ರಾಜ್ಯದಲ್ಲಿ ಮೈಕೊರೆಯುವಂತಹ ಚಳಿಗೆ ಜನ ತತ್ತರಿಸಿ ಹೋಗಿದ್ದಾರೆ. ಬೆಳಗಾದ್ರೆ ಸಾಕು ಅಯ್ಯಯ್ಯೋ ಚಳಿ ಚಳಿ ಎಂಬಂತಾಗಿದೆ. ಬೆಂಗಳೂರಲ್ಲಂತೂ ಜ್ಯಾಕೆಟ್ ಇಲ್ಲದೇ ಹೊರಗೆ ಬರೋಕೆ ಸಾಧ್ಯವಿಲ್ಲ. ಇನ್ನು ಚಳಿ ಒಂದೆಡೆಯಾದ್ರೆ, ಇತ್ತ ತುಂತುರು ಮಳೆಯ ಆಗಮನವಾಗಿದೆ. ಶನಿವಾರ ಬೆಂಗಳೂರು (Bengaluru) ಸೇರಿ ಅಲ್ಲಲ್ಲಿ ತುಂತುರು ಮಳೆಯಾಗಿದ್ದು (Rain), ಇದು ಚಳಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ಬೆಂಗಳೂರು ಸೇರಿ ಉತ್ತರ ಕರ್ನಾಟಕದಲ್ಲಿ ಶೀತ ಅಲೆಗಳ (Cold Wave) ವಾತಾವರಣ ಹೆಚ್ಚಾಗಿದೆ.

ಹೌದು, ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ವಿಪರೀತ ಚಳಿಯಿದೆ. ಅಲ್ಲದೇ ಇಂದು ಮತ್ತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೀಗ ಬೆಂಗಳೂರಿನಲ್ಲಿ ಲಘು ಮಳೆಯಾಗಲಿದೆ ಎಂಬ ಮುನ್ಸೂಚನೆಯೂ ಇದೆ.
ಇಲ್ಲೆಲ್ಲಾ ಮಳೆ.. ಮಳೆ!
ಜನವರಿ 11 ಅಂದರೆ ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಲಘು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅತೀ ಮಳೆಯಾಗದಿದ್ದರೂ, ಚಳಿ ಹಿನ್ನೆಲೆ ತುಂತುರು ಮಳೆಯಾಗುವ ನಿರೀಕ್ಷೆಯಿದೆ. ಇನ್ನು ಹಗಲಿನ ತಾಪಮಾನವೂ ಕಡಿಮೆ ಇರಲಿದ್ದು, ದಿನವಿಡೀ ಮೋಡಕವಿದ ವಾತಾವರಣ ಇರಲಿದೆ ಎಂದು ವರದಿಯಾಗಿದೆ.
ಇನ್ನು ಹವಾಮಾನ ಇಲಾಖೆಯ ವರದಿ ಪ್ರಕಾರ, ಬೆಂಗಳೂರು ನಗರದಲ್ಲಿ ಕನಿಷ್ಠ ತಾಪಮಾನ ಸುಮಾರು 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಸೂಚನೆ ಹೊರಡಿಸಿದೆ.
ಎಲ್ಲೆಲ್ಲಿ ಒಣಹವೆ?
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶೀತ ಅಲೆ ಪ್ರಮಾಣ ಹೆಚ್ಚಾಗಲಿದೆ ಎಂದು ಮುನ್ಸೂಚನೆ ಹೊರಡಿಸಲಾಗಿದ್ದು, ಆ ಕಾರಣದಿಂದ ಬೀದರ್, ಕಲಬುರಗಿ, ಧಾರವಾಡ, ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನು ದಕ್ಷಿಣ ಒಳನಾಡಿದ ಬಳ್ಳಾರಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಾವಣಗೆರೆ, ಮಂಡ್ಯ, ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ತುಮಕೂರು, ಬೆಂಗಳೂರು ಚಿತ್ರದುರ್ಗ, ಕೋಲಾರ, ರಾಮನಗರ, ಶಿವಮೊಗ್ಗ, ಕೊಡಗು, ಮೈಸೂರು, ವಿಜಯನಗರ ಜಿಲ್ಲೆಗಳಿಗೆ ಒಣ ಹವೆ ವಾತಾವರಣ ಮುಂದುವರೆಯಲಿದೆ ಎಂದು ಸೂಚನೆ ಹೊರಡಿಸಿದೆ.
ಇನ್ನು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಉತ್ತರ ಒಳನಾಡು ಜಿಲ್ಲೆಗಳ ಹವಾಮಾನ ಪರಿಸ್ಥಿತಿ ನೋಡುವುದಾದ್ರೆ, ಬೀದರ್, ಬಾಗಲಕೋಟೆ, ಗದಗ, ಕಲಬುರಗಿ, ಬಳ್ಳಾರಿ, ಯಾದಗಿರಿ, ಬೆಳಗಾವಿ, ವಿಜಯಪುರ, ಹಾವೇರಿ, ಧಾರವಾಡ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲೂ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಳಿ ಜೊತೆಗೆ ತುಂತು ಮಳೆಯ ಆಗಮನದಿಂದಾಗಿ, ಚಳಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದ್ದರಿಂದ ಜನರೂ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ವಾಕಿಂಗ್, ಆಫೀಸ್ ಹೋಗುವ ಸಂದರ್ಭದಲ್ಲಿ ಗ್ಲೌಟ್, ಮಫ್ಲರ್, ಸ್ವೆಟರ್ ಧರಿಸುವಂತೆ ಸಲಹೆ ನೀಡಲಾಗಿದೆ. ಅಲ್ಲದೇ ಈ ಸಂದರ್ಭದಲ್ಲಿ ಆರೋಗ್ಯಕರ ಆಹಾರ ಸೇವನೆಯೂ ಮುಖ್ಯ.


Click it and Unblock the Notifications