ಬೆಂಗಳೂರು, ಮಾರ್ಚ್ 21: ಭಾರತದ ಆರ್ಥಿಕ ಪರಿಸ್ಥಿತಿ ಅತ್ಯುತ್ತಮ ಮಟ್ಟಕ್ಕೆ ಹೋಗುತ್ತಿದ್ದು, ಜಾಗತಿಕವಾಗಿ ಭಾರತದ ಆರ್ಥಿಕ ಸ್ಥಿತಿಗತಿ ಗಟ್ಟಿಯಾಗುತ್ತಿದೆ. ಇದೇ ಕಾರಣಕ್ಕೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಈಗ ಭಾರತ ಟಾಪ್-5 ದೇಶಗಳ ಪೈಕಿ ಒಂದಾಗಿದ್ದು, ಇನ್ನೇನು ಕೆಲವೇ ವರ್ಷಗಳಲ್ಲಿ ಭಾರತವು ಜಗತ್ತಿನ ಟಾಪ್-3 ಆರ್ಥಿಕತೆಗಳ ಪೈಕಿ ಒಂದಾಗಲಿದೆ. ಈ ರೀತಿ ಭಾರತದ ಆರ್ಥಿಕ ಪರಿಸ್ಥಿತಿ ಗಟ್ಟಿಯಾಗಲು ತೆರಿಗೆ ಕಟ್ಟುವ ಭಾರತೀಯರ ಶ್ರಮ ಕೂಡ ದೊಡ್ಡದಾಗಿದ್ದು, ಇದೀಗ ನೇರ ತೆರಿಗೆ ಸಂಗ್ರಹದಲ್ಲೂ ಹೊಸ ದಾಖಲೆ ಸೃಷ್ಟಿಯಾಗಿದೆ.
ಕೇಂದ್ರ ಸರ್ಕಾರಕ್ಕೆ ಅತಿಹೆಚ್ಚು ಆದಾಯ ಬರುವ ವಿಭಾಗದಲ್ಲಿ ನೇರ ತೆರಿಗೆ ಸಂಗ್ರಹ ಕೂಡ ಒಂದಾಗಿದೆ. ಈ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ಕೂಡ ಅಲರ್ಟ್ ಆಗಿ ಎಲ್ಲರ ಮೇಲೆ, ವಹಿವಾಟುಗಳ ಮೇಲೆ ಕಣ್ಣಿಟ್ಟು ಕೂರುತ್ತದೆ. ಇತ್ತೀಚಿನ ದಿನಗಳಲ್ಲಿ ತೆರಿಗೆ ವಸೂಲಿಗೋಸ್ಕರ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಪರಿಣಾಮ ಎನ್ನುವಂತೆ ಭಾರತ ದೇಶದಲ್ಲಿ, 2023-24ನೇ ಆರ್ಥಿಕ ವರ್ಷದಲ್ಲಿ ಮಾರ್ಚ್ 17ರ ತನಕ ಒಟ್ಟಾರೆ ನೇರ ತೆರಿಗೆ ನಿವ್ವಳ ಸಂಗ್ರಹವು ₹18.90 ಲಕ್ಷ ಕೋಟಿಗೆ ತಲುಪಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ತೆರಿಗೆ ಆದಾಯ ಭರ್ಜರಿ ಏರಿಕೆ
ಹೀಗೆ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ನೇರ ತೆರಿಗೆ ಸಂಗ್ರಹದಲ್ಲಿ ಶೇ 19.88 ರಷ್ಟು ಏರಿಕೆ ಆಗಿದೆ. ಒಟ್ಟು ₹18,90,259 ಕೋಟಿ ನೇರ ತೆರಿಗೆ ಸಂಗ್ರಹ ಆಗಿದೆ. ಈ ಪೈಕಿ ಕಂಪನಿಗಳ ವರಮಾನ ತೆರಿಗೆ (ಸಿಐಟಿ) & ವೈಯಕ್ತಿಕ ಆದಾಯ ತೆರಿಗೆಯು (ಪಿಐಟಿ) ₹9,14,469 ಕೋಟಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಲಾಗಿದೆ. ಇದರ ಜೊತೆಯಲ್ಲಿ ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಮೊತ್ತವೇ ₹9,72,224 ಕೋಟಿ ಆಗಿದೆ. ಈವರೆಗೆ ಒಟ್ಟು 3.37 ಲಕ್ಷ ಕೋಟಿಯನ್ನು ಮರುಪಾವತಿ ಅಂದರೆ ರೀಫಂಡ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ದೇಶದ ಅಭಿವೃದ್ಧಿಗೂ ಆಧಾರ
ಹಾಗೇ ಈ ಹಿಂದಿನ ಆರ್ಥಿಕ ವರ್ಷದ ಮಾಹಿತಿ ನೋಡುವುದಾದರೆ, 2022-23ರ ಹಣಕಾಸು ವರ್ಷದಲ್ಲಿ ₹15,76,776 ಕೋಟಿ ತೆರಿಗೆ ಸಂಗ್ರಹ ಆಗಿತ್ತು. ಈ ಬಗ್ಗೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಅರ್ಥಾತ್ ಸಿಬಿಡಿಟಿ ಮಾಹಿತಿಯನ್ನ ನೀಡಿದೆ. ಹಾಗೇ ಕೇಂದ್ರ ಸರ್ಕಾರ 2023-24ನೇ ಹಣಕಾಸು ವರ್ಷದಲ್ಲಿ ₹19.45 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಲು ಗುರಿ ಪರಿಷ್ಕರಿಸಿತ್ತು. ಇದೀಗ ಹೊಸ ದಾಖಲೆ ಬರೆದಿದೆ ತೆರಿಗೆ ಸಂಗ್ರಹ ವಿಚಾರ. ಈ ಮೂಲಕ ಭಾರತದ ಅಭಿವೃದ್ಧಿಗೂ ಇದರಿಂದ ಸಾಕಷ್ಟು ಸಹಾಯ ಆಗುತ್ತಿದೆ.
ಒಟ್ನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಗೆ ತೆರಿಗೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೀಗೆ ಸರ್ಕಾರಕ್ಕೆ ಆದಾಯ ಬಂದಾಗಷ್ಟೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ. ಹೀಗಾಗಿ ಇದೀಗ ತೆರಿಗೆ ಸಂಗ್ರಹ ವಿಚಾರದಲ್ಲಿ ಮಹತ್ವದ ಬೆಳವಣಿಗೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲೂ ಇದೇ ರೀತಿ ಹೆಚ್ಚಿನ ತೆರಿಗೆ ಸಂಗ್ರಹದ ಮೂಲಕ ಹೊಸ ದಾಖಲೆ ನಿರ್ಮಾಣ ಆಗುವುದಂತು ಪಕ್ಕಾ ಎನ್ನಲಾಗುತ್ತಿದೆ.


Click it and Unblock the Notifications