ದಿನಸಿ, ಅಗತ್ಯ ವಸ್ತುಗಳನ್ನು ಡೆಲಿವರಿ ಮಾಡುವ ಪ್ಲಾಟ್‌ಫಾರ್ಮ್ ಆದ ಡೊನ್ಜೊದ ನಾಲ್ಕು ಸಹ-ಸಂಸ್ಥಾಪಕರಲ್ಲಿ ಒಬ್ಬರಾದ ದಲ್ವಿರ್ ಸೂರಿ ರಾಜೀನಾಮೆ ನೀಡಲಿದ್ದಾರೆ. ನಗದು ಕೊರತೆಯಿರುವ, ರಿಲಯನ್ಸ್ ಇಂಡಸ್ಟ್ರೀಸ್ ಬೆಂಬಲಿತ ಸ್ಟಾರ್ಟ್‌ಅಪ್ ಅನ್ನು ದಲ್ವಿರ್ ಸೂರಿ ತೊರೆಯಲಿದ್ದಾರೆ ಎಂದು ಹೇಳಿದರು.
ಈ ತ್ರೈಮಾಸಿಕದಿಂದ ಡೊನ್ಜೊ ಸಂಸ್ಥೆಯಲ್ಲಿ ರಚನಾತ್ಮಕ ಬದಲಾವಣೆಯನ್ನು ಮಾಡಲಾಗುತ್ತಿದೆ. ಡೊನ್ಜೊ ಕಳೆದ ಕೆಲವು ತಿಂಗಳುಗಳಲ್ಲಿ ಫಂಡ್‌ನ ಸಮಸ್ಯೆಯಿಂದ ಹೆಣಗಾಡುತ್ತಿದೆ. ಕನಿಷ್ಠ ಮೂರು ಸುತ್ತಿನ ಉದ್ಯೋಗ ಕಡಿತವನ್ನು ಡೊನ್ಜೊ ಘೋಷಣೆ ಮಾಡಿದೆ.

ಕೆಲವು ಉದ್ಯೋಗಿಗಳಿಗೆ ವೇತನವನ್ನು ನೀಡುವುದರಲ್ಲಿ ಡೊನ್ಜೊ ವಿಳಂಬ ಮಾಡಿದ್ದರೆ, ಇನ್ನು ಕೆಲವು ಉದ್ಯೋಗಿಗಳಿಗೆ ಕಡಿಮೆ ವೇತನ ಅಥವಾ ಶೇಕಡ 50 ರಷ್ಟು ವೇತನವನ್ನು ನೀಡಲಾಗಿದೆ. ಹಾಗೆಯೇ ಡಾರ್ಕ್ ಸ್ಟೋರ್‌ಗಳ ಸಂಖ್ಯೆಯನ್ನು ಡೊನ್ಜೊ ಕಡಿತ ಮಾಡಿದೆ.
ಕಂಪನಿಯ ಹೇಳಿಕೆಯಲ್ಲಿ ಸಂಸ್ಥೆಯಲ್ಲಿ ಮಾಡಲಾಗುವ ಪುನರ್‌ರಚನೆ ಅಥವಾ ರಚನಾತ್ಮಕ ಬದಲಾವಣೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಾಗಿಲ್ಲ. ಡೊನ್ಜೊ ಈ ವಾರದ ನಂತರ ಉದ್ಯೋಗಿಗಳಿಗೆ ವಿವರಗಳನ್ನು ನೀಡಲಿದೆ ಎಂದು ಹಣಕಾಸು ಸುದ್ದಿ ವೆಬ್‌ಸೈಟ್ ಮನಿ ಕಂಟ್ರೋಲ್ ವರದಿ ಮಾಡಿದೆ. ಇನ್ನು ಈ ಬಗ್ಗೆ ರಾಯಿಟರ್ಸ್ ಇಮೇಲ್‌ಗೆ ಡೊನ್ಜೊ ಪ್ರತಿಕ್ರಿಯೆ ನೀಡಿಲ್ಲ.
ದಲ್ವಿರ್ ಸೂರಿ ಬಗ್ಗೆ ತಿಳಿಯಿರಿ
ದಲ್ವಿರ್ ಸೂರಿ ಮೇ 2015 ರಲ್ಲಿ ಬೆಂಗಳೂರು ಮೂಲದ ಕಂಪನಿಯನ್ನು ಸೇರಿದರು. ಅದು ಸ್ಥಾಪನೆಯಾದ ಸುಮಾರು ಒಂದು ವರ್ಷದ ನಂತರ ಡೊನ್ಜೊ ಮರ್ಚೆಂಟ್ ಸರ್ವಿಸಸ್ (ಡಿಎಂಎಸ್) ಅನ್ನು ಮುನ್ನಡೆಸಿದರು. ದಲ್ವಿರ್ ಸೂರಿ ಯಾವಾಗ ಸಂಸ್ಥೆಯನ್ನು ತೊರೆಯುತ್ತಾರೆ ಎಂಬ ಬಗ್ಗೆ ಮಾಹಿತಿಯಿಲ್ಲ.
ಇನ್ನು ದಲ್ವಿರ್ ಸೂರಿ ಬದಲಾಗಿ ಯಾರು ಸ್ಥಾನವನ್ನು ಪಡೆಯುತ್ತಾರೆ ಎಂಬ ಬಗ್ಗೆಯೂ ಯಾವುದೇ ಮಾಹಿತಿಯಿಲ್ಲ. ಅಂಕುರ್ ಅಗರ್ವಾಲ್ ಮತ್ತು ಮುಕುಂದ್ ಝಾ ಕಂಪನಿಯ ಇತರ ಸಹ-ಸಂಸ್ಥಾಪಕರು ಆಗಿದ್ದಾರೆ.
"ದಲ್ವಿರ್ ಡೊನ್ಜೊದಲ್ಲಿ ಪ್ರತಿಯೊಂದು ಹೊಸ ವ್ಯವಹಾರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡಿಎಂಸಿ ವ್ಯವಹಾರವು ಅತ್ಯಂತ ಸಮರ್ಥ ನಾಯಕತ್ವವನ್ನು ಹೊಂದಿದೆ," ಎಂದು ಸಿಇಒ ಮತ್ತು ಸಹ-ಸಂಸ್ಥಾಪಕ ಕಬೀರ್ ಬಿಸ್ವಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಣಕಾಸಿನ ಸವಾಲನ್ನು ಎದುರಿಸುತ್ತಿರುವ ಡೊನ್ಜೊ
ಪ್ರಸ್ತುತ ಡೊನ್ಜೊ ಹಣಕಾಸಿನ ಸವಾಲನ್ನು ಎದುರಿಸುತ್ತಿದೆ. ನಗದು ಕೊರತೆಯ ಕಾರಣದಿಂದಾಗಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ಡೊನ್ಜೊದಲ್ಲಿ ವೇತನವನ್ನು ವಿಳಂಬ ಮಾಡಲಾಗುತ್ತಿದೆ. ಜುಲೈ 3 ರಂದು ಡೊನ್ಜೊ ತನ್ನ ಉದ್ಯೋಗಿಗಳ ಪೈಕಿ 500 ಮಂದಿಗೆ ಸಂಬಳವನ್ನು ಮುಂದೂಡಿದೆ. 500 ಉದ್ಯೋಗಿಗಳಿಗೆ ವೇತನವನ್ನು ನೀಡಿದೆ.
ಜೂನ್‌ನಿಂದ ವ್ಯಕ್ತಿಯ ವೇತನ ಪ್ಯಾಕೇಜ್ ಅನ್ನು ಲೆಕ್ಕಿಸದೆಯೇ 75,000 ರೂಪಾಯಿಯಷ್ಟು ಪಾವತಿಯನ್ನು ಮಾಡಿದೆ. ಈ ಮೊದಲು, ಜುಲೈ 20 ರೊಳಗೆ ಡೊನ್ಜೊ ತನ್ನ ಬಾಕಿಯನ್ನು ಪಾವತಿ ಮಾಡುವ ನಿರ್ಧಾರ ಮಾಡಿತ್ತು. ಆದರೆ ಇದನ್ನು ಸೆಪ್ಟೆಂಬರ್‌ವರೆಗೆ ವಿಸ್ತರಣೆ ಮಾಡಲಾಗಿದೆ. ಆದರೆ ಇಮೇಲ್ ಅನ್ನು ಗುಡ್‌ರಿಟರ್ನ್ಸ್ ಕನ್ನಡವು ಖಚಿತಪಡಿಸಿಕೊಂಡಿಲ್ಲ.
ಪಾವತಿ ವಿಳಂಬ ಮಾಡಿದ ಕಾರಣಕ್ಕಾಗಿ ಗೂಗಲ್, ಫೇಸ್‌ಬುಕ್, ನಿಲೆನ್ಸೊ, ಇಂಡಿಯಾ ಆನ್‌ಲೈನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (ಎಫ್‌ಬಿಐ), ಕಪ್‌ಶಪ್, ಕೂ, ಗ್ಲಾಂಸ್‌ನೊಂದಿಗೆ ಡೊನ್ಜೊ ಪ್ರಸ್ತುತ ಕಾನೂನು ಹೋರಾಟದಲ್ಲಿದೆ ಎಂದು ವರದಿ ಹೇಳಿದೆ. ಡೊನ್ಜೊ ಭಾರತದಲ್ಲಿ ತ್ವರಿತ ವಾಣಿಜ್ಯ ವಿಭಾಗದಲ್ಲಿ ಅತೀ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಸಂಸ್ಥೆಯಾಗಿದೆ.
ಡೊನ್ಜೊ 50 ಬಿಲಿಯನ್ ಡಾಲರ್‌ಗೂ ಅಧಿಕ ಮಾರುಕಟ್ಟೆ ಅವಕಾಶವನ್ನು ಹೊಂದಿದೆ. ಕಬೀರ್ ಬಿಸ್ವಾಸ್, ಮುಕುಂದ್ ಝಾ, ದಲ್ವಿರ್ ಸೂರಿ ಮತ್ತು ಅಂಕುರ್ ಅಗರ್ವಾಲ್ ಅವರಿಂದ ಸ್ಥಾಪಿಸಲ್ಪಟ್ಟ ಡೊನ್ಜೊ, ಕೊರಿಯರ್, ಇ-ಕಾಮರ್ಸ್ ಮತ್ತು ಮರ್ಚೆಂಟ್ ಲಾಜಿಸ್ಟಿಕ್ಸ್‌ನ ವಹಿವಾಟುಗಳನ್ನು ಸುಗಮಗೊಳಿಸಲು ವ್ಯಾಪಾರಿಗಳು, ಪಾಲುದಾರರು ಮತ್ತು ಬಳಕೆದಾರರನ್ನು ಸಂಪರ್ಕಿಸುತ್ತದೆ.


Click it and Unblock the Notifications