ಹಿಂದೆಲ್ಲಾ ಏನಾದರೂ ಖರೀದಿಸಬೇಕೆಂದರೂ ಹೊರಗಡೆ ಹೋಗಿಯೇ ತೆಗೆದುಕೊಳ್ಳಬೇಕಿತ್ತು. ಆದ್ರೆ ಈಗ ಹಾಗಲ್ಲ. ಕಾಲ ಬದಲಾಗಿದೆ, ಎಲ್ಲಾ ಡಿಜಿಟಲ್ ಮಯವಾಗಿದೆ. ಮೊಬೈಲ್ ಒಂದಿದ್ದರೆ ಸಾಕು, ಕ್ಷಣಮಾತ್ರದಲ್ಲಿ ನಮಗೆ ಬೇಕಾದ ಆಹಾರ, ಉತ್ಪನ್ನವನ್ನು ಇಕಾಮರ್ಸ್ ವೆಬ್‌ಸೈಟ್‌ನಲ್ಲಿ ಆರ್ಡರ್ ಮಾಡಬಹುದು. ಅಂತಹ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಅಮೆಜಾನ್, ಸ್ವಿಗ್ಗಿ, ಜೊಮ್ಯಾಟೋ, ಬ್ಲಿಂಕಿಟ್, ಜೆಪ್ಟೋ, ಫ್ಲಿಪ್‌ಕಾರ್ಟ್ (Amzon, Swiggy, Zomato, Blinkit, Zepto, Flipkart) ಭಾರೀ ಜನಪ್ರಿಯತೆ ಪಡೆದುಕೊಂಡಿದೆ.

ಇದೀಗ ಅಮೆಜಾನ್, ಜೊಮ್ಯಾಟೊ, ಸ್ವಿಗ್ಗಿ, ಜೆಪ್ಟೊ, ಬ್ಲಿಂಕಿಟ್, ಫ್ಲಿಪ್‌ಕಾರ್ಟ್ ಸೇರಿದಂತೆ ಪ್ರಮುಖ ಆನ್‌ಲೈನ್ ಆರ್ಡರ್‌ಗಳನ್ನು ವಿತರಿಸುವ ಕಾರ್ಮಿಕರು ಡಿಸೆಂಬರ್ 31, 2025 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಬಹುತೇಕ ಗಿಗ್ ಕಾರ್ಮಿಕರಿಗೆ ಸಿಗದ ಮೂಲಭೂತ ಸಾಮಾಜಿಕ ಭದ್ರತಾ ಸೌಲಭ್ಯಗಳ ಬೇಡಿಕೆ ಈ ಪ್ರತಿಭಟನೆಗೆ ಕಾರಣವಾಗಿದೆ.
ಮುಷ್ಕರಕ್ಕೆ ಮುಂದಾದ ಇಕಾಮರ್ಸ್ ಕಾರ್ಮಿಕರು!
ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ ಹಾಗೂ ಇಂಡಿಯನ್ ಫೆಡರೇಶನ್ ಆಫ್ ಆಪ್-ಬೇಸ್ಡ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ ಇದೀಗ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಡಿಸೆಂಬರ್ 25ರಂದು ಇದೇ ಬೇಡಿಕೆಯ ಉದ್ದೇಶದಿಂದ ಗಿಗ್ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಗಿಗ್ ಆರ್ಥಿಕ ಪರಿಸ್ಥಿತಿ ಕೂಡಾ ದಿನೇ ದಿನೇ ಹದಗೆಡುತ್ತಿದೆ. ಅದೇ ಕಾರಣದಿಂದ ಕಂಪನಿಗಳ ಮೇಲೆ ಒತ್ತಡ ಹೇರಲು ಸತತ ಮುಷ್ಕರಗಳು ನಡೆಸುತ್ತಿದ್ದೇವೆ ಎಂದು ಕಾರ್ಮಿಕರು ತಿಳಿಸಿದ್ದಾರೆ.
ಇನ್ನು ಈ ಮುಷ್ಕರದಲ್ಲಿ ಮೆಟ್ರೋ ನಗರಗಳು ಮತ್ತು ಪ್ರಮುಖ ಟೈರ್ 2 ನಗರಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಭಾಗವಹಿಸುವ ಸಾಧ್ಯತೆ ಇದೆ.
ಕಾರ್ಮಿಕರ ಬೇಡಿಕೆಗಳೇನು?
- 10 ನಿಮಿಷಗಳ ಡೆಲಿವರಿ ವ್ಯವಸ್ಥೆಯನ್ನು ಅಂತ್ಯಗೊಳಿಸುವುದು ಕಾರ್ಮಿಕರ ಮುಖ್ಯ ಬೇಡಿಕೆಯಾಗಿದೆ.
- ಅಲ್ಲದೇ ವೇತನ, ಅಪಘಾತ ವಿಮೆ ಮತ್ತು ಪಿಂಚಣಿಗಳಂತಹ ಸಾಮಾಜಿಕ ಭದ್ರತಾ ಸೌಕರ್ಯಗಳನ್ನು ನೀಡುವುದು.
- ಕೆಲಸದ ಸಮಯ, ಕಡ್ಡಾಯವಾಗಿ ವಿಶ್ರಾಂತಿ ಸಮಯಗಳನ್ನು ನೀಡುವುದು
- ಗಿಗ್ ವರ್ಕರ್ಸ್‌ಗಾಗಿ ಸುರಕ್ಷತಾ ಕ್ರಮಗಳು.
ಉದ್ದೇಶ ಏನು?
ಹಬ್ಬ ಮತ್ತು ವರ್ಷಾಂತ್ಯದಲ್ಲಿ ಹೆಚ್ಚು ಆದಾಯ ಗಳಿಸುವ ಬದಲು, ಸತತ ಮುಷ್ಕರಗಳನ್ನು ಏಕೆ ನಡೆಸುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಬಹುದು. ಆದ್ರೆ ಯೂನಿಯನ್‌ಗಳು ಗಿಗ್ ಕಾರ್ಮಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಕಂಪನಿಗಳು ಹಾಗೂ ಪಾಲಿಸಿ ನೋಡಿಕೊಳ್ಳುವವರ ಮೇಲೆ ಒತ್ತಡ ಹೇರುವುದೇ ಇಲ್ಲಿ ಮುಖ್ಯ ಉದ್ದೇಶ. ಸಾಮಾನ್ಯವಾಗಿ ಹಬ್ಬ, ವರ್ಷಾಂತ್ಯದಲ್ಲಿ ಆನ್‌ಲೈನ್ ಆರ್ಡರ್‌ಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ. ಆದ್ರೆ ಇದೇ ಸಂದರ್ಭದಲ್ಲಿ ಮುಷ್ಕರ ನಡೆಸಿದರೆ, ಬೇಡಿಕೆಗೆ ಪ್ರತಿಕ್ರಿಯೆ ಸಿಗಬಹುದು ಎಂನ ನಂಬಿಕೆ. ಆದ್ದರಿಂದ ಡಿಸೆಂಬರ್ 31ಕ್ಕೆ ಮುಷ್ಕರ ನಡೆದರೆ, ಹಲವು ನಗರಗಳಲ್ಲಿ ಆಹಾರ ಮತ್ತು ಪ್ಯಾಕೇಜ್ ವಿತರಣೆಯಲ್ಲಿ ವಿಳಂಬವಾಗಬಹುದು.
ಡಿಸೆಂಬರ್ 31 ರಂದು ದೇಶದ ಬಹುತೇಕ ನಗರಗಳು ಹೊಸ ವರ್ಷದ ಆಗಮನದಲ್ಲಿ ಜಗಮಗಿಸುತ್ತಿರುತ್ತದೆ. ಅಲ್ಲದೇ ಈ ಸಂದರ್ಭದಲ್ಲಿ ಆನ್‌ಲೈನ್ ಆರ್ಡರ್‌ಗಳಿಗೂ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಈ ದಿನ ಗಿಗ್ ಕಾರ್ಮಿಕರು ಮುಷ್ಕರ ನಡೆಸಿದರೆ, ಹಲವು ಕಡೆಗಳಲ್ಲಿ ಆನ್‌ಲೈನ್ ಡೆಲಿವರಿಯಲ್ಲಿ ವಿಳಂಬವಾಗಬಹುದು ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications