ಈಗ ಎಲ್ಲವೂ ಆನ್‌ಲೈನ್‌ಮಯವಾಗಿದೆ. ಶಾಪಿಂಗ್ ಮಾಡುವುದರಿಂದ ಹಿಡಿದು ಹಣ ವರ್ಗಾವಣೆ ತನಕ ಎಲ್ಲವೂ ಆನ್‌ಲೈನ್‌ನಲ್ಲೇ ನಡೆಯುತ್ತದೆ. ತಂತ್ರಜ್ಞಾನ ಕೆಲವೊಮ್ಮೆ ನಮಗೆ ವರವಾದರೆ ಮತ್ತೊಮ್ಮೆ ಅದೇ ತಂತ್ರಜ್ಞಾನ ಶಾಪವೂ ಆಗುತ್ತದೆ. ಎಚ್ಚರಿಕೆಯಿಂದ ಬಳಕೆ ಮಾಡಿದರೆ ಮಾತ್ರ ಹಲವು ಮೋಸ, ವಂಚನೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ.
ಆನ್‌ಲೈನ್ ವಂಚನೆ, ಸೈಬರ್ ಕ್ರೈಂ ಹಲವು ಬಗೆಯಲ್ಲಿ ನಡೆಯುತ್ತಿದೆ. ಹಲವು ವಿಧಾನದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ, ಬೆದರಿಕೆ ಒಡ್ಡಿ ಹಣ ಕೀಳುವ ಸಾವಿರಾರು ಪ್ರಕರಣಗಳು ವರದಿಯಾಗಿವೆ. ಇದೀಗ ಹೊಸ ರೀತಿಯ ಆನ್‌ಲೈನ್ ವಂಚನೆಯೊಂದು ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳಿಸಿದೆ. ಇದನ್ನು 'ಡಿಜಿಟಲ್ ಅರೆಸ್ಟ್' ಎಂದು ಕರೆಯಲಾಗುತ್ತದೆ. ಒನ್ಇಂಡಿಯಾ ಮತ್ತು ಗುಡ್ ರಿಟರ್ನ್ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂತಹ ಹಲವು ಅಪರಾಧಗಳ ತನಿಖೆ ಮಾಡುತ್ತಿದೆ.

ಹೇಗೆ ವಂಚಿಸುತ್ತಾರೆ ಗೊತ್ತಾ?
ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿ ಅಥವಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡುವ ಖದೀಮರು, ನಿಮ್ಮ ಮೇಲೆ ಮನಿ ಲಾಂಡರಿಂಗ್ ಆರೋಪವಿದ್ದು, ದೂರು ಕೊಟ್ಟಿದ್ದಾರೆ ನಿಮ್ಮ ಮೇಲೆ ಅರೆಸ್ಟ್ ವಾರೆಂಟ್ ಇದೆ ಎಂದು ಮೊದಲು ಬೆದರಿಕೆ ಹಾಕುತ್ತಾರೆ. ನಿಮಗೆ ತಿಳಿಯದಂತೆ ನೀವು ತಪ್ಪು ಮಾಡಿದ್ದೀರಾ ಎನ್ನುವಂತೆ ನಂಬಿಸುವಲ್ಲಿ ಯಶಸ್ವಿಯಾಗುವ ವಂಚಕರು, ನಿಮ್ಮನ್ನು ನಾವು ರಕ್ಷಣೆ ಮಾಡುತ್ತೇವೆ ಎಂದು ಭರವಸೆ ನೀಡಿ ಹಣ ಕೀಳುತ್ತಾರೆ. ನಿಮಗೆ ಮೋಸ ಹೋಗಿದ್ದೇವೆ ಎಂದು ಅರಿವಾಗುವ ಹೊತ್ತಿಗೆ ಹಣವನ್ನು ಕಳೆದುಕೊಂಡಿರುತ್ತೀರಿ.
ವರ್ಧಮಾನ್ ಗ್ರೂಪ್‌ನ ಅಧ್ಯಕ್ಷ ಎಸ್‌ಪಿ ಓಸ್ವಾಲ್ ಇಂತಹ ವಂಚಕರ ಜಾಲಕ್ಕೆ ಸಿಲುಕಿ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳಂತೆ ನಟಿಸಿರುವ ವಂಚಕರು, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎನ್ನುವ ಹಂತದವರೆಗೂ ಹೋಗಿದ್ದು ನಂಬಿಸಿದ್ದಾರೆ. ಪ್ರಕರಣದಿಂದ ಹೊರಬರಲು ನಾವು ಸಹಾಯ ಮಾಡುತ್ತೇವೆ 7 ಕೋಟಿ ರೂಪಾಯಿ ನೀಡಿ ಎಂದು ಕೇಳಿದ್ದಾರೆ. ಓಸ್ವಾಲ್ ಭಯಗೊಂಡು ಹಣ ಕೂಡ ನೀಡಿದ್ದಾರೆ, ಬಳಿಕ ಅವರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ.
ಪ್ರತಿದಿನ ಸಾವಿರಾರು ಮಂದಿಗೆ ಇಂತಹ ವಂಚನೆಗಳು ನಡೆಯುತ್ತಲೇ ಇರುತ್ತವೆ. ಗೂಗಲ್ ಸ್ಟೋರ್ ಮತ್ತು ಆಪಲ್ ಸ್ಟೋರ್‌ನಲ್ಲಿ ತಮ್ಮದೇ ಆದ ಸುಲಭವಾಗಿ ಹಣ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸಿರುವ ಅನೇಕ ಕಂಪನಿಗಳಿವೆ. ಈ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡಾಗ ಎಲ್ಲಾ ಸಂಪರ್ಕ, ಮಾಹಿತಿಗಳಿಗೆ ಪ್ರವೇಶ ನೀಡುವ ವಿವರ ನೀಡಬೇಕಾಗುತ್ತದೆ. ಅನೇಕ ಜನ ಸುಲಭವಾಗಿ ಸಿಗುವ ಸಾಲದ ಸುಳಿಗೆ ಸಿಲುಕಿ ಸಾಕಷ್ಟು ಸಮಸ್ಯೆ ಅನುಭವಿಸಿದ್ದಾರೆ. ಬೆದರಿಕೆ ಹಾಕುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹಿಂಸೆ ಕೊಡುವುದು, ನಿಮ್ಮ ವೈಯಕ್ತಿತ ವಿವರಗಳನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಳ್ಳುವುದು ಸೇರಿದಂತೆ ಅನೇಕ ರೀತಿ ಹಿಂಸೆ ಕೊಡುತ್ತಾರೆ. ನೀವು ಪಡೆದ ಸಾಲಕ್ಕೆ ಹೆಚ್ಚಿನ ಬಡ್ಡಿ ಸಮೇತ ವಾಪಸ್ ಕಟ್ಟುವವರೆಗೂ ಅವರು ಬಿಡುವುದಿಲ್ಲ. ಇಂತಹ ಸಾಲ ಪಡೆದು ಅನೇಕರು ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಇವೆ.
ಕೆಲವೊಮ್ಮೆ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸದೇ ಇದ್ದರೂ, ನಿಮಗೆ ಇಷ್ಟು ಸಾಲ ಮಂಜೂರಾಗಿದೆ, ಮುಂದುವರೆಯಲು ಇಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಎನ್ನುವ ಸಂದೇಶಗಳು ಕೂಡ ಬರುತ್ತವೆ. ಬಳಿಕ ನೀವು ಸಾಲ ಪಡೆಯದೇ ಇದ್ದರೂ ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಹಣ ವಾಪಸ್ ಕಟ್ಟುವಂತೆ ಒತ್ತಾಯಿಸುತ್ತಾರೆ. ಇಲ್ಲದಿದ್ದರೆ ಬೆದರಿಕೆ ಹಾಕಿ ಹಣ ಪಡೆಯುವ ಪ್ರಯತ್ನ ಮಾಡುತ್ತಾರೆ.
2023ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಸೈಬರ್ ವಂಚನೆಯಿಂದ ಭಾರತೀಯರು 30,000 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. 2024ರ ಮೊದಲ ನಾಲ್ಕು ತಿಂಗಳಿನಲ್ಲಿ ಸೈಬರ್ ವಂಚನೆಗೆ ಸಂಬಂಧಪಟ್ಟಂತೆ 740,000 ಕ್ಕೂ ಹೆಚ್ಚು ದೂರುಗಳು ದಾಖಲಾಗಿದೆ.
ವಂಚನೆಯಿಂದ ರಕ್ಷಣೆ ಪಡೆಯುವುದು ಹೇಗೆ?
ಗ್ರಾಹಕರು ತಮ್ಮ ಬ್ಯಾಂಕ್ ಖಾತೆ ಮತ್ತು ವೈಯಕ್ತಿಕ ವಿವರಗಳನ್ನು ಯಾವಾಗಲೂ ರಕ್ಷಿಸಲು ನೀವು ಕೆಲವು ತ್ವರಿತ ಮತ್ತು ಸುಲಭ ಕೆಲಸಗಳನ್ನು ಮಾಡಬಹುದು. ಮೊಬೈಲ್‌ಗೆ ಬರುವ ಎಲ್ಲಾ ಸಂದೇಶಗಳು, ಇಮೇಲ್‌ಗಳಲ್ಲಿರುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಇದರಿಂದ ಅವರು ನಿಮ್ಮ ಮೊಬೈಲ್, ಪಿಸಿ ಗಳಲ್ಲಿರುವ ಮಾಹಿತಿ ಕದಿಯಲು ಕೀಲಿಕೈ ಕೊಟ್ಟಂತಾಗುತ್ತದೆ.
ನಿಮ್ಮ ಬ್ಯಾಂಕಿಂಗ್, ಸಾಲ, ಕ್ರೆಡಿಟ್ ಕಾರ್ಡ್, ಆಫರ್ ಸೇರಿದಂತೆ ಹಲವು ಮಾಹಿತಿ ಪಡೆಯಲು ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ, ಬ್ಯಾಂಕ್‌ನ ವೆಬ್‌ಸೈಟ್ ಅಥವಾ ನೇರವಾಗಿ ಬ್ಯಾಂಕ್‌ಗೆ ಭೇಟಿ ಕೊಡಬಹುದು.
ಬ್ಯಾಂಕ್ ಖಾತೆ ಸಂಖ್ಯೆಗಳು, ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳು, ಇಮೇಲ್ ಪಾಸ್‌ವರ್ಡ್‌ಗಳು ಮತ್ತು ಹೆಚ್ಚಿನವುಗಳಂತಹ ನಿಮ್ಮ ನಿರ್ಣಾಯಕ ಡೇಟಾವನ್ನು ಬಲವಾದ ಪಾಸ್‌ವರ್ಡ್‌ನೊಂದಿಗೆ ರಕ್ಷಿಸಿಕೊಳ್ಳಿ. ಸಂಖ್ಯೆಗಳು, ಅಕ್ಷರಗಳು ಮತ್ತು ವಿಶೇಷ ಅಕ್ಷರಗಳ ನಿಮ್ಮ ಪಾಸವರ್ಡ್‌ನಲ್ಲಿರಲಿ.
ಮೊಬೈಲ್, ಪಿಸಿಗಳಲ್ಲಿ ಸುರಕ್ಷಿತವಾಗಿ ಬ್ರೌಸ್ ಮಾಡಿ. ಹೆಚ್ಚುವರಿಯಾಗಿ ಸಾರ್ವಜನಿಕ ವೈರ್‌ಲೆಸ್ ನೆಟ್‌ವರ್ಕ್‌ಗಳು ಮತ್ತು ರೈಲುಗಳು, ಹೋಟೆಲ್‌ಗಳು ಮತ್ತು ವಿಮಾನ ನಿಲ್ದಾಣಗಳಂತಹ ಹಾಟ್‌ಸ್ಪಾಟ್‌ಗಳನ್ನು ಬಳಕೆ ಮಾಡುವುದನ್ನು ತಪ್ಪಿಸಿ. ಈ ನೆಟವರ್ಕ್ ಬಳಿಸಿಕೊಂಡು ಹ್ಯಾಕ್ ಮಾಡುವ ಸಾಧ್ಯತೆ ಕೂಡ ಇರುತ್ತದೆ.
ಯಾರಾದರೂ ನಿಮಗೆ ಪೊಲೀಸ್ ಅಧಿಕಾರಿ, ಜಡ್ಜ್, ಆದಾಯ ಇಲಾಖೆ ಅಧಿಕಾರಿ ಎಂದು ಕರೆ ಮಾಡಿ ಹಣ ಕೊಡಲು ಒತ್ತಾಯಿಸಿದರೆ ಗಾಬರಿಯಾಗದೆ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿ. ಇದರಿಂದ ವಂಚನೆಯಲ್ಲಿ ಬಹುತೇಕ ತಪ್ಪಿಸಬಹುದಾಗಿದೆ.


Click it and Unblock the Notifications