ನವದೆಹಲಿ, ಮಾರ್ಚ್ 9: ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಭಾರತದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್‌ನ ಯಶಸ್ಸಿನಲ್ಲಿನ ಪ್ರಮುಖ ಪಾತ್ರಧಾರಿ, ಹಾಗೂ 150 ಕ್ಕೂ ಹೆಚ್ಚು ಪ್ರಕಟಿತ ಪುಸ್ತಕಗಳ ಲೇಖಕಿ ಸುಧಾ ಮೂರ್ತಿ. ಆಗಿನ ಕಾಲದಲ್ಲೇ ಅವರು ತೆಗೆದುಕೊಂಡ ಪ್ರತಿ ನಿರ್ಧಾರಗಳೂ ಹೆಚ್ಚು ಬೋಲ್ಡ್ ಆಗಿದ್ದವು.
ಅಂದಿನ ಸ್ಟೀರಿಯೊಟೈಪ್ ಮತ್ತು ಸಾಂಪ್ರದಾಯಿಕ ಲಿಂಗ ತಾರತಮ್ಯ ಮುರಿದು ಸುಧಾಮೂರ್ತಿ ಎಂಜಿನಿಯರಿಂಗ್ ಪ್ರವೇಶಿಸಿ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ್ದರು. ಇಂದು 775 ಕೋಟಿ ರೂ.ನಿವ್ವಳ ಮೌಲ್ಯವನ್ನು ಹೊಂದಿರುವ ಸುಧಾ ಅವರು ಐಷಾರಾಮಿ ಜೀವನದ ಬದಲಾಗಿ ಸರಳತೆಯ ಜೀವನ ನಡೆಸುತ್ತಿದ್ದಾರೆ.

ಐಷಾರಾಮಿ ಕಾರು, ಬೆಲೆಬಾಳುವ ವಾಚ್ ಹೀಗೆ ಸಿರಿವಂತರು ತಮ್ಮ ದುಬಾರಿ ಖರೀದಿಯಿಂದಲೇ ಸುದ್ದಿಯಾಗುತ್ತಿರುವಾಗ, ಸುಧಾ ಮೂರ್ತಿ ಅವರು ಕಳೆದ ಮೂರು ದಶಕಗಳಿಂದ ಹೊಸ ಸೀರೆಯನ್ನೇ ಖರೀದಿಸಿಲ್ಲ ಎನ್ನುವುದು ಅಚ್ಚರಿಯಾದರೂ ಸತ್ಯ. ಅವರ ಈ ನಿರ್ಧಾರವು ಮೊದಲ ಬಾರಿಗೆ ಗೊಂದಲಮಯವಾಗಿ ಕಂಡರೂ, ಹಲವು ಕೋಟಿ ರೂ.ಗಳ ಒಡತಿಯಾಗಿರುವ ಈ ಮಹಿಳೆ ಸೀರೆ ಖರೀದಿಸದೇ ಇರುವುದಕ್ಕೆ ಕುತೂಹಲಕಾರಿ ಕಾರಣವೂ ಇದೆ.
30 ವರ್ಷಗಳಿಂದ ಹೊಸ ಸೀರೆ ಖರೀದಿಸದಿರುವುದು ಇವರ ಸರಳತೆಗೆ ಉದಾಹರಣೆಯಾದರೆ ಜೊತೆಗೆ ಇದಕ್ಕೆ ಅವರಿಗಿದ್ದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ನಂಬಿಕೆಯೂ ಕಾರಣವಾಗಿದೆ. ಪವಿತ್ರ ನಗರವಾದ ಕಾಶಿಗೆ ಭೇಟಿ ನೀಡಿದಾಗ, ಅಲ್ಲಿ ಅವರು ತುಂಬಾ ಪ್ರೀತಿಸುತ್ತಿದ್ದ ಯಾವುದನ್ನಾದರೂ ಅರ್ಪಣೆಯಾಗಿ ತ್ಯಜಿಸಲು ನಿರ್ಧರಿಸಿಬೇಕಾಗಿತ್ತು. ಅವರು ಸೀರೆಯ ಮೇಲೆ ಹೆಚ್ಚಿನ ವ್ಯಾಮೋಹವಿದ್ದ ಕಾರಣ ಅದನ್ನೇ ತ್ಯಜಿಸಲು ನಿರ್ಧರಿಸಿದರು. ಹೀಗಾಗಿ ಅಂದಿನಿಂದ ಅವರು ಹೊಸ ಸೀರೆಯನ್ನು ಖರೀದಿಸಿಲ್ಲ. ಬದಲಿಗೆ, ಸುಧಾ ಮೂರ್ತಿ ಈಗ ತಮ್ಮ ಖರೀದಿಗಳನ್ನು ಅಗತ್ಯ ವಸ್ತುಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ.
ಸುಧಾಮೂರ್ತಿ ಮಾತ್ರವಲ್ಲದೇ ಅವರ ಪತಿ ನಾರಾಯಣ ಮೂರ್ತಿಯವರೂ ತಮ್ಮ ಸಾಧಾರಣ ಸರಳ ಜೀವನಶೈಲಿಯೊಂದಿಗೆ ಬದುಕುತ್ತಾರೆ. ಫೋರ್ಬ್ಸ್ ಪ್ರಕಾರ ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ಸ್ಥಾಪಕರಾಗಿರುವ ನಾರಾಯಣ ಮೂರ್ತಿಯವರ ನಿವ್ವಳ ಮೌಲ್ಯವನ್ನು $4.4 ಬಿಲಿಯನ್ (ಅಂದಾಜು ರೂ. 36,690 ಕೋಟಿ) ಎಂದು ಅಂದಾಜಿಸಲಾಗಿದೆ. ಇಬ್ಬರಿಗೂ ಓದುವುದರಲ್ಲಿ ಆಸಕ್ತಿ ಹೊಂದಿದ್ದು, ಸುಮಾರು 20,000 ಪುಸ್ತಕಗಳ ಬೃಹತ್ ಸಂಗ್ರಹವನ್ನು ಹೊಂದಿದ್ದಾರೆ.
ಸುಧಾಮೂರ್ತಿಯವರು, ತಮ್ಮ ಸಹೋದರಿಯರು, ಆಪ್ತ ಸ್ನೇಹಿತರು ಎನ್‌ಜಿಒಗಳಿಂದ ಉಡುಗೊರೆಯಾಗಿ ನೀಡಿದ ಸೀರೆಗಳನ್ನು ಧರಿಸುತ್ತಾರೆ. ಅವರ ಅತ್ಯಂತ ಸೀರೆಯ ಕಲೆಕ್ಷನ್ ನಲ್ಲಿ ಶೋಷಿತ ಮಹಿಳೆಯರ ತಂಡ ಕೈಗಳಿಂದಲೇ ತಯಾರಿಸಿ ಕಸೂತಿ ಮಾಡಿದ ಸೀರೆಗಳು ಅಮೂಲ್ಯವಾದುದು ಅನ್ನುತ್ತಾರೆ ಸುಧಾಮೂರ್ತಿ.
ಸುಧಾಮೂರ್ತಿ ಕರ್ನಾಟಕದ ದೇಶಸ್ಥ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದು, ಅವರ ತಂದೆ ವೈದ್ಯರಾಗಿದ್ದು ತಾಯಿ ಶಾಲಾ ಶಿಕ್ಷಕರಾಗಿದ್ದರು. ಅವರ ಮಗಳು ಅಕ್ಷತಾ ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ವಿವಾಹವಾಗಿದ್ದಾರೆ. ತಾನು ತನ್ನ ಪತಿಯನ್ನು ಯಶಸ್ವಿ ಉದ್ಯಮಿಯನ್ನಾಗಿ ಪರಿವರ್ತಿಸಿದ್ದು, ತನ್ನ ಮಗಳು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದಳು ಎಂದು ಸುಧಾ ತಮಾಷೆ ಮಾಡುತ್ತಾರೆ. ಅವರ ಈ ರಂಜನೀಯ ವಾಖ್ಯಾನವು, ದಾಂಪತ್ಯ ಜೀವನದಲ್ಲಿ ಪತ್ನಿಯ ಪ್ರಭಾವಶಾಲಿ ಪಾತ್ರ ಪ್ರಾಮುಖ್ಯತೆ ಒತ್ತಿ ಹೇಳುತ್ತದೆ.


Click it and Unblock the Notifications