ಯಾವುದೋ ಒಂದು ವಸ್ತು ಅಥವಾ ವಿಷಯದಲ್ಲಿ ಒಳಿತಾಗುತ್ತಿದ್ದರೆ ಕೆಡುಕು ಕೂಡ ಇದ್ದೇ ಇರುತ್ತದೆ ಎಂಬ ವಿಚಾರ ಹಲವು ಬಾರಿ ಸಾಬೀತಾಗಿದೆ. ಉದಾಹರಣೆಗೆ ಹೇಳುವುದಾದರೆ ಅಂತರ್ಜಾಲದಿಂದ ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಒಳಿತಾಗುತ್ತಿದ್ದರೆ ಇದೇ ರಂಗದಲ್ಲಿ ಮೋಸ ಮಾಡುವವರು ಕೂಡ ಇದ್ದೇ ಇರುತ್ತಾರೆ. ಅದರಲ್ಲೂ ಅಂತರ್ಜಾಲ ವ್ಯಾಪಿಸಿದಷ್ಟು ಪ್ರಮಾಣದಲ್ಲಿ ಸೈಬರ್ ಅಪರಾಧಗಳ ಕೃತ್ಯದಲ್ಲೂ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಅಂಕಿ ಅಂಶಗಳು ತಿಳಿಸುತ್ತದೆ. 2024ರ ಮೊದಲ 9 ತಿಂಗಳುಗಳಲ್ಲಿ ಭಾರತವು ಸೈಬರ್ ವಂಚನೆಗಳಿಂದ ಬರೊಬ್ಬರಿ 11,000 ಕೋಟಿ ರೂ. ಹೆಚ್ಚು ಮೊತ್ತವನ್ನು ಕಳೆದುಕೊಂಡಿರುವ ಆತಂಕಕಾರಿ ಸಂಗತಿ ಕಂಡುಬಂದಿದೆ. ಅದರಲ್ಲೂ ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸಿಸ್ಟಮ್ 2021 ರಿಂದ ಇಲ್ಲಿಯ ವರೆಗೆ ಸುಮಾರು 30.05 ಲಕ್ಷ ಸೈಬರ್ ವಂಚನೆ ಸಂಬಂಧಿತ ದೂರುಗಳನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ. ಇತ್ತೀಚಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿರುವ ದಂಧೆ ಕೂಡ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಜನರು ಎಷ್ಟು ವಿದ್ಯಾವಂತರಾಗಿದ್ದರೂ ವಂಚಕರ ಮೋಸದಾಟಕ್ಕೆ ಸಿಲುಕುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಕೇವಲ ಒಂಬತ್ತು ತಿಂಗಳಲ್ಲಿ 11,333 ಕೋ.ರೂ. ವಂಚನೆ !
ಈ ಮೊದಲೇ ಹೇಳಿದಂತೆ ಪ್ರಸಕ್ತ ವರ್ಷ ಅಂದರೆ 2024 ರ ಮೊದಲ ಒಂಬತ್ತು ತಿಂಗಳಲ್ಲಿ ಭಾರತದವೊಂದರಲ್ಲೇ ಸೈಬರ್ ಹಗರಣಗಳಿಂದ ಸುಮಾರು 11,333 ಕೋಟಿ ರೂ. ನಷ್ಟವನ್ನು ಅನುಭವಿಸಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ. ಸ್ಟಾಕ್ ಟ್ರೇಡಿಂಗ್ ವಂಚನೆಗಳು ಕಳೆದುಹೋದ ಹಣದ ಮೊತ್ತದಲ್ಲಿ ಹಗರಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರ ನಂತರ ಹೂಡಿಕೆ ವಂಚನೆಗಳು ನಡೆದಿದ್ದು, 1 ಲಕ್ಷಕ್ಕೂ ಹೆಚ್ಚು ದೂರುಗಳಿಂದ 3,216 ಕೋಟಿ ರೂ. ನಷ್ಟವಾಗಿದೆ. ಇದರ ನಡುವಲ್ಲೇ ಇತ್ತೀಚಿಗಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಯುವ ವಿದ್ಯಾವಂತ ಜನತೆಯನ್ನೇ ಟಾರ್ಗೆಟ್ ಮಾಡುತ್ತಿರುವ ಸಂಗತಿ ಕೂಡ ಬಹಿರಂಗವಾಗಿದೆ. ಇನ್ನು ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಸುಮಾರು 63,481 ದೂರುಗಳು ಬಂದಿದ್ದು, ಈ ಮೂಲಕ ಸುಮಾರು 1,616 ಕೋಟಿ ರೂ. ನಷ್ಟವನ್ನು ಉಂಟುಮಾಡಿದೆ ಎಂದು ಗೃಹ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ವಿಭಾಗದ ಡೇಟಾವನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನ ಡೇಟಾದ ಪ್ರಕಾರ ಈ ವರ್ಷ ಸುಮಾರು 12 ಲಕ್ಷ ಸೈಬರ್ ಹಗರಣದ ದೂರುಗಳನ್ನು ಸ್ವೀಕರಿಸಲಾಗಿದೆ ಎನ್ನಲಾಗಿದೆ. ದೂರು ಸ್ವೀಕರಿಸಿದ ಹೆಚ್ಚಿನ ಪ್ರಕರಣಗಳಲ್ಲಿ ಶೇ 45 ಪ್ರತಿಶತ ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ಲಾವೋಸ್‌ನಿಂದ ಬಂದಿವೆ ಎನ್ನಲಾಗಿದೆ.

ಅಕ್ಟೋಬರ್‌ನಲ್ಲಿ ಎಚ್ಚರಿಕೆ ನೀಡಿದ್ದ ಪ್ರಧಾನಿ
ಇನ್ನು ಕಳೆದ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ 'ಡಿಜಿಟಲ್ ಅರೆಸ್ಟ್' ಬಗ್ಗೆ ದೇಶದ ನಾಗರಿಕರಿಗೆ ಎಚ್ಚರಿಕೆ ನೀಡಿದ್ದರು. ಯಾವುದೇ ಸರ್ಕಾರಿ ಸಂಸ್ಥೆಗಳು ದೂರವಾಣಿ ಮೂಲಕ ಜನರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಡುವುದಿಲ್ಲ ಎಂದು ಜನತೆಗೆ ಸೂಚಿಸಿ, ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದರು. ಡಿಜಿಟಲ್ ಅರೆಸ್ಟ್‌ನ ಕಾರ್ಯವೈಖರಿಯನ್ನು ವಿವರಿಸಿದ ಪ್ರಧಾನಿ ಮೋದಿ, ಡಿಜಿಟಲ್ ಬಂಧನದ ವಂಚನೆಯ ಅಡಿಯಲ್ಲಿ, ಕರೆ ಮಾಡುವವರು ತಮ್ಮನ್ನು ಪೊಲೀಸ್, ಸಿಬಿಐ, ಆರ್‌ಬಿಐ ಅಥವಾ ನಾರ್ಕೋಟಿಕ್ಸ್ ಅಧಿಕಾರಿಗಳು ಎಂದು ನಂಬಿಸುತ್ತಾರೆ. ನಂತರ ಅವರು ಆತ್ಮವಿಶ್ವಾಸದ ಮಾತುಗಳನ್ನಾಡುವ ಮೂಲಕ ಜನತೆಗೆಯಲ್ಲಿ ನಂಬಿಕೆ ಮೂಡಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ಮನ್ ಕಿ ಬಾತ್‌ನಲ್ಲಿ ಡಿಜಿಟಲ್ ಅರೆಸ್ಟ್ ಬಗ್ಗೆ ಮಾತನಾಡಲು ನನ್ನನ್ನು ಜನತೆ ಮನವಿ ಮಾಡಿದ್ದರು ಎಂದು ಮೋದಿ ತಿಳಿಸಿದ್ದರು . ಈ ಹಂತದಲ್ಲಿ ಜನತೆ ಸ್ವಲ್ಪ ತಾಳ್ಮೆ ತೆಗೆದುಕೊಂಡು ನಿಂತು, ಸ್ವಲ್ಪ ಯೋಚಿಸಿ ಬಳಿಕ ಕ್ರಮ ತೆಗೆದುಕೊಳ್ಳಿ ಎಂದು ಪ್ರಧಾನಿಯವರು ಮೂರು ಸಂದೇಶಗಳನ್ನು ಜನತೆಗೆ ನೀಡಿದ್ದಾರೆ. ಇನ್ನು ಎಲ್ಲರಿಗೂ ತಿಳಿದಿರುವಂತೆ ಡಿಜಿಟಲ್ ಬಂಧನ, ಹೂಡಿಕೆ ಮತ್ತು ಸೈಬರ್-ಸಂಬಂಧಿತ ವಂಚನೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ, ಇದು ಸಾಮಾನ್ಯವಾಗಿ ಜನರನ್ನು 'ಪ್ರಯೋಜನಕಾರಿ ಯೋಜನೆ'ಗಳ ಹೆಸರಿನಲ್ಲಿ ಆಮಿಷವೊಡ್ಡುತ್ತದೆ ಮತ್ತು ಭಾರಿ ಮೊತ್ತದ ಹಣವನ್ನು ವಂಚನೆ ನಡೆಸುತ್ತದೆ.


Click it and Unblock the Notifications