ಬೆಂಗಳೂರು, ಫೆಬ್ರವರಿ 9: ಭಾರತದಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು ಡಾ ಜಿಎಸ್‌ಕೆ ವೇಲು ಅವರ ಕೊಡುಗೆ ಅಪ್ರತಿಮವಾಗಿದೆ. ಇವರು ನಮ್ಮ ದೇಶವನ್ನು ವಿಶ್ವದ ಆರೋಗ್ಯ ನಕ್ಷೆಗೆ ತರುವ ಜವಾಬ್ದಾರಿಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿ ಸಮೀಪದ ಸಣ್ಣ ಹಳ್ಳಿಯಿಂದ ಬಂದ ಜಿಎಸ್‌ಕೆ ವೇಲು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಧುರೈ ಬಳಿಯ ತಮಿಳು ಶಾಲೆಯಲ್ಲಿ ಮಾಡಿದರು. ಜಿಎಸ್ ಕೆ ವೇಲು ಚಿಕ್ಕವರಿದ್ದಾಗ ಅವರಿಗೆ ಮಾತ್ರವಲ್ಲದೇ ಅವರ ಕುಟುಂಬದ ಎಲ್ಲರಿಗೂ ಅವರು ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಯಾಕೆಂದರೆ ಇದು ಸುರಕ್ಷಿತ ಮತ್ತು ಸ್ಥಿರವಾದ ವೃತ್ತಿ ಆಯ್ಕೆ ಎಂದು ಅವರೆಲ್ಲರೂ ಅಂದುಕೊಂಡಿದ್ದರು. ಆದರೆ ಅಂದು ಅವರಂದುಕೊಂಡದ್ದು ಕೈಗೂಡಲಿಲ್ಲ.

ಯಾಕೆಂದರೆ ವೈದ್ಯರಾಗಲು ಬಯಸಿದ್ದಅವರು ಕೆಲವೇ ಕೆಲವು ಅಂಕಗಳಿಂದ ವೈದ್ಯಕೀಯ ಓದಿಗೆ ಪ್ರವೇಶ ಪಡೆಯಲು ವಿಫಲರಾದರು. ಇದರಿಂದ ಧೃತಿಗೆಡದ ಡಾ. ವೇಲು ಪಿಲಾನಿಯ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (BITS) ನಿಂದ ಫಾರ್ಮಸಿಯಲ್ಲಿ ತಮ್ಮ ಬ್ಯಾಚುಲರ್ ಪದವಿ ಪೂರ್ಣಗೊಳಿಸಿದರು. ನಂತರ1991 ರಲ್ಲಿ, ಅವರು ಲೊಯೊಲಾ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ಗೆ ಪ್ರವೇಶ ಪಡೆದು ಅಲ್ಲಿ ತಮ್ಮಎಂಬಿಎ ಪದವಿ ಪಡೆದರು. ನಂತರ ಕೋಲ್ಕತ್ತಾದ IBAM ನಲ್ಲಿ ತಮ್ಮ ಪಿಎಚ್‌ಡಿ ಮಾಡಿದರು.
ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ವೇಲು ಉದ್ಯೋಗ ಅರಸಲು ಪ್ರಾರಂಭಿಸಿದರು. ಚೆನ್ನೈನಲ್ಲಿರುವ ಇನ್ಸ್ಟ್ರುಮೆಂಟ್ಸ್ ಮತ್ತು ಮೆಷಿನ್ಸ್ ಇಂಕ್ ಎಂಬ ವೈದ್ಯಕೀಯ ಸಲಕರಣೆಗಳ ವಿತರಣಾ ಏಜೆನ್ಸಿಯಲ್ಲಿ ಅವರು ತಮ್ಮ ವೃತ್ತಿಯನ್ನು ಆರಂಭಿಸಿದರು. ಈ ವೇಳೆ ಆ ಸಂಸ್ಥೆಯ ಮಾಲೀಕರು ವೇಲು ಅವರ ಕೆಲಸದಿಂದ ಪ್ರಭಾವಿತರಾಗಿ, 1989 ರಲ್ಲಿ ಅವರೊಂದಿಗೆ ಪಾಲುದಾರರಾಗಿ ಮತ್ತೊಂದು ಕಂಪನಿಯನ್ನು ಪ್ರಾರಂಭಿಸಲು ಮುಂದಾದರು. ಆಗ ಜಿಎಸ್‌ಕೆ ವೇಲು ಅವರಿಗೆ ಕೇವಲ 21 ವರ್ಷ ವಯಸ್ಸಾಗಿತ್ತು.
ಐದು ವರ್ಷಗಳ ಕಾಲ ಈ ಪಾಲುದಾರಿಕೆ ವ್ಯವಹಾರದಿಂದ ಸುಮಾರು 25 ಲಕ್ಷ ರೂಪಾಯಿಗಳನ್ನು ಉಳಿತಾಯ ಮಾಡಿ, ಕೊನೆಗೆ ತಮ್ಮದೇ ಆದ ಕಂಪನಿಯನ್ನು ಆರಂಭಿಸಲು ಮುಂದಡಿಯಿಟ್ಟರು. 1997 ರಲ್ಲಿ, ಜಿಎಸ್‌ಕೆ ವೇಲು ಜನಸಮಾನ್ಯರಿಗೆ ಕೈಗೆಟುಕುವ ಆರೋಗ್ಯ ಪರಿಹಾರಗಳನ್ನು ಒದಗಿಸುವ ವೈದ್ಯಕೀಯ ತಂತ್ರಜ್ಞಾನ ಕಂಪನಿಯಾದ ಟ್ರಿವಿಟ್ರಾನ್ (Trivitron) ಹೆಲ್ತ್‌ಕೇರ್ ಅನ್ನು ಪ್ರಾರಂಭಿಸಿದರು.
ವೈದ್ಯಕೀಯ ಸಾಧನಗಳ ವ್ಯಾಪಾರ ಕಂಪನಿಯಾಗಿ ಚೆನ್ನೈನಲ್ಲಿ ಚಿಕ್ಕದಾಗಿ ಪ್ರಾರಂಭಿಸಿದರು. ವೇಲು ಅವರ ಬಳಿ ಕೆಲಸ ಮಾಡಲು ಹೆಚ್ಚು ಜನರಿರಲಿಲ್ಲ. ಒಂದು ಪುಟ್ಟ ತಂಡವನ್ನು ನೇಮಿಸಿ ಅವರಿಗೆ ಸ್ವತಃ ತರಬೇತಿ ನೀಡಿದರು. "ನನ್ನ ಜನರ ಮೇಲೆ ನಾನು ಸಾಕಷ್ಟು ಸಮಯವನ್ನು ಹೂಡಿಕೆ ಮಾಡಿದ್ದೇನೆ ಏಕೆಂದರೆ ಅವರು ನನ್ನ ದೊಡ್ಡ ಶಕ್ತಿಯಾಗುತ್ತಾರೆ ಎಂದು ನನಗೆ ತಿಳಿದಿತ್ತು" ಎಂದು ಅಂದಿನ ದಿನಗಳ ಬಗ್ಗೆ ವೇಲು ಮೆಲುಕು ಹಾಕಿದ್ದಾರೆ. ಅಂದಿನಿಂದ ಕಂಪನಿಯು ಬೆಳವಣಿಗೆ ಹೊಂದುತ್ತಾ ದೇಶದ ಅತಿದೊಡ್ಡ ವೈದ್ಯಕೀಯ ತಂತ್ರಜ್ಞಾನ ಕಂಪನಿಯಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಯಿತು.
ಜಿಎಸ್‌ಕೆ ವೇಲು ಅವರು ಪ್ರಸ್ತುತ ಟ್ರಿವಿಟ್ರಾನ್ ಗ್ರೂಪ್ ಆಫ್ ಕಂಪನಿಯಲ್ಲಿ ಅಧ್ಯಕ್ಷರಾಗಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಆಡಳಿತ ನಡೆಸುತ್ತಿದ್ದಾರೆ. ಇದರೊಂದಿಗೆ ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್‌ನ ಅಧ್ಯಕ್ಷರಾಗಿ, ಮ್ಯಾಕ್ಸಿವಿಷನ್ ಐ ಹಾಸ್ಪಿಟಲ್‌ನ ಅಧ್ಯಕ್ಷರಾಗಿ ಮತ್ತು FICCI ತಮಿಳುನಾಡು ರಾಜ್ಯ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದಲ್ಲದೇ CII, AIMED ಸೇರಿದಂತೆ ಹಲವು ಟ್ರೇಡ್ ಅಸ್ಸೊಸಿಯೆಷನ್ಸ್ ಗಳಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದಾರೆ. ಜಿಎಸ್ ಕೆ ವೇಲು ಅವರ ಕಂಪನಿಗೆ 4,978 ಕೋಟಿ ರೂ. ಆದಾಯವಿದೆ.


Click it and Unblock the Notifications