ನಾವು ಖರೀದಿಸುವ ಪ್ರತಿಯೊಂದು ವಸ್ತುವಿಗೂ ಹಾಗೂ ಪಡೆಯುವ ಪ್ರತಿಯೊಂದು ಸೌಲಭ್ಯಕ್ಕೂ ತೆರಿಗೆ ಕಟ್ಟುವುದು ಕಡ್ಡಾಯ. ಈ ತೆರಿಗೆ ಎನ್ನುವುದು ಸರ್ಕಾರವು ಸಾರ್ವಜನಿಕ ಸೇವೆಗಳನ್ನು ಮುನ್ನಡೆಸಲು ನಾಗರಿಕರಿಂದ ಸಂಗ್ರಹಿಸುವ ಹಣವಾಗಿರುತ್ತದೆ. ಸರ್ಕಾರ ರಸ್ತೆಗಳು, ಶಿಕ್ಷಣ, ಆರೋಗ್ಯ ಸೇವೆಗಳು, ಭದ್ರತಾ ವ್ಯವಸ್ಥೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಈ ಹಣವನ್ನು ಬಳಸುತ್ತದೆ. ಇನ್ನು ನಾವು ಪಾವತಿಸುವ ಪ್ರತ್ಯಕ್ಷ ತೆರಿಗೆಯಲ್ಲಿ ಹಕವಾರು ವಿಧಗಳಿವೆ. ಅಂದರೆ ಆದಾಯ ತೆರಿಗೆ, ಕಂಪನಿ ತೆರಿಗೆ, ವೃತ್ತಿ ಮೇಲೆ ಪಾವತಿಸುವ ತೆರಿಗೆ ಹಾಗೆಯೇ ಮುಂಗಡ ತೆರಿಗೆ.. ಈ ತೆರಿಗೆಗಳನ್ನು ಜನರು ಪ್ರತ್ಯಕ್ಷವಾಗಿ ಪಾವತಿಸುವುದಾಗಿದೆ. ಆದರೆ ಎಷ್ಟೋ ಜನಕ್ಕೆ ಈ ಮುಂಗಡ ತೆರಿಗೆ ಬಗ್ಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ಇಂದು ಗುಡ್ ರಿಟರ್ನ್ಸ್ ಕನ್ನಡದಲ್ಲಿ ಮುಂಗಡ ತೆರಿಗೆಯ ಕುರಿತು ಮಾಹಿತಿ ತಿಳಿಸಲಾಗಿದೆ.

ಮುಂಗಡ ತೆರಿಗೆ ಎಂದರೇನು..?
ಈ ಮುಂಗಡ ತೆರಿಗೆ ಎಂದರೆ ತೆರಿಗೆದಾರರು ತೆರಿಗೆದಾರರು ತಮ್ಮ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯದ ಆಧಾರದ ಮೇಲೆ, ಮುಂಗಡವಾಗಿ ತೆರಿಗೆ ಪಾವತಿಸುವ ವಿಧಾನವಾಗಿದೆ. ಅಂದರೆ ಸಾಮಾನ್ಯವಾಗಿ ವರ್ಷದ ಕೊನೆಯಲ್ಲಿ ಒಮ್ಮೆಲೇ ತೆರಿಗೆ ಪಾವತಿಸುತ್ತಾರೆ. ಆದರೆ ವರ್ಷದ ಕೊನೆಯಲ್ಲಿ ತೆರಿಗೆ ಪಾವತಿಸುವುದಕ್ಕಿಂತ ಮೊದಲೇ ಪಾವತಿಸುವ ತೆರಿಗೆ ವಿಧಾನಕ್ಕೆ ಮುಂಗಡ ತೆರಿಗೆ ಎನ್ನುತ್ತಾರೆ. ತೆರಿಗೆದಾರರು ತಮ್ಮ ನಿರ್ದಿಷ್ಟ ಆದಾಯವನ್ನು ಅಂದಾಜು ಮಾಡಿಕೊಂಡು ಆರ್ಥಿಕ ವರ್ಷದ ಪ್ರಗತಿಯಲ್ಲೇ ಹಂತ ಹಂತವಾಗಿ ಕಂತುಗಳಲ್ಲಿ ತೆರಿಗೆ ಪಾವತಿಸುವ ವಿಧಾನ. ಇದನ್ನು Pay as You Earn ಯೋಜನೆ ಎಂದು ಕೂಡ ಕರೆಯಲಾಗುತ್ತದೆ.
ಮುಂಗಡ ತೆರಿಗೆ ಯಾರು ಪಾವತಿಸಬೇಕು..?
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಅಥವಾ ಒಂದು ಕಂಪನಿಯ ಮೇಲೆ ಈ ಮುಂಗಡ ತೆರಿಗೆ ಪಾವತಿಸುವ ಜವಾಬ್ದಾರಿ ಇರುತ್ತದೆ. ಅಂದರೆ ಅವರ ತೆರಿಗೆ ಹೊಣೆಗಾರಿಕೆ ₹10,000 ಅಥವಾ ಅದಕ್ಕಿಂತ ಹೆಚ್ಚು ಇದ್ದರೆ, ಅವರು ಮುಂಗಡ ತೆರಿಗೆ ಪಾವತಿಸಬೇಕಾಗುತ್ತದೆ. ಹಾಗೆಯೇ ಆದಾಯ ತೆರಿಗೆ ಮನ್ನಾ ಪಡೆದಿರುವ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಉದ್ಯೋಗ ಅಥವಾ ವೃತ್ತಿಪರ ಆದಾಯವಿಲ್ಲದೆ ಇದ್ದರೆ, ಅವರು ಮುಂಗಡ ತೆರಿಗೆಯಿಂದ ವಿನಾಯಿತರಾಗುತ್ತಾರೆ.
ಮುಂಗಡ ತೆರಿಗೆ ಪಾವತಿಸುವುದು ಹೇಗೆ..?
ಮುಂಗಡ ತೆರಿಗೆ ಪಾವತಿಸುವವರು ಚಲನ್ ಸಂಖ್ಯೆ ITNS 280 ಬಳಸಿಕೊಂಡು, ಮುಂಗಡ ತೆರಿಗೆಯನ್ನು ಆನ್‌ಲೈನ್ ಅಥವಾ ಬ್ಯಾಂಕ್‌ಗಳ ಮೂಲಕ ಆಫ್‌ಲೈನ್‌ನಲ್ಲಿ ಪಾವತಿಸಬಹುದು. ಹಾಗೂ ಸೆಕ್ಷನ್ 44AB ಅಡಿಯಲ್ಲಿ ತೆರಿಗೆ ಲೆಕ್ಕಪರಿಶೋಧನೆಗೆ ಒಳಪಡುವ ಕಂಪನಿಗಳು ಹಾಗೂ ವ್ಯಕ್ತಿಗಳು ಪಾವತಿಸುತ್ತಾರೆ. ಅದು ಕೂಡ ಆನ್‌ಲೈನ್‌ನಲ್ಲಿ ಪಾವತಿಸಬೇಕು.
ಮುಂಗಡ ತೆರಿಗೆ ಪಾವತಿಸಲು ಇರುವ ಕೊನೆಯ ದಿನಾಂಕ..?
ಈ ಮುಂಗಡ ತೆರಿಗೆಯನ್ನು ನಾಲ್ಕು ತಿಂಗಳುಗಳ ಕಂತಿನಲ್ಲಿ ಪಾವತಿಸಬೇಕಾಗಿರುತ್ತದೆ. ಮುಖ್ಯವಾಗಿ ನೀವು ಪ್ರತಿಯೊಂದು ಹಂತದಲ್ಲಿ ಪಾವತಿಸಬೇಕಾದ ನಿಗದಿತ ಶೇಕಡಾವಾರು ಮೊತ್ತ ಇರುತ್ತದೆ.
- ಅಂದರೆ ಮೊದಲ ಕಂತಿನಲ್ಲಿ ಮುಂಗಡ ತೆರಿಗೆ ಪಾವತಿಸಲು ಜೂನ್ 15 ಕೊನೆಯ ದಿನಾಂಕ ಎನ್ನಲಾಗಿದೆ. ಹಾಗೆಯೇ ಪಾವತಿಸಬೇಕಾದ ಮುಂಗಡ ತೆರಿಗೆಯ ತೆರಿಗೆ ಮೊತ್ತ 15% ಎನ್ನಲಾಗಿದೆ.
- ಎರಡನೇ ಕಂತಿನಲ್ಲಿ ಮುಂಗಡ ತೆರಿಗೆ ಪಾವತಿಸಲು ಸೆಪ್ಟೆಂಬರ್ 15 ಕೊನೆಯ ದಿನಾಂಕ ಎನ್ನಲಾಗಿದೆ. ಹಾಗೆಯೇ ಪಾವತಿಸಬೇಕಾದ ಮುಂಗಡ ತೆರಿಗೆಯ ತೆರಿಗೆ ಮೊತ್ತ 45% ಎನ್ನಲಾಗಿದೆ.
- ಮೂರನೇ ಕಂತಿನಲ್ಲಿ ಮುಂಗಡ ತೆರಿಗೆ ಪಾವತಿಸಲು ಡಿಸೆಂಬರ್ 15 ಕೊನೆಯ ದಿನಾಂಕ ಎನ್ನಲಾಗಿದೆ. ಹಾಗೆಯೇ ಪಾವತಿಸಬೇಕಾದ ಮುಂಗಡ ತೆರಿಗೆಯ ತೆರಿಗೆ ಮೊತ್ತ 75% ಎನ್ನಲಾಗಿದೆ.
- ನಾಲ್ಕನೇ ಕಂತಿನಲ್ಲಿ ಮುಂಗಡ ತೆರಿಗೆ ಪಾವತಿಸಲು ಮಾರ್ಚ್ 15 ಕೊನೆಯ ದಿನಾಂಕ ಎನ್ನಲಾಗಿದೆ. ಹಾಗೆಯೇ ಪಾವತಿಸಬೇಕಾದ ಮುಂಗಡ ತೆರಿಗೆಯ ತೆರಿಗೆ ಮೊತ್ತ 100% ಎನ್ನಲಾಗಿದೆ.
ಮುಂಗಡ ತೆರಿಗೆ ಪಾವತಿ ಮಾಡದಿದ್ದರೆ ಏನಾಗುತ್ತದೆ?
ಮೊತ್ತ ಪೂರ್ತಿಯಾಗಿ ಪಾವತಿಸದಿದ್ದರೆ ಅಥವಾ ತಡವಾದರೆ, ಸೆಕ್ಷನ್ 234B ಮತ್ತು 234C ಅಡಿಯಲ್ಲಿ ತೆರಿಗೆದಾರರಿಗೆ ಬಡ್ಡಿ ಶುಲ್ಕ ವಿಧಿಸಲಾಗುತ್ತದೆ. ಅಂದರೆ 234B ಅಡಿಯಲ್ಲಿ ಮುಂಗಡ ತೆರಿಗೆ ಪಾವತಿಯಲ್ಲಿ ವಿಳಂಬವಾದರೆ ಬಡ್ಡಿ ಲೆಕ್ಕಹಾಕಲಾಗುತ್ತದೆ. 234Cರ ಪ್ರಕಾರ ಮುಂಗಡ ತೆರಿಗೆ ಕಂತುಗಳಲ್ಲಿ ಪಾವತಿಸದೆ ತಡ ಮಾಡಿದರೆ, ಅದಕ್ಕಾಗಿಯೂ ಬಡ್ಡಿ ವಿಧಿಸಲಾಗುತ್ತದೆ.
ಇನ್ನು ಸೆಕ್ಷನ್ 44AD / 44ADA ಅಡಿಯಲ್ಲಿ ಪ್ರಜಂಪ್ಟಿವ್ ತೆರಿಗೆ ಪೂರ್ವಭಾವಿ ತೆರಿಗೆ ಯೋಜನೆ ವ್ಯಾಪ್ತಿಗೆ ಬರುವವರು, ಮಾರ್ಚ್ 15ರೊಳಗೆ ತಮ್ಮ ಸಂಪೂರ್ಣ ಮುಂಗಡ ತೆರಿಗೆಯನ್ನು ಪಾವತಿಸಬೇಕು. ಮಾರ್ಚ್ 31ರೊಳಗೆ ಪಾವತಿಸಿದ ಯಾವುದೇ ತೆರಿಗೆಯನ್ನು ಮುಂಗಡ ತೆರಿಗೆ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಹೆಚ್ಚಿನ ತೆರಿಗೆ ಹೊಣೆಗಾರಿಕೆ ಇರುವವರು ಮುಂಗಡ ತೆರಿಗೆ ಪಾವತಿ ಮಾಡುವುದು ಕಡ್ಡಾಯವಾಗಿದೆ. ಆದರೆ ಅದನ್ನು ನಿಗದಿತ ದಿನಾಂಕಗಳ ಒಳಗೆ ಪಾವತಿಸಬೇಕು. ಈ ಮೂಲಕ ಬಡ್ಡಿ ಶುಲ್ಕ ಮತ್ತು ದಂಡ ತಪ್ಪಿಸಿಕೊಳ್ಳಬಹುದು. ಹಾಗೂ ಕಾನೂನುಬದ್ಧ ಲೆಕ್ಕಪರಿಶೋಧನೆಗೆ ಒಳಪಡುವವರಂತೂ ಆನ್‌ಲೈನ್ ಮೂಲಕ ಪಾವತಿ ಮಾಡುವುದು ಕಡ್ಡಾಯವಾಗಿದೆ.


Click it and Unblock the Notifications