ನವದೆಹಲಿ, ಜನವರಿ 1: ಹೊಸ ವರ್ಷಕ್ಕೆ ಗ್ರಾಹಕರಿಗೆ ಸಿಹಿಸುದ್ದಿ ಸಿಕ್ಕಿದೆ. ನ್ಯಾಷನಲ್ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಜನವರಿ 1, 2022 ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 102.50 ರೂಪಾಯಿ ಕಡಿತಗೊಳಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1998.50 ರೂಪಾಯಿ ಆಗಿರುತ್ತದೆ. 19 ಕೆಜಿ ಸಿಲಿಂಡರ್‌ನ ಅತಿದೊಡ್ಡ ಬಳಕೆದಾರರ ವಿಭಾಗವಾಗಿರುವ ರೆಸ್ಟೋರೆಂಟ್‌ಗಳು, ಹೋಟೆಲ್ ಮತ್ತು ಟೀ ಸ್ಟಾಲ್‌ಗಳು ಬೆಲೆ ಕಡಿತಗೊಂಡ ಕೊಂಚ ನಿರಾಳರಾಗಿದ್ದಾರೆ.
ಕಳೆದ ತಿಂಗಳು ಡಿಸೆಂಬರ್ 1ರಂದು, 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 100 ರೂ.ಗಳಷ್ಟು ಹೆಚ್ಚಿಸಲಾಯಿತು. ಇದರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯು 2,101 ರೂಪಾಯಿ ಆಗಿತ್ತು. 2012-13ರ ನಂತರ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಎರಡನೇ ಅತ್ಯಂತ ಗರಿಷ್ಠ ಬೆಲೆಯಾಗಿತ್ತು. ಇದಕ್ಕೂ ಮೊದಲು 2,200 ರೂಪಾಯಿ ಗರಿಷ್ಠ ಬೆಲೆಯಾಗಿದೆ.

ಗೃಹ ಬಳಕೆ ಸಿಲಿಂಡರ್ ಬೆಲೆ ಇಳಿಕೆಯಾಗಿಲ್ಲ:
ಭಾರತದಲ್ಲಿ ಯಾವುದೇ ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯಾಗಿಲ್ಲ. ಗೃಹ ಬಳಕೆಯ 14.2 ಕೆಜಿ, 5 ಕೆಜಿ, 10 ಕೆಜಿ ಕಾಂಪೋಸಿಟ್ ಅಥವಾ 5 ಕೆಜಿ ಕಾಂಪೋಸಿಟ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಇಳಿಕೆ ಇಲ್ಲ, ಅವುಗಳ ಬೆಲೆಗಳು ಒಂದೇ ಆಗಿರುತ್ತವೆ.
ಇದಕ್ಕೂ ಮುನ್ನ ನವೆಂಬರ್ 1ರಂದು 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ 266 ರೂ.ಗೆ ಏರಿಕೆಯಾಗಿದ್ದು, ಒಟ್ಟು ಬೆಲೆ 2,000.50 ರೂ.ಗೆ ಏರಿಕೆಯಾಗಿತ್ತು. ಹೊಸ ದರ ಕಡಿತದ ನಂತರ 19 ಕೆಜಿ ಸಿಲಿಂಡರ್, ದೆಹಲಿಯಲ್ಲಿ 2,101 ರೂಪಾಯಿಯಿಂದ 1,998.50 ರೂಪಾಯಿಗೆ ಇಳಿಕೆಯಾಗಿದೆ.
ಎಲ್‌ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಅಕ್ಟೋಬರ್ 1ರಂದು 19 ಕೆಜಿ ಸಿಲಿಂಡರ್‌ಗಳ ಬೆಲೆಯನ್ನು 43 ರೂ ಮತ್ತು ಅಕ್ಟೋಬರ್ 6 ರಂದು 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 2.50 ರೂ ಇಳಿಕೆ ಮಾಡಲಾಗಿತ್ತು. ಸೆಪ್ಟೆಂಬರ್ 1 ರಂದು 19 ಕೆಜಿ ಸಿಲಿಂಡರ್ ಬೆಲೆ 75 ರೂಪಾಯಿ ಇಳಿಸಲಾಗಿತ್ತು.


Click it and Unblock the Notifications