For Quick Alerts
ALLOW NOTIFICATIONS  
For Daily Alerts

ಗಡಿಯಲ್ಲಿ ಶಾಂತಿ ನೆಲೆಸಿದರೆ ನಮ್ಮ ದೇಶದ ಬಜೆಟ್ ಮಾತ್ರವಲ್ಲ, ನಮ್ಮ ಮನೆ ಬಜೆಟ್‌ ಸಹ ಸುಧಾರಿಸುತ್ತೆ

By ವಿ. ಮಾಲಾ
|

ಮೊನ್ನೆ ಹೀಗೇ ಸೀರಿಯಲ್ ಮಧ್ಯೆ ಜಾಹೀರಾತು ಬಂದಾಗ ನಮ್ಮ ದೇಶದ ಮೂರೂ ರಕ್ಷಣಾ ಪಡೆಗಳಿಗೆ ಒಬ್ಬರೇ ದಂಡನಾಯಕರನ್ನು ನೇಮಿಸಿರುವ ವಿಚಾರದ ಬಗ್ಗೆ ಮಾತು ಮಗ ಶುರು ಮಾಡಿದ. 'ನೋಡಮ್ಮಾ ಈ ಸಲ ಯುದ್ಧವಾದ್ರೆ ಪಾಕಿಸ್ತಾನ್ ಚಿಂದಿ ಆಗಿಬಿಡುತ್ತೆ' ಅಂತ ಯಾರೋ ಆಡಿದ್ದ ಮಾತನ್ನು ಉತ್ಸಾಹದಿಂದ ಗಿಳಿಪಾಠ ಒಪ್ಪಿಸಿದ. ಪಾಪ, ಏಳು ವರ್ಷದ ಅವನಿಗೆ ಯುದ್ಧದ ಭೀಕರತೆ ಹೇಗೆ ಅರ್ಥವಾಗಬೇಕು? ಆದರೆ ಹಾಲು ತರಲು ಹೋಗಿದ್ದಾಗ ಅಂಗಡಿ ಪಾಪಣ್ಣನೂ ಇದೇ ಧಾಟಿಯ ಮಾತನ್ನಾಡಿದ. ಓಹೋ, ಇದು ನನ್ನ ಮಗನೊಬ್ಬನ ಸಮಸ್ಯೆಯಲ್ಲ. ನಮ್ಮ ಸುತ್ತಲಿನ ಸಮಾಜದ ಬಹುತೇಕರಿಗೆ ಯುದ್ಧೋನ್ಮಾದ ಆವರಿಸಿದಂತಿದೆ ಅಂತ ಅನ್ನಿಸಿತು ನನಗೆ.

ಯುದ್ಧ ಅಂದಾಗಲೆಲ್ಲಾ ನನಗೆ ನೆನಪಾಗೋದು ವಿಷ್ಣುವರ್ಧನ್ ಅಭಿನಯದ 'ಮುತ್ತಿನಹಾರ'. ಯುದ್ಧದ ಭೀಕರತೆ ಮತ್ತು ಅನರ್ಥಗಳನ್ನು ಎಷ್ಟು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಅದರಲ್ಲಿ. 'ದೇವರು ಹೊಸದ ಪ್ರೇಮದ ಹಾರ...' ಹಾಡೊಂದು ಯುದ್ಧ ಬೇಕು ಅನ್ನುವ ಪಾಪಣ್ಣನಂಥವರಿಗೆ ಸರಿಯಾಗಿ ಅರ್ಥವಾಗಬೇಕು.

 

'ಮುತ್ತಿನಹಾರ' ತೆರೆ ಕಂಡ ಕಾಲಕ್ಕೂ (1990), 21ನೇ ಶತಮಾನದ ಮೂರನೇ ದಶಕದ ಮೊದಲ ತಿಂಗಳ ಕಾಲಕ್ಕೂ ಯುದ್ಧ ಅನ್ನೋದು ಸಾಕಷ್ಟು ಬದಲಾಗಿದೆ. ಈಗ ಯುದ್ಧವೆಂದರೆ ಕೇವಲ ಗಡಿಯಲ್ಲಿ ಸೈನಿಕರ ನಡುವಿನ ಹೊಡೆದಾಟಕ್ಕೆ ಸೀಮಿತವಾಗಿರುವ ವಿದ್ಯಮಾನವಲ್ಲ. ನಮ್ಮ-ನಿಮ್ಮ ಮನೆಯ ತಿಂಗಳ ಬಜೆಟ್‌ ಸಹ ಯುದ್ಧವಾದರೆ ಯರ್ರಾಬಿರ್ರಿ ಚಿಂದಿಯಾಗುತ್ತೆ. ಹಾಂ, ಯಾಕೆ ಅಂದ್ರಾ?

ಮುಂದಿನ ಸಾಲುಗಳನ್ನು ಓದಿ, ನಿಮಗೇ ಅರ್ಥವಾಗುತ್ತೆ...

ದೊಡ್ಡಣ್ಣ-ಚಿಕ್ಕಣ್ಣನ ಗಲಾಟೆ

ದೊಡ್ಡಣ್ಣ-ಚಿಕ್ಕಣ್ಣನ ಗಲಾಟೆ

ಇರಾನ್‌ ಸೇನಾಧಿಕಾರಿಯನ್ನು ಅಮೆರಿಕ ಇರಾಕ್‌ನಲ್ಲಿ ದಾಳಿ ನಡೆಸಿ ಕೊಂದು ಹಾಕಿದ ಸುದ್ದಿ ಜಗತ್ತನ್ನು ಅಪ್ಪಳಸಿದ ನಂತರ ಅದರ ಮುಂದಿನ ಪರಿಣಾಮಗಳ ಬಗ್ಗೆ ಎಲ್ಲರೂ ಯೋಚಿಸುತ್ತಿದ್ದಾರೆ. ಭಾರತಕ್ಕೆ ಪ್ರಮುಖ ತೈಲ ಸರಬರಾಜು ದೇಶವಾದ ಇರಾನ್‌ ಇದೀಗ ಅಮೆರಿಕ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಇದು ಕೇವಲ ಎರಡು ದೇಶಗಳ ನಡುವಣ ಯುದ್ಧವಾಗಿ ಉಳಿಯುವುದು ಅನುಮಾನ.

ವಿಶ್ವದೆಲ್ಲೆಡೆ ತನ್ನ ಮಾತೇ ನಡೆಯಬೇಕೆನ್ನುವ ದೊಡ್ಡಣ್ಣ ಅಮೆರಿಕ ಮತ್ತು ಅದಕ್ಕೆ ಪರ್ಯಾಯವಾಗಿ ತನ್ನ ಪ್ರಭಾವ ಬೆಳೆಸಿಕೊಳ್ಳಲು ಯತ್ನಿಸಿದ ಇರಾನ್‌ ದೇಶಗಳ ಜಟಾಪಟಿಯಲ್ಲಿ ನಮ್ಮೂರ ಅಕ್ಕಸಾಲಿಗರ ಅಂಗಡಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 40 ಸಾವಿರ ದಾಟಿದೆ. ಕೇಳಿದರೆ ‘ಯುದ್ಧ ಬಂದೈತೆ ಕಣಮ್ಮ' ಅನ್ನೋ ಉತ್ತರ ಸಿಗ್ತಿದೆ.

ನಮ್ ಯಜಮಾನ್ರು ಮಕ್ಕಳ ಭವಿಷ್ಯಕ್ಕೆ ಅಂತ ಒಂದೆರೆಡು ಮ್ಯೂಚ್ಯುಯಲ್ ಫಂಡ್‌ಗಳಲ್ಲಿ ಎಸ್‌ಐಪಿ ಮಾಡಿದ್ರು. ಷೇರುಪೇಟೆ ಬೀಳುತ್ತೇನೋ? ನಾವು ಹಾಕಿದ ಅಸಲಿಗೂ ಮೋಸವಾಗುತ್ತೇನೋ ಅಂತ ಒಂದೊಂದ್ಸಲ ಭಯವಾಗುತ್ತೆ. ಇನ್ನು ಪೆಟ್ರೋಲ್ ರೇಟ್‌ ಈಗ್ಲೇ 78 ರೂಪಾಯಿ ದಾಟಿದೆ. ಡೀಸೆಲ್ ರೇಟ್‌ ಕೂಡ ಜಾಸ್ತಿ ಆಗಿದೆ. ಡೀಸೆಲ್ ರೇಟ್ ಜಾಸ್ತಿ ಆದ್ರೆ ಗೊತ್ತಲ್ಲಾ, ಹಾಲು, ತರಕಾರಿ ಮೊದಲಗೊಂಡು ಎಲ್ಲಾ ರೇಟ್‌ಗಳೂ ಜಾಸ್ತಿ ಆಗುತ್ವೆ.

ಅಲ್ಲೆಲ್ಲೋ ದೂರದಲ್ಲಿ ಅಮೆರಿಕ-ಇರಾನ್ ಕಿತ್ತಾಡಿಕೊಂಡ್ರೇ ನಮ್ಮ ಮನೆ ಬಜೆಟ್‌ಗೆ ಇಷ್ಟು ಕಿರಿಕ್ ಆಗುತ್ತೆ ಅಂದ್ರೆ, ಇನ್ನು ನಮ್ಮ ದೇಶದ ಗಡಿಗೇ ಯುದ್ಧ ಬಂದ್ರೆ, ಅದರ ಪರಿಣಾಮ ಹೇಗಿರಬೇಡ?

ನಮಗೇನು ತಡ್ಕೊಳೊ ತಾಕತ್ತು ಇಲ್ವಾ?
 

ನಮಗೇನು ತಡ್ಕೊಳೊ ತಾಕತ್ತು ಇಲ್ವಾ?

‘ನಮ್ಮದು ಗಾಂಧಿ ಹುಟ್ಟಿದ ನಾಡು. ಭಾರತೀಯರು ನಾವು ಶಾಂತಿಪ್ರಿಯರು'. ನಾನು ಚಿಕ್ಕವಳಿದ್ದಾಗಿನಿಂದ್ಲೂ ಇಂಥ ಮಾತುಗಳನ್ನೇ ಕೇಳಿಕೊಂಡು ಬಂದೆ. ಆದರೆ ತೀರಾ ಅನಿವಾರ್ಯವಾಗಿ ಬೇರೆಯವರು ಮುಗಿಬಿದ್ದಾಗಲೂ ಸುಮ್ಮನಿರುವಂಥ ಶಾಂತಿಪ್ರಿಯತೆ ಇನ್ನು ಸಾಧ್ಯವಿಲ್ಲ ಅಂತ ಈಚೆಗಷ್ಟೆ ನಮ್ಮ ದೇಶ ತೋರಿಸಿಕೊಟ್ಟಿದೆ. ‘ನಮ್ಮ ನೆಲಕ್ಕೆ ಬಂದು ಗಲಾಟೆ ಮಾಡಿದ್ರೆ ಇನ್ನು ಸಹಿಸೋಕೆ ಆಗಲ್ಲ' ಅನ್ನೋ ಖಡಕ್ ಸಂದೇಶವನ್ನು ಬಾಲಾಕೋಟ್‌ ನೆರೆ ದೇಶದ ಪುಂಡರಿಗೆ ಸ್ಪಷ್ಟವಾಗಿಯೇ ಕೊಡ್ತು ಅನ್ನಿ.

ಇದೀಗ ಭೂಸೇನೆಯ ಹೊಸ ಮುಖ್ಯಸ್ಥರಾದ ಮನೋಜ್ ಮುಕುಂದ ನರವಾಣೆ ಹಲವು ಬಾರಿ ‘ಮುನ್ನೆಚ್ಚರಿಕೆ ದಾಳಿ ನಡೆಸುವ ಹಕ್ಕು ನಮಗಿದೆ' ಎಂದು ಗುಡುಗಿದ್ದಾರೆ. ಅತ್ತ ಪಾಕಿಸ್ತಾನದವರು, ‘ಬಾಲಾಕೋಟ್ ಅಥವಾ ಸರ್ಜಿಕಲ್ ಸ್ಟ್ರೈಕ್‌ನಂಥ ಮತ್ತೊಂದು ದುಸ್ಸಾಹಸಕ್ಕೆ ಮುಂದಾದರೆ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಗುಡುಗಿದ್ದಾರೆ. ಎರಡೂ ದೇಶಗಳಲ್ಲಿ ಶಾಂತಿ ಬೇಕು ಎನ್ನುವವರ ಸಂಖ್ಯೆಗಿಂತ ನಿರ್ಣಾಯಕ ಯುದ್ಧವೊಂದು ನಡೆಯಬೇಕು ಎನ್ನುವವರ ಸಂಖ್ಯೆಯೇ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಯಾವುದೇ ಸಮಸ್ಯೆಗೆ ಯುದ್ಧ ಪೂರ್ಣ ಪರಿಹಾರ ಒದಗಿಸದು. ಆದರೆ ಅದೇ ಅಂತಿಮ ಆಯ್ಕೆಯಾಗಿ ಉಳಿದಾಗ ಅದರಿಂದ ತಪ್ಪಿಸಿಕೊಳ್ಳಲೂ ಆಗುವುದಿಲ್ಲ. ಒಂದು ವೇಳೆ ಭಾರತ-ಪಾಕ್ ಯುದ್ಧ ಘೋಷಣೆಯೇ ಆಗಿಬಿಟ್ಟಿತು ಎಂದಿಟ್ಟುಕೊಳ್ಳೋಣ. ಅದರ ಪರಿಣಾಮಗಳು ಎರಡೂ ದೇಶಗಳ ಮೇಲೆ ಏನಾಗಬಹುದು?

ಬಾಲಾಕೋಟ್ ನೆನಪಿಸಿಕೊಳ್ಳಿ...

ಬಾಲಾಕೋಟ್ ನೆನಪಿಸಿಕೊಳ್ಳಿ...

ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರಿದ್ದ ಬಸ್‌ ಮೇಲೆ ಬಾಂಬ್ ಸ್ಫೋಟಕ್ಕೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಉಗ್ರಗಾಮಿ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸಿತು. ಇದಕ್ಕೆ ಪ್ರತೀಕಾರ ತೋರಲು ಪಾಕಿಸ್ತಾನದ ಯುದ್ಧವಿಮಾನಗಳು ಭಾರತದತ್ತ ನುಗ್ಗಿ ಬಂದವು.

ಈ ತೆರೆಮರೆ ಯುದ್ಧದಾಟದಲ್ಲಿ ಎರಡೂ ದೇಶಗಳು ಕೋಟ್ಯಂತರ ರೂಪಾಯಿ ಮೌಲ್ಯದ ತಲಾ ಒಂದೊಂದು ಯುದ್ಧವಿಮಾನಗಳನ್ನು ಕಳೆದುಕೊಂಡವು. ಭಾರತದ ಓರ್ವ ಪೈಲಟ್ ಪಾಕಿಸ್ತಾನಕ್ಕೆ ಸೆರೆ ಸಿಕ್ಕು, ನಂತರ ಬಿಡುಗಡೆಯಾದರು. ಪಾಕಿಸ್ತಾನದ ಓರ್ವ ಪೈಲಟ್ ಹತರಾದರು ಎನ್ನಲಾಗಿದೆ.

ವಿಷಯ ಇಷ್ಟೇ ಅಲ್ಲ. ಈ ಸಂದರ್ಭ ಎರಡೂ ದೇಶಗಳು ತಮ್ಮತಮ್ಮ ದೇಶಗಳ ಹಲವು ವಾಯುಪ್ರದೇಶಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಿದವು. ಭಾರತವು ನವದೆಹಲಿ ಸೇರಿದಂತೆ 8 ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆಗೆ ನಿರ್ಬಂಧಗಳನ್ನು ವಿಧಿಸಿತ್ತು. ನಾಗರಿಕ ಮತ್ತು ಸರಕು ಸಾಗಣೆ ವಿಮಾನ ಸಂಚಾರ ಏಕಾಏಕಿ ನಿಂತು ಹೋಗಿದ್ದರಿಂದ ಆರ್ಥಿಕ ನಷ್ಟವೂ ಉಂಟಾಯಿತು.

ಈಗ ಒಮ್ಮೆ ಲೆಕ್ಕದ ಮಾತಾಡೋಣ. ನಮ್ಮ ಹೆಮ್ಮೆಯ ಪೈಲಟ್ ಅಭಿನಂದನ್ ವರ್ಧಮಾನ್ ಹಾರಿಸುತ್ತಿದ್ದ ಮಿಗ್ 21 ಯುದ್ಧವಿಮಾನದ ಬೆಲೆ (1974ರಲ್ಲಿ) 20 ಲಕ್ಷ ಡಾಲರ್. (ಈಗಿನ ಡಾಲರ್ ಬೆಲೆಗೆ ಲೆಕ್ಕ ಹಾಕಿದರೆ ಸುಮಾರು 10 ಕೋಟಿ ರೂಪಾಯಿ). ಪಾಕಿಸ್ತಾನ ಕಳೆದುಕೊಂಡ ಎಫ್‌-16 ಯುದ್ಧವಿಮಾನದ ಬೆಲೆ ಎಷ್ಟು ಗೊತ್ತಾ? 2 ಕೋಟಿ ಡಾಲರ್. ಅಂದರೆ 143 ಕೋಟಿ ರೂಪಾಯಿ.

ಅದೃಷ್ಟವಶಾತ್‌ ನಮ್ಮ ಪೈಲಟ್ ಅಭಿನಂದನ್ ವರ್ಧಮಾನ್ ಜೀವ ಉಳಿಯಿತು. ಪಾಕ್ ಪೈಲಟ್ ಒಬ್ಬರು ಮೃತಪಟ್ಟರು ಎಂಬ ವರದಿಗಳು ಪ್ರಕಟವಾದವು. ಪೈಲಟ್‌ಗಳ ಜೀವಕ್ಕೆ ಖಂಡಿತ ಬೆಲೆ ಕಟ್ಟಲು ಆಗುವುದಿಲ್ಲ. ಆದರೆ ಒಬ್ಬ ಪೈಲಟ್ ತಯಾರಾಗಲು, ಅವರಿಗೆ ತರಬೇತಿ ಕೊಡಿಸಲು ಸರ್ಕಾರಗಳು ಅವರ ಮೇಲೆ ಎಷ್ಟು ಹಣ ಖರ್ಚು ಮಾಡಿರ್ತಾವೆ ಅಲ್ವಾ? ಒಬ್ಬ ಪೈಲಟ್ ಕೇವಲ ಕುಟುಂಬಕ್ಕೆ ಮಾತ್ರವೇ ಅಲ್ಲ, ಇಡೀ ದೇಶಕ್ಕೇ ಆಸ್ತಿ.

ಶಾಂತಿ ಅಲ್ಪಾಯು

ಶಾಂತಿ ಅಲ್ಪಾಯು

ಬಾಲಾಕೋಟ್ ಪ್ರಸಂಗ ಮತ್ತು ಪರಿಣಾಮಗಳನ್ನು ಬದಿಗಿಟ್ಟು ಯೋಚಿಸಿದರೆ ಸದ್ಯದ ಮಟ್ಟಿಗೆ ಎರಡೂ ದೇಶಗಳ ನಡುವೆ ಶಾಂತಿ ನೆಲೆಸಿದೆ.ಆದರೆ ಇದು ಎಷ್ಟು ಕಾಲ? ಎರಡೂ ದೇಶಗಳ ನಡುವೆ ವಿಶ್ವಾಸ ಎಂಬುದು ಸದಾ ಅಲ್ಪಾಯು.

ಬ್ರಿಟಿಷರು ಭಾರತ ಉಪಖಂಡದಿಂದ ವಾಪಸ್ ಹೋಗುವಾಗ ಸಾಕಷ್ಟು ವಿವಾದಗಳನ್ನು ಹಾಗೆಯೇ ಬಿಟ್ಟುಹೋದರು. ಸ್ವಾತಂತ್ರ್ಯ ಬಂದ 1947ರಿಂದಲೂ ಉತ್ತರ ಕಾಶ್ಮೀರ ಅಂದಿನಿಂದಲೂ ವಿವಾದದ ಕೇಂದ್ರವೇ ಆಗಿ ಉಳಿದಿದೆ. ಸದಾ ಹೊಗೆಯಾಡುವ ವೈಷಮ್ಯದಿಂದಲೇ ಎರಡೂ ದೇಶಗಳು ಮೂರು ಪೂರ್ಣಪ್ರಮಾಣದ ಯುದ್ಧಗಳನ್ನು ಮಾಡಿದವು. 1971ರ ಯುದ್ಧವು ಪೂರ್ವ ಪಾಕಿಸ್ತಾನವಿದ್ದ ಭಾಗದಲ್ಲಿ ಬಾಂಗ್ಲಾ ಎಂಬ ಹೊಸ ದೇಶ ಸೃಷ್ಟಿಗೆ ಕಾರಣವಾಯಿತು.

1999ರಲ್ಲಿ ಎರಡೂ ದೇಶಗಳು ಒಂದು ಸೀಮಿತ ಯುದ್ಧ ಮಾಡಿದವು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶದ ಗುಡ್ಡಗಳಲ್ಲಿ ಸೇರಿಕೊಂಡಿದ್ದ ಅಕ್ರಮ ಪಾಕಿಸ್ತಾನಿ ಅತಿಕ್ರಮಣಕಾರರನ್ನು ಭಾರತೀಯ ಸೇನೆ ಅಲ್ಲಿಂದ ಕಾಲ್ತೆಗೆಯುವಂತೆ ಮಾಡಿತು. ಎರಡೂ ಕಡೆ 1500ಕ್ಕೂ ಹೆಚ್ಚು ಯೋಧರು ಮೃತಪಟ್ಟರು. 1971ರಲ್ಲಿ 93,000 ಪಾಕ್ ಯೋಧರು ಭಾರತಕ್ಕೆ ಶರಣಾದರು. ಪೂರ್ವ ಪಾಕಿಸ್ತಾನದಿಂದ ನಿರಾಶ್ರಿತರು ಪ್ರವಾಹದಂತೆ ಹರಿದುಬಂದರು. ಇದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಯಿತು. 1970ರಲ್ಲಿ ಸಂಭವಿಸಿದ ಮೊದಲ ಜಾಗತಿಕ ತೈಲ ಆಘಾತದಿಂದ ದೇಶ ಆಗಿನ್ನೂ ಚೇತರಿಸಿಕೊಳ್ಳುತ್ತಿತ್ತು.

ಇದೀಗ ಗಡಿಯಲ್ಲಿ ನೆಲೆಸಿರುವ ಉದ್ವಿಗ್ನ ಸ್ಥಿತಿಯು ಹೊಸ ಆತಂಕ ಮೂಡಿಸಿದೆ. ಅದಕ್ಕೆ ಮುಖ್ಯ ಕಾರಣ ಎರಡೂ ದೇಶಗಳು 1998ರಲ್ಲಿ ಅಣ್ವಸ್ತ್ರ ಶಕ್ತದೇಶಗಳಾಗಿರುವುದು. ಅಣ್ವಸ್ತ್ರ ಬಳಸುವ ಸಾಧ್ಯತೆ ಇಲ್ಲ. ಆದರೆ ಆ ಆತಂಕವಂತೂ ಎರಡೂ ದೇಶಗಳ ಜನರ ಮನದಲ್ಲಿ ನೆಲೆ ನಿಂತಿದೆ.

ಪಾಕ್ ಆರ್ಥಿಕ ದುಸ್ಥಿತಿ

ಪಾಕ್ ಆರ್ಥಿಕ ದುಸ್ಥಿತಿ

ಒಂದು ವೇಳೆ ಈಗ ಯುದ್ಧವೇನಾದರೂ ನಡೆದರೆ ಅದು ಎರಡೂ ದೇಶಗಳಿಗೆ ಗಮನಾರ್ಹ ಪ್ರಮಾಣದ ಹಾನಿ ಉಂಟು ಮಾಡುತ್ತದೆ. ಆದರೆ ಪಾಕಿಸ್ತಾನಕ್ಕೆ ಅದರ ಹೊಡೆತ ಗಂಭೀರವಾಗಿರುತ್ತದೆ. ಅದಕ್ಕೆ ಕಾರಣ ಅದರ ಆರ್ಥಿಕತೆ ಮತ್ತು ಹಣಕಾಸು ಪರಿಸ್ಥಿತಿ.

21 ಕೋಟಿ ಜನಸಂಖ್ಯೆಯಿರುವ ಪಾಕಿಸ್ತಾನದ ಜಿಡಿಪಿ ಗಾತ್ರ 282 ಶತಕೋಟಿ ಡಾಲರ್. 2017-18ರಲ್ಲಿ ಶೇ 5.5ರ ವಿತ್ತೀಯ ಕೊರತೆ ಎದುರಿಸಿತ್ತು. ಕೇವಲ 27 ಬಿಲಿಯನ್ ಡಾಲರ್‌ ಹಣ ಮಾತ್ರ ತೆರಿಗೆ ಮೂಲಕ ಬಂದಿತ್ತು. ಬಜೆಟ್‌ನ ಸಿಂಹಪಾಲು, ಅಂದರೆ ಶೇ 26ರಷ್ಟು ಮೊತ್ತವನ್ನು ರಕ್ಷಣೆಗೆ ಮೀಸಲಿಟ್ಟಿದೆ. ಸೇನೆಗೆ ಹೆಚ್ಚು ಖರ್ಚು ಮಾಡಬೇಕಾದ ಕಾರಣ, ಅಭಿವೃದ್ಧಿ ಚಟುವಟಿಕೆಗಳಿಗೆ ಅತ್ಯಲ್ಪ ಮೊತ್ತದ ಹಣ ಸಿಗುತ್ತಿದೆ. ವಿತ್ತೀಯ ಕೊರತೆ ಪ್ರಮಾಣ ಶೇ 60. ಇದು ದೇಶದ ಒಟ್ಟಾರೆ ಜಿಡಿಪಿಯ ಶೇ 4.7 ಕ್ಕೆ ಕುಸಿದಿದೆ. ಹೀಗಾಗಿ ಆಮದು ಮಾಡಿಕೊಂಡ ಉತ್ಪನ್ನಗಳಿಗೆ ಹಣ ಪಾವತಿ ಮಾಡಲು ಸಮಸ್ಯೆ ಎದುರಾಗಿದೆ. ಅದರ ಕರೆನ್ಸಿ ದುರ್ಬಲವಾಗಿದ್ದು, ಷೇರುಕಟ್ಟೆಯು ಸಣ್ಣಪುಟ್ಟ ಬೆಳವಣಿಗೆಗಳಿಗೂ ಕುಸಿಯುವುದು ಸಾಮಾನ್ಯ ಎಂಬಂತೆ ಆಗಿದೆ.

ಪಾಕಿಸ್ತಾನದ ಒಟ್ಟಾರೆ ರಫ್ತಿನಲ್ಲಿ ಹತ್ತಿ, ಬಟ್ಟೆಗಳು, ಧಾನ್ಯಗಳು, ಮೀನು, ಉಪ್ಪು, ಚರ್ಮದ ಉತ್ಪನ್ನಗಳು, ಸಕ್ಕರೆ, ಗಂಧಕ ಮತ್ತು ಸಿಮೆಂಟ್ ಶೇ 57ರಷ್ಟು ಪಾಲು ಪಡೆದಿವೆ. ರಫ್ತಾಗುವ ಉತ್ಪನ್ನಗಳ ಸಂಖ್ಯೆ ಸೀಮಿತವಾಗಿರುವುದರಿಂದ ಮತ್ತು ಬೆಲೆಯ ಏರಿಳಿತಕ್ಕೆ ಈಡಾಗುವಂಥ ಉತ್ಪನ್ನಗಳಾಗಿರುವುದರಿಂದ ಜಾಗತಿಕ ಮಾರುಕಟ್ಟೆಯ ಪರಿಣಾಮ ಪಾಕ್ ಆರ್ಥಿಕತೆಯಲ್ಲಿ ತಲ್ಲಣ ಮೂಡಿಸುತ್ತದೆ. ಈಚಿನ ದಿನಗಳಲ್ಲಿ ವಿದೇಶಗಳಲ್ಲಿ ನೆಲೆಸಿರುವ ಪಾಕ್ ಪ್ರಜೆಗಳು ಸ್ವದೇಶಕ್ಕೆ ಕಳಿಸುವ ಹಣದ ಪ್ರಮಾಣ ಹೆಚ್ಚಾಗಿದೆ. 2019-20ರಲ್ಲಿ ಅದು ದಾಖಲೆ ಮೊತ್ತದ ಅಂದರೆ 22 ಶತಕೋಟಿ ಡಾಲರ್ ಮುಟ್ಟಿದೆ. ಈ ಬೆಳವಣಿಗೆ ಪಾಕ್ ಆರ್ಥಿಕತೆಗೆ ತುಸು ಚೈತನ್ಯ ತುಂಬಿದೆ.

ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟದ ಸದಸ್ಯ ರಾಷ್ಟ್ರವಾಗಿರುವ ಪಾಕಿಸ್ತಾನವು ಈಚೆಗೆ ವಿಶ್ವ ಹಣಕಾಸು ನಿಧಿ ಸೇರಿದಂತೆ ಹಲವೆಡೆಗಳಿಂದ ಸಾಲಕ್ಕಾಗಿ ಎದುರು ನೋಡುತ್ತಿದೆ. ಪಾಕಿಸ್ತಾನದ ಪ್ರಧಾನಿ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕರೂ ಆಗಿರುವ ಇಮ್ರಾನ್ ಖಾನ್ ಹಲವು ಮಿತ್ರರಾಷ್ಟ್ರಗಳಿಗೆ ಭೇಟಿ ನೀಡಿ ಸಾಲ ಮತ್ತು ಸಹಾಯವನ್ನು ಯಾಚಿಸಿದ್ದಾರೆ. ಕಂಡಕಂಡವರ ಸಾಲಕ್ಕೆ ಕೈಯೊಡ್ಡುವ ದೇಶವನ್ನು ಯಾರು ತಾನೆ ಮಿತ್ರರಾಷ್ಟ್ರ ಎಂದುಕೊಳ್ಳುತ್ತಾರೆ. ಇದು ಪಾಕ್ ಆರ್ಥಿಕತೆಯ ದೌರ್ಬಲ್ಯವನ್ನು ಎತ್ತಿ ತೋರಿಸುವುದಿಲ್ಲವೇ?

ಪಾಕಿಸ್ತಾನವು ಚೀನಾ ಜೊತೆಗೆ ತನಗಿರುವ ಬಾಂಧವ್ಯವನ್ನೇ ಆಧರಿಸಿ ಹಲವು ಸಾಹಸಗಳಿಗೆ ಕೈಹಾಕುತ್ತದೆ.

ಪಾಕಿಸ್ತಾನವು ಚೀನಾ ಜೊತೆಗೆ ತನಗಿರುವ ಬಾಂಧವ್ಯವನ್ನೇ ಆಧರಿಸಿ ಹಲವು ಸಾಹಸಗಳಿಗೆ ಕೈಹಾಕುತ್ತದೆ.

ಚೀನಾದ ಬೆಲ್ಟ್‌ ರೋಡ್ ಸಾಹಸ ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನ ಒಟ್ಟಾರೆ ಮೊತ್ತ 62 ಬಿಲಿಯನ್ ಡಾಲರ್‌ ಮೊತ್ತದ್ದು. ಪಾಕಿಸ್ತಾನದ ಉದ್ದಕ್ಕೂ ಈ ಹೆದ್ದಾರಿ ಹಾದು ಹೋಗುತ್ತದೆ. ಪಾಕಿಸ್ತಾನದ ಸಾರ್ವಭೌಮತ್ವಕ್ಕೆ ಇದು ಅಪಾಯ ತಂದೊಡ್ಡಿದೆ. ವಿಶ್ವದ ಆರ್ಥಿಕತೆಯ ಮೇಲಿನ ಅವಲಂಬನೆಯನ್ನೂ ಹೆಚ್ಚಿಸುತ್ತದೆ.

ದಿನಕ್ಕೆ 1.9 ಡಾಲರ್‌ಗಿಂತ ಕಡಿಮೆ ಹಣದಲ್ಲಿ ಬದುಕುತ್ತಿರುವವರನ್ನು ವಿಶ್ವಬ್ಯಾಂಕ್ ಬಡವರು ಎಂದು ಹೇಳುತ್ತದೆ. ಈ ಲೆಕ್ಕಾಚಾರದಂತೆಯೇ ಪಾಕಿಸ್ತಾನದ ಶೇ30ರಷ್ಟು ಜನರು ಬಡತನ ಅನುಭವಿಸುತ್ತಿದ್ದಾರೆ ಎನ್ನುತ್ತದೆ ವಿಶ್ವಬ್ಯಾಂಕ್ ವರದಿ. ಪಾಕಿಸ್ತಾನವು ಇಂದಿಗೂ ವಿಶ್ವದಲ್ಲಿ ಅತಿಹೆಚ್ಚು ಮಕ್ಕಳ ಸಾವು ವರದಿಯಾಗುವ ದೇಶವಾಗಿಯೇ ಉಳಿದುಕೊಂಡಿದೆ. ಅಲ್ಲಿ 1 ವರ್ಷ ತುಂಬುವುದರ ಒಳಗೆ ಪ್ರತಿ 14 ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪುತ್ತದೆ. ಜನಿಸುವ ಪ್ರತಿ 11 ಮಕ್ಕಳ ಪೈಕಿ ಒಂದು ಮಗು ಮಾತ್ರ 5ನೇ ವರ್ಷದ ಹುಟ್ಟುಹಬ್ಬ ಕಾಣುತ್ತದೆ. ಪಾಕಿಸ್ತಾನದ ಒಟ್ಟು ಸಾಕ್ಷರತೆಯ ಪ್ರಮಾಣ ಶೇ 59. ಒಟ್ಟು ಜನಸಂಖ್ಯೆಯಲ್ಲಿ ಶೇ 39ರಷ್ಟು ಜನರಿಗೆ ಮಾತ್ರ ಪೈಪ್‌ಗಳ ಮೂಲಕ ಕುಡಿಯುವ ನೀರು ಪೂರೈಕೆಯಾಗುತ್ತದೆ. ಭಾರತದಿಂದ ಹರಿಯುವ ಸಿಂಧು ನದಿಯು ಪಾಕಿಸ್ತಾನದ ಶೇ 90ರಷ್ಟು ಕೃಷಿ ನೀರಾವರಿ ಅಗತ್ಯಗಳನ್ನು ಪೂರೈಸುತ್ತದೆ. ಪಾಕಿಸ್ತಾನದ ಅರ್ಧದಷ್ಟು ಭೂಪ್ರದೇಶ ಹರಡಿಕೊಂಡಿರುವ ಬಲೂಚಿಸ್ತಾನ ರಾಜ್ಯವು ವರ್ಷದ ಬಹುತೇಕ ದಿನಗಳಲ್ಲಿ ಬಂಜರು ಭೂಮಿಯಾಗಿಯೇ ಉಳಿದುಕೊಂಡಿರುತ್ತದೆ.

ರಕ್ಷಣೆಗೆ ಮಾಡುವ ವೆಚ್ಚ ಹೆಚ್ಚಾದರೆ ಸಮಾಜ ಕಲ್ಯಾಣ ಯೋಜನೆಗೆ ಹಣ ಉಳಿಯುವುದಿಲ್ಲ. ಭಯೋತ್ಪಾದನೆ ನಿಲ್ಲಿಸಿ, ಭಾರತದೊಂದಿಗೆ ಶಾಂತಿಗೆ ಬದ್ಧವಾಗದಿದ್ದರೆ ಪಾಕಿಸ್ತಾನವು ಮುಂದೊಂದು ದಿನ ವಿಶ್ವದ ಬಡ ದೇಶವಾಗಿ ಪರಿವರ್ತನೆಗೊಂಡರೂ ಆಶ್ಚರ್ಯವಿಲ್ಲ.

ಭಾರತಕ ಕನಸಿಗೆ ಅಡ್ಡಿ

ಭಾರತಕ ಕನಸಿಗೆ ಅಡ್ಡಿ

ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಆರ್ಥಿಕತೆ ಸದೃಢವಾಗಿದೆ. ಹಾಗೆಂದು ದೀರ್ಘಕಾಲದ ಯುದ್ಧವಾದರೆ ದೇಶದ ಪರಿಸ್ಥಿತಿ ಹೀಗೆಯೇ ಉಳೀದೀತು ಎನ್ನಲು ಸಾಧ್ಯವಿಲ್ಲ. ಪಾಕಿಸ್ತಾನಕ್ಕಿಂತ ಚೀನಾ ದೇಶವೇ ಎಂದಿದ್ದರೂ ಭಾರತಕ್ಕೆ ಎದುರಾಳಿ. ಭಾರತದ ಬಹುತೇಕ ರಕ್ಷಣಾ ಮತ್ತು ಆರ್ಥಿಕ ಯೋಜನೆಗಳು ಚೀನಾ ದೇಶವನ್ನೇ ದೃಷ್ಟಿಯಲ್ಲಿರಿಸಿಕೊಂಡಿರುತ್ತವೆ. ಒಂದು ವೇಳೆ ಯುದ್ಧ ಘೋಷಣೆಯಾಗಿ (ಹಾಗೆಂದೂ ಆಗುವುದು ಬೇಡ) ಸಂಪನ್ಮೂಲಗಳು ಅತ್ತ ಹರಿದರೆ, ನೀರಾವರಿ, ಹೆದ್ದಾರಿ ನಿರ್ಮಾಣ, ರೈಲ್ವೆಯಂಥ ದೀರ್ಘಕಾಲದ ಯೋಜನೆಗಳಿಗೆ ಮಾರಕವಾಗುತ್ತದೆ. ಅತ್ಯಗತ್ಯ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಬೇಕಾಗುತ್ತೆ. ಆರೋಗ್ಯ, ಶಿಕ್ಷಣದಂಥ ಅತ್ಯಗತ್ಯ ಕ್ಷೇತ್ರಗಳಿಗೆ ಸಂಪನ್ಮೂಲ ಕೊರತೆ ಎದುರಾಗುತ್ತದೆ.

2014-15ರಲ್ಲಿ ರಕ್ಷಣಾ ಬಜೆಟ್‌ 2.29 ಲಕ್ಷ ಕೋಟಿ ರೂಪಾಯಿ ಇತ್ತು. ಕಳೆದ ವರ್ಷದ (2019) ನಮ್ಮ ದೇಶದ ರಕ್ಷಣಾ ಬಜೆಟ್ ಮೊತ್ತ 3.59 ಲಕ್ಷ ಕೋಟಿ ರೂಪಾಯಿ. ರಕ್ಷಣಾ ಇಲಾಖೆಗೆ ಮಂಜೂರು ಮಾಡಿದ ಬಜೆಟ್‌ನ ಮೊತ್ತ ಸುಮಾರು 4 ಲಕ್ಷ ಕೋಟಿ. ಕಳೆದ ಐದು ವರ್ಷಗಳಲ್ಲಿ ಭಾರತದ ರಕ್ಷಣಾ ಬಜೆಟ್‌ ಬಹುತೇಕ ದ್ವಿಗುಣಗೊಂಡಿದೆ. ಮುಂದಿನ ದಿನಗಳಲ್ಲಿ ಇದು ಕಡಿಮೆಯಾಗುವ ಯಾವ ಸೂಚನೆಯೂ ಇಲ್ಲ.

ನೋಟು ರದ್ದತಿ, ಜಿಎಸ್‌ಟಿ ವೈಫಲ್ಯ, ಆರ್ಥಿಕ ಹಿಂಜರಿತದಿಂದ ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹದಲ್ಲಿ ಈ ವರ್ಷ ಕಡಿತವಾಗಿದೆ. ಸಾಲದ ಮೊತ್ತ ಅಂದಾಜಿಗೆ ಎರಡುಪಟ್ಟು ಹೆಚ್ಚಾಗಿದೆ. ಬಜೆಟ್ ಹೊಸಿಲಲ್ಲಿ ಮಿತವ್ಯಯದ ಮಂತ್ರ ಜಪಿಸುತ್ತಿರುವ ಕೇಂದ್ರ ಸರ್ಕಾರ ಉದ್ಯಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಲುಸಾಲು ಸಭೆಗಳನ್ನು ನಡೆಸುತ್ತಿದೆ. ಚೀನಾ ಮತ್ತು ಅಮೆರಿಕ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿರುವುದು ನಮ್ಮ ದೇಶದ ಬಜೆಟ್ ಹಂಚಿಕೆಯ ಮೇಲೆಯೂ ಪರಿಣಾಮ ಬೀರಲಿದೆ.

English summary

Can India and Pakistan afford a Full-scale War

In the present situation can India and Pakistan affrod a full scale war
Story first published: Saturday, January 11, 2020, 15:05 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more