ನವದೆಹಲಿ, ಜುಲೈ 2: ಭಾರತದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೂತನ ಅಧ್ಯಕ್ಷರಾಗಿ ಚಲ್ಲಾ ಶ್ರೀನಿವಾಸುಲು ಸೆಟ್ಟಿ ನೇಮಕಗೊಂಡಿದ್ದಾರೆ. ಸರಕಾರಿ ನೇಮಕಾತಿ ಆಯ್ಕೆ ಸಮಿತಿಯಾಗಿರುವ ಹಣಕಾಸು ಸೇವಾ ಸಂಸ್ಥೆಗಳ ಬ್ಯೂರೋ ಶೆಟ್ಟಿ ಅವರನ್ನು ಎಸ್‌ಬಿಐ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದಾಗಿ ತಿಳಿಸಿದೆ.
ಹಾಲಿ ಅಧ್ಯಕ್ಷ ದಿನೇಶ್ ಕುಮಾರ್ ಖರಾ ಅವರು ಆಗಸ್ಟ್ 28 ರಂದು ನಿವೃತ್ತರಾಗಲಿದ್ದು, ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು. 2020 ರ ಜನವರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಶೆಟ್ಟಿ , ಪ್ರಸ್ತುತ ಅಂತರರಾಷ್ಟ್ರೀಯ ಬ್ಯಾಂಕಿಂಗ್, ಜಾಗತಿಕ ಮಾರುಕಟ್ಟೆಗಳು ಮತ್ತು ತಂತ್ರಜ್ಞಾನದ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಎಸ್‌ಬಿಐ ಅಧ್ಯಕ್ಷ ಗರಿಷ್ಠ ವಯೋಮಿತಿಯು 63 ವರ್ಷ. ಹಾಲಿ ಅಧ್ಯಕ್ಷ ದಿನೇಶ್ ಕುಮಾರ್ ಅವರಿಗೆ ಆಗಸ್ಟ್ 28ಕ್ಕೆ 63 ವರ್ಷ ಪೂರೈಸಲಿರುವ ಹಿನ್ನಲೆಯಲ್ಲಿ ಅವರು ನಿವೃತ್ತರಾಗಲಿದ್ದಾರೆ. ಆ ಬಳಿಕ ನೂತನ ಅಧ್ಯಕ್ಷರಾಗಿ ಶೆಟ್ಟಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳನಿರ್ದೇಶಕರ ಆಯ್ಕೆಯನ್ನು ಹಣಕಾಸು ಸೇವೆಗಳ ಸಂಸ್ಥೆಗಳ ಬ್ಯೂರೋ (FSIB) ಮಾಡುತ್ತದೆ. ಹೀಗಾಗಿ ಜೂನ್ 29ರಂದು ಎಸ್‌ಬಿಐ ಅಧ್ಯಕ್ಷ ಸ್ಥಾನಕ್ಕೆ ಮೂವರು ಸಂದರ್ಶನ ನಡೆದಿದ್ದು, ಅಂತಿಮವಾಗಿ ಸಿ.ಎನ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದೆ.
ಸಿ.ಎನ್ ಶೆಟ್ಟಿ ಅವರ ಕಾರ್ಯಕ್ಷಮತೆ, ಅವರ ಒಟ್ಟಾರೆ ಸೇವಾ ಅನುಭವ ಗಮನದಲ್ಲಿಟ್ಟುಕೊಂಡು ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರು ಶಿಫಾರಸ್ಸು ಮಾಡಲಾಗಿದೆ ಎಂದು ಹಣಕಾಸು ಸೇವಾ ಸಂಸ್ಥೆಗಳ ಬ್ಯೂರೋ ತಿಳಿಸಿದೆ.
ಸಾಮಾನ್ಯವಾಗಿ ಸಂಪ್ರದಾಯದ ಪ್ರಕಾರ ಅತ್ಯಂತ ಹಿರಿಯ ವ್ಯವಸ್ಥಾಪಕ ನಿರ್ದೇಶಕರು ಬ್ಯಾಂಕಿನ ಅಧ್ಯಕ್ಷರಾಗುತ್ತಾರೆ. ಎಫ್ಎಸ್ಐಬಿ ಶಿಫಾರಸಿನ ಕುರಿತು ಅಂತಿಮ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿ ತೆಗೆದುಕೊಳ್ಳುತ್ತದೆ. ಹಿರಿಯರಾದ ಸಿ.ಎಸ್.ಸೆಟ್ಟಿ ಅವರು ಸುಮಾರು 36 ವರ್ಷಗಳಿಂದ ಎಸ್ ಬಿಐನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಶೆಟ್ಟಿ ಅವರು ಬಿಎಸ್‌ಸಿ (ಕೃಷಿ) ಪದವಿ ಪಡೆದಿದ್ದಾರೆ. 1988ರಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಎಸ್ ಬಿಐನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೂರು ದಶಕಗಳಿಂದ ಬ್ಯಾಂಕ್‌ನ ಕಾರ್ಪೊರೇಟ್ ಕ್ರೆಡಿಟ್, ರಿಟೇಲ್ ಡಿಜಿಟಲ್ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. 2020ರಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾದರು. ಕೇಂದ್ರ ಸರ್ಕಾರ ರಚಿಸಿದ ಹಲವು ಕಾರ್ಯಪಡೆ ಮತ್ತು ಸಮಿತಿಗಳಲ್ಲಿ ಸೇವೆ ಸಲ್ಲಿಸಿದ ಹಿರಿಮೆಯನ್ನೂ ಹೊಂದಿದ್ದಾರೆ
ಶೆಟ್ಟಿ ಅವರು ಈ ಮೊದಲು ಎಸ್‌ಬಿಐನಲ್ಲಿ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ - ಸ್ಟ್ರೆಸ್ಡ್ ಅಸೆಟ್ಸ್ ರೆಸಲ್ಯೂಷನ್ ಗ್ರೂಪ್, ಕಾರ್ಪೊರೇಟ್ ಅಕೌಂಟ್ಸ್ ವಿಭಾಗದಲ್ಲಿ ಮುಖ್ಯ ಜನರಲ್ ಮ್ಯಾನೇಜರ್, ಮಿಡ್ ಕಾರ್ಪೊರೇಟ್ ಗ್ರೂಪ್‌ನಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಮತ್ತು ಎಸ್‌ಬಿಐ, ನ್ಯೂಯಾರ್ಕ್ ಬ್ರಾಂಚ್‌ನಲ್ಲಿ ವಿಪಿ ಮತ್ತು ಹೆಡ್ (ಸಿಂಡಿಕೇಶನ್ಸ್) ಸೇರಿದಂತೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ.


Click it and Unblock the Notifications