ಭಾರತದಲ್ಲಿ ಸೈಬರ್ ವಂಚನಾ ಜಾಲದ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಭಾರತದಲ್ಲಿ ಅಂತರ್ಜಾಲ ಸೇವೆಯು ಲಭ್ಯತೆ ಸುಲಭವಾದ ಬಳಿಕ ಸೈಬರ್ ವಂಚನಾ ಜಾಲದಲ್ಲಿಯೂ ಏರುಗತಿಯಲ್ಲಿ ಪ್ರಕರಣ ನಡೆದಿದೆ. ಈಗಲೂ ದಿನಂಪ್ರತಿ ಎಂಬಂತೆ ಭಾರತ ಬಹುತೇಕ ಎಲ್ಲಾ ಕಡೆಗಳಲ್ಲೂ ಸೈಬರ್ ವಂಚನಾ ಜಾಲ ನಡೆಯುತ್ತಲೇ ಇದೆ. ಎಷ್ಟು ಬಾರಿ ಎಚ್ಚರಿಕೆ ಸಂದೇಶ ನೀಡಿದರೂ ಜನರು ಸೈಬರ್ ವಂಚಕರ ಕೂಪಕ್ಕೆ ಬೀಳುತ್ತಲೇ ಇದ್ದಾರೆ.
ಸದ್ಯ ಪ್ರಧಾನಿ ನರೇಂದ್ರ ಮೋದಿಯವರೇ ಇದೀಗ ಸೈಬರ್ ವಂಚನಾ ಜಾಲದ ಬಗ್ಗೆ ಜನರನ್ನು ಎಚ್ಚರಿಸಿದ್ದಾರೆ. ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ 'ಮನ್ ಕಿ ಬಾತ್' 115ನೇ ಸಂಚಿಕೆಯ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಸದ್ಯ ಇಂದಿನ ಡಿಜಿಟಲ್ ಯುಗದಲ್ಲಿ ದೇಶದಲ್ಲಿ ಜನರಿಗೆ ಬಾಧಿಸುವ ಹಲವು ಸಮಸ್ಯೆಗಳಲ್ಲಿ ಸೈಬರ್ ವಂಚನಾ ಜಾಲ ಕೂಡ ಒಂದಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಇದೇ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ. ಭಾರತದಲ್ಲಿ ಸೈಬರ್ ವಂಚನೆಯಿಂದ ಲೆಕ್ಕಕ್ಕೆ ಸಿಗದಷ್ಟು ಮಂದಿ ತನ್ನ ಹಣ, ಮಾನ ಕಳೆದುಕೊಂಡವರ ಸಂಖ್ಯೆ ಭಾರೀ ಪ್ರಮಾಣದಲ್ಲಿದೆ. ಸೈಬರ್ ವಂಚನೆಯ ಬಗ್ಗೆ ಎಷ್ಟು ಬಾರಿ ಎಚ್ಚರಿಕೆ ನೀಡಲಾಗುತ್ತಿದ್ದರೂ ಕೂಡ ಅದರ ವಂಚನೆಯ ಕೂಪಕ್ಕೆ ಬೀಳುವವರ ಸಂಖ್ಯೆಯಲ್ಲಿ ಯಾವುದೇ ಕಡಿಮೆಯಾಗಿಲ್ಲ.
ಕರ್ನಾಟಕದ ಪ್ರಕರಣ ಬಗ್ಗೆ ಪ್ರಸ್ತಾಪಿಸಿದ ಮೋದಿ
ಡಿಜಿಟಲ್ ಅರೆಸ್ಟ್ ಪದ ಇತ್ತೀಚೆಗೆ ತೀರಾ ಸಾಮಾನ್ಯವಾಗಿದೆ. ಈ ಮಾದರಿ ಸೈಬರ್ ವಂಚನೆಯಿಂದ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿರುವ ಪ್ರಕರಣಗಳು ಕರ್ನಾಟಕದಲ್ಲಿಯೂ ನಡೆದಿವೆ. ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ್ದಾರೆ. ಕರ್ನಾಟಕದ ಪ್ರಕರಣವನ್ನು ಉಲ್ಲೇಖ ಮಾಡಿ ಈ ಕುರಿತು ಎಚ್ಚರಿಕೆಯಿಂದ ಇರುವ ಕುರಿತು ಜನರಿಗೆ ಸಂದೇಶವನ್ನು ನೀಡಿದ್ದಾರೆ.
ಡಿಜಿಟಲ್ ಅರೆಸ್ಟ್ ಅನ್ನೋ ಕಾನೂನು ಇಲ್ಲ!
'ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಅನ್ನೋ ವ್ಯವಸ್ಥೆಯೇ ಇಲ್ಲ. ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎನ್ನುವುದು ಬರೀ ಸುಳ್ಳು. ಕ್ರಿಮಿನಲ್ ಗ್ಯಾಂಗ್ಗಳು, ವಂಚಕರು ಮಾಡುವ ಕೆಲಸವದು' ಎಂದು ನರೇಂದ್ರ ಮೋದಿ ಹೇಳಿದರು. ಆನ್ಲೈನ್ ವಂಚನೆ ಹೇಗಿರುತ್ತದೆ ಎನ್ನುವ ನಿದರ್ಶನಗಳನ್ನೂ ಮೋದಿ ಅವರು ನೀಡಿದರು. ಪೊಲೀಸ್, ಸಿಬಿಐ, ನಾರ್ಕೋಟಿಕ್ಸ್, ಆರ್ಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಫೋನ್ ಮಾಡಬಹುದು.
ನಿಮ್ಮ ಮಗಳು ದಿಲ್ಲಿಯಲ್ಲಿ ಓದುತ್ತಿದ್ದಾರೆ ಅಲ್ವಾ? ಇತ್ಯಾದಿ ನಿಮ್ಮ ವೈಯಕ್ತಿಕ ಜೀವನದ ಮಾಹಿತಿಯನ್ನು ಅವರು ಪತ್ತೆ ಮಾಡುತ್ತಾರೆ. ನಿಮ್ಮ ಮೇಲೆ ಕೇಸ್ ದಾಖಲಿಸಲಾಗುತ್ತಿದೆ ಇತ್ಯಾದಿ ಬೆದರಿಕೆ ಹಾಕಬಹುದು ಎಂದು ಅವರು ಉದಾಹರಣೆ ನೀಡಿದರು. ಸದ್ಯ ಮೋದಿಯವರು ಹೇಳಿದ ವಂಚನಾ ಜಾಲದ ಸಂಗತಿ ಕರ್ನಾಟಕದಲ್ಲಿ ಕೂಡ ಹಲವು ಬಾರಿ ನಡೆದಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಹಲವು ಕಡೆ ನಡೆದಿದೆ. ಹಾಗಾಗಿ ಇದೇ ಕಾರಣಕ್ಕೆ ಮೋದಿಯವರು ಕರ್ನಾಟಕದ ಉದಾಹರಣೆಯನ್ನು ನೀಡುವ ಮೂಲಕ ಸೈಬರ್ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.
ಮೂರು ಅಂಶಗಳ ಸೂತ್ರ ತಿಳಿಸಿದ ಮೋದಿ
ಡಿಜಿಟಲ್ ಯುಗದಲ್ಲಿ ಜನರನ್ನು ಎಚ್ಚರಿಸು ಸಲುವಾಗಿ ಮೋದಿಯವರು ಮೂರು ಸೂತ್ರಗಳನ್ನು ಕೂಡ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಮೋದಿಯವರು, ಯಾವ ಏಜೆನ್ಸಿಯೂ ಫೋನ್ನಲ್ಲಿ ವಿಡಿಯೋ ಕಾಲ್ ಇತ್ಯಾದಿ ಕರೆ ಮಾಡುವುದಿಲ್ಲ. ಕರೆ ಮಾಡಿದವರು ಯಾವುದಾದರೂ ಹಣಕಾಸು ಮತ್ತು ವೈಯಕ್ತಿಕ ಮಾಹಿತಿ ಕೇಳಿದರೆ ಹುಷಾರಾಗಿರಿ. ಮಾಹಿತಿ ನೀಡಬೇಡಿ. ನೀವು ಯಾವುದಕ್ಕೂ ಕರೆ ರೆಕಾರ್ಡ್ ಮಾಡಿಕೊಂಡಿರಿ.
ವಂಚಕ ಕರೆ ಎನಿಸಿದಾಗ ಮೂರು ಅಂಶಗಳನ್ನು ಗಮನದಲ್ಲಿಡಿ. ಮೊದಲೆಯದು, ಕಾಯುವುದು. ಎರಡನೆಯದು, ಯೋಚಿಸುವುದು. ಮೂರನೆಯದು ಆ್ಯಕ್ಷನ್ ಎಂದು ಪ್ರಧಾನಿಗಳು ಮಾಹಿತಿ ನೀಡಿದರು. ಸೈಬರ್ ಕ್ರೈಮ್ ಹೆಲ್ಪ್ಲೈನ್ ನಂಬರ್ 1930 ಮತ್ತು cybercrime.gov.in ವೆಬ್ಸೈಟ್ನಲ್ಲಿ ದೂರು ಕೊಡಿ. #SaveDigitalIndia ಅನ್ನೋ ಹ್ಯಾಷ್ಟ್ಯಾಗ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜಾಗ್ರತೆ ಮೂಡಿಸಿ ಎಂದು ನರೇಂದ್ರ ಮೋದಿ ತಮ್ಮ ರೇಡಿಯೋ ಕಾರ್ಯಕ್ರಮದಲ್ಲಿ ತಿಳಿಸಿದರು.
ಅನಿಮೇಶನ್ನಲ್ಲಿ ಭಾರತ ಮಿಂಚುತ್ತಿದೆ
ಸದ್ಯ ಭಾರತ ವಿಶ್ವದ ದೇಶಗಳಿಗೆ ಹೋಲಿಕೆ ಮಾಡಿದರೆ ಡಿಜಿಟಲ್ ಕ್ರಾಂತಿಯತ್ತ ಭಾರೀ ವೇಗದಲ್ಲಿ ಮುನ್ನುಗ್ಗುತ್ತಿದೆ. ಇದೇ ಕಾರಣಕ್ಕಾಗಿ ವಿಶ್ವದ ಇತರೆಡೆಗಳಿಗಿಂತ ಭಾರತದಲ್ಲೇ ಹೆಚ್ಚಿನ ಸೈಬರ್ ವಂಚನಾ ಜಾಲ ಸಕ್ರೀಯವಾಗಿದೆ. ಈ ಹಿನ್ನೆಲೆಯಲ್ಲಿ ಮೋದಿಯವರು ಜನರನ್ನು ಎಚ್ಚರಿಸುವ ಕಾರ್ಯ ನಡೆಸುತ್ತಿದ್ದಾರೆ. ಇನ್ನು ಸೈಬರ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಭಾರತದ ಅನಿಮೇಶನ್ ವಿಕಾಸದ ಬಗ್ಗೆ ಕೂಡ ಮೋದಿ ಮಾತನ್ನಾಡಿದ್ದಾರೆ.
ʻಭಾರತದ ಕಾರ್ಟೂನುಗಳು ಈಗ ಜಾಗತಿಕವಾಗಿ ಜನಪ್ರಿಯವಾಗಿವೆ. ಗೇಮಿಂಗ್ ಕ್ಷೇತ್ರದಲ್ಲಿ ಭಾರತ ಮುಂಚೂಣಿಗೆ ಬರುತ್ತಿದೆ. ಭಾರತೀಯ ಗೇಮರ್ಗಳನ್ನು ಭೇಟಿ ಮಾಡಿದೆ. ಅನಿಮೇಶನ್ ಕ್ಷೇತ್ರದಲ್ಲಿ ಭಾರತೀಯರು ಸಾಧನೆ ಮಾಡುತ್ತಿದ್ದಾರೆ. ಸ್ಪೈಡರ್ಮ್ಯಾನ್, ಟ್ರಾನ್ಸ್ಫಾರ್ಮರ್ಸ್ನ ಅನಿಮೇಶನ್ಗಳಲ್ಲಿ ಭಾರತದ ಹರಿನಾರಾಯಣ್ ರಾಜೀವ್ ಅವರ ಪಾತ್ರ ದೊಡ್ಡದು. ಅನಿಮೇಶನ್ ಕ್ಷೇತ್ರ ಇತರ ಕ್ಷೇತ್ರಗಳಿಗೆ ಪೂರಕವಾಗಿ ಬೆಳೆಯುತ್ತಿದೆ.
ವರ್ಚುವಲ್ ರಿಯಾಲಿಟಿ ಜನಪ್ರಿಯವಾಗುತ್ತಿದೆ. ವರ್ಚುವಲ್ ಟೂರ್ಗಳು ಚಾಲನೆಯಲ್ಲಿವೆ. ವಿಆರ್ ಡೆವಲಪರ್ಸ್, ಗೇಮ್ ಡೆವಲಪರ್ಸ್ ಇತ್ಯಾದಿ ಉದ್ಯೋಗಗಳು ಸೃಷ್ಟಿಯಾಗಿವೆ. ಅಕ್ಟೋಬರ್ 28, ವರ್ಲ್ಡ್ ಅನಿಮೇಶನ್ ಡೇ ಆಚರಿಸಲಾಗುತ್ತದೆ. ಭಾರತವನ್ನು ಜಾಗತಿಕ ಅನಿಮೇಶನ್ ಪವರ್ ಆಗಿ ಮಾಡಬೇಕು ಎಂದು ಮೋದಿ ತಿಳಿಸಿದ್ದಾರೆ.


Click it and Unblock the Notifications