ಕಾರ್ ಅಂದಮೇಲೆ ಅದಕ್ಕೊಬ್ಬ ಡ್ರೈವರ್ ಇರಲೇ ಬೇಕು. ಆದ್ರೆ ಟೆಕ್ನಾಲಜಿ ಅಭಿವೃದ್ಧಿಯಿಂದ ಇಂದು ಡ್ರೈವರ್ ಇಲ್ಲದೆಯೇ ಅನೇಕ ಕಾರುಗಳು ಓಡಾಡುತ್ತವೆ. ಈಗಾಗಲೇ ಚೀನಾ ಇನ್ನಿತರ ದೇಶಗಳಲ್ಲಿ ಈ ರೀತಿಯ ಕಾರುಗಳು ಚಾಲನೆಯಲ್ಲಿದೆ. ಆದ್ರೆ ಇದೀಗ ಬೆಂಗಳೂರಿಗರಿಗೆ (Bengaluru) ಗುಡ್ ನ್ಯೂಸ್ ಒಂದಿದೆ. ಹೌದು, ಬೆಂಗಳೂರಿನಲ್ಲೂ ಡ್ರೈವರ್‌ಲೆಸ್ ಕಾರೊಂದು (Driverless Car) ಲಗ್ಗೆಯಿಟ್ಟಿದೆ. ವಿಪ್ರೋ (Wipro), ಐಐಎಸ್‌ಸಿ (ಭಾರತೀಯ ವಿಜ್ಞಾನ ಸಂಸ್ಥೆ) ಮತ್ತು ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ ಸಹಯೋಗದೊಂದಿಗೆ ರೆಡಿಯಾದ ಈ ಕಾರನ್ನು ಅಕ್ಟೋಬರ್ 27 ರಂದು ಅನಾವರಣಗೊಳಿಸಲಾಗಿದೆ.

ವಿಪ್ರೋ, ಐಐಎಸ್‌ಸಿ (Indian Institute of Science) ಮತ್ತು ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ಡ್ರೈವರ್‌ಲೆಸ್ ಕಾರ್ 'ವೈರಿನ್' (WIRIN - Wipro-IISc Research and Innovation Network) ಎಂದು ಹೆಸರಿಡಲಾಗಿದೆ. ಅಕ್ಟೋಬರ್27 ರಂದು ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಕ್ಯಾಂಪಸ್‌ನಲ್ಲಿ ಈ ಕಾರನ್ನು ಲಾಂಚ್ ಮಾಡಲಾಯಿತು. ಸದ್ಯ ಹೊಸ ತಂತ್ರಜ್ಞಾನದೊಂದಿಗೆ ಅನಾವರಣವಾದ ಈ ಕಾರು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಕಾರಿನ ವಿಡಿಯೋ ವೈರಲ್!
ಅನಾವರಣದ ದಿನ ಉತ್ತರಾದಿ ಮಠದ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಕುಳಿತಿರುವ ಕಾರಿನಲ್ಲಿ ಕುಳಿತುಕೊಂಡು ಹೋಗುತ್ತಿರುವ ವಿಡಿಯೋ ಕೂಡಾ ವೈರಲ್ ಆಗಿದೆ. ಎಕ್ಸ್ ಪೇಜ್‌ನಲ್ಲಿ ಆದರ್ಶ್ ಹೆಗ್ಡೆ (@adarshahgd) ಅವರು ಅಪ್‌ಲೋಡ್ ಮಾಡಿದ್ದು, ಡ್ರೈವರ್‌ಲೆಸ್ ಕಾರು ಹೇಗೆ ಓಡಾಡುತ್ತೆ ಎಂಬುದನ್ನು ಇಲ್ಲಿ ನೋಡಬಹುದು.
ಅಕ್ಟೋಬರ್ 27ರಂದು ಅನಾವರಣ:
ಡ್ರೈವರ್‌ಲೆಸ್ ಕಾರಿನ ಅನಾವರಣ ಕಾರ್ಯಕ್ರಮದಲ್ಲಿ ವಿಪ್ರೋದ ಸ್ವಾಯತ್ತ ವ್ಯವಸ್ಥೆಗಳು ಮತ್ತು ರೋಬೋಟಿಕ್ಸ್ ವಿಭಾಗದ ಜಾಗತಿಕ ಮುಖ್ಯಸ್ಥ ರಾಮಚಂದ್ರ ಬುದಿಹಾಳ್, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ (RSST) ಅಧ್ಯಕ್ಷ ಎಂ.ಪಿ. ಶ್ಯಾಮ್ ಮತ್ತು ಆರ್‌ವಿಸಿಇ ಪ್ರಾಂಶುಪಾಲ ಕೆ.ಎನ್. ಸುಬ್ರಮಣ್ಯ ಉಪಸ್ಥಿತರಿದ್ದರು ಎನ್ನಲಾಗಿದೆ.
6 ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಫಲ:
ವರದಿ ಪ್ರಕಾರ, ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಅಧ್ಯಾಪಕರಾದ ಉತ್ತರಾ ಕುಮಾರಿ ಮತ್ತು ರಾಜಾ ವಿದ್ಯಾ ಅವರ ನೇತೃತ್ವದಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ತಂಡವು ಸತತ 6 ವರ್ಷಗಳ ಕಾಲ ಈ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಕೊನೆಗೂ ಸ್ವದೇಶಿ ಡ್ರೈವರ್ ಲೆಸ್ ಕಾರೊಂದನ್ನು ಅನಾವರಣಗೊಳಿಸಲಾಗಿದೆ.
ಸದ್ಯ ರಸ್ತೆ ಸಂಚಾರದಲ್ಲಾಗುವ ಸಮಸ್ಯೆಗಳನ್ನು ಗಮನದಲ್ಟಿಟ್ಟುಕೊಂಡು ಈ ಕಾರನ್ನು ಅಭಿವೃದ್ಧಿಪಡಿಸಲಾಗಿದ್ದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಇದು ಕಾರ್ಯನಿರ್ವಹಿಸಲಿದೆ ಎಂದು ವರದಿಯಾಗಿದೆ. ಒಂದು ವೇಳೆ ಈ ಕಾರು ಜಾಗತಿಕವಾಗಿ ಲಾಂಚ್ ಆದ್ರೆ ಹಲವು ಪ್ರಯೋಜನಗಳನ್ನು ಪಡೆಯಲಿದೆ. ವಿಶೇಷವಾಗಿ ಅಪಘಾತಗಳು, ಸಂಚಾರದಟ್ಟಣೆಯಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎನ್ನಲಾಗಿದೆ. ಬೆಂಗಳೂರಿನಂತಹ ನಗರಗಳು ಇತ್ತೀಚೆಗಂತೂ ವಾಹನಗಳಿಂದ ತುಂಬಿ ತುಳುಕುತ್ತಿದೆ. ದಿನಹೋದಂತೆ ವಾಹನ ಖರೀದಿ ಸಂಖ್ಯೆ ಏರುತ್ತಲೇ ಇದೆ. ಆದ್ದರಿಂದ ಇಂತಹ ತಂತ್ರಜ್ಞಾನದಿಂದ ಚಾಲಕರು ಈ ಸಂಚಾರ ದಟ್ಟಣೆಯಲ್ಲಿ ಪರದಾಡುವ ಪರಿಸ್ಥಿತಿ ಬರುವುದಿಲ್ಲ.


Click it and Unblock the Notifications