ಪುಣೆ, ಜೂನ್ 16: ಚೀನಾ ಹಾಗೂ ಭಾರತದ ನಡುವೆ ಎದ್ದಿರುವ ಗಡಿ ವಿವಾದದ ನಡುವೆಯೇ ಎಸ್‌ಯುವಿ ಮಾದರಿಯ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಚೀನಾದ ಗ್ರೇಟ್‌ವಾಲ್ ಮೋಟಾರ್ಸ್ (GWM) ಮಂಗಳವಾರ ಮಹಾರಾಷ್ಟ್ರ ಸರ್ಕಾರದೊಂದಿಗೆ ದೊಡ್ಡ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.
ಒಪ್ಪಂದದ ಪ್ರಕಾರ ಮಹಾರಾಷ್ಟ್ರದ ತಲೇಗಾಂವ್‌ನಲ್ಲಿ ಎಸ್‌ಯುವಿ ತಯಾರಿಕ ಘಟಕ ತಲೆ ಎತ್ತಲಿದೆ. ಇದು ಸುಮಾರು 3,000 ಜನರಿಗೆ ಉದ್ಯೋಗವಕಾಶಗಳನ್ನು ಒದಗಿಸುತ್ತದೆ ಎನ್ನಲಾಗಿದೆ. 1 ಬಿಲಿಯನ್ ಡಾಲರ್ ಯೋಜನೆ ಇದಾಗಿದೆ.
GWM ನ ಭಾರತ ವಲಯದ ಅಧ್ಯಕ್ಷ ಜೇಮ್ಸ್ ಪಾರ್ಕಿಂಗ್, ವ್ಯವಸ್ಥಾಪಕ ನಿರ್ದೇಶಕ ಜೇಮ್ಸ್ ಯಾಂಗ್, ಭಾರತದಲ್ಲಿನ ಚೀನಾದ ರಾಯಭಾರಿ ಸನ್ ವೀಡಾಂಗ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಮಹಾರಾಷ್ಟ್ರ ಸರ್ಕಾರಕ್ಕೆ ಧನ್ಯವಾದಗಳು
ದೊಡ್ಡ ಹೂಡಿಕೆ ಮಾಡಲು ಪೂರ್ಣ ಬೆಂಬಲವನ್ನು ನೀಡಿದ್ದಕ್ಕಾಗಿ ಮತ್ತು ದೀರ್ಘ ಮತ್ತು ಪರಸ್ಪರ ಸಹಕಾರವನ್ನು ಬೆಳೆಸಲು ನಮಗೆ ಸಹಾಯ ಮಾಡಿದ ಮಹಾರಾಷ್ಟ್ರ ಸರ್ಕಾರಕ್ಕೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಅದು ಇಬ್ಬರಿಗೂ ಉತ್ತಮ ವ್ಯವಹಾರ ಪ್ರತಿಪಾದನೆಯಾಗಿ ಪರಿಣಮಿಸುತ್ತದೆ ಎಂದು ಜೇಮ್ಸ್ GWM ನ ಭಾರತ ವಲಯದ ಅಧ್ಯಕ್ಷ ಪಾರ್ಕಿಂಗ್ ಹೇಳಿದ್ದಾರೆ.
300 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ
ತಲೇಗಾಂವ್ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿರುವ GWMನ ಘಟಕವು ಸುಮಾರು 300 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಅಲ್ಲದೇ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಗೆ ಹತ್ತಿರದಲ್ಲಿದೆ. ಇದು ಪುಣೆಯಿಂದ ಸುಮಾರು 45 ಕಿಲೋಮೀಟರ್ ಮತ್ತು ಮುಂಬೈನಿಂದ 100 ಕಿಲೋಮೀಟರ್ ದೂರದಲ್ಲಿದೆ.
ಎರಡನೇ ಪ್ರಮುಖ ಮೋಟಾರ್ ಕಂಪನಿ
ತಲೇಗಾಂವ್ ಘಟಕದಲ್ಲಿ ಈಗಾಗಲೇ ಲಾಜಿಸ್ಟಿಕ್ಸ್ ವಿತರಣಾ ಕೇಂದ್ರ, ತರಬೇತಿ ಕೇಂದ್ರ, ಯೋಜನಾ ನಿರ್ವಹಣಾ ಕಟ್ಟಡ, ಆಡಳಿತ ಕಚೇರಿ ಕಟ್ಟಡ ಮತ್ತು ಸಾರ್ವಜನಿಕ ಸೌಲಭ್ಯ ಕೇಂದ್ರದಂತಹ ಸೌಲಭ್ಯಗಳಿವೆ. ಕಳೆದ ವರ್ಷ ಹೆಕ್ಟರ್ ಎಸ್‌ಯುವಿ ಮೂಲಕ ಪಾದಾರ್ಪಣೆ ಮಾಡಿದ ಎಸ್‌ಐಸಿ ಒಡೆತನದ ಎಂಜಿ ಮೋಟಾರ್ ನಂತರ, ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ಎರಡನೇ ಪ್ರಮುಖ ಚೀನಾದ ಆಟೋ ಕಂಪನಿ GWM ಆಗಿದೆ.
1984 ರಲ್ಲಿ ಸ್ಥಾಪನೆ
1984 ರಲ್ಲಿ ಸ್ಥಾಪನೆಯಾದ ಗ್ರೇಟ್ ವಾಲ್ ಮೋಟಾರ್ಸ್ ಪ್ರಧಾನ ಕಚೇರಿ ಚೀನಾದ ಹುಬೈ ಪ್ರಾಂತ್ಯದ ಬಾಡಿಂಗ್ ನಲ್ಲಿ ಇದೆ. ಈ ಕಂಪೆನಿ ಪ್ರತಿಷ್ಠಿತ ಹವಾಲ್, ಜಿಡಬ್ಲ್ಯೂಎಂ ಇವಿ ಮತ್ತು ಜಿಡಬ್ಲ್ಯೂಎಂ ಪಿಕಪ್ ನಂತಹ ಬ್ರಾಂಡ್‌ಗಳನ್ನು ಹೊಂದಿದೆ. ಇದು ವಿಶ್ವದಾದ್ಯಂತ 70 ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿದೆ. ಜಾಗತಿಕವಾಗಿ 14 ಉತ್ಪಾದನಾ ಘಟಕಗಳನ್ನು ಹೊಂದಿದೆ.


Click it and Unblock the Notifications