ಬೆಂಗಳೂರು, ಆಗಸ್ಟ್ 13: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಭಾರತೀಯ ಟೆಲಿಕಾಂ ಮಾರುಕಟ್ಟೆಗೆ ಭರ್ಜರಿಯಾಗಿ ರೀಎಂಟ್ರಿ ಕೊಡಲು ಸಿದ್ದವಾಗಿದೆ. ರಿಲಾಯನ್ಸ್ ಜಿಯೋ, ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಬೆಲೆಗಳನ್ನು ತೀವ್ರವಾಗಿ ಹೆಚ್ಚಳ ಮಾಡಿದ ನಂತರ BSNL ಜನಪ್ರಿಯತೆಯು ಏಕಾಏಕಿ ಏರಿಕೆ ಕಂಡಿದ್ದು, ಆಕರ್ಷಕ ದರ ಭರ್ಜರಿ ರೀಚಾರ್ಜ್ ಪ್ಲಾನ್ಗಳು ಬಳಕೆದಾರರನ್ನು ಆಕರ್ಷಿಸುತ್ತಿದೆ.
ಬಿಎಸ್ಎನ್ಎಲ್ ಈಗಾಗಲೇ ಕೈಗೆಟುಕುವ ಬೆಲೆಯ ರೀಚಾರ್ಜ್ ಯೋಜನೆಗಳ ಸಿರೀಸ್ ಪ್ರಾರಂಭಿಸಿದ್ದು, ಇದರ ಕಾರ್ಯತಂತ್ರ ಈಗಾಗಲೇ ಪ್ರಾರಂಭಿಸಿದ್ದು ಇದು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಮತ್ತು ಆದ್ಯತೆಗಳಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗುತ್ತದೆ.

ಖಾಸಗಿ ಟೆಲಿಕಾಂ ಆಪರೇಟರ್‌ಗಳ ರೀಚಾರ್ಜ್ ಪ್ಲ್ಯಾನ್ ಗಳ ಬೆಲೆ ಏರಿಕೆಯಿಂದ BSNL ನ ಗ್ರಾಹಕರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದ್ದು, ಹೆಚ್ಚಿನ ಗ್ರಾಹಕರು ಕೈಗೆಟಕುವ ಆಯ್ಕೆಗಳನ್ನು ಹುಡುಕುತ್ತಿರುವ ಕಾರಣ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಕಡೆ ಮುಖ ಮಾಡಿದ್ದಾರೆ.
ಬಿಎಸ್ಎನ್ಎಲ್ ಕೇವಲ ಬಜೆಟ್ ಸ್ನೇಹಿ ರೀಚಾರ್ಜ್ ಯೋಜನೆಗಳ ಮೇಲೆ ಕೇಂದ್ರೀಕರಿಸದೇ 4ಜಿ ಸೇವೆ ಮತ್ತು 5G ನೆಟ್‌ವರ್ಕ್ ಸೇವೆಗಳನ್ನು ನೀಡುವಲ್ಲಿ ಉತ್ಸುಕವಾಗಿದೆ. ಈಗಾಗಲೇ ದೇಶಾದ್ಯಂತ 15,000 ಸೈಟ್‌ಗಳಲ್ಲಿ 4G ನೆಟ್‌ವರ್ಕ್‌ಗಳನ್ನು ಸ್ಥಾಪಿಸಲಾಗಿದ್ದು, ಬಿಎಸ್ಎನ್ಎಲ್ ತನ್ನ 4G ಸೇವೆಗಳನ್ನು2024ರ ಆಗಸ್ಟ್ 15ರ ಆಂಧ್ರಪ್ರದೇಶದಲ್ಲಿ ಪ್ರಾರಂಭಿಸಲು ಸಿದ್ಧವಾಗಿದೆ. ಜುಲೈ 2024 ರಲ್ಲಿ 2.17 ಲಕ್ಷಕ್ಕೂ ಹೆಚ್ಚು ಬಳಕೆದಾರರು ಬಿಎಸ್ಎನ್ಎಲ್ನತ್ತ ಮುಖ ಮಾಡಿದ್ದಾರೆ. ಇದು ಆಂಧ್ರಪ್ರದೇಶದ ರಾಜ್ಯದ ಒಟ್ಟು ಗ್ರಾಹಕರ ಸಂಖ್ಯೆಯನ್ನು 40 ಲಕ್ಷಕ್ಕೆ ಹೆಚ್ಚಿಸಿದೆ.
ಇದಲ್ಲದೇ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ತನ್ನ ಕಾರ್ಯತಂತ್ರದ ಭಾಗವಾಗಿ, ಬಿಎಸ್ಎನ್ಎಲ್ ಇತ್ತೀಚೆಗೆ ತನ್ನ ಜನಪ್ರಿಯ 3300GB ಡೇಟಾ ಪ್ಲ್ಯಾನ್ ಬೆಲೆಯಲ್ಲಿ ಮತ್ತಷ್ಟು ಕಡಿತಗೊಳಿಸಿದೆ. ರೂ.499 ಬೆಲೆಯ ಈ ಪ್ಲ್ಯಾನ್ ರೂ.100 ಕಡಿತಗೊಂಡು ರೂ.399ಕ್ಕೆ ಲಭ್ಯವಿದೆ. ಈ ಬೆಲೆ ಕಡಿತವು ಇಂಟರ್ನೆಟ್ ಬಳಕೆದಾರರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾಗಿದ್ದು, ಸಾಕಷ್ಟು ಡೇಟಾವನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡುತ್ತದೆ. ರೂ 399 ಯೋಜನೆಯು ಗಣನೀಯ ಪ್ರಮಾಣದ ಡೇಟಾವನ್ನು ಒದಗಿಸುವುದಲ್ಲದೆ, ಬಳಕೆದಾರರು ವಿಶ್ವಾಸಾರ್ಹ, ಹೆಚ್ಚಿನ ವೇಗದ ಇಂಟರ್ನೆಟ್ ದೊರೆಯುವಂತೆ ಮಾಡಲು ಸಿದ್ದವಾಗಿದೆ.
ಬಿಎಸ್ಎನ್ಎಲ್ಗೆ ಪೋರ್ಟ್ ಆಗುವುದು ಹೇಗೆ?
ಇತರ ಟೆಲಿಕಾಂ ಬಳಕೆದಾರರು ಬಿಎಸ್ಎನ್ಎಲ್ ನಿಂದ ವರ್ಗಾವಣೆ ಅಥವಾ ಪೋರ್ಟ್ ಆಗುವುದು ಸುಲಭ. ಬಿಎಸ್ಎನ್ಎಲ್ಗೆ ಹೇಗೆ ಪೋರ್ಟ್ ಆಗಲು ನೀವು ನಿಮ್ಮ ಮೊಬೈಲ್ನಿಂದ 'Port ' ಟೈಪ್ ಮಾಡಿ 1900 ಸಂಖ್ಯೆಗೆ ಎಸ್ಸೆಮ್ಮೆಸ್ ಸಂದೇಶ ಕಳುಹಿಸಬೇಕು. ಈ ಸಂದರ್ಭ ನಿಮಗೆ ಯುಪಿಸಿ ನಂಬರ್ ಅಥವಾ ಯೂನಿಕ್ ಪೋರ್ಟಿಂಗ್ ಕೋಡ್ ಸಿಗುತ್ತದೆ. ಈ ಕೋಡ್ 15 ದಿನ ವ್ಯಾಲಿಡಿಟಿ ಇರುತ್ತದೆ. ನೀವು ಯಾವುದೇ ಬಿಎಸ್ಎನ್ಎಲ್ ಕಸ್ಟಮರ್ ಸರ್ವಿಸ್ ಸೆಂಟರ್ ಅಥವಾ ಅಧಿಕೃತ ಬಿಎಸ್ಎನ್ಎಲ್ ಫ್ರಾಂಚೈಸಿಗೆ ಹೋಗಿ ಅಲ್ಲಿ ಅರ್ಜಿ ತುಂಬಿಸಿಬೇಕು. ಆಗ ಅಲ್ಲಿರುವ ಆಪರೇಟರ್ಗಳು ನಿಮ್ಮ ನಂಬರ್ ಅನ್ನು ಹೊಸ ಸಿಮ್ಗೆ ಪೋರ್ಟ್ ಮಾಡಿಕೊಡುತ್ತಾರೆ.


Click it and Unblock the Notifications