ಸೈಬರ್ ಅಪರಾಧ ಎಸಗುವ ದುಷ್ಕರ್ಮಿಗಳು ʼ ಡಿಜಿಟಲ್ ಅರೆಸ್ಟ್ʼ ಮಾಡಿ ಅಮಾಯಕರನ್ನು ಬಲೆಗೆ ಕೆಡವಿ ಹಣ ದೋಚುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಸೈಬರ್ ಕ್ರೈಮ್ ಕೋ ಆರ್ಡಿನೇಷನ್ ಸೆಂಟರ್ (I4C) (ICCCC) ಸಾರ್ವಜನಿಕ ಅಶ್ವಾಸನೆಯನ್ನು ನೀಡಿದ್ದು, ಹಲವು ಸಲಹೆ ಸೂಚನೆಗಳನ್ನು ಪಾಲಿಸುವಂತೆ ತಿಳಿಸಿದೆ.
ಸಿಬಿಐ, ಸ್ಥಳೀಯ ಪೊಲೀಸ್ ಇಲಾಖೆ, ಕಸ್ಟಮ್ಸ್ ಅಧಿಕಾರಿಗಳು ಮತ್ತು ನ್ಯಾಯಾಧೀಶರೆಂದು ಹೇಳಿಕೊಂಡು ಯಾವುದೇ ಕಾನೂನುಬದ್ಧ ಕಾನೂನು ಜಾರಿ ಸಂಸ್ಥೆಗಳು ವೀಡಿಯೊ ಕರೆಗಳ ಮೂಲಕ " ಡಿಜಿಟಲ್ ಅರೆಸ್ಟ್" ನಡೆಸುವುದಿಲ್ಲ ಎಂದು ICCCC ಸ್ಪಷ್ಟಪಡಿಸಿದ್ದು, ಹೀಗಾಗಿ ನಾಗರಿಕರು ಜಾಗರೂಕರಾಗಿರಲು ಮತ್ತು ಇಂತಹ ಮೋಸ, ವಂಚನೆಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ.

" ಈ ರೀತಿಯಾಗಿರುವ ಯಾವುದೇ ಕರೆಗಳು ಬಂದಲ್ಲಿ ಗಾಬರಿಯಾಗಬೇಡಿ. ಅಲರ್ಟ್ ಆಗಿರಿ. ಯಾಕೆಂದರೆ ಸಿಬಿಐ/ಪೊಲೀಸ್/ಕಸ್ಟಮ್/ಇಡಿ/ನ್ಯಾಯಾಧೀಶರು ನಿಮ್ಮನ್ನು ವೀಡಿಯೊ ಕರೆ ಮಾಡಿ ಅಥವಾ ಕರೆಯ ಮೂಲಕ ಯಾವುದೇ ಕಾರಣಕ್ಕೂ ಬಂಧಿಸುವುದಿಲ್ಲ. ಸಾಮಾನ್ಯವಾಗಿ ವಾಟ್ಸಪ್ ಮತ್ತು ಸ್ಕೈಪ್ ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳನ್ನು ಬಳಸಿಕೊಂಡು ಅಮಾಯಕರನ್ನು ವಂಚಿಸಲಾಗುತ್ತದೆ. ಹೀಗಾಗಿ ಸಾರ್ವಜನಿಕರು ವಂಚನೆಗೆ ಸಿಲುಕದೆ ಎಚ್ಚರವಹಿಸಬೇಕು ಸೈಬರ್ ಕ್ರೈಮ್ ಕೋ ಆರ್ಡಿನೇಷನ್ ಸೆಂಟರ್ ತನ್ನ ಸಲಹೆಯಲ್ಲಿ ತಿಳಿಸಿದೆ.
WhatsApp ಮತ್ತು Skype ಎರಡೂ ಈ ಹಿಂದೆ ಇಂತಹ ಮೋಸದ ಚಟುವಟಿಕೆಗಳ ಬಗ್ಗೆ ಬಳಕೆದಾರರ ಸುರಕ್ಷತೆ ಮತ್ತು ಜಾಗೃತಿಯನ್ನು ಹೆಚ್ಚಿಸಲು ಸರ್ಕಾರಿ ಸೈಬರ್ ಸೆಕ್ಯುರಿಟಿ ಏಜೆನ್ಸಿಗಳೊಂದಿಗೆ ತಮ್ಮ ಸಹಯೋಗವನ್ನು ಘೋಷಿಸಿವೆ. ಈ ಅಪರಾಧಗಳನ್ನು ಹೇಗೆ ವರದಿ ಮಾಡುವುದು ಎಂಬುದರ ಕುರಿತು ಸಲಹೆಯು ನಿರ್ಣಾಯಕ ಮಾಹಿತಿಯನ್ನು ಒದಗಿಸಿದೆ, ಸಹಾಯವಾಣಿ ಸಂಖ್ಯೆ 1930 ಅನ್ನು ಸಂಪರ್ಕಿಸಲು ಅಥವಾ www.cybercrime.gov.in ಹಾಗೂ ಇತರ ಸೈಬರ್ ಕ್ರೈಮ್ ಗೆ ಮೀಸಲಾಗಿರುವಂತಹ ವೆಬ್‌ಸೈಟ್‌ಗೆ ಭೇಟಿ ನೀಡಲು ನಾಗರಿಕರಿಗೆ ನಿರ್ದೇಶನ ನೀಡಿದೆ.
ಡಿಜಿಟಲ್ ಅರೆಸ್ಟ್ ಎಂದರೇನು? ಹೇಗೆ ಮಾಡುತ್ತಾರೆ?
ಡಿಜಿಟಲ್ ಅರೆಸ್ಟ್ ಬಗ್ಗೆ ನಿಮಗೆ ಮಾಹಿತಿ ಇಲ್ಲದಿದ್ದರೆ ಇದರ ವಿವರಗಳ ಇಲ್ಲಿವೆ.
"ಡಿಜಿಟಲ್ ಬಂಧನ" ಎನ್ನುವುದು ಸೈಬರ್ ಅಪರಾಧ ತಂತ್ರವಾಗಿದೆ. ವಂಚಕರು SMS ಸಂದೇಶಗಳು ಅಥವಾ ವೀಡಿಯೊ ಕರೆಗಳ ಮೂಲಕ ಸಂಪರ್ಕವನ್ನು ಸಾಧಿಸುತ್ತಾರೆ. ವಿವಿಧ ತನಿಖಾ ಸಂಸ್ಥೆಗಳ ಕಾನೂನು ಜಾರಿ ಅಧಿಕಾರಿಗಳ ರೀತಿ ಸೋಗು ಹಾಕುತ್ತಾರೆ. CBI, ಪೊಲೀಸ್, ಕಸ್ಟಮ್ಸ್, ED, ಅಥವಾ ನ್ಯಾಯಾಧೀಶರಂತೆ ಸಾಮಾನ್ಯವಾಗಿ ನಟಿಸುತ್ತಾರೆ. ಮಾದಕವಸ್ತು ಕಳ್ಳಸಾಗಣೆ ಅಥವಾ ಮನಿ ಲಾಂಡರಿಂಗ್‌ನಂತಹ ಗಂಭೀರ ಅಪರಾಧಗಳಲ್ಲಿ ಕರೆ ಸ್ವೀಕರಿಸಿರುವ ವ್ಯಕ್ತಿ ಅಥವಾ ಅವರ ಹತ್ತಿರದ ಕುಟುಂಬದ ಸದಸ್ಯರು ಭಾಗಿಯಾಗಿದ್ದರೆ ಮತ್ತು ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ಅವರು ಸುಳ್ಳು ಆರೋಪವನ್ನು ಹೊರಿಸುತ್ತಾರೆ. ಒಂದು ಕ್ಷಣವು ಯೋಚನೆ ಮಾಡದಂತೆ ಭಯವನ್ನು ಮನಸ್ಸಿನಲ್ಲಿ ಹುಟ್ಟು ಹಾಕಿ ಅವಸರವಾಗಿ ಹಲವು ವಿಚಾರಗಳನ್ನು ಹೇಳಿ ಕಾನೂನು ಪರಿಣಾಮಗಳನ್ನು ಎದುರಿಸುವಂತೆ ಅಥವಾ ಜೈಲು ಶಿಕ್ಷೆಗೆ ನೀಡಲಾಗುತ್ತದೆ ಎಂಬ ಬೆದರಿಕೆ ಹಾಕುತ್ತಾರೆ. ಮನೆಯವರೊಂದಿಗೆ ಮಾತನಾಡದಂತೆ, ತಮ್ಮದೇ ಮನೆಯಲ್ಲಿ ಕೊಠಡಿಯಲ್ಲಿ ಬಂಧನದಲ್ಲಿರುವಂತೆ ಮೊಬೈಲ್ ಫೋನ್ ಕ್ಯಾಮೆರಾಗಳನ್ನು ಆನ್ ಮಾಡಿ ಅದರ ಮುಂದೆ ಇರುವಂತೆ ಷರತ್ತು ಹಾಕಲಾಗುತ್ತದೆ. ಸಂತ್ರಸ್ತರು ಅವರ ನಿಯಂತ್ರಣಕ್ಕೆ ಬಂದ ತಕ್ಷಣ ಬ್ಯಾಂಕ್ ನಿಂದ ಹಣ ವರ್ಗಾಯಿಸಿಕೊಳ್ಳುತ್ತಾರೆ. ತಾವು ಮೋಸ ಹೋಗಿರುವ ಬಗ್ಗೆ ಅರಿವಿಗೆ ಬರುವಷ್ಟರಲ್ಲಿ ಕಾಲ ಮಿಂಚಿರುತ್ತದೆ.
ಡಿಜಿಟಲ್ ಬಂಧನ ಸ್ಕ್ಯಾಮ್ ಗಳು ಇತ್ತೀಚೆಗೆ ಹೆಚ್ಚು ಹೆಚ್ಚು ವರದಿಯಾಗುತ್ತಿದ್ದು, ಹೀಗಾಗಿ ವಂಚಕರು ಬಳಸುವ ತಂತ್ರಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಇಂತಹ ಮಾಹಿತಿಗಳ ಬಗ್ಗೆ ಅರಿವಿದ್ದರೆ ಜನರು ತಮ್ಮನ್ನು ತಾವು ಸ್ಕ್ಯಾಮರ್ ಗಳಿಂದ ರಕ್ಷಿಸಿಕೊಳ್ಳಬಹುದು. ICCCC ಯ ಸಲಹೆಯು ಕಾನೂನು ಜಾರಿ ಸಂಸ್ಥೆಗಳು ಎಂದಿಗೂ ವೀಡಿಯೊ ಕರೆಗಳ ಮೂಲಕ ಬಂಧನಗಳನ್ನು ನಡೆಸುವುದಿಲ್ಲ ಎಂದು ಒತ್ತಿಹೇಳುತ್ತದೆ. ಈ ವಂಚನೆಗಳಿಗೆ ಬಲಿಯಾಗುವುದರ ವಿರುದ್ಧ ಇದು ಎಚ್ಚರಿಕೆ ನೀಡುತ್ತದೆ.


Click it and Unblock the Notifications