ವರ್ಷಕ್ಕೆ 6,000 ರೂ. ದೊರಕುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಗೆ ಸೇರ್ಪಡೆಗೊಳಿಸುವ ಹೊಸ ಅರ್ಜಿದಾರರು "ರೈತ ಗುರುತಿನ ಚೀಟಿ"ಯನ್ನು ಇನ್ಮುಂದೆ ಹೊಂದುವುದು ಕಡ್ಡಾಯ!
ಹೌದು ಭಾರತ ಸರ್ಕಾರವು ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಕೃಷಿ ಮತ್ತು ರೈತರ ಶ್ರೇಯೋಭಿವೃದ್ದಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯೂ ಒಂದು. ಪಿಎಂ- ಕಿಸಾನ್ ಯೋಜನೆಯು ಭಾರತದಾದ್ಯಂತ ಸಣ್ಣ ಮತ್ತು ಅತಿ ಸಣ್ಣ ಅರ್ಹ ರೈತರಿಗೆ ವಾರ್ಷಿಕವಾಗಿ ₹ 6,000 ನೇರ ಆರ್ಥಿಕ ಸಹಾಯವನ್ನು ಒದಗಿಸುತ್ತದೆ, ನೇರ ಲಾಭ ವರ್ಗಾವಣೆ (DBT) ವ್ಯವಸ್ಥೆಯ ಮೂಲಕ ತಲಾ ₹ 2,000 ರಂತೆ ಮೂರು ಸಮಾನ ಕಂತುಗಳಲ್ಲಿ ವಿತರಿಸಲಾಗುತ್ತದೆ . ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 19ನೇ ಕಂತು ಫೆಬ್ರವರಿ 2025ರ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ ಇದೀಗ ಪ್ರಧಾನಮಂತ್ರಿ-ಕಿಸಾನ್ ನೇರ ನಗದು ವರ್ಗಾವಣೆ ಕಾರ್ಯಕ್ರಮದ ಅಡಿಯಲ್ಲಿ ಹೊಸ ಅರ್ಜಿದಾರರ ನೋಂದಣಿ ಪ್ರಕ್ರಿಯೆಯಲ್ಲಿ ಕೇಂದ್ರ ಕೃಷಿ ಸಚಿವಾಲಯವು ಪ್ರಮುಖ ಬದಲಾವಣೆಯನ್ನು ಪ್ರಕಟಿಸಿದೆ. ಹೀಗಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ 'ಕಿಸಾನ್ ಪೆಹಚಾನ್ ಪತ್ರ' ಎಂದು ಕರೆಯಲಾಗುವ "ವಿಶಿಷ್ಟ ರೈತ ಐಡಿ" ಇನ್ಮುಂದೆ ಕಡ್ಡಾಯವಾಗಿದೆ.

ರೈತರ ಗುರುತಿನ ಚೀಟಿಯು ಅರ್ಜಿದಾರ ಕೃಷಿ ಭೂಮಿ ಹೊಂದಿರುವುದನ್ನು ದೃಢಪಡಿಸುವ ಕಾರಣ, ಪಿಎಂ- ಕಿಸಾನ್ ಯೋಜನೆ ನೋಂದಣಿ ಪ್ರಕ್ರಿಯೆಯೂ ಇದರಿಂದ ಸುಲಭವಾಗುತ್ತದೆ. ಹೀಗಾಗಿ, ಎಲ್ಲ ಹೊಸ ಅರ್ಜಿದಾರರೂ "ಫಾರ್ಮರ್ಸ್ ರಿಜಿಸ್ಟ್ರಿ'ಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಜ.1ರಿಂದಲೇ 10 ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಉಳಿದ ರಾಜ್ಯಗಳಲ್ಲೂ ಇದು ಜಾರಿಯಾಗಲಿವೆ ಎನ್ನಲಾಗಿದೆ.
ಏನಿದು ವಿಶಿಷ್ಟ ರೈತ ಐಡಿ ಕಾರ್ಡ್?
ರಾಜ್ಯ ಸರ್ಕಾರಗಳಿಗೆ ನೀಡಿದ ನಿರ್ದೇಶನದಲ್ಲಿ ಸಚಿವಾಲಯವು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಫಲಾನುಭವಿಗಳ ಹೆಸರಿನಲ್ಲಿ ಭೂಮಿಯ ರೂಪಾಂತರವನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಒತ್ತಿಹೇಳಿದೆ. ಕಿಸಾನ್ ಪೆಹಚಾನ್ ಪತ್ರ, ಅಥವಾ ಡಿಜಿಟಲ್ ಫಾರ್ಮರ್ ಐಡಿ, ನಿಜವಾದ ಭೂ-ಮಾಲೀಕ ರೈತರು ಮಾತ್ರ ಕಲ್ಯಾಣ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಅನನ್ಯ ಗುರುತಿನ ವ್ಯವಸ್ಥೆಯಾಗಿದೆ. ಆಧಾರ್ ರೀತಿಯ ವಿಶಿಷ್ಟ ಡಿಜಿಟಲ್ ಗುರುತಿನ ಸಂಖ್ಯೆ ಇದು ಹೊಂದಿದ್ದು ಇದರಲ್ಲಿ ರೈತನ ಹೆಸರು, ಭೂಮಿಯ ಮಾಹಿತಿ, ಆ ಭೂಮಿಯಲ್ಲಿ ಬೆಳೆಯಲಾಗುತ್ತಿರುವ ಬೆಳೆ, ಕೃಷಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಇತರ ಸಂಬಂಧಿತ ಡೇಟಾ ಮತ್ತಿತರ ವಿವರಗಳನ್ನು ಇರುತ್ತವೆ.
ರೈತ ಡಿಜಿಟಲ್ ಐಡಿಯ ಉದ್ದೇಶವೇನು?
ಡಿಜಿಟಲ್ ಐಡಿಗಳ ಮಾಡುವುದರಿಂದ ಇದು ಮುಂಬರುವ ವರ್ಷಗಳಲ್ಲಿ ಸರಿಸುಮಾರು 110 ಮಿಲಿಯನ್ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಐಡಿಗಳು ಸರ್ಕಾರಕ್ಕೆ ನೇರ ನಗದು ವರ್ಗಾವಣೆ, ಕೃಷಿ ಸಾಲ ಮಂಜೂರು, ಬೆಳೆ ವಿಮೆ ನೀಡಲು ಮತ್ತು ಬೆಳೆ ಇಳುವರಿಯನ್ನು ಹೆಚ್ಚು ನಿಖರವಾಗಿ ಊಹಿಸಲು ಸುಲಭವಾಗಿಸುತ್ತದೆ. ಫೆಬ್ರವರಿ 2019 ರಲ್ಲಿ ಪ್ರಾರಂಭವಾದಾಗಿನಿಂದ, ಪಿಎಂ-ಕಿಸಾನ್ ಯೋಜನೆಯು 18 ಕಂತುಗಳ ಮೂಲಕ ರೈತರಿಗೆ 3.46 ಲಕ್ಷ ಕೋಟಿ ರೂಪಾಯಿಗಳನ್ನು ವಿತರಿಸಿದೆ. ವರದಿಗಳ ಪ್ರಕಾರ, 19 ನೇ ಕಂತು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.
ಪಿಎಂ-ಕಿಸಾನ್ ಯೋಜನೆಗೆ ಕಡ್ಡಾಯವೇಕೆ?
ಪಿಎಂ-ಕಿಸಾನ್ ಯೋಜನೆಯ ಲಾಭ ಪಡೆಯುತ್ತಿರುವ 9.5 ಮಿಲಿಯನ್ ರೈತರಿಗೆ ವಾರ್ಷಿಕ 6,000 ರೂಪಾಯಿಗಳನ್ನು ಮೂರು ಸಮಾನ ಕಂತುಗಳಲ್ಲಿ ವಿತರಿಸಲಾಗುತ್ತದೆ. ಆದರೆ ಈಗಾಗಲೇ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿರುವ ರೈತರು ಯೋಜನೆಯ ನೋಂದಣಿಯಲ್ಲಿ ಮುಂದುವರಿಯುತ್ತಾರೆ. ಹೊಸ ಅರ್ಜಿದಾರರಿಗೆ, ರೈತರ ಗುರುತಿನ ಚೀಟಿ (ಫಾರ್ಮರ್ ಐಡಿ) ಭೂಮಿಯ ಮಾಲೀಕತ್ವದ ಐಡಿಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಪಿಎಂ-ಕಿಸಾನ್ ಯೋಜನೆ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ವಂಚನೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಪಿಎಂ-ಕಿಸಾನ್ ಅಡಿಯಲ್ಲಿ ಹೊಸ ಫಲಾನುಭವಿಗಳ ನೋಂದಣಿಗೆ ರೈತ ಐಡಿಯನ್ನು ಕಡ್ಡಾಯಗೊಳಿಸಿರುವ 10 ರಾಜ್ಯಗಳೆಂದರೆ ಆಂಧ್ರ ಪ್ರದೇಶ , ಅಸ್ಸಾಂ, ಬಿಹಾರ, ಛತ್ತೀಸ್‌ಗಢ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ , ಒಡಿಶಾ , ರಾಜಸ್ಥಾನ ಮತ್ತು ಉತ್ತರ ಪ್ರದೇಶ. ಈ 10 ರಾಜ್ಯಗಳು 11 ಕೋಟಿ ಪಿಎಂ-ಕಿಸಾನ್ ಫಲಾನುಭವಿಗಳಲ್ಲಿ ಸುಮಾರು 84 ಪ್ರತಿಶತ (9.25 ಕೋಟಿ) ಪಾಲನ್ನು ಹೊಂದಿವೆ.


Click it and Unblock the Notifications