ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಪ್ರಾಯೋಗಿಕ ಯೋಜನೆಯನ್ನು ಆರಂಭ ಮಾಡಿದೆ. ಈ ಯೋಜನೆಯ ಭಾಗವಾಗಿ ಕೆನರಾ ಬ್ಯಾಂಕ್ ಯುಪಿಐ ಇಂಟರ್ಆಪರೇಬಲ್ ಡಿಜಿಟಲ್ ರೂಪಾಯಿ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಅಪ್ಲಿಕೇಶನ್ ಈಗ ಅಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಲಭ್ಯವಿದೆ.
ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳಲ್ಲಿ ಇದೇ ಮೊದಲ ಬಾರಿಗೆ 'ಕೆನರಾ ಡಿಜಿಟಲ್ ರುಪೀ ಅಪ್ಲಿಕೇಶನ್' ಅನ್ನು ಪರಿಚಯಿಸಲಾಗಿದೆ. ಈ ನೂತನ ಫೀಚರ್ನ ಪರಿಚಯದೊಂದಿಗೆ, ಗ್ರಾಹಕರು ಕೆನರಾ ಡಿಜಿಟಲ್ ರೂಪಾಯಿ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಮೆರ್ಚೆಂಟ್ ಯುಪಿಐ ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.

ಈ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಗಾಗಿ ಪ್ರತ್ಯೇಕ ಪ್ರಕ್ರಿಯೆಯ ಅವಶ್ಯಕತೆಗಳಿಲ್ಲ. ಯುಪಿಐ ಆಧಾರಿತ ಪಾವತಿಗಳ ಜೊತೆಗೆ ತಮ್ಮ ಅಸ್ತಿತ್ವದಲ್ಲಿರುವ ಯುಪಿಐ ಕ್ಯೂಆರ್ ಕೋಡ್ಗಳ ಮೂಲಕ ವ್ಯಾಪಾರಿಗಳು ಡಿಜಿಟಲ್ ಕರೆನ್ಸಿ ಪಾವತಿಗಳನ್ನು ಮಾಡಬಹುದಾಗಿದೆ.
ಕೆನರಾ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆ ಸತ್ಯನಾರಾಯಣ ರಾಜು ಆಪ್ ಬಿಡುಗಡೆ ಮಾಡಿದರು. "ಭಾರತೀಯ ಆರ್ಥಿಕತೆಯನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಇದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಆರ್ಬಿಐ ರೂಪಿಸಿದ ಡಿಜಿಟಲ್ ಕರೆನ್ಸಿಯೊಂದಿಗೆ ವೇಗದ ಮತ್ತು ಸುರಕ್ಷಿತ ವಹಿವಾಟಿನ ಪ್ರಯೋಜನಗಳನ್ನು ಆನಂದಿಸಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ," ಎಂದು ಹೇಳಿದ್ದಾರೆ.
ಕೆನರಾ ಡಿಜಿಟಲ್ ರುಪೀ ಆಪ್ ಬಳಸುವುದು ಹೇಗೆ?
ಸರಳವಾಗಿ ಹೇಳುವುದಾದರೆ, ಕೆನರಾ ಡಿಜಿಟಲ್ ರೂಪಾಯಿ ಅಪ್ಲಿಕೇಶನ್ ಹೊಂದಿರುವ ಗ್ರಾಹಕರು ಈಗ ಮೆರ್ಚೆಂಟ್ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತಾವು ಪಡೆದ ಸರಕು ಮತ್ತು ಸೇವೆಗಳಿಗೆ ಯುಪಿಐ ಪಾವತಿ ಮಾಡಬಹುದು. ಪಾವತಿಯನ್ನು ಡಿಜಿಟಲ್ ಕರೆನ್ಸಿ ಬಳಸಿ ಪ್ರಕ್ರಿಯೆಗೊಳಿಸಲಾಗುತ್ತದೆ.
ಇನ್ನು ಯುಪಿಐ ಪಾವತಿಗಳನ್ನು ಸ್ವೀಕರಿಸುವ ವ್ಯಾಪಾರಿಗಳು ಈಗ ತಮ್ಮ ಯುಪಿಐ ಕ್ಯೂಆರ್ ಕೋಡ್ಗಳನ್ನು ಪ್ರದರ್ಶಿಸುವ ಮೂಲಕ ಡಿಜಿಟಲ್ ಕರೆನ್ಸಿ ಪಾವತಿಗಳನ್ನು ಸ್ವೀಕಾರ ಮಾಡಬಹುದು. ಡಿಜಿಟಲ್ ಕರೆನ್ಸಿ ಪಾವತಿಗಳನ್ನು ಸ್ವೀಕರಿಸಲು ಪ್ರತ್ಯೇಕ ಪ್ರಕ್ರಿಯೆ ನಡೆಸಬೇಕಾಗಿಲ್ಲ.
ಡಿಜಿಟಲ್ ರುಪೀ: ಏನಿದು?
ಹಣವು ಕೇವಲ ಆನ್ಲೈನ್ ಮೂಲಕ ಲಭ್ಯವಿದ್ದರೆ ಅದನ್ನು ಡಿಜಿಟಲ್ ಎಂದು ಪರಿಗಣಿಸಲಾಗುತ್ತದೆ. ಹಲವಾರು ರಾಷ್ಟ್ರಗಳ ಹಣಕಾಸು ವ್ಯವಸ್ಥೆಗಳು ಈಗಾಗಲೇ ಹಣದ ಎಲೆಕ್ಟ್ರಾನಿಕ್ ರೂಪಗಳ ಮೇಲೆ ಗಮನಾರ್ಹವಾಗಿ ಒತ್ತು ನೀಡುತ್ತಿದೆ. ಈ ಡಿಜಿಟಲ್ ಹಣವನ್ನು ಆನ್ಲೈನ್ ವ್ಯಾಪಾರಕ್ಕೆ ಮಾತ್ರ ಬಳಕೆ ಮಾಡಲು ಸಾಧ್ಯವಾಗುತ್ತದೆ. ಸಾಮಾನ್ಯ ನಗದು ವಹಿವಾಟಿನಂತೆ ಇದು ಇರುವುದಿಲ್ಲ.
ಇನ್ನು ಸರಳವಾಗಿ ಹೇಳುವುದಾದರೆ ಡಿಜಿಟಲ್ ರೂಪಾಯಿ ಡಿಜಿಟಲ್ ವ್ಯಾಲೆಟ್ ರೂಪದಲ್ಲಿರುತ್ತದೆ. ಇದು ಬ್ಯಾಂಕ್ಗಳು ನೀಡುವ ಪೇಪರ್ ಕರೆನ್ಸಿಯ ಡಿಜಿಟಲ್ ರೂಪಾಂತರವಾಗಿದೆ. ಬ್ಯಾಂಕ್ಗಳು ನೀಡುವ ಡಿಜಿಟಲ್ ವ್ಯಾಲೆಟ್ನಲ್ಲಿರುವ ಈ ಡಿಜಿಟಲ್ ರೂಪಾಯಿಯನ್ನು ಗ್ರಾಹಕರು ಮೊಬೈಲ್ ಫೋನ್ಗಳ ಮೂಲಕ ಬಳಕೆ ಮಾಡಬಹುದು.
ಮೊದಲು ಪ್ರಮುಖವಾಗಿ ನಾಲ್ಕು ನಗರಗಳಲ್ಲಿ ಈ ರಿಟೇಲ್ ಡಿಜಿಟಲ್ ರೂಪಾಯಿ ಪ್ರಾಯೋಗಿಕವಾಗಿ ಆರಂಭ ಮಾಡಲಾಗುತ್ತದೆ. ನವದೆಹಲಿ, ಬೆಂಗಳೂರು, ಮುಂಬೈ, ಭುವನೇಶ್ವರದಲ್ಲಿ ಮೊದಲು ಆರಂಭ ಮಾಡಲಾಗುತ್ತದೆ ಎಂದು ಈ ಹಿಂದೆ ಸರ್ಕಾರವು ಮಾಹಿತಿ ನೀಡಿತ್ತು.
ಬಳಿಕ ಅಹಮದಾಬಾದ್, ಗಾಂಗ್ಟಾಕ್, ಗುವಾಹಟಿ, ಹೈದಾರಾಬಾದ್, ಇಂದೋರ್, ಕೊಚ್ಚಿ, ಲಕ್ನೋ, ಪಾಟ್ನಾ, ಶಿಮ್ಲಾದಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ಆರಂಭ ಮಾಡಲಾಗುತ್ತದೆ. ಬಳಿಕ ಇನ್ನಷ್ಟು ಪ್ರದೇಶ, ಬ್ಯಾಂಕ್ಗಳಿಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಸರ್ಕಾರವು ಈ ಹಿಂದೆ ಮಾಹಿತಿ ನೀಡಿತ್ತು.


Click it and Unblock the Notifications