ಬೆಂಗಳೂರಲ್ಲಿ ಅತಿಹೆಚ್ಚು ಫೇಮಸ್ ಏನು ಅಂತಾ ಕೇಳಿದ್ರೆ, ಸಾಕಷ್ಟು ವಿಚಾರಗಳು ನೆನಪಾಗುತ್ತವೆ. ಹಾಗೇನೆ ಈ ಬಾರಿ ಜನವರಿಯಲ್ಲಿ ಬೆಂಗಳೂರಲ್ಲಿ ಏನು ಸ್ಪೆಷಲ್ ಅಂತ ಕೇಳಿದ್ರೆ, ಈ ಕ್ಷಣಕ್ಕೆ ಥಟ್ ಅಂತಾ ನೆನಪಾಗೋದು ಚಿತ್ರಸಂತೆ. ಹೌದು, ಬೆಂಗಳೂರು ನಗರದ ಮಧ್ಯಭಾಗದಲ್ಲಿರೋ ಕುಮಾರ ಕೃಪಾ ರಸ್ತೆಯಲ್ಲಿ, ಭಾನುವಾರ ವಾರ್ಷಿಕ ಚಿತ್ರಮೇಳ ನಡೀತು. ಈ ಮೇಳವು ಚಿತ್ರಕಲಾ ಪರಿಷತ್ (ಸಿಕೆಪಿ) ಆಯೋಜಿಸಿದ್ದ 23ನೇ ಆವೃತ್ತಿಯಗಿತ್ತು. ಸಿಕೆಪಿಯ ಸುತ್ತಲಿನ ಪ್ರದೇಶವನ್ನು ವಿಶಾಲವಾದ ತೆರೆದ ಗ್ಯಾಲರಿ ರೂಪದಲ್ಲಿ ಸಜ್ಜುಗೊಳಿಸಿ, ಕಲಾವಿದರ ನೂರಾರು ಕೃತಿಗಳನ್ನು ಪ್ರದರ್ಶಿಸಲಾಗಿದೆ. ಮೇಳದಲ್ಲಿ ಲಕ್ಷಗಟ್ಟಲೆ ಬೆಲೆಯ ಕಲಾಕೃತಿಗಳು ಲಭ್ಯವಾಗಿದ್ದು, 100 ರೂ. ಬೆಲೆಯ ರೇಖಾಚಿತ್ರಗಳಿಂದ ಆರಂಭಿಸಿ, ಹೆಚ್ಚಿನ ಮೌಲ್ಯದ ಕಲಾಕೃತಿಗಳವರೆಗೆ ನೀಡಲಾಯಿತು.

ಇನ್ನು ಈ ಚಿತ್ರಸಂತೆಯಲ್ಲಿ ಏನೆಲ್ಲಾ ವಿಶೇಷವಾಗಿತ್ತು ಗೊತ್ತಾ? ಒಂದೊಂದು ಕಣ್ಣಿಗೆ ಹಬ್ಬ ನೀಡುವಂತಿದ್ದವು. ಮರದ ಕೆತ್ತನೆ, ಕಾಗದ ಮತ್ತು ಮರಳು ಕಲಾ ಕೃತಿಗಳು, ಪಿಂಗ್ಗಣಿ ಕಲಾವಸ್ತುಗಳು ಹಾಗೂ 3D ಕಲಾಕೃತಿಗಳು ಪ್ರಸ್ತುತವಾಗಿದ್ದವು. ಮಹಿಳೆಯರು ಮತ್ತು ದೇವತೆಗಳ ಭಾವಚಿತ್ರಗಳು ಹಲವಾರು ಮಳಿಗೆಗಳಲ್ಲಿ ಹೆಚ್ಚು ಗಮನ ಸೆಳೆದವು. ಸಂದರ್ಶಕರು ಬೀದಿಗಳಲ್ಲಿ ಬಿಡಿಸಿದ ವ್ಯಂಗ್ಯಚಿತ್ರಗಳು, ಲೈವ್ ಭಾವಚಿತ್ರಗಳು ಮತ್ತು ರೇಖಾಚಿತ್ರಗಳಿಗಾಗಿ ಸಾಲುಗಟ್ಟಿ ನಿಂತಿದ್ದರು.
ಇನ್ನು ಕಾರ್ಯಕ್ರಮವನ್ನು ಎಂಟನೇ ಬಾರಿ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಲೆ ರಾಜ್ಯದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. 60 ವರ್ಷಗಳಿಂದ ಸಿಕೆಪಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಅವರ ಕಲೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತಿದೆ ಎಂದು ಹೇಳಿದರು. ಮೇಳವು ಬೆಂಗಳೂರಿಗರಿಗೆ ದಿನನಿತ್ಯದ ತೊಡಕು ಜೀವನದಿಂದ ವಿಶ್ರಾಂತಿ ನೀಡಿದಂತೆ ಕಂಡಿತು.
ಈ ಚಿತ್ರಸಂತೆಯಲ್ಲಿ ಜನವೋ ಜನ..ಅಭಿಪ್ರಾಯ ಕೇಳಿದ್ರೆ ಒಬ್ಬೊಬ್ಬರದ್ದೂ ಒಂದೊಂದು ರೀತಿಯ ಸಂತಸ. ಬೆಂಗಳೂರು ಎಂದರೆ ಕಾಂಕ್ರೀಟ್ ಕಾಡು. ಈ ಕಾಂಕ್ರೀಟ್ ಕಾಡಲ್ಲಿ ಕೆಫೆ, ಮಾಲ್‌ಗಳು, ಪಬ್‌ಗಳು ಎಂದು ಸುತ್ತೋ ಮಂದಿಗೆ, ಈ ಚಿತ್ರಸಂತೆ ನಿಜಕ್ಕೂ ಕಣ್ಸೆಳೆಯುವ ದೃಶ್ಯ ನೀಡಿತ್ತು. ಬಣ್ಣದ ಲೋಕವೇ ಧರೆಗಿಳಿದಂತಿತ್ತು ಎಂದರು ಕೆಲವರು. ಅದೆಷ್ಟೋ ಕಲಾವಿದರ ಪಾಲಿಗೆ ಈ ಚಿತ್ರಸಂತೆ ಒಂದು ಅವಕಾಶವಾಗಿತ್ತು. ಅವರ ಪ್ರತಿಭೆ ಗುರುತಿಸುವ ಒಂದು ವೇದಿಕೆಯಾಗಿತ್ತು. ಅವರ ಬಣ್ಣದ ಚಿತ್ರಣ ವಾವ್ ಎನಿಸುವ ಹೊಗಳಿಕೆಯೊಂದಿಗೆ ಅವರ ಮನಕ್ಕೆ ಸಂತಸ ತುಂಬಿತ್ತು.
ಇನ್ನು ಕ್ರೆಸೆಂಟ್ ರಸ್ತೆ ಮತ್ತು ಸುತ್ತಲಿನ ಬೀದಿಗಳಲ್ಲಿ ವಿಸ್ತಾರಗೊಂಡ ಮೇಳದಲ್ಲಿ 22 ರಾಜ್ಯಗಳ ಮತ್ತು 4 ಕೇಂದ್ರಾಡಳಿತ ಪ್ರದೇಶಗಳ ಕಲಾವಿದರಿಂದ 1,530 ಮಳಿಗೆಗಳು ಹಾಜರಾಗಿದ್ದವು. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ನಡೆದ ಈ ದಿನದ ಮೇಳಕ್ಕೆ ಸುಮಾರು 6 ಲಕ್ಷ ಜನ ಭೇಟಿ ನೀಡಿ, ಸುಮಾರು 3 ಕೋಟಿ ರೂ. ಮೌಲ್ಯದ ಕಲಾಕೃತಿಗಳನ್ನು ಖರೀದಿಸಿದ್ದಾರೆ.


Click it and Unblock the Notifications