ಬೆಂಗಳೂರು, ಆಗಸ್ಟ್ 12: ಕರ್ನಾಟಕ ಮೂಲದ ಜಾಗತಿಕ ಕಾಫೀ ಉದ್ಯಮ ಕೆಫೆ ಕಾಫಿ ಡೇಯ ಮೂಲ ಕಂಪನಿಯಾದ ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ಸಾಲ ಪಾವತಿಯೊಂದರಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (NCLT) ದಿವಾಳಿ ಪ್ರಕ್ರಿಯೆ ಆರಂಭಿಸಿದೆ.
ಕಾಫಿ ಡೇ ಎಂಟರ್‌ಪ್ರೈಸಸ್ ಕಾಫಿ ಡೇ ಗ್ರೂಪ್‌ನ ಮಾತೃಸಂಸ್ಥೆಯಾಗಿದ್ದು, ಇದು ಕಾಫಿ ಹೌಸ್ ಸರಣಿ 'ಕೆಫೆ ಕಾಫಿ ಡೇ'ಗೆ ಜನಪ್ರಿಯವಾಗಿದೆ. ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ ಬೆಂಗಳೂರು ಪೀಠವು ಆಗಸ್ಟ್ 8 ರಂದು ಹೊರಡಿಸಿದ ಆದೇಶದಲ್ಲಿ ಕಾಫಿ ಡೇ ₹228.45 ಕೋಟಿಯಷ್ಟು ಸಾಲ ಪಾವತಿಸಲು ವಿಫಲವಾಗಿದೆ ಇದರಿಂದಾಗಿ ಅದು ದಿವಾಳಿಯಾಗಿದೆ ಎಂದು ಘೋಷಿಸುವಂತೆ ಸಿಡಿಇಎಲ್‌ಗೆ ಸಾಲ ನೀಡಿದ್ದ ಸಂಸ್ಥೆಗಳಲ್ಲಿ ಒಂದಾದ ಐಡಿಬಿಐ ಟ್ರಸ್ಟಿಶಿಪ್ ಸರ್ವಿಸಸ್ ಲಿಮಿಟೆಡ್ (ಐಡಿಬಿಐಟಿಎಸ್ಎಲ್) ಸಲ್ಲಿಸಿದ್ದ ದಿವಾಳಿತನ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲಾಗಿದೆ ಎಂದು ತಿಳಿಸಿದೆ.

ಇದಲ್ಲದೇ ಸಾಲದ ಸುಳಿಗೆ ಸಿಲುಕಿರುವ ಸಿಡಿಇಎಲ್ ಕಾರ್ಯಾಚರಣೆಯನ್ನು ನಿಯಂತ್ರಿಸುವುದಕ್ಕಾಗಿ ವೃತ್ತಿಪರರನ್ನಾಗಿ (ಐಆರ್‌ಪಿ) ಆಶಿಶ್ ಚವ್ಚರಿಯಾ ಅವರನ್ನು ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯ ಕೆ ಬಿಸ್ವಾಲ್ ಮತ್ತು ತಾಂತ್ರಿಕ ಸದಸ್ಯ ಮನೋಜ್ ಕುಮಾರ್ ದುಬೆ ಅವರಿದ್ದ ಪೀಠ ನೇಮಕ ಮಾಡಿದೆ. ಸಾರ್ವಜನಿಕ ನೋಟಿಸ್ ನೀಡಿಕೆ, ಅಹವಾಲುಗಳ ಆಹ್ವಾನ ಇತ್ಯಾದಿಗಳನ್ನು ಐಆರ್‌ಪಿ ನಿಭಾಯಿಸುವುದಕ್ಕಾಗಿ 2 ಲಕ್ಷ ರೂ. ಠೇವಣಿ ಇಡುವಂತೆ ಐಡಿಬಿಐಟಿಎಸ್ಎಲ್‌ಗೆ ನ್ಯಾಯಮಂಡಳಿ ನಿರ್ದೇಶಿಸಿದೆ.
ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್ ಮಾಲೀಕತ್ವದಲ್ಲಿ ರೆಸಾರ್ಟ್ ನಿರ್ವಹಿಸುವ ಉದ್ಯಮದಲ್ಲೂ ಇದ್ದು, ಇದರೊಂದಿಗೆ ಸಲಹಾ ಸೇವೆಗಳನ್ನು ಒದಗಿಸುವ ಹಾಗೂ ಕಾಫಿ ಬೀಜಗಳ ಮಾರಾಟ ಮತ್ತು ಖರೀದಿಯಲ್ಲಿಯೂ ತೊಡಗಿಸಿಕೊಂಡಿದೆ. ಇದೇ ಕಂಪನಿ ರಿಡೀಮ್ ಮಾಡಬಹುದಾದ ಪರಿವರ್ತಿಸಲಾಗದ ಡಿಬೆಂಚರ್‌ಗಳ (ಎನ್‌ಸಿಡಿಗಳು) ಕೂಪನ್ ಪೇಮೆಂಟ್ಸ್‌ನ ಪಾವತಿಯಲ್ಲಿ ವಿಫಲವಾಗಿದೆ.
ಜುಲೈ 2019 ರಲ್ಲಿ ಸಂಸ್ಥಾಪಕ ಅಧ್ಯಕ್ಷ ವಿಜಿ ಸಿದ್ಧಾರ್ಥ ಅವರ ಮರಣದ ನಂತರ ಕಾಫಿ ಡೇ ಎಂಟರ್‌ಪ್ರೈಸಸ್ ತೊಂದರೆಯಲ್ಲಿದೆ. ಐಡಿಬಿಐಟಿಎಸ್ಎಲ್ ಸೆಪ್ಟೆಂಬರ್ 2023ರಲ್ಲಿ ಸಿಡಿಇಎಲ್ ವಿರುದ್ಧ ದಿವಾಳಿತನ ಅರ್ಜಿ ಸಲ್ಲಿಸಿತ್ತು. ಸಿಡಿಇಎಲ್ ₹ 228 ಕೋಟಿಗೂ ಹೆಚ್ಚು ಸಾಲ ಪಾವತಿಸಲು ವಿಫಲವಾಗಿದೆ ಎಂದು ಅದು ದೂರಿತ್ತು. ಹಣ ಪಾವತಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಸಿಡಿಇಎಲ್ 2019 ಮತ್ತು 2020 ರ ನಡುವೆ ನಾಲ್ಕು ಸಂದರ್ಭಗಳಲ್ಲಿ ನೀಡಬೇಕಿದ್ದ ಹಣವನ್ನು ಪಾವತಿಸದೆ ಸಾಲಗಾರನಾಗಿದೆ ಎಂದು ಐಡಿಬಿಐಟಿಎಸ್ಎಲ್ ಆರೋಪಿಸಿತ್ತು.
ಆದರೆ ಐಡಿಬಿಐಟಿಎಸ್‌ಎಲ್ ಒಂದು ಡಿಬೆಂಚರ್ ಹೋಲ್ಡರ್ ಆಗಿದ್ದು ತನ್ನ ವಿರುದ್ಧ ಕಾರ್ಪೊರೇಟ್ ದಿವಾಳಿ ಗೊತ್ತುವಳಿ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಅರ್ಜಿ ಸಲ್ಲಿಸಲು ಅದಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ನ್ಯಾಯಮಂಡಳಿ ಎದುರು ಸಿಡಿಇಎಲ್ ವಾದಿಸಿತ್ತು. ಆದರೆ ಈ ವಾದವನ್ನು ಒಪ್ಪದ ಎನ್‌ಸಿಎಲ್‌ಟಿ ಐಬಿಸಿ ಸೆಕ್ಷನ್ 5(8)(c) ಅಡಿಯಲ್ಲಿನ ವ್ಯಾಖ್ಯಾನದ ಪ್ರಕಾರ ಡಿಬೆಂಚರ್‌ಗೆ ಅನುಸಾರವಾಗಿ ಇರುವ ಸಾಲವೂ ಸಹ 'ಹಣಕಾಸಿನ ಸಾಲ' ಎಂದಿತು. ಆದ್ದರಿಂದ ಡಿಬೆಂಚರ್ ಹೊಂದಿರುವವರು ಹಣಕಾಸು ಸಾಲಗಾರರಾಗಿಲ್ಲ ಎಂಬ ಸಿಡಿಇಎಲ್ ಆರೋಪ ಸಮರ್ಥನೀಯವಲ್ಲ ಎಂದು ಹೇಳಿತ್ತು.
ಜುಲೈ 20, 2023 ರಂದು, ಎನ್‌ಸಿಎಲ್‌ಟಿಯ ಅದೇ ಬೆಂಗಳೂರು ಪೀಠವು ಕೆಫೆ ಕಾಫಿ ಡೇ ಚೈನ್ ಅನ್ನು ಹೊಂದಿರುವ ಮತ್ತು ನಿರ್ವಹಿಸುವ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ (ಸಿಡಿಜಿಎಲ್) ವಿರುದ್ಧ ದಿವಾಳಿತನದ ಮನವಿಯನ್ನು ಒಪ್ಪಿಕೊಂಡಿತ್ತು. ಐಡಿಬಿಐಟಿಎಸ್‌ಎಲ್ ಪರವಾಗಿ ಹಿರಿಯ ವಕೀಲ ಶ್ರೀನಿವಾಸ ರಾಘವನ್ ಮತ್ತು ವಕೀಲರಾದ ಸಂಕೀರ್ತ್ ವಿ ಮತ್ತು ಕೀಸ್ಟೋನ್ ಪಾಲುದಾರರ ಕೃಷ್ಣವರ್ಣ ವಾದ ಮಂಡಿಸಿದರು. ಸಿಡಿಇಎಲ್ ಸಂಸ್ಥೆಯನ್ನು ವಕೀಲೆ ಚಿತ್ರಾ ನಿರ್ಮಲಾ ಪ್ರತಿನಿಧಿಸಿದ್ದರು.
ಉದ್ಯಮಿ ವಿ ಜಿ ಸಿದ್ಧಾರ್ಥ ಅವರು ಕೆಫೆ ಕಾಫಿ ಡೇಯ ಪ್ರವರ್ತಕರಾಗಿದ್ದು, ಇವರು ಮಂಗಳೂರಿನ ನೇತ್ರಾವತಿ ನದಿ ಸೇತುವೆ ಮೇಲಿನಿಂದ ಜಿಗಿದು 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ನಿಧನದ ನಂತರ ಕಾಫಿ ಡೇ ಎಂಟರ್‌ಪ್ರೈಸಸ್ ಸಂಕಷ್ಟ ಮತ್ತಷ್ಟು ಹೆಚ್ಚಾಗಿತ್ತು. ಬಳಿಕ ಕಂಪನಿ ಒಂದೊಂದೇ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ತನ್ನ ಸಾಲಗಳನ್ನು ಪಾವತಿಸುತ್ತಾ ಬಂದಿತ್ತು. ಇದರೊಂದಿಗೆ ತನ್ನ ಕಂಪನಿಯು ಹಲವು ಕಾರ್ಯಚರಣೆಗಳಿಗೆ ಕಡಿತ ಹಾಕಿದೆ.
ಷೇರು ಬೆಲೆ ಕುಸಿತ:
ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್‌ನ ಕಳೆದ ವಾರದ ದಿವಾಳಿತನದ ಆದೇಶದ ಹಿನ್ನೆಲೆಯಲ್ಲಿ ಆಗಸ್ಟ್ 12 ರ ಸೆಷನ್ ನಲ್ಲಿ ಕಾಫಿ ಡೇ ಷೇರಿನ ಬೆಲೆಗಳು ಕುಸಿತ ಕಂಡಿವೆ. ಆಗಸ್ಟ್ 12 ರಂದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಕಾಫಿ ಡೇ ಸ್ಟಾಕ್ ಬೆಲೆ ರೂ 38 ನಲ್ಲಿ ಪ್ರಾರಂಭವಾಗಿದ್ದು ಷೇರುಗಳು ರೂ 37.55 ರ ಇಂಟ್ರಾಡೇ ಕನಿಷ್ಠ ಮತ್ತು ಗರಿಷ್ಠವೆಂದರೆ 41.05ಗೆ ತಲುಪಿತು.


Click it and Unblock the Notifications