ಅಮೆರಿಕಾದ 47ನೇ ಅಧ್ಯಕ್ಷನಾಗುವತ್ತ ದಾಪುಗಾಲಿಟ್ಟಿರುವ ಡೊನಾಲ್ಡ್ ಟ್ರಂಪ್ ಬಗ್ಗೆ ಬಹುಷಃ ಎಲ್ಲರಿಗೂ ಅರಿವಿದೆ. 2016ರಲ್ಲಿ ಮೊದಲ ಬಾರಿಗೆ ಅಮೆರಿಕಾ ಅಧ್ಯಕ್ಷರಾಗಿದ್ದ ಟ್ರಂಪ್ ಬಳಿಕ 2020ರಲ್ಲಿ ಕಾರಣಾಂತರಗಳಿಂದ ಸೋಲುಂಡಿದ್ದರು. ಸ್ವತಹ ಟ್ರಂಪ್ ಪ್ರಕಾರವೇ ಕೋವಿಡ್ ಕಾರಣದಿಂದ ಸೋಲುಂಡಿದ್ದೆ ಎಂದು ಪ್ರತಿಕ್ರಿಯೆ ನೀಡಿದ್ದರು.
ಇನ್ನು ಅಧ್ಯಕ್ಷ ಸ್ಥಾನ ಕಳಕೊಂಡ ಬಳಿಕ ಟ್ರಂಪ್ ವಿರುದ್ದ ಜೋ ಬೈಡೆನ್ ನೇತೃತ್ವದ ಸರ್ಕಾರ ಹತ್ತು ಹಲವು ಪ್ರಕರಣಗಳನ್ನು ದಾಖಲಿಸಿ, ಜೈಲಿಗಟ್ಟುವಲ್ಲಿ ಕೂಡ ಹರಸಾಹಸ ನಡೆಸಿತ್ತು. ಆದರೆ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತ ಟ್ರಂಪ್ ಇದೀಗ ಅಮೆರಿಕಾ ಅಧ್ಯಕ್ಷರಾಗುವತ್ತ ಹೆಜ್ಜೆ ಹಾಕಿದ್ದಾರೆ. ಇನ್ನು ಟ್ರಂಪ್ ಏನು ಹುಟ್ಟು ರಾಜಕಾರಣಿಯಲ್ಲ ಅಥವಾ ರಾಜಕಾರಣ ಕುಟುಂಬದಿಂದ ಬಂದವರಲ್ಲ.

ನೇರವಾಗಿ ಹೇಳುವುದಾದರೆ ಅವರೊಬ್ಬ ಪರಿಪೂರ್ಣ ರೀತಿಯ ಉದ್ಯಮಿಯಾಗಿದ್ದು, ರಾಜಕಾರಣಕ್ಕೆ ಎಂಟ್ರಿ ಕೂಡ ಅನಿರೀಕ್ಷಿತವಾಗಿತ್ತು. ಆದರೆ ಅನಿರೀಕ್ಷಿತ ವಿಚಾರಗಳಿಂದ ಪ್ರಭಾವಿತರಾಗದ ಟ್ರಂಪ್ ಇದೀಗ ಎರಡನೇ ಬಾರಿಗೆ ವಿಶ್ವದ ಶಕ್ತಿಶಾಲಿ ರಾಷ್ಟ್ರದ ಅಧ್ಯಕ್ಷರಾಗುವತ್ತ ಹೆಜ್ಜೆ ಇರಿಸಿದ್ದಾರೆ.
ಪಕ್ಕಾ ಉದ್ಯಮಿಯಾಗಿರುವ ಟ್ರಂಪ್
ಮೊದಲೇ ಹೇಳಿದಂತೆ ಟ್ರಂಪ್ ರಾಜಕಾರಣ ಪ್ರವೇಶಕ್ಕೂ ಮುನ್ನ ಯಶಸ್ವಿ ಉದ್ಯಮಿಯಾಗಿದ್ದು, ಈಗಲೂ ಮುಂದುವರೆದಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ನಿವ್ವಳ ಸಂಪತ್ತಿನ ಮೌಲ್ಯವು 6.49 ಶತಕೋಟಿ ಡಾಲರ್ ಆಗಿದೆ. ಆದರೆ ಇತ್ತೀಚಿಗೆ ನಡೆದ ಬೆಳವಣಿಗೆಯಿಂದಾಗಿ ಅವರ ಸಂಪತ್ತಿನ ಮೌಲ್ಯವು 1.5 ಪ್ರತಿಶತ ಅಂದರೆ 45.9 ಮಿಲಿಯನ್ ಡಾಲರ್‌ನಷ್ಟು ಕುಸಿತ ಕಂಡಿದೆ.
ಆದರೆ ವರ್ಷದಿಂದ ವರ್ಷದ ಅವರ ಬೆಳವಣಿಗೆ ಪ್ರಮಾಣವು 110 ಪ್ರತಿಶತ ಏರಿಕೆಯಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. DJT US ಇಕ್ವಿಟಿಯಲ್ಲಿನ ಟ್ರಂಪ್ ಅವರು ಹೆಚ್ಚಿನ ಪಾಲನ್ನು ಹೊಂದಿದ್ದಾರೆ. ವಿಶ್ವದ ಪ್ರತಿಷ್ಟಿತ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ ಒಬ್ಬರಾಗಿರುವ ಟ್ರಂಪ್ ಮುಂದೆ ಜಾಗತಿಕ ಮಟ್ಟದ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
ಯಾವೆಲ್ಲಾ ಕಂಪೆನಿಯಲ್ಲಿ ಷೇರು ಹೊಂದಿದ್ದಾರೆ?
ಇನ್ನು ಟ್ರಂಪ್ ಅವರು ತಮ್ಮ ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್‌ನ ಸುಮಾರು 57 ಪ್ರತಿಶತದಷ್ಟು ಪಾಲನ್ನು ಹೊಂದಿದ್ದಾರೆ. ಇದು ಟಿಕ್ಕರ್ DJT ಅಡಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತದೆ. ಅದರಲ್ಲೂ ಇತ್ತೀಚಿಗಿನ ದಿನಗಳಲ್ಲಿ ಕಂಪೆನಿಯಲ್ಲಿನ ಟ್ರಂಪ್ ಅವರ ಷೇರು ಗಣನೀಯ ಮಟ್ಟದಲ್ಲಿ ಏರಿಳಿಕೆಯನ್ನು ಕಂಡಿದೆ. ಇದೇ ವರ್ಷದ ಅಕ್ಟೋಬರ್ 29ರಂದು ಉತ್ತುಂಗದಲ್ಲಿದ್ದ DJT ಷೇರುಗಳು 51.51 ಡಾಲರ್‌ಗೆ ಏರಿದ್ದರಿಂದ ಟ್ರಂಪ್‌ನ ಪಾಲನ್ನು ಸರಿಸುಮಾರು 5.9 ಶತಕೋಟಿ ಡಾಲರ್ ಮೊತ್ತದ ಮೌಲ್ಯವನ್ನು ಹೊಂದಿದಂತಾಗಿತ್ತು.
ಆದರೆ ಇದರ ಹೊರತಾಗಿಯೂ ತೀವ್ರ ರೀತಿಯ ಷೇರು ಮಾರಾಟದ ನಂತರ ಮತ್ತು ನವೆಂಬರ್ 2, 2024 ರ ಹೊತ್ತಿಗೆ ಮೌಲ್ಯವು ಸುಮಾರು 3.5 ಶತಕೋಟಿ ಡಾಲರ್‌ಗೆ ಇಳಿದಿದೆ. ಈ ಮೂಲಕ ಕೇವಲ ಮೂರು ದಿನಗಳಲ್ಲಿ 2.4 ಶತಕೋಟಿ ಡಾಲರ್ ಕುಸಿತವನ್ನು ಗುರುತಿಸಿದೆ.
ಹಠಾತ್ ಬೆಲೆ ಕುಸಿತದಿಂದಾಗಿ ಚುನಾವಣಾ ದಿನದಂದು ವಹಿವಾಟು ಸ್ಥಗಿತಗೊಳ್ಳುವುದರೊಂದಿಗೆ ಸ್ಟಾಕ್ ತನ್ನ ಅಸ್ಥಿರತೆಯನ್ನು ಮುಂದುವರೆಸಿದೆ. ಇತ್ತೀಚಿನ ಮಾಹಿತಿಯಂತೆ, ಅಕ್ಟೋಬರ್ 29 ರ ಗರಿಷ್ಠದಿಂದ DJT ಷೇರುಗಳು ತಮ್ಮ ಮೌಲ್ಯದ ಸರಿಸುಮಾರು 34% ನಷ್ಟು ಕಳೆದುಕೊಂಡಿವೆ. ಈ ಚಂಚಲತೆಯ ಹೊರತಾಗಿಯೂ, DJT ಯಲ್ಲಿ ಟ್ರಂಪ್ ಅವರ ಪಾಲನ್ನು ಅವರ ಅತಿದೊಡ್ಡ ಏಕ ಹಣಕಾಸು ಆಸ್ತಿಯಾಗಿ ಉಳಿದಿದೆ.
ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿ ಟ್ರಂಪ್
ಇನ್ನು ಅವರು ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಆರಂಭಿಕ ಹಂತದಲ್ಲಿ ಇದರ ಮೂಲಕವೇ ಅವರು ಯಶಸ್ಸಿನ ಉತ್ತುಂಗಕ್ಕೆ ಏರಿದ್ದರು. ಟ್ರಂಪ್ ಅವರ ತಂದೆ ಫ್ರೆಡ್ ಟ್ರಂಪ್ ಅವರು ಪ್ರಮುಖ ನ್ಯೂಯಾರ್ಕ್ ಡೆವಲಪರ್ ಜೊತೆ ಕೆಲಸ ಮಾಡಿದ್ದು, ಬಳಿಕ ಕಂಪೆನಿಯನ್ನು ಸ್ಥಾಪಿಸಿದ್ದರು.
ಟ್ರಂಪ್‌ರ ಹಿಡುವಳಿಗಳಲ್ಲಿ ಫ್ಲೋರಿಡಾದ ಮಾರ್-ಎ-ಲಾಗೊ, ಮ್ಯಾನ್‌ಹ್ಯಾಟನ್‌ನಲ್ಲಿರುವ ಟ್ರಂಪ್ ಟವರ್ ಮತ್ತು 1290 ಅವೆನ್ಯೂ ಆಫ್ ದಿ ಅಮೆರಿಕಸ್‌ನಲ್ಲಿ $500 ಮಿಲಿಯನ್ ಪಾಲನ್ನು ಹೊಂದಿರುವಂತಹ ಉನ್ನತ-ಪ್ರೊಫೈಲ್ ಆಸ್ತಿಗಳು ಸೇರಿವೆ.
ಟ್ರಂಪ್ ನ್ಯಾಷನಲ್ ಡೋರಲ್ ಮಿಯಾಮಿ ಗಾಲ್ಫ್ ರೆಸಾರ್ಟ್ ಕೂಡ ಅವರ ಪ್ರಮುಖ ಆಸ್ತಿಗಳಲ್ಲಿ ಸ್ಥಾನ ಪಡೆದಿದೆ. ಇದರ ಇದರ ಮೌಲ್ಯ ಸುಮಾರು 300 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇತ್ತೀಚಿಗಿನ ದಿನಗಳಲ್ಲಿ ಟ್ರಂಪ್ ಅವರು ಕ್ರಿಪ್ಟೋಕರೆನ್ಸಿ ಮತ್ತು ಎನ್‌ಎಫ್‌ಟಿಗಳಂತಹ ಡಿಜಿಟಲ್ ಆಸ್ತಿಯಲ್ಲೂ ಹಣ ತೊಡಗಿಸಿರುವುದು ಕಂಡುಬಂದಿದೆ. 2023 ರಲ್ಲಿ, ಅವರು NFT ಪರವಾನಗಿಯಿಂದ 7.2 ಮಿಲಿಯನ್ ಡಾಲರ್ ಗಳಿಸಿದ್ದು, ಮತ್ತು ಸುಮಾರು 5 ಮಿಲಿಯನ್ ಡಾಲರ್ ವರ್ಚುವಲ್ ಆಸ್ತಿಯನ್ನು ಹೊಂದಿದ್ದಾರೆ.
ಒಟ್ಟಾರೆಯಾಗಿ, ಟ್ರಂಪ್ ಅವರ ಸಂಪತ್ತು ರಿಯಲ್ ಎಸ್ಟೇಟ್, ಡಿಜಿಟಲ್ ಸ್ವತ್ತುಗಳು, ರಾಯಧನ ಮತ್ತು ಹೂಡಿಕೆಗಳಿಗೆ ಹಂಚಿಹೋಗಿದೆ. ಆದರೆ ಬಹಳಷ್ಟು ಕಾನೂನು ತೊಡಕುಗಳು ಎದುರಾಗಿರುವುದರಿಂದ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ.


Click it and Unblock the Notifications