ಸರ್ಕಾರಿ ಸ್ವಾಮ್ಯದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸಿನ ತೊಂದರೆಯ ಕಾರಣದಿಂದಾಗಿ ತನ್ನ 13 ಪ್ರತಿಶತ ಶಾಖೆಗಳನ್ನು ಮುಚ್ಚಲು ಯೋಜಿಸುತ್ತಿದೆ. ಹಲವಾರು ವರ್ಷಗಳಿಂದ ಆರ್ಥಿಕ ಒತ್ತಡದಲ್ಲಿರುವ ಬ್ಯಾಂಕ್, ತನ್ನ ಶಾಖೆಗಳ ಸಂಖ್ಯೆಯನ್ನು 600 ರಷ್ಟು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ರಾಯಿಟರ್ಸ್ ವರದಿಯು ಉಲ್ಲೇಖ ಮಾಡಿದೆ.
ರಾಯಿಟರ್ಸ್ ಪರಿಶೀಲಿಸಿದ ಡಾಕ್ಯುಮೆಂಟ್ ಪ್ರತಿಯ ಪ್ರಕಾರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 2023 ರ ಅಂತ್ಯದ ವೇಳೆಗೆ ಅದರ ಶಾಖೆಗಳ ಗಾತ್ರದಲ್ಲಿ ಗಮನಾರ್ಹವಾದ ಕಡಿತವನ್ನು ಮಾಡಲಿದೆ. ನಷ್ಟದಲ್ಲಿರುವ ಬ್ಯಾಂಕುಗಳನ್ನು ಮುಚ್ಚಲು ಅಥವಾ ವಿಲೀನ ಮಾಡಲು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಹೆಸರು ಹೇಳಲು ನಿರಾಕರಿಸಿದ ಸರ್ಕಾರಿ ಮೂಲಗಳು ಈ ಬಗ್ಗೆ ರಾಯಿಟರ್ಸ್‌ಗೆ ಮಾಹಿತಿ ನೀಡಿದೆ ಎಂದು ವರದಿ ಉಲ್ಲೇಖಿಸಿದೆ. ಬ್ಯಾಂಕ್ ತನ್ನ ಹಣಕಾಸು ವ್ಯವಹಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಿಯಲ್ ಎಸ್ಟೇಟ್‌ನಂತಹ ಪ್ರಮುಖವಲ್ಲದ ಆಸ್ತಿಗಳ ಮಾರಾಟದತ್ತ ಗಮನಹರಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.

100 ವರ್ಷದ ಇತಿಹಾಸ ಹೊಂದಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
100 ವರ್ಷಗಳಿಗಿಂತಲೂ ಹಳೆಯದಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 4,594 ಶಾಖೆಗಳ ಜಾಲವನ್ನು ಹೊಂದಿದೆ. ಶಾಖೆಗಳನ್ನು ಮುಚ್ಚುವ ಯೋಜನೆ ಈ ಹಿಂದೆ ನಡೆದಿಲ್ಲ. ಆದರೆ ಹಲವಾರು ಬ್ಯಾಂಕುಗಳನ್ನು ಸರ್ಕಾರ ಇತ್ತೀಚೆಗೆ ಕೆಲವು ವರ್ಷಗಳಿಂದ ವಿಲೀನ ಮಾಡುತ್ತಾ ಬಂದಿದೆ. ಹಾಗೆಯೇ ಬ್ಯಾಂಕುಗಳ ಖಾಸಗೀಕರಣ ಮಾಡಿದೆ.
"2017 ರಿಂದ ಲಾಭದಲ್ಲಿನ ಕೊರತೆಯ ನಡುವೆ ಆರ್‌ಬಿಐನ ಪಿಸಿಎಯಿಂದ ಹೊರಬರಲು ಬ್ಯಾಂಕ್ ಹೆಣಗಾಡುತ್ತಿದೆ. ಮಾನವಶಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಹೆಣಗಾಡುತ್ತಿದೆ," ಎಂದು ರಾಯಿಟರ್ಸ್ ಮೇ 4 ರಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ಕಚೇರಿಯಿಂದ ಇತರ ಶಾಖೆಗಳು ಮತ್ತು ಇಲಾಖೆಗಳಿಗೆ ಕಳುಹಿಸಲಾದ ದಾಖಲೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಡಿಸೆಂಬರ್ ತ್ರೈಮಾಸಿಕದಲ್ಲಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2.82 ಶತಕೋಟಿ ಲಾಭವನ್ನು ಗಳಿಸಿದೆ. ಆದರೆ ಇದಕ್ಕೂ ಮುಂಚಿನ ಇದೇ ತ್ರೈಮಾಸಿಕದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 1.66 ಶತಕೋಟಿ ರೂಪಾಯಿಗಳ ಲಾಭವನ್ನು ಪಡೆದಿದೆ. ಬ್ಯಾಂಕ್ ಅನ್ನು ಜೂನ್ 2017 ರಲ್ಲಿ ಪಿಸಿಎ ಚೌಕಟ್ಟಿನ ಅಡಿಗೆ ತರಲಾಗಿದೆ. ಆ ತ್ರೈಮಾಸಿಕದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 7.50 ಶತಕೋಟಿ ರೂಪಾಯಿಗಳ ನಷ್ಟವನ್ನು ದಾಖಲಿಸಿತ್ತು.


Click it and Unblock the Notifications