ಹಬ್ಬಗಳೆಂದರೆ ಸಾಕು ಅವು ನಮ್ಮ ಜೀವನದಲ್ಲಿ ಸಂತೋಷ ಮತ್ತು ಸಂಭ್ರಮ ತುಂಬುತ್ತವೆ. ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಗಳು ಗರಿಕೆದರುತ್ತವೆ. ಅಕ್ಟೋಬರ್, ನವೆಂಬರ್ ತಿಂಗಳು ಆಫ್ ಲೈನ್ ಅಥವಾ ಆನ್ ಲೈನ್ ಮಾರುಕಟ್ಟೆಗಳಿರಬಹುದು ಉತ್ಪನ್ನಗಳ ಮಾರಾಟದಲ್ಲಿ ಸಾಮಾನ್ಯ ಋತುವಿಗೆ ಹೋಲಿಸಿದರೆ, ಮಾರಾಟಗಳು ದ್ವಿಗುಣಗೊಳ್ಳುತ್ತವೆ . ಈ ಋತುವಿನಲ್ಲಿ ಜನರು ಹೊಸ ಬಟ್ಟೆ, ಆಭರಣ, ಉಡುಗೊರೆಗಳು, ಎಲೆಕ್ಟ್ರಾನಿಕ್ಸ್ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಆಸಕ್ತಿ ತೋರುತ್ತಾರೆ.
ಈ ಬಾರಿಯ ಹಬ್ಬದ ಸಂದರ್ಭದಲ್ಲಿ ಆನ್‌ಲೈನ್ ಶಾಪಿಂಗ್ ಜನರು ಸಖತ್ ಜೋರಾಗಿಯೇ ನಡೆಸಿದ್ದಾರೆ. ಅಮೆಜಾನ್, ಫ್ಲಿಫ್ ಕಾರ್ಟ್ ಸೇರಿ ಹಲವು ಆನ್ ಲೈನ್ ಫ್ಲಾಟ್ ಫಾರ್ಮ್ ಗಳು ಹಬ್ಬದ ಸೀಸನ್ ಗಮನದಲ್ಲಿ ಅನೇಕ ಆಫರ್ ಗಳನ್ನು ನೀಡುತ್ತವೆ. ಹೀಗಾಗಿ ಜನ ಕೂಡ ಅವುಗಳ ಕಡೆ ಹೆಚ್ಚಾಗಿಯೇ ಆಕರ್ಷಿತರಾಗುತ್ತಾರೆ. ಹಬ್ಬದ ಅವಧಿಯ ಮೊದಲ ವಾರದಲ್ಲಿ ಆನ್‌ಲೈನ್ ಮಾರುಕಟ್ಟೆಗಳು ರೂ. 54,500 ಕೋಟಿಗೂ ಹೆಚ್ಚು ಮಾರಾಟವನ್ನು ಕಂಡಿವೆ ಎಂದಿವೆ ನಂಬಲೇಬೇಕು. ಈ ಅಂಕಿ-ಅಂಶವು ಸಂಪೂರ್ಣ ಹಬ್ಬದ ಅವಧಿಯ ಯೋಜಿತ ಮಾರಾಟದ ಸುಮಾರು 55% ಅನ್ನು ಪ್ರತಿನಿಧಿಸುತ್ತದೆ, ಇದು ಶಾಪಿಂಗ್ ಋತುವಿನ ಬಲವಾದ ಆರಂಭವನ್ನು ಸೂಚಿಸುತ್ತದೆ.

ಡೇಟಾಮ್ ಇಂಟೆಲಿಜೆನ್ಸ್‌ನ ಮಾಹಿತಿಯ ಪ್ರಕಾರ, 2023 ರಲ್ಲಿ ಇದೇ ಅವಧಿಗೆ ಹೋಲಿಸಿದರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮೊದಲ ವಾರದಲ್ಲಿ ಮಾರಾಟದಲ್ಲಿ 26% ಹೆಚ್ಚಳವನ್ನು ಕಂಡಿವೆ. ಅದರಲ್ಲೂ ಮೊಬೈಲ್‌ಗಳು, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಗೃಹ ಮತ್ತು ಸಾಮಾನ್ಯ ಸರಕುಗಳಂತಹ ವರ್ಗಗಳು 75% ರಷ್ಟನ್ನು ಏರಿಕೆ ಹೊಂದಿವೆ. ಒಟ್ಟು ಮಾರಾಟಗಳ, ಶ್ರೇಣಿ 2 ಮತ್ತು 3 (tier 2 and 3 cities) ನಗರಗಳು 70% ಕ್ಕಿಂತ ಹೆಚ್ಚು ಸ್ಮಾರ್ಟ್‌ಫೋನ್ ಮತ್ತು ಟಿವಿ ಖರೀದಿಗೆ ಗಣನೀಯವಾಗಿ ಕೊಡುಗೆ ನೀಡುತ್ತಿವೆ.
ಹಬ್ಬದ ಋತುವಿನ ಮೊದಲ ವಾರವು ಅತ್ಯಂತ ನಿರ್ಣಾಯಕ ಅವಧಿಯಾಗಿರುತ್ತದೆ. ಏಕೆಂದರೆ ಗ್ರಾಹಕರು ರಿಯಾಯಿತಿಗಳು ಮತ್ತು ಅತ್ಯುತ್ತಮ ಡೀಲ್‌ಗಳನ್ನು ಲಾಭ ಮಾಡಿಕೊಳ್ಳಲು ಖರೀದಿಗಳನ್ನು ಫೆಸ್ಟಿವಲ್ ಸೀಸನ್ ನ ಮೊದಲ ವಾರಕ್ಕಾಗಿ ಮುಂದೂಡುತ್ತಾರೆ. ಈ ಬಾರಿ ಹಬ್ಬದ ಋತು ಸೆಪ್ಟೆಂಬರ್ 26 ರಂದು ಪ್ರಾರಂಭವಾಗಿತ್ತು. ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಮಾರಾಟದ ಪ್ರಾರಂಭವೂ ಇದೇ ವಾರಕ್ಕೆ ಹೊಂದಿಕೆಯಾಗಿದೆ. ಇದು ನವೆಂಬರ್ 3 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಈ ಅವಧಿಯ ಒಟ್ಟು ಅಂದಾಜು ಮಾರಾಟವು 1 ಲಕ್ಷ ಕೋಟಿ ರೂಪಾಯಿಗಳನ್ನು ತಲುಪುವ ನಿರೀಕ್ಷೆಯಿದೆ.
ಫ್ಯಾಷನ್, ದಿನಸಿ, ಸೌಂದರ್ಯ ಮತ್ತು ಪರ್ಸನಲ್ ಕೇರ್ ಇಂತಹ ವಿಭಾಗಗಳೂ ಕೂಡಾ ಗಮನಾರ್ಹ ಬೆಳವಣಿಗೆಯನ್ನು ಕಂಡಿದ್ದು, ಮಾರಾಟವು 2-4 ಪಟ್ಟು ಹೆಚ್ಚಾಗಿದೆ. ಇದಲ್ಲದೇ ಸ್ಮಾರ್ಟ್ ಟೆಲಿವಿಷನ್‌ಗಳು, ಏರ್ ಫ್ರೈಯರ್‌ಗಳು, ಲಗೇಜ್‌ಗಳು, ಭದ್ರತಾ ಕ್ಯಾಮೆರಾಗಳು, ಹಾಸಿಗೆಗಳು, ವಾಟರ್ ಪ್ಯೂರಿಫೈಯರ್‌ಗಳು, ಲ್ಯಾಪ್‌ಟಾಪ್‌ಗಳು, ಏರ್ ಕಂಡಿಷನರ್‌ಗಳು, ವಾಟರ್ ಹೀಟರ್‌ಗಳು, ವಾಷಿಂಗ್ ಮೆಷಿನ್‌ಗಳು, ತುಪ್ಪ ಮತ್ತು ಡ್ರೈ ಪ್ರೂಟ್ಸ್ ಇತ್ಯಾದಿಗಳು ಜನ ಹೆಚ್ಚಿನ ಆಸಕ್ತಿ ತೋರಿದ ಉತ್ಪನ್ನಗಳಾಗಿವೆ.

ಹಬ್ಬದ ಶಾಪಿಂಗ್ ಗೆ ಪ್ರಮುಖ ಕಾರಣವೆಂದರೆ, ಡಿಸ್ಕೌಂಟ್, ಡೀಲ್, ಆಫರ್ ಗಳು. ಜೊತೆಗೆ EMI ಆಯ್ಕೆಗಳು ಲಭ್ಯವಾಗುವುದರಿಂದ ಹೆಚ್ಚಿನ ಜನ ಖರೀದಿಯತ್ತ ಒಲವು ತೋರುತ್ತಾರೆ. ಟಿವಿಗಳು, ವಾಷಿಂಗ್ ಮೆಷಿನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ರೆಫ್ರಿಜರೇಟರ್‌ಗಳಂತಹ ವರ್ಗಗಳಲ್ಲಿ 50% ಕ್ಕಿಂತ ಹೆಚ್ಚು ಖರೀದಿದಾರರು EMI ಅನ್ನು ಆರಿಸಿಕೊಳ್ಳುತ್ತಾರೆ.
ಆಟಿಕೆಗಳು, ಪುಸ್ತಕಗಳು ಮತ್ತು ಅಡಿಗೆ ಅಗತ್ಯ ವಸ್ತುಗಳು ಸಹ ಮೊದಲ ವಾರದಲ್ಲಿ ಆರ್ಡರ್‌ಗಳಲ್ಲಿ ಗಣನೀಯ ಹೆಚ್ಚಳವನ್ನು ಕಂಡಿದ್ದು, ಬೆಳವಣಿಗೆಯು 2 ರಿಂದ 5 ಪಟ್ಟು ಹೆಚ್ಚಾಗಿದೆ. ಹಬ್ಬದ ಸೀಸನ್ ಮುಂದುವರೆದಂತೆ, ಗ್ರೋಸರಿ, ಸೌಂದರ್ಯ ಮತ್ತು ವೈಯಕ್ತಿಕ ಕಾಳಜಿಯಂತಹ ಕಡಿಮೆ ಸರಾಸರಿ ಮಾರಾಟದ ಬೆಲೆಯುಳ್ಳಂತಹ ವರ್ಗಗಳು ಮಹತ್ವದ ಪಾತ್ರವನ್ನು ವಹಿಸುವ ಮೂಲಕ ಕ್ವಿಕ್ ಕಾಮರ್ಸ್ ಕಡೆಗೆ ಜನರ ಗಮನ ಬದಲಾಗುತ್ತಿದೆ.
ಈ ಹಿಂದಿನ ಡೇಟಮ್ ಇಂಟೆಲಿಜೆನ್ಸ್ ವರದಿಯ ಪ್ರಕಾರ, 79% ಹಬ್ಬದ ಶಾಪರ್‌ಗಳು ತಿಂಗಳ ಆರಂಭದಲ್ಲಿ ಶಾಪಿಂಗ್ ಪ್ರಾರಂಭಿಸಲು ಯೋಜಿಸಿದ್ದಾರೆ. ಕ್ವಿಕ್ ಕಾಮರ್ಸ್ ಆನ್‌ಲೈನ್ ಮಾರಾಟಕ್ಕೆ ಸರಿಸುಮಾರು $1 ಶತಕೋಟಿ ಕೊಡುಗೆಯನ್ನು ನಿರೀಕ್ಷಿಸಲಾಗಿದೆ, ಇದು ಒಟ್ಟು 8% ಅನ್ನು ಪ್ರತಿನಿಧಿಸುತ್ತದೆ.
ಒಟ್ಟಾರೆ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ನಂತರ ಆನ್‌ಲೈನ್ ಶಾಪಿಂಗ್‌ಗೆ ಜನರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.
ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವುದು ಆನ್‌ಲೈನ್ ಶಾಪಿಂಗ್‌ಗೆ ಹೆಚ್ಚು ಬೂಸ್ಟ್ ನೀಡುತ್ತಿದೆ. ಇ-ಕಾಮರ್ಸ್ ಕಂಪನಿಗಳು ನೀಡುತ್ತಿರುವ ವಿವಿಧ ಆಫರ್‌ಗಳು ಮತ್ತು ರಿಯಾಯಿತಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.


Click it and Unblock the Notifications