ಬೆಂಗಳೂರು: ಕೋಟಿ ಆಸ್ತಿಗಳ ಮಾಲೀಕ, ಕಾನ್ಫಿಡೆಂಟ್ ಗ್ರೂಪ್ (Confident Group) ಚೇರ್ಮನ್ ಸಿಜೆ ರಾಯ್ (CJ Roy) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಈ ದುರ್ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇಡೀ ಕಾನ್ಫಿಡೆಂಟ್ ಗ್ರೂಪನ್ನೇ ಆಳುತ್ತಿದ್ದ, ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದ ಉದ್ಯಮಿಯ ಸಾವು ಎಲ್ಲರನ್ನೂ ಅಚ್ಚರಿಗೊಳಿಸಿದ್ದಲ್ಲದೇ, ಹಲವು ಅನುಮಾನಗಳನ್ನೂ ಹುಟ್ಟಿದೆ. ರಿಚ್‌ಮಂಡ್ ಸರ್ಕಲ್ ಬಳಿ ಇರುವ ಆಫೀಸ್‌ನಲ್ಲೇ ಗುಂಡು ಹಾರಿಸಿಕೊಂಡು, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಯಾರು ಈ ಸಿ.ಜೆ ರಾಯ್?
ಕೇರಳ (Kerala) ಮೂಲದ ಸಿ.ಜೆ. ರಾಯ್, ಬೆಳೆದಿದ್ದು ಮಾತ್ರ ಬೆಂಗಳೂರಿನಲ್ಲಿ (Bengaluru). ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ-ಅಧ್ಯಕ್ಷರಾಗಿದ್ದರು. ಬೆಂಗಳೂರು, ಕೊಚ್ಚಿ, ಭಾರತ ಹಾಗೂ ಮಧ್ಯಪ್ರಾಚ್ಯದಲ್ಲಿ ಹೆಸರುಗಳಿಸಿದ್ದ ಈ ರಿಯಲ್ ಎಸ್ಟೇಟ್ ಸಂಸ್ಥೆಯನ್ನು (Real Estate) ಅವರು 2006ರಲ್ಲಿ, ಡಾಟ್-ಕಾಮ್ ಕುಸಿತದ ನಂತರ ಸ್ಥಾಪಿಸಿದರು. ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಡಾಕ್ಟರೇಟ್ ಪಡೆದಿದ್ದ ರಾಯ್, ವೃತ್ತಿಜೀವನದ ಆರಂಭದಲ್ಲಿ ಹೆವ್ಲೆಟ್-ಪ್ಯಾಕಾರ್ಡ್ (HP) ನಲ್ಲಿ ಕೆಲಸ ಮಾಡಿದ್ದರು. 2006 ರಲ್ಲಿ ಸ್ಥಾಪಿಸಿದ್ದ ಈ ಕಾನ್ಫಿಡೆಂಟ್ ಗ್ರೂಪನ್ನು, ನಂತರ ಭಾರತ ಮಾತ್ರವಲ್ಲದೇ, ದುಬೈ, ಯುಎಸ್‌ನಲ್ಲೂ ವಿಸ್ತರಿಸಿದರು. ರಿಯಲ್ ಎಸ್ಟೇಟ್ ಮಾತ್ರವಲ್ಲದೇ ರಾಯ್, ಏರ್‌ಲೈನ್ಸ್, ಹಾಸ್ಪಿಟಾಲಿಟಿ, ರಿಯಾಲಿಟಿ ಶೋ ಮತ್ತು ಸಿನಿಮಾ ನಿರ್ಮಾಣಗಳಲ್ಲೂ ತೊಡಗಿಸಿಕೊಂಡಿದ್ದರು.
ರಾಯ್ ಕೆಲವೇ ವರ್ಷಗಳಲ್ಲಿ ತನ್ನ ಸಂಸ್ಥೆಯನ್ನು ಸಾಲಮುಕ್ತ ರಿಯಲ್ ಎಸ್ಟೇಟ್ ಉದ್ಯಮವಾಗಿ ಬೆಳೆಸಿದರು. ಕಂಪನಿ ವೆಬ್‌ಸೈಟ್ ಮಾಹಿತಿ ಪ್ರಕಾರ, ಇದು 165ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿ, 43 ದಶಲಕ್ಷ ಚದರ ಅಡಿ ಪ್ರದೇಶ ಅಭಿವೃದ್ಧಿಪಡಿಸಿ, 15,000ಕ್ಕೂ ಅಧಿಕ ಗ್ರಾಹಕರಿಗೆ ಸೇವೆ ಸಲ್ಲಿಸಿದೆ ಎನ್ನಲಾಗಿದೆ.
ರಿಯಾಲಿಟಿ ಶೋಗಳಿಗೂ ಸ್ಪಾನ್ಸರ್:
ಐಡಿಯಾ ಸ್ಟಾರ್ ಸಿಂಗರ್‌ನಂತಹ ಜನಪ್ರಿಯ ಟಿವಿ ಕಾರ್ಯಕ್ರಮಗಳ ಪ್ರಾಯೋಜಕತ್ವದಿಂದಲೂ ರಾಯ್ ಗುರುತಿಸಲ್ಪಟ್ಟಿದ್ದರು. ಕೇರಳದಲ್ಲಿ ಪ್ರವಾಹದಿಂದ ಹಾನಿಗೊಳಗಾದ 100 ಮನೆಗಳ ಪುನರ್ನಿರ್ಮಾಣ ಹಾಗೂ ಬಡ ರೋಗಿಗಳ ಹೃದಯ ಶಸ್ತ್ರಚಿಕಿತ್ಸೆಗೆ ಹಣಕಾಸು ನೆರವು ನೀಡುವ ಮೂಲಕ ಸಿಜೆ ರಾಯ್ ಹೃದಯ ವಿಶಾಲ ಎಂಬುದು ಮನವರಿಕೆಯಾಗಿತ್ತು.
ಕಾನ್ಫಿಡೆಂಟ್ ಗ್ರೂಪ್ ಖಾಸಗಿ ಕಂಪನಿಯಾದ್ದರಿಂದ, ಸಿ.ಜೆ. ರಾಯ್ ಅವರ ನಿವ್ವಳ ಆಸ್ತಿಯ ಅಧಿಕೃತ ವಿವರಗಳು ಲಭ್ಯವಿಲ್ಲ. ಆದರೆ, ಹಲವು ವರದಿಗಳು ಅವರ ಆಸ್ತಿ 1 ಬಿಲಿಯನ್‌ಗಿಂತಲೂ (8,400 ಕೋಟಿ) ಹೆಚ್ಚು ಎಂದು ಅಂದಾಜಿಸಿವೆ. ಕಾರ್ಟೋಕ್.ಕಾಮ್ ವರದಿ ಪ್ರಕಾರ, ರಾಯ್ ಐಷಾರಾಮಿ ಕಾರುಗಳ ಬಗ್ಗೆಯೂ ತುಂಬಾ ಕ್ರೇಜ್ ಹೊಂದಿದ್ದರು ಎನ್ನಲಾಗಿದೆ.
ಭಾರತ ಮತ್ತು ದುಬೈನಲ್ಲಿ ರೋಲ್ಸ್ ರಾಯ್ಸ್, ಲಂಬೋರ್ಘಿನಿ, ಬುಗಾಟಿ ವೇರಾನ್‌ನಂತಹ ಹತ್ತಾರು ಮಿಲಿಯನ್ ಡಾಲರ್ ಮೌಲ್ಯದ ಉನ್ನತ ಶ್ರೇಣಿಯ ವಾಹನಗಳನ್ನು ಸಿಜೆ ರಾಯ್ ಹೊಂದಿದ್ದರು ಎನ್ನಲಾಗಿದೆ. ಕಳೆದ ನವೆಂಬರ್‌ನಲ್ಲಿ ಅವರು ತಮ್ಮ 12ನೇ ರೋಲ್ಸ್ ರಾಯ್ಸ್, ಫ್ಯಾಂಟಮ್ VIII ಅನ್ನು ಖರೀದಿಸಿದ್ದರಂತೆ.
ಐಟಿ ದಾಳಿ:
ಜನವರಿ 30 ರಂದೂ ಸಿಜೆ ರಾಯ್ ಸಂಸ್ಥೆಗೆ ಐಟಿ ಅಧಿಕಾರಿಗಳು ರೇಡ್ ಮಾಡಿದ್ದರು. ಅಲ್ಲದೇ ಈ ಮೊದಲು ಡಿಸೆಂಬರ್ 3ಕ್ಕೆ ಅಧಿಕಾರಿಗಳು ದಾಳಿ ನಡೆಸಿ, ಹಲವು ಸಾಕ್ಷಿ, ದಾಖಲೆಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದರು ಎನ್ನಲಾಗಿದೆ. ಕಳೆದ ಮೂರು ದಿನಗಳಿಂದ ಮತ್ತೆ ಕಚೇರಿಗೆ ಆಗಮಿಸಿ ದಾಖಲೆಗಳ ಪರಿಶೀಲನೆ ನಡೆಸಿದ್ದರು ಎನ್ನಲಾಗಿದೆ.


Click it and Unblock the Notifications