ಬೆಂಗಳೂರು: ಸದ್ಯ ಬೆಂಗಳೂರು (Bengaluru) ಮಾತ್ರವಲ್ಲದೇ ಎಲ್‌ಪಿಜಿ ಸಿಲಿಂಡರ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಅತ್ತ ಮಧ್ಯಪ್ರಾಚ್ಯದ ಸಂಘರ್ಷ ಒಂದು ಕಡೆಯಾದ್ರೆ, ಇತ್ತ ಬೆಂಗಳೂರು ಸೇರಿ ದೇಶಾದ್ಯಂತ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ (Commercial LPG Cylinder) ಕೊರತೆ ಹೆಚ್ಚಾಗಿದೆ. ಅತ್ತ ಸರ್ಕಾರವೂ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಭಾರೀ ವಿವಾದಕ್ಕೆ ಗುರಿಯಾಗಿದೆ. ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದ ಹಿನ್ನೆಲೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರಿಗೆ ಪತ್ರ ಬರೆದು, ತಕ್ಷಣ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ಅವರು ಬರೆದಿರುವ ಪತ್ರದಲ್ಲಿ, ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾಗಿರುವ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ, ಪೆಟ್ರೋಲಿಯಂ ಸಚಿವಾಲಯವು ಮಾರ್ಚ್ 9, 2026 ರಂದು, ಎಲ್‌ಪಿಜಿ ಉತ್ಪಾದನೆಯನ್ನು ಆದ್ಯತೆಯಾಗಿ ಗೃಹಬಳಕೆಗೆ ಮಾತ್ರ ಮಾರಾಟ ಮಾಡುವಂತೆ ಆದೇಶ ಹೊರಡಿಸಿತ್ತು. ಆದರೆ ಈ ನಿರ್ಧಾರದಿಂದ ಸದ್ಯ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಬೆಂಗಳೂರಿನ ಹಲವು ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳು ಇದೀಗ ದೂರು ನೀಡಿದ್ದು, ಅನೇಕರು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಸಿಗುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಪರಿಣಾಮ ಹೋಟೆಲ್, ರೆಸ್ಟೋರೆಂಟ್‌ಗಳು ತಾತ್ಕಾಲಿಕವಾಗಿ ಮುಚ್ಚಬೇಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದು, ಹೋಟೆಲ್, ರೆಸ್ಟೋರೆಂಟ್‌ಗಳ ಮೇಲಿನ ಎಲ್‌ಪಿಜಿ ಅವಲಂಬನೆ ಬಗ್ಗೆಯೂ ಒತ್ತಿ ಹೇಳಿದ್ದಾರೆ.
ಸಾಮಾನ್ಯವಾಗಿ ರಾಜ್ಯದಲ್ಲಿ ಕಮರ್ಷಿಯಲ್ ಎಲ್‌ಪಿಜಿ ಬೇಡಿಕೆಯನ್ನು ತೈಲ ಮಾರುಕಟ್ಟೆ ಕಂಪನಿಗಳಾದ IOCL, HPCL, BPCL ಮೂಲಕ ಪೂರೈಕೆ ಮಾಡಲಾಗುತ್ತದೆ. ಇದರಲ್ಲಿ ಐಓಸಿಎಲ್ ದಿನಕ್ಕೆ 500-550 ಮೆಟ್ರಿಕ್ ಟನ್, ಹೆಚ್‌ಪಿಸಿಎಲ್ ಸುಮಾರು 300 ಮೆಟ್ರಿಕ್ ಟನ್, ಬಿಪಿಸಿಎಲ್ ಸುಮಾರು 230 ಮೆಟ್ರಿಕ್ ಟನ್ ಅನಿಲ ಪೂರೈಕೆ ಮಾಡುತ್ತಿತ್ತು. ಆದರೆ ಇದೀಗ ಪೂರೈಕೆಯಲ್ಲಿ ಉಂಟಾದ ಹಠಾತ್ ವ್ಯತ್ಯಯ ಸದ್ಯ ಹೋಟೆಲ್ ಉದ್ಯಮಕ್ಕೆ ಸಂಕಷ್ಟ ತಂದಿದೆ ಎನ್ನಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಒಂದು ನಿರ್ಧಾರ, ಹಲವು ಸಮಸ್ಯೆ!
ಇದೀಗ ಬೆಂಗಳೂರು ನಗರದಲ್ಲಿ ವಾಣಿಜ್ಯ ಸಿಲಿಂಡರ್‌ನಲ್ಲಾಗಿರುವ ವ್ಯತ್ಯಯದಿಂದಾಗಿ ಸಣ್ಣ ಹೋಟೆಲ್‌ಗಳಿಂದ ಹಿಡಿದು ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳು ಸಂಕಷ್ಟದಲ್ಲಿ ಸಿಲುಕಿದೆ. ಪ್ರತಿ ದಿನ ಲಕ್ಷಾಂತರಗಳು ಈ ಹೋಟೆಲ್‌ಗಳನ್ನೇ ಅವಲಂಬಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಹಾಗೂ ಅದೆಷ್ಟೋ ಉದ್ಯೋಗಸ್ಥ ಯುವಕರು ಆಹಾರಕ್ಕಾಗಿ ಹೋಟೆಲ್, ಮೆಸ್ಸುಗಳನ್ನೇ ನಂಬಿಕೊಂಡಿದ್ದಾರೆ ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದ್ದರಿಂದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯನ್ನು ಶೀಘ್ರದಲ್ಲೇ ಪುನಃಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.


Click it and Unblock the Notifications