ಬೆಂಗಳೂರು, ನವೆಂಬರ್ 07: ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಮೈಸೂರು ರಸ್ತೆಯಿಂದ ಇನ್ನು ಮುಂದೆ ನೈಸ್ ರಸ್ತೆಗೆ ಸುಲಭವಾಗಿ ಸಾಗಬಹುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ಪ್ರಮುಖ ರಸ್ತೆ ಯೋಜನೆಯನ್ನು ಮರು ವಿನ್ಯಾಸ ಮಾಡುತ್ತಿದೆ. ಇದರಿಂದಾಗಿ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣ ಬಳಿಯಿಂದ ನೈಸ್ ರಸ್ತೆಯ ಕ್ಲೋವರ್ ಲೀಫ್ ಜಂಕ್ಷನ್‌ಗೆ ನೇರವಾಗಿ ಸಂಪರ್ಕ ಸಾಧ್ಯವಾಗಲಿದೆ.
ಮೈಸೂರು ಹೊರ ವರ್ತುಲ ರಸ್ತೆಯ ಪರಿಶೀಲನೆ ವೇಳೆ ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವ ಡಿ. ಕೆ. ಶಿವಕುಮಾರ್ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆಯೊಂದನ್ನು ನೀಡಿದ್ದರು. ಇದರ ಆಧಾರದ ಮೇಲೆ ಬಿಬಿಎಂಪಿ ದೀಪಾಂಜಲಿ ನಗರದ ಬಿಇಎಲ್ ಜಂಕ್ಷನ್‌ನಲ್ಲಿ ರಸ್ತೆಯನ್ನು ಮರು ವಿನ್ಯಾಸ ಮಾಡಿ, ನೈಸ್ ರಸ್ತೆಗೆ ನೇರ ಸಂಪರ್ಕ ಕಲ್ಪಿಸುತ್ತದೆ.

ಭೂ ಸ್ವಾಧೀನ ಸೇರಿದಂತೆ ವಿವಿಧ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಿಬಿಎಂಪಿ ಈ ರಸ್ತೆ ಕಾಮಗಾರಿಯನ್ನು ನೈಸ್ ಸಂಸ್ಥೆಗೆ ಹಸ್ತಾಂತರ ಮಾಡಲಿದೆ. ದೀಪಾಂಜಲಿ ನಗರ ಬಳಿಯಿಂದ ಹೊಸ ರಸ್ತೆ ನಿರ್ಮಾಣ ಮಾಡಿ, ನೈಸ್ ರಸ್ತೆಯ ಕ್ಲೋವರ್ ಲೀಫ್ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನೈಸ್ ಸಂಸ್ಥೆ ನಿರ್ಮಾಣ ಮಾಡಲಿದೆ.
ಈ ರಸ್ತೆ ಕಾಮಗಾರಿ ಪೂರ್ಣಗೊಂಡು ಮೈಸೂರು ರಸ್ತೆಯಿಂದ ನೈಸ್ ರಸ್ತೆಗೆ ನೇರವಾಗಿ ಸಂಪರ್ಕ ಸಿಕ್ಕಿದರೆ ಮೈಸೂರು ರಸ್ತೆಯಲ್ಲಿ ಉಂಟಾಗುವ ಸಂಚಾರ ದಟ್ಟಣೆ ಕುರಿತು ಈಗಾಗಲೇ ಬಿಬಿಎಂಪಿ ಅಧಿಕಾರಿಗಳು, ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದ್ದರಿಂದ ರಸ್ತೆ ಮರು ವಿನ್ಯಾಸಕ್ಕೂ ಮೊದಲು ಭವಿಷ್ಯದ ಸಂಚಾರ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ.
ಮೈಸೂರು ಹೊರ ವರ್ತುಲ ರಸ್ತೆಯ ಮೇಲೆ ಅಪಾರವಾದ ವಾಹನಗಳ ಒತ್ತಡವಿದೆ. ಇದನ್ನು ಕಡಿಮೆ ಮಾಡಲು ನಗರದಿಂದ ನೇರವಾಗಿ ನೈಸ್ ರಸ್ತೆಯ ಕ್ಲೋವರ್ ಲೀಫ್ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸಿದರೆ ನೈಸ್ ರಸ್ತೆ ಮೂಲಕ ಮೈಸೂರು ಕಡೆಗೆ ಹೋಗುವ ವಾಹನಗಳು ಸಾಗಬಹುದು ಆಗ ನಾಯಂಡಹಳ್ಳಿ, ಕೆಂಗೇರಿ ಸೇರಿದಂತೆ ವಿವಿಧ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಇದಕ್ಕಾಗಿ ಹೊಸ ಲಿಂಕ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ರಸ್ತೆ ಯೋಜನೆ ವಿನ್ಯಾಸದ ಬಳಿಕ ಭೂ ಸ್ವಾಧೀನ ಪೂರ್ಣಗೊಳಿಸಿ ನೈಸ್ ಸಂಸ್ಥೆಗೆ ನೀಡಲಾಗುತ್ತದೆ. ಬಿಬಿಎಂಪಿ ಮುಖ್ಯ ಇಂಜಿನಿಯರ್ (ಯೋಜನೆ) ಎಂ. ಲೋಕೇಶ್ ಅವರ ಪ್ರಕಾರ, ನೈಸ್ ಸಂಸ್ಥೆ ಈ ಲಿಂಕ್ ರಸ್ತೆ ನಿರ್ಮಾಣ ಮಾಡಲಿದೆ.
ನೈಸ್ ಅಧಿಕಾರಿಗಳು ಹೇಳುವಂತೆ ಸಂಸ್ಥೆಯ ಬಳಿ ಮೈಸೂರು ರಸ್ತೆಗೆ ನೇರ ಸಂಪರ್ಕ ಕಲ್ಪಿಸುವ ಲಿಂಕ್ ರಸ್ತೆ ನಿರ್ಮಾಣ ಮಾಡಲು ಶೇ 60ರಷ್ಟು ಸ್ವಾಧೀನ ಪಡಿಸಿಕೊಂಡ ಭೂಮಿ ಇದೆ. ಕೆಐಎಡಿಬಿ ಉಳಿದ ಶೇ 40ರಷ್ಟು ಭೂಮಿ ಹಸ್ತಾಂತರ ಮಾಡಿದರೆ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಲಾಗುತ್ತದೆ.
ತುಮಕೂರು ರಸ್ತೆಯ ಮಾದಾವರ ಬಳಿ ಆರಂಭವಾಗುವ ನೈಸ್ ರಸ್ತೆ ಕುಂಬಳಗೋಡು ತನಕ ಸಾಗುತ್ತದೆ. ಆದರೆ ಸದ್ಯ ಮೈಸೂರು ಹೊರ ವರ್ತುಲ ರಸ್ತೆಯಿಂದ ನೈಸ್ ರಸ್ತೆಗೆ ನೇರ ಸಂಪರ್ಕ ಇಲ್ಲ. ವಾಹನಗಳು ಹೊಸಕೆರೆ ಹಳ್ಳಿ ಪಿಇಎಸ್ ಕಾಲೇಜು ಬಳಿ ಬಂದು ನೈಸ್ ರಸ್ತೆ ಮೂಲಕ ಮುಂದೆ ಹೋಗಬೇಕಿದೆ.
ಅದಕ್ಕಾಗಿ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಸಮೀಪ ಬಿಇಎಲ್ ಜಂಕ್ಷನ್‌ನಿಂದ ನೈಸ್ ರಸ್ತೆಗೆ ನೇರ ಸಂಪರ್ಕ ಕಲ್ಪಿಸಲು ಲಿಂಕ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇದರಿಂದಾಗಿ ಬಿಇಎಲ್ ಜಂಕ್ಷನ್ ಬಳಿ ಸಂಚಾರ ದಟ್ಟಣೆ ಹೆಚ್ಚಾಗುವ ನಿರೀಕ್ಷೆ ಇದ್ದು, ಇದನ್ನು ಕಡಿಮೆ ಮಾಡಲು ಸಂಚಾರಿ ಪೊಲೀಸರು ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ.
ಮೈಸೂರು ರಸ್ತೆ ಮತ್ತು ನೈಸ್ ರಸ್ತೆ ಲಿಂಕ್ ಮಾಡಲು ಹೊಸ ರಸ್ತೆ ನಿರ್ಮಾಣವಾಗಲಿದೆ. ಇದರು ಮೈಸೂರು ರಸ್ತೆಯ ಸಂಚಾರ ದಟ್ಟಣೆ ಕಡಿಮೆ ಮಾಡಲು ಹೇಗೆ ಸಹಾಯಕವಾಗಲಿದೆ? ಎಂದು ಕಾದು ನೋಡಬೇಕಿದೆ.


Click it and Unblock the Notifications