ಜನರ ಅಗತ್ಯಕ್ಕಾಗಿ ಓಲಾ, ಊಬರ್, ರ್ಯಾಪಿಡೋಗಳು (Ola, Uber, Rapido) ಉತ್ತಮ ಸೇವೆ ಸಲ್ಲಿಸುತ್ತದೆ. ಅಲ್ಲದೇ ಬೆಂಗಳೂರಿನಂತಹ ಮಹಾನಗರಗಳಲ್ಲಿ ಓಡಾಡಬೇಕೆಂದರೆ ಓಲಾ, ರ್ಯಾಪಿಡೋ, ಊಬರ್‌ನಂತರ ಅಪ್ಲಿಕೇಶನ್ ಹೊಂದಿರಲೇಬೇಕು. ಅಗತ್ಯವಿದ್ದಾಗ ಆ ಆಪ್‌ಗಳಲ್ಲಿ ಬೈಕ್, ಆಟೋ, ಕ್ಯಾಬ್ ಬುಕ್ ಮಾಡಿಕೊಂಡು ಎಲ್ಲಾದರೂ ಹೋಗಬಹುದು. ಆದರೆ ಪ್ರಯಾಣಿಕರ ನೆಚ್ಚಿನ ಸೇವೆಯಾಗಿದ್ದ ಆನ್‌ಲೈನ್ ಕ್ಯಾಬ್ ಸೇವೆಗಳು, ಇಂದು ದುಸ್ವಪ್ನವಾಗಿ ಪರಿಣಮಿಸಿದೆ. ಕಾರಣ ದುಪ್ಪಟ್ಟು ಶುಲ್ಕ.

ಹೌದು, ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಬೇಕಾದ ಓಲಾ, ಊಬರ್, ಆಟೋ, ಕ್ಯಾಬ್‌ಗಳು ಇತ್ತೀಚೆಗೆ ದುಪ್ಪಟ್ಟು ಹಣ ಸಂಗ್ರಹಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಟಿಪ್ಸ್ ಆಧಾರದಲ್ಲಿ ಪ್ರಯಾಣಿಕರಿಗೆ ಆರ್ಥಿಕವಾಗಿ ಹೊರೆ ನೀಡುತ್ತಿದ್ದ ಅಗ್ರಿಗೇಟರ್ ಕಂಪನಿಗಳಿಗೆ ಇದೀಗ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿದೆ. ಈ ಹಿನ್ನೆಲೆ ಮಹತ್ವದ ನಿರ್ಧಾರಕ್ಕೆ ಕೇಂದ್ರ ಮುಂದಾಗಿದೆ.
ಇನ್ಮೇಲೆ "ನೋ ಟಿಪ್ಸ್"!
ಕೇಂದ್ರ ಸರ್ಕಾರವು ರೈಡ್-ಹೇಲಿಂಗ್ ವಲಯದಲ್ಲಿ ಮೊದಲೇ ಟಿಪ್ಸ್ ನೀಡುವ ಕ್ರಮಕ್ಕೆ ಬ್ರೇಕ್ ನೀಡಲು ಮುಂದಾಗಿದೆ. ಊಬರ್, ಓಲಾ, ರಾಪಿಡೋ ಸೇರಿದಂತೆ ಹಲವು ಕಂಪನಿಗಳು ಪ್ರಯಾಣ ಆರಂಭವಾಗುವ ಮುನ್ನ, ಪ್ರಯಾಣಿಕರಿಂದ ಟಿಪ್ಸ್ ಕೇಳುತ್ತದೆ. ಆದ್ರೆ ಈ ಟಿಪ್ಸ್ ನೀತಿಗೆ ಸರ್ಕಾರ ಸಂಪೂರ್ಣ ನಿಷೇಧ ಹೇರಲು ಸಜ್ಜಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಡಿಸೆಂಬರ್ 15 ರಂದು ಮೋಟಾರು ವಾಹನ ಸಮೂಹಕಾರರ ಮಾರ್ಗಸೂಚಿಗಳು, 2025ಕ್ಕೆ ತಿದ್ದುಪಡಿ ತಂದಿದೆ. ಇದರ ಪ್ರಕಾರ, ಯಾವುದೇ ಸ್ವಯಂಪ್ರೇರಿತ ಟಿಪ್ಸ್ ನೀಡುವ ಸೌಲಭ್ಯವನ್ನು ಪ್ರಯಾಣ ಪೂರ್ಣಗೊಂಡ ನಂತರವೇ ಪ್ರಯಾಣಿಕರಿಗೆ ಕಾಣಿಸಬೇಕು ಎಂದು ಹೇಳಿದೆ.
ಏನಿದು ಟಿಪ್ ವ್ಯವಸ್ಥೆ?
ಯಾವುದೇ ಕ್ಯಾಬ್, ಆಟೋ, ಬೈಕ್, ಟ್ಯಾಕ್ಸಿಗಳನ್ನು ಬುಕ್ ಮಾಡುವಾಗ, ಚಾಲಕರು ಬೇಗನೆ ಆಕ್ಸೆಪ್ಟ್ ಮಾಡುವಂತೆ ಪ್ರಯಾಣ ದರದ ಜೊತೆಗೆ 10, 20, 40, 60 ರೂ. ಟಿಪ್ಸ್ ನೀಡುವ ಆಯ್ಕೆಯನ್ನು ನೀಡಲಾಗುತ್ತಿತ್ತು. ಅಂದರೆ ಈ ಹೆಚ್ಚುವರಿ ಟಿಪ್ಸ್ ನೀಡಿದರೆ ಮಾತ್ರ ವಾಹನಗಳು ಬೇಗ ಬುಕ್ ಆಗುತ್ತವೆ. ಅಂದರೆ ಇದು ಪ್ರಯಾಣಿಕರಿಂದ ಕಂಪನಿಗಳು ಮಾಡುತ್ತಿದ್ದ ಹಗಲು ದರೋಡೆ ಅಂತಾನೇ ಹೇಳಬಹುದು.
ಆದರೆ ಇದೀಗ ಈ ಎಲ್ಲದಕ್ಕೂ ಬ್ರೇಕ್ ಹಾಕುವ ದೃಷ್ಟಿಯಿಂದ, ಕೇಂದ್ರ ಸರ್ಕಾರ ಅಪ್ಲಿಕೇಶನ್‌ಗಳಲ್ಲಿ ಹೆಚ್ಚುವರಿ ಟಿಪ್ಸ್ ಆಯ್ಕೆಯನ್ನು ಕಡ್ಡಾಯವಾಗಿ ನೀಡುವಂತಿಲ್ಲ ಎಂದು ಸೂಚನೆ ಹೊರಡಿಸಿದೆ. ಟ್ರಿಪ್ ಮುಗಿದ ನಂತರವೇ ಗ್ರಾಹಕರು ಸ್ವಯಂ ಪ್ರೇರಿತವಾಗಿ ಟಿಪ್ಸ್ ನೀಡಬಹುದು. ಅಲ್ಲದೇ ಗ್ರಾಹಕರು ನೀಡುವ ಟಿಪ್ಸ್ ನೇರವಾಗಿ ಚಾಲಕರ ಖಾತೆಗೆ ಹೋಗುವಂತಾಗಬೇಕು. ಇದರಲ್ಲಿ ಅಗ್ರಿಗೇಟರ್ ಕಂಪನಿಗಳು ಪಾಲು ಕೇಳುವಂತಿಲ್ಲ ಎಂದು ಸೂಚನೆ ನೀಡಿದೆ. ಸದ್ಯ ಟಿಪ್ಸ್ ವಿಚಾರದಲ್ಲಿ ಪ್ರಯಾಣಿಕರಿಗೂ ಅನುಕೂಲವಾಗಲಿದೆ, ಜೊತೆಗೆ ಆಟೋ, ಕ್ಯಾಬ್ ಚಾಲಕರು ಸಹ ಸಂತಸಗೊಂಡಿದ್ದಾರೆ.
ಮಹಿಳೆಯ ಸುರಕ್ಷತೆಗೆ ಒತ್ತು!
ಇದಲ್ಲದೆ, ಪ್ರಯಾಣಿಕರ ಸುರಕ್ಷತೆಗಾಗಿ, ವಿಶೇಷವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸಚಿವಾಲಯ ಷರತ್ತು 15.6 ಅನ್ನು ಸೇರಿಸಿದೆ. ಈ ಷರತ್ತು ಅನ್ವಯ, ಅಪ್ಲಿಕೇಶನ್‌ಗಳು "ಮಹಿಳಾ ಪ್ರಯಾಣಿಕರಿಗೆ ಮಹಿಳಾ ಚಾಲಕರನ್ನು ಆಯ್ಕೆ ಮಾಡುವ ಆಯ್ಕೆಯನ್ನು" ಕಡ್ಡಾಯವಾಗಿ ಒದಗಿಸಬೇಕು ಎಂದಿದೆ.


Click it and Unblock the Notifications