ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಸುಪ್ರೀಂ ಕೋರ್ಟ್ ನಡುವಿನ ಸುಂಕದ ಸಮರ ನಿಲ್ಲುವಂತೆ ಕಾಣುತ್ತಿಲ್ಲ. ಸುಪ್ರೀಂ ಕೋರ್ಟ್ ವಿರುದ್ಧ ರೊಚ್ಚಿಗೆದ್ದಿರುವ ಟ್ರಂಪ್, ಇದೀಗ ಇತರ ದೇಶಗಳ ಮೇಲೂ ಸುಂಕದ ಹೇರಿಕೆಯಿಂದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಅಲ್ಲದೇ ಸುಪ್ರೀಂ ಕೋರ್ಟ್ ತೀರ್ಪನ್ನೂ ಕ್ಯಾರೇ ಮಾಡದ ಟ್ರಂಪ್ ತನ್ನ ಜೊತೆ ವ್ಯಾಪಾರ ಒಪ್ಪಂದ ಮಾಂಡಿಕೊಂಡಿರುವ ದೇಶಗಳ ಮೇಲೆ 15% ಸುಂಕ ಘೋಷಣೆ ಮಾಡಿದ್ದರು. ಅಲ್ಲದೇ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನೂ ಹಾಸ್ಯಾಸ್ಪದ ಎಂದು ಕರೆದು, ಯಾವುದೇ ದೇಶವು ಈ ತೀರ್ಪನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರೆ ಹೆಚ್ಚಿನ ಸುಂಕ ವಿಧಿಸುವುದಾಗ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್ ಹೇಳಿದ್ದೇನು?
ಇನ್ನು ಸುಂಕ ವಿಧಿಸಿದ ಬೆನ್ನಲ್ಲೇ "ಸುಪ್ರೀಂ ಕೋರ್ಟ್‌ನ ಹಾಸ್ಯಾಸ್ಪದ ತೀರ್ಪಿನಿಂದ ಯಾವುದೇ ದೇಶ ದುರುಪಯೋಗಪಡಿಸಿಕೊಂಡು, ಆಟವಾಡಲು ಬಯಸಿದರೆ, ಒಪ್ಪಂದ ಮಾಡಿಕೊಂಡಿದ್ದಕ್ಕಿಂತಲೂ ಹೆಚ್ಚಿನ ಸುಂಕ ಮತ್ತು ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು, ಟ್ರಂಪ್ ಆಕ್ರೋಶ!
ಫೆಬ್ರವರಿ 20 ರಂದು ಅಮೆರಿಕಾ ಸುಪ್ರೀಂ ಕೋರ್ಟ್ 6-3 ಅಂತರದ ತೀರ್ಪಿನಲ್ಲಿ ಟ್ರಂಪ್ ಅವರು IEEPA ಅಡಿಯಲ್ಲಿ ವಿಧಿಸಿದ್ದ ಜಾಗತಿಕ ಸುಂಕ ನೀತಿಗಳು ಅಕ್ರಮ, ಅಧ್ಯಕ್ಷರಿಗೆ ವಿಧಿಸುವ ಅಧಿಕಾರ ಇಲ್ಲ ಎಂದು ಮಹತ್ವದ ತೀರ್ಪು ನೀಡಿತ್ತು. ಆದ್ರೆ ಈ ತೀರ್ಪಿನಿಂದಾಗಿ ಅನೇಕ ದೇಶಗಳೊಂದಿಗೆ ಮಾಡಿಕೊಂಡ ಟ್ರೇಡ್ ಒಪ್ಪಂದಗಳು ಸಹ ಶೂನ್ಯವಾಗಿದೆ.
ಆದರೆ ಸುಪ್ರೀ ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಟ್ರಂಪ್ ಅವರು ತಕ್ಷಣವೇ ಬೇರೊಂದು ಕಾನೂನು ಅಧಿಕಾರ ಬಳಸಿಕೊಂಡು ತಕ್ಷಣ 10% ಜಾಗತಿಕ ಟ್ಯಾರಿಫ್ ವಿಧಿಸಿದರು ಮತ್ತು ನಂತರ ಅದನ್ನು 15% ಗೆ ಏರಿಕೆ ಮಾಡಿ, ಫೆ.24 ರಿಂದ ಜಾರಿಗೆ ಬರುವಂತೆ ಘೋಷಿಸಿದರು.
ಇನ್ನು ಸೋಮವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿದ್ದು, ಈ ವೇಳೆ ಯುಎಸ್-ಭಾರತ ಟ್ರೇಡ್ ಡೀಲ್ ಒಪ್ಪಂದ, ಸುಂಕ ಹೇರಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕ ಭಾರತದ ಆರ್ಥಿಕತೆಯ ಮೇಳೆ ಬೀರುವ ಪರಿಣಾಮದ ಬಗ್ಗೆ ಈಗಲೇ ಹೇಳೋದು ಕಷ್ಟ ಎಂಬ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ದ್ವಿಪಕ್ಷೀಯ ಒಪ್ಪಂದ ಬಗ್ಗೆ ಮಾತನಾಡಿದ ಸಚಿವೆ, ಆ ಬಗ್ಗೆ ವಾಣಿಜ್ಯ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಈಗಾಗಲೇ ಯುಎಸ್ ಮತ್ತು ಭಾರತ ನಡುವಿನ ದ್ವಿಪಕ್ಷೀಯ ಮಾತುಕತೆಗಳು ನಡೆಯುತ್ತಿತ್ತು. ಅಲ್ಲದೇ ಕಳೆದ ಬಾರಿ ಟ್ರಂಪ್ ಭಾರತ ವಿರುದ್ಧ ವಿಧಿಸಿದ್ದ 50% ಸುಂಕವನ್ನು 18% ಇಳಿಕೆ ಮಾಡಿದ್ದರು. ಆದ್ರೆ ಇದೀಗ ಮತ್ತೆ ಜಾಗತಿಕವಾಗಿ ತನ್ನ ಸುಂಕ ಹೇರಿಕೆಯನ್ನು ಶುರುಮಾಡಿದ್ದಾರೆ. ಅಲ್ಲದೇ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮತ್ತೆ ಆಕ್ರೋಶಗೊಂಡು, ಜಾಗತಿಕವಾಗಿ ಸುಂಕ ಹೇರಿದ್ದಲ್ಲದೇ, ಇದೀಗ ಬೆದರಿಕೆಯನ್ನೂ ಒಡ್ಡಿದ್ದಾರೆ. ಆದ್ದರಿಂದ ಮುಂದಿನ ನಿರ್ಧಾರದ ಬಗ್ಗೆ ಇಡೀ ವಿಶ್ವ ಕಾತುರದಲ್ಲಿದೆ.


Click it and Unblock the Notifications