ಬೆಂಗಳೂರು, ಜುಲೈ 19: ಎನ್‌ಡಿಎ ನೇತೃತ್ವದ ಮೂರನೇ ಅವಧಿಯ ಕೇಂದ್ರ ಬಜೆಟ್ ಮಂಡನೆಗೆ ಇನ್ನು ಕೇವಲ ಬೆರಳೆಣಿಕೆ ದಿನಗಳಷ್ಟೇ ಬಾಕಿಯಿದೆ. ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಅನ್ನು ಪಾರ್ಲಿಮೆಂಟ್‌ನಲ್ಲಿ ಮಂಡಿಸಲಿದ್ದಾರೆ. ಆದರೆ, ಈ ಬಾರಿಯ ಬಜೆಟ್ ಬಗ್ಗೆ ತೆರಿಗೆ ಪಾವತಿದಾರರು ಹಾಗೂ ಉದ್ಯಮಿಗಳಿಗೆ ಮಾತ್ರವಲ್ಲ ಜನಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ಅದರಲ್ಲಿಯೂ ಈ ದೇಶದ ಹಿರಿಯ ನಾಗರಿಕರು ಈ ಬಜೆಟ್‌ನಲ್ಲಿ ಬರಪೂರ ನಿರೀಕ್ಷೆಗಳನ್ನು ಹೊತ್ತು ಕುಳಿತಿದ್ದಾರೆ.
ಈ ಸಲದ ಬಜೆಟ್‌ನಲ್ಲಿ ಹಿರಿಯ ನಾಗರಿಕರು ತಮಗೆ ಈ ಹಿಂದೆ ಲಭ್ಯವಾಗುತ್ತಿರುವ ರೈಲ್ವೆ ಪ್ರಯಾಣ ದರದಲ್ಲಿನ ರಿಯಾಯಿತಿಯನ್ನು ಪುನರಾರಂಭಿಸಬಹುದು ಎನ್ನುವ ಆಶಾವಾದವನ್ನು ಹೊಂದಿದ್ದಾರೆ. ಪ್ರತಿ ಸಲವೂ ಬಜೆಟ್ ಮಂಡನೆ ಹತ್ತಿರವಾಗುತ್ತಿದ್ದಂತೆ ರೈಲ್ವೆ ಟಿಕೆಟ್ ದರದಲ್ಲಿನ ರಿಯಾಯಿತಿ ಬಗ್ಗೆ ಹಿರಿಯ ನಾಗರಿಕರ ಈ ಬೇಡಿಕೆಯು ಮುನ್ನೆಲೆಗೆ ಬರುತ್ತದೆ. ದೇಶವ್ಯಾಪಿಯಾಗಿ ಹಿರಿಯ ನಾಗರಿಕೆ ರೈಲು ಪ್ರಯಾಣದ ಟಿಕೆಟ್‌ನಲ್ಲಿ ಈ ಹಿಂದೆ ರಿಯಾಯಿತಿಯನ್ನು ಘೋಷಣೆ ಮಾಡಲಾಗಿತ್ತು. ಆದರೆ, ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ 2019ರಲ್ಲಿ ಈ ರಿಯಾಯಿತಿ ಕೊಡುಗೆಯನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿತ್ತು.

ಅಂದರೆ 2020ರ ಮಾರ್ಚ್ 20ರಂದು ದೇಶದೆಲ್ಲೆಡೆ ಲಾಕ್‌ಡೌನ್ ಜಾರಿಯಾಗಿದ್ದಾಗ ರೈಲ್ವೆ ಸಚಿವಾಲಯವು ಹಿರಿಯ ನಾಗರಿಕರಿಗೆ ಲಭ್ಯವಾಗುತ್ತಿದ್ದ ಡಿಸ್ಕೌಂಟ್ ಸೌಲಭ್ಯವನ್ನು ರದ್ದುಪಡಿಸಿತ್ತು. ಕೊರೊನಾ ಸೋಂಕು ವ್ಯಾಪಿಸುವುದಕ್ಕೂ ಮೊದಲು ದೇಶದಲ್ಲಿ ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ರೈಲು ಪ್ರಯಾಣದ ಸಂದರ್ಭದಲ್ಲಿ ಟಿಕೆಟ್‌ಗಳ ಮೇಲೆ ರಿಯಾಯಿತಿಯನ್ನು ನೀಡಲಾಗುತ್ತಿತ್ತು. ಮಹಿಳಾ ಹಿರಿಯ ನಾಗರಿಕರು ಈ ಹಿಂದೆ ಪ್ರತಿ ಪ್ರಯಾಣದ ರೈಲು ಟಿಕೆಟ್‌ಗಳ ಮೇಲೆ ಶೇ.50ರಷ್ಟು ರಿಯಾಯಿತಿ ಪಡೆಯುತ್ತಿದ್ದರು. ಅದೇರೀತಿ ಪುರುಷ ಹಿರಿಯ ನಾಗರಿಕರು ಹಾಗೂ ತೃತೀಯ ಲಿಂಗದವರು ಶೇ.40ರಷ್ಟು ರಿಯಾಯಿತಿ ಟಿಕೆಟ್ ದರಗಳ ಮೇಲೆ ಪಡೆಯುತ್ತಿದ್ದರು. ರಿಯಾಯಿತಿ ಸೇವೆಯು ರಾಜಧಾನಿ, ಶತಾಬ್ಧಿ ಸೇರಿದಂತೆ ಎಲ್ಲ ಎಕ್ಸ್‌ಪ್ರೆಸ್ ಹಾಗೂ ಮೈಲ್ ರೈಲುಗಳಲ್ಲಿ ಲಭ್ಯವಿತ್ತು.
ಆದರೆ, 2020ರಲ್ಲಿ ಈ ಸೇವೆಯನ್ನು ರದ್ದುಗೊಳಿಸಿದ ಬಳಿಕ ಹಿರಿಯ ನಾಗರಿಕರು ಕೂಡ ಇತರ ಪ್ರಯಾಣಿಕರಂತೆ ಯಾವುದೇ ಪ್ರಯಾಣಕ್ಕೆ ಪೂರ್ಣ ದರವನ್ನು ಪಾವತಿಸಬೇಕು. ರೈಲ್ವೆ ಪ್ರಕಾರ, 60 ವರ್ಷ ಮೇಲ್ಪಟ್ಟ ಪುರಷ ಹಾಗೂ 58 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರು ಹಾಗೂ ತೃತೀಯ ಲಿಂಗೀಯರು ಈ ರಿಯಾಯಿತಿ ರೈಲು ಪ್ರಯಾಣಕ್ಕೆ ಅರ್ಹರಾಗಿದ್ದರು.
ಇನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಹಿರಿಯ ನಾಗರಿಕರ ಡಿಸ್ಕೌಂಟ್ ಪ್ರಯಾಣ ದರ ರದ್ದುಗೊಳಿಸಿದ ಬಳಿಕ ರೈಲ್ವೆಗೂ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಆರ್‌ಟಿಐ ಮಾಹಿತಿಯಂತೆ ರೈಲ್ವೆಯು ಸುಮಾರು 8 ಕೋಟಿ ಹಿರಿಯ ನಾಗರಿಕರಿಗೆ ಈ ರೈಲು ಪ್ರಯಾಣ ರಿಯಾಯಿತಿ ಸೇವೆಯನ್ನು ನೀಡಿರಲಿಲ್ಲ. ಇದರಿಂದ ಸುಮಾರು 5800 ಕೋಟಿ ರೂ. ಹೆಚ್ಚುವರಿ ಆದಾಯ ಕೂಡ ಬಂದಿದೆ. ಇದರಲ್ಲಿ ಸಬ್ಸಿಡಿ ಕಡಿತದಿಂದ ಸಂಗ್ರಹಗೊಂಡಿರುವ 2,242 ಕೋಟಿ ರೂ. ಕೂಡ ಸೇರಿದೆ.


Click it and Unblock the Notifications