ಬೆಂಗಳೂರು, ಅಕ್ಟೋಬರ್ 21: ಕರ್ನಾಟಕ ಸರ್ಕಾರ ಅಕ್ಟೋಬರ್ ತಿಂಗಳಿನಿಂದಲೇ ಆಸ್ತಿಗಳ ನೋಂದಣಿಗೆ ಇ-ಖಾತಾ ವ್ಯವಸ್ಥೆ ಕಡ್ಡಾಯಗೊಳಿಸಿದೆ. ಈ ಕುರಿತು ಜನರಲ್ಲಿ ಹಲವು ಗೊಂದಲಗಳು ಉಂಟಾಗಿವೆ. ಇದೇ ಕಾರಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಆಸ್ತಿಗಳ ನೋಂದಣಿಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಬಿಬಿಎಂಪಿ ನೀವು ತುರ್ತು ಆಸ್ತಿ ನೋಂದಣಿ ಮಾಡಬೇಕಾದರೆ ಅಂತಿಮ ಇ-ಖಾತಾವನ್ನು ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದೆ.
ಬೆಂಗಳೂರು ನಗರದಲ್ಲಿ ಆಸ್ತಿಗಳ ನೋಂದಣಿ ಅದರಲ್ಲೂ ಅಪಾರ್ಟ್‌ಮೆಂಟ್‌ಗಳ ಮಾರಾಟ, ಖರೀದಿಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಅಧಿಕಾರಿಗಳ ಮಾಹಿತಿಯಂತೆ ಶೇ 60ರಷ್ಟು ಇಳಿಕೆಯಾಗಿದೆ. ಆಸ್ತಿ ಮಾರಲು, ಕೊಳ್ಳಲು ಇ-ಖಾತಾ ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ಸಬ್ ರಿಜಿಸ್ಟರ್ ಕಛೇರಿಯಲ್ಲಿ ಕಾವೇರಿ ತಂತ್ರಾಂಶದ ಸಹಾಯವನ್ನು ಪಡೆಯಲಾಗುತ್ತಿದೆ.

ಬಿಬಿಎಂಪಿ ಈಗಾಗಲೇ ಉಪ-ನೋಂದಣಾಧಿಕಾರಿ ಕಛೇರಿಯಲ್ಲಿ ತುರ್ತು ಆಸ್ತಿ ನೋಂದಣಿಯನ್ನು ಹೊಂದಿರದ ನಾಗರೀಕರು, ಬಿಬಿಎಂಪಿ ಹಿಂಬರಹದ ಮೂಲಕ ನಿರ್ದಿಷ್ಟವಾಗಿ ಸೂಚನೆಯ ಹೊರತು ಅಂತಿಮ ಇ-ಖಾತಾವನ್ನು ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಹೋಗದಂತೆಯೂ ವಿನಂತಿ ಮಾಡಿದೆ.
ಅಪಾರ್ಟ್‌ಮೆಂಟ್: ಈ ಹಿಂದೆ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿದವರು ಬಿಬಿಎಂಪಿಯಿಂದ ಎನ್‌ಒಸಿಯನ್ನು ಪಡೆದು ಅದನ್ನು ಕೊಳ್ಳುವವರ ಹೆಸರಿಗೆ ಮಾಡಿಕೊಡುತ್ತಿದ್ದರು. ಅಪಾರ್ಟ್‌ಮೆಂಟ್ ಕೊಂಡವರು ಬಳಿಕ ಇ-ಖಾತಾಗೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದರು. ಆದರೆ ಹೊಸ ನಿಯಮದ ಪ್ರಕಾರ ಕೊಳ್ಳಲು ಇ-ಖಾತಾ ಕಡ್ಡಾಯವಾಗಿದೆ.
ಈಗ ಅಪಾರ್ಟ್‌ಮೆಂಟ್ ಮಾಲೀಕರು ಪ್ರತಿ ಮನೆಯನ್ನು ಕೊಳ್ಳುವವರ ಹೆಸರಿನಲ್ಲಿ ಇ-ಖಾತಾ ಮಾಡಿಸಬೇಕು. ಬಳಿಕ ಮಾಲಿಕತ್ವವನ್ನು ಹಸ್ತಾಂತರ ಮಾಡಬೇಕಿದೆ. ವಂಚನೆ ತಡೆಗಟ್ಟಲು ಸರ್ಕಾರ ಜಾರಿಗೆ ತಂದಿರುವ ಕ್ರಮ ಆಸ್ತಿಗಳ ನೋಂದಣಿ ಮೇಲೆ ಪ್ರಭಾವ ಬೀರಿದೆ. ಈಗ ಅಪಾರ್ಟ್‌ಮೆಂಟ್ ಕೊಳ್ಳುವವರು ಕಾದು ನೋಡುವ ತಂತ್ರವನ್ನು ಅನುಸರಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್ ಮಾಲೀಕರು ಅದನ್ನು ಮಾರಾಟ ಮಾಡಲು ಮಾಲೀಕರ ಹೆಸರಿನಲ್ಲಿ ಇ- ಖಾತಾವನ್ನು ಪಡೆಯಬೇಕಿದೆ. ಇದಕ್ಕಾಗಿ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಕಛೇರಿಗೆ ಭೇಟಿ ನೀಡಬೇಕು. ಆದರೆ ಕಛೇರಿಯಲ್ಲಿ ಸರ್ವರ್ ಸಮಸ್ಯ ಕಾರಣಕ್ಕೆ ವಿಳಂಬವಾಗುತ್ತಿದೆ.
ಆದ್ದರಿಂದ ಅಪಾರ್ಟ್‌ಮೆಂಟ್ ಕೊಂಡುಕೊಳ್ಳುವವರು ಅದರಲ್ಲೂ ಮುಖ್ಯವಾಗಿ ಎನ್‌ಆರ್‌ಐಗಳು ತಮ್ಮ ತೀರ್ಮಾನವನ್ನು ಸ್ವಲ್ಪ ಮುಂದಕ್ಕೆ ಹಾಕುತ್ತಿದ್ದಾರೆ. ಆದ್ದರಿಂದ ಆಸ್ತಿಗಳ ನೋಂದಣಿಯಲ್ಲಿ ಭಾರೀ ಕುಸಿತವಾಗಿದೆ ಎಂಬುದು ಸಬ್ ರಿಜಿಸ್ಟರ್ ಕಛೇರಿಯ ಸಿಬ್ಬಂದಿ ಮಾಹಿತಿ.
ಅಪಾರ್ಟ್‌ಮೆಂಟ್ ಮಾತ್ರವಲ್ಲ ವಾಣಿಜ್ಯ ಸಂಕೀರ್ಣಗಳ ನೋಂದಣಿಗೂ ಸಹ ಇ-ಖಾತಾ ವ್ಯವಸ್ಥೆ ಅಡ್ಡಿ ಉಂಟು ಮಾಡಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿಗಳು ಈ ಹಿನ್ನಲೆಯಲ್ಲಿ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ಕಂದಾಯ ಭವನ ಇವರನ್ನು ಭೇಟಿಯಾಗಲು ಮುಂದಾಗಿದ್ದಾರೆ.
ಆಸ್ತಿಗಳ ನೋಂದಣಿ ಬದಲು ಮಾರಾಟ ಮಾಡುವವರು, ಕೊಳ್ಳುವವರು ಇಬ್ಬರಿಗೂ ಅನುಕೂಲವಾಗುವಂತಹ ನಿಯಮವನ್ನು ಜಾರಿಗೆ ತನ್ನಿ ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಿಗೆ ರಿಯಲ್ ಎಸ್ಟೇಟ್ ಕಂಪನಿಗಳು ಮನವಿ ಸಲ್ಲಿಕೆ ಮಾಡಲಿದ್ದಾರೆ. ಇ-ಖಾತಾ ಕುರಿತು ಇರುವ ಗೊಂದಲ ಬಗೆಹರಿಯಲಿದೆ ಜನರು ಸಹ ಸಹಕಾರ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.


Click it and Unblock the Notifications