ್ ಇದೀಗ ತನ್ನ ನೌಕರರಿಗೆ ಸಾಲ ತಂದು ಸಂಬಳ ಕೊಟ್ಟಿದೆ. ಹೀಗೆ, ಸಂಕಷ್ಟದಲ್ಲಿ ಒದ್ದಾಡುತ್ತಿದ್ದ ತನ್ನ ನೌಕರರ ಬೆಂಬಲಕ್ಕೆ ನಿಂತಿದೆ ಬೈಜುಸ್.

25ರಿಂದ 30 ಕೋಟಿ ಸಾಲ?
ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಬೈಜುಸ್ ಸಿಬ್ಬಂದಿಗೆ ಇದೇ ಮಾರ್ಚ್ ತಿಂಗಳಿನ ಭಾಗಶಃ ವೇತನ ಅಂದರೆ ಸಂಬಳವನ್ನು ಪಾವತಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಸಂಸ್ಥೆಯ ಸಿಇಒ ಬೈಜು ರವೀಂದ್ರನ್ ಹೀಗೆ ತನ್ನ ನೌಕರರಿಗೆ ಸಂಬಳ ನೀಡಲು ಸಾಲ ಮಾಡಿದ್ದಾರೆ ಎನ್ನಲಾಗಿದೆ. ಹಾಗೇ ಇನ್ನೊಂದು ವಿಶೇಷ ಸುದ್ದಿ ಏನು ಎಂದರೆ ರವೀಂದ್ರನ್ ವೈಯಕ್ತಿಕ ಸಾಮರ್ಥ್ಯದಲ್ಲೇ ಸಾಲ ಪಡೆದು ಸಿಬ್ಬಂದಿಯ ಬ್ಯಾಂಕ್ ಖಾತೆಗೆ ಏಪ್ರಿಲ್ 20ಕ್ಕೆ ಸಂಬಳ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಹೀಗೆ ಸಂಬಳ ಹಾಕಲು ಸುಮಾರು 25ರಿಂದ 30 ಕೋಟಿ ರೂಪಾಯಿ ಸಾಲ ಮಾಡಿ, ವೇತನ ಪಾವತಿ ಮಾಡಿದ್ದಾರೆ ರವೀಂದ್ರನ್ ಎನ್ನಲಾಗಿದೆ.
ಯಾರಿಗೆಲ್ಲಾ ಸಂಬಳ ಕೊಟ್ಟಿದ್ದಾರೆ?
ಈಗ ಸಂಬಳ ಪಾವತಿ ಮಾಡಿರುವುದು ಶಿಕ್ಷಕರು ಮತ್ತು ಕೆಳ ಹಂತದ ಸಿಬ್ಬಂದಿಗೆ ಎನ್ನಲಾಗಿದೆ. ಸಂಸ್ಥೆಯ ಶಿಕ್ಷಕರು & ಕೆಳ ಹಂತದ ಸಿಬ್ಬಂದಿಗೆ ಪೂರ್ಣ ವೇತನ ಪಾವತಿ ಮಾಡಲಾಗಿದೆಯಂತೆ. ಇನ್ನು ಉಳಿದವರಿಗೆ ಶೇಕಡಾ 50 ರಿಂದ ಶೇಕಡಾ 100 ರಷ್ಟು ವೇತನ ಪಾವತಿಸಿದ್ದಾರೆ. ಸಾಲದ ಮೂಲಕ ಸಂಬಳ ಕೊಟ್ಟಿರುವುದು ಕೂಡ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ವೇದಿಕೆಯನ್ನು ಒದಗಿಸಿದೆ. ಮತ್ತೊಂದು ಕಡೆ ಈಗಾಗಲೇ ಕಂಪನಿ ಒಟ್ಟು ₹1,664 ಕೋಟಿ ಮೊತ್ತದ ಅಧಿಕೃತ ಷೇರು ಬಂಡವಾಳ ಹೆಚ್ಚಳಕ್ಕೆ ಸಂಬಂಧಿಸಿ, ವಿಶೇಷ ಸಾಮಾನ್ಯ ಸಭೆಯಲ್ಲಿ (ಇಜಿಎಂ) ಒಪ್ಪಿಗೆ ಪಡೆದಿದೆ. ಹೀಗಿದ್ದರೂ ಹೂಡಿಕೆದಾರರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಮೊರೆ ಹೋಗಿರುವುದು ಪರಿಸ್ಥಿತಿಯನ್ನು ಕಗ್ಗಂಟಾಗಿಸಿದೆ.


Click it and Unblock the Notifications