ಬೆಂಗಳೂರು, ಮೇ 15: ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಕಲಿ ವಿಮರ್ಶೆಗಳನ್ನು ತಡೆಯಲು , "ನಕಲಿ ವಿಮರ್ಶೆ ವಿರೋಧಿ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯವು ಯೋಜನೆ ರೂಪಿಸುತ್ತಿದೆ.
ನಕಲಿ ವಿಮರ್ಶೆಗಳನ್ನು ಪರಿಣಾಮಕಾರಿಯಾಗಿ ತಡೆಯಲು ಸ್ವಯಂಪ್ರೇರಿತ ಉತ್ತಮ ಪದ್ದತಿ ಅಳವಡಿಸಿಕೊಳ್ಳಲು ಕೊಟ್ಟ ಅವಕಾಶದ ಸದ್ಬಳಕೆ ಹಾಗೂ ಗ್ರಾಹಕರ ವಿಮರ್ಶೆಗಳಿಗೆ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಲು ಇ-ಕಾಮರ್ಸ್ ಕಂಪನಿಗಳು ವಿಫಲವಾದ ಹಿನ್ನಲೆ ನಕಲಿ ವಿಮರ್ಶೆ ವಿರೋಧಿ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಸರ್ಕಾರ ಪರಿಗಣಿಸುತ್ತಿದೆ.

ನಕಲಿ ವಿಮರ್ಶೆಗಳನ್ನು ತಡೆಯಲು ಒಂದು ವರ್ಷದ ಹಿಂದೆ ಜಾರಿಗೆ ತಂದ ಸ್ವಯಂಪ್ರೇರಿತ ಕಾರ್ಯವಿಧಾನದ ವೈಫಲ್ಯದ ಬಳಿಕ ಸರ್ಕಾರ ಈ ಹೆಜ್ಜೆ ಮುಂದಿಟ್ಟಿದೆ.. ಮಾರ್ಗಸೂಚಿಗಳನ್ನು ಅಂತಿಮಗೊಳಿಸಲು ಮೇ 15 ರಂದು ಸಭೆಯನ್ನು ನಿಗದಿಪಡಿಸಲಾಗಿದೆ. ಸರ್ಕಾರವು ಒಂದು ವರ್ಷದ ಹಿಂದೆ ಹೊಸ ಗುಣಮಟ್ಟದ ಮಾನದಂಡಗಳನ್ನು ಹೊರಡಿಸಿದ್ದು, ಪಾವತಿಸಿದ ನಕಲಿ ವಿಮರ್ಶೆಗಳನ್ನು ಪ್ರಕಟಿಸುವುದನ್ನು ನಿಷೇಧಿಸಿತ್ತು.
" ನಕಲಿ ವಿಮರ್ಶೆಗಳಿಗೆ ಮಟ್ಟ ಹಾಕಲು ಇಲ್ಲಿವರೆಗೆ ಮಾಡಿರುವ ಕ್ರಮಗಳಿಂದ ಸಾಧ್ಯವಾಗಿಲ್ಲ, ಆನ್‌ಲೈನ್ ವಿಮರ್ಶೆಗಳ' ಸ್ವಯಂಪ್ರೇರಿತ ಮಾನದಂಡವನ್ನು ಸೂಚಿಸಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಕೆಲವು ಸಂಸ್ಥೆಗಳು ಅದನ್ನು ಅನುಸರಿಸುತ್ತಿವೆ ಎಂದು ಹೇಳಿಕೊಳ್ಳುತ್ತಿವೆ. ಅದ್ರೂ, ನಕಲಿ ವಿಮರ್ಶೆಗಳು ಇನ್ನೂ ಪ್ರಕಟವಾಗುತ್ತಿವೆ" ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ಹೇಳಿದ್ದಾರೆ.
ಗ್ರಾಹಕ ಹಿತಾಸಕ್ತಿಗಳನ್ನು ಕಾಪಾಡಲು, ಈಗ ನಾವು ನಕಲಿ ವಿಮರ್ಶೆ ವಿರೋಧಿ ಮಾನದಂಡಗಳನ್ನು ಕಡ್ಡಾಯವಾಗಿ ಮಾಡಲು ಬಯಸುತ್ತವೆ. ಹಣ ಕೊಟ್ಟು ಬರೆಸುವ ರಿವ್ಯೂಗಳನ್ನು ಪ್ರಕಟಿಸಿದಂತೆ ಈ ಹಿಂದೆಯೇ ಇ ಕಾಮರ್ಸ್ ಸಂಸ್ಥೆಗೆ ಸೂಚನೆ ನೀಡಲಾಗಿತ್ತು. ಆದರೆ ಅದರ ಪರಿಣಾಮ ಉತ್ತಮವಾಗಿಲ್ಲ. ಈಗಲೂ ನಕಲಿ ರಿವ್ಯೂ ಪ್ರಕಟವಾಗುತ್ತಿದೆ.ಪ್ರಸ್ತಾವಿತ ಕ್ರಮವನ್ನು ಚರ್ಚಿಸಲು ಸಚಿವಾಲಯವು ಮೇ 15 ರಂದು ಇ-ಕಾಮರ್ಸ್ ಸಂಸ್ಥೆಗಳು ಮತ್ತು ಗ್ರಾಹಕ ಸಂಸ್ಥೆಗಳೊಂದಿಗೆ ಸಭೆಯನ್ನು ನಿಗದಿಪಡಿಸಿದೆ ಎಂದು ಖರೆ ಹೇಳಿದ್ದಾರೆ.

2022 ರ ನವೆಂಬರ್‌ನಲ್ಲಿ "ಆನ್‌ಲೈನ್ ಗ್ರಾಹಕ ವಿಮರ್ಶೆಗಳಿಗೆ" ಹೊಸ ಮಾನದಂಡವನ್ನು ರೂಪಿಸಿದ ಮಾಡಿದ ಸಚಿವಾಲಯದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS), ಪಾವತಿಸಿದ ವಿಮರ್ಶೆಗಳನ್ನು ಮತ್ತು ಪೂರೈಕೆದಾರರು ಅಥವಾ ಮೂರನೇ ವ್ಯಕ್ತಿಯೂ ಇದೇ ಉದ್ದೇಶಕ್ಕಾಗಿ ನೇಮಿಸಿದ ವ್ಯಕ್ತಿಗಳಿಂದ ಬರೆದ ವಿಮರ್ಶೆಗಳನ್ನು ಪ್ರಕಟಿಸುವುದನ್ನು ನಿರ್ಬಂಧಿಸಿತ್ತು.
ಡಿಜಿಟಲ್ ಯುಗದಲ್ಲಿ ಬೆಳೆಯುತ್ತಿರುವ ಇ-ಕಾಮರ್ಸ್ ಸೇವೆಗಳಿಂದ, ಗ್ರಾಹಕರು ಸಾಮಾನ್ಯವಾಗಿ ಆನ್‌ಲೈನ್ ರಿವ್ಯೂ ಗಳ ಮೇಲೆ ಅವಲಂಬಿತರಾಗುತ್ತಾರೆ. ಹೀಗಾಗಿ ಖರೀದಿಯ ನಿರ್ಧಾರಗಳನ್ನು ಪರಿಶೀಲಿಸಲು ವಿಮರ್ಶೆಯೊಂದೇ ಪರಿಣಾಮಕಾರಿಯಾಗಿರುತ್ತದೆ. ಆದರೆ ತಪ್ಪುದಾರಿಗೆಳೆಯುವ ವಿಮರ್ಶೆಗಳು, ಸುಳ್ಳು ಮಾಹಿತಿಗಳು, ತಪ್ಪಾದ ಖರೀದಿಗಳಿಗೆ ಕಾರಣವಾಗಬಹುದು ಎಂಬ ಕಾಳಜಿಯಿಂದ ಕೇಂದ್ರ ಸರ್ಕಾರ ಈ ನಿಯಮ ರೂಪಿಸುತ್ತಿದೆ.
ವಾಣಿಜ್ಯ ಸಚಿವಾಲಯದ ಸಂಸ್ಥೆಯಾದ ಇಂಡಿಯಾ ಬ್ರಾಂಡ್ ಇಕ್ವಿಟಿ ಫೌಂಡೇಶನ್ (IBEF) ಪ್ರಕಾರ, 2030 ರ ವೇಳೆಗೆ ಭಾರತೀಯ ಇ-ಕಾಮರ್ಸ್ ಉದ್ಯಮವು $ 300 ಶತಕೋಟಿಯನ್ನು ತಲುಪುವ ನಿರೀಕ್ಷೆಯಿದೆ. ಅಲ್ಲದೆ, ವರದಿಯ ಪ್ರಕಾರ, ಭಾರತದ ಆನ್‌ಲೈನ್ ದಿನಸಿ ಮಾರಾಟವು ಆರ್ಥಿಕ ವರ್ಷ 21 ರಲ್ಲಿ $3.95 ಶತಕೋಟಿಯಿಂದ ಆರ್ಥಿಕ ವರ್ಷ27 ರಲ್ಲಿ $26.93 ಶತಕೋಟಿಗೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications