ಕೇಂದ್ರ ಬಜೆಟ್ ಅನ್ನು ಮಂಡಿಸುವ ಮೊದಲು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2024-25 ರ ಆರ್ಥಿಕ ಸಮೀಕ್ಷೆಯನ್ನುಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಇಂದು ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಉಭಯ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದು, ಇದರೊಂದಿಗೆ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಇದಾದ ನಂತರ ಆರ್ಥಿಕ ಸಮೀಕ್ಷೆಯ ವರದಿಯನ್ನು ಸಂಸತ್ತಿನಲ್ಲಿ ಮಂಡನೆ ಮಾಡಲಾಗುತ್ತದೆ. ಫೆ. 1ರ ಶನಿವಾರದಂದು ನಿರ್ಮಲಾ ಸೀತಾರಾಮನ್ ಅವರೇ ಮುಂಗಡ ಪತ್ರ ಅಥವಾ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಸಾಮಾನ್ಯವಾಗಿ ಬಜೆಟ್ ಮಂಡನೆಯ ಮುಂಚಿತವಾಗಿ ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತದೆ. ಈ ಸಮೀಕ್ಷೆಯು ಭಾರತೀಯ ಆರ್ಥಿಕತೆಯು ಕಳೆದ ವರ್ಷದಲ್ಲಿ ಹೇಗೆ ಕಾರ್ಯನಿರ್ವಹಿಸಿತು ಮತ್ತು ಮುಂಬರುವ ವರ್ಷದಲ್ಲಿ ಅದರ ಪ್ರಮುಖ ಯೋಜನೆಗಳೇನು ಎಂಬುದನ್ನು ವಿವರಿಸುತ್ತದೆ.
ಆರ್ಥಿಕ ಸಮೀಕ್ಷೆ: ಒಂದು ಅವಲೋಕನ
ಆರ್ಥಿಕ ಸಮೀಕ್ಷೆಯು ಭಾರತದ ಆರ್ಥಿಕತೆಯ ಕಾರ್ಯಕ್ಷಮತೆ, ಪ್ರಮುಖ ಹಣಕಾಸು ಸೂಚಕಗಳು ಮತ್ತು ಭವಿಷ್ಯದ ಪ್ರಕ್ಷೇಪಗಳ ಆಳವಾದ ವಿಶ್ಲೇಷಣೆಯನ್ನು ಒದಗಿಸುವ ಸಮಗ್ರ ವಾರ್ಷಿಕ ವರದಿಯಾಗಿದೆ. ಇದರಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯ ನೈಜ ಚಿತ್ರಣವನ್ನು ನೀಡಲಾಗಿರುತ್ತದೆ. ಹೀಗಾಗಿ ಇದೊಂದು ನಿರ್ಣಾಯಕ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಮುಂಬರುವ ಯೂನಿಯನ್ ಬಜೆಟ್ 2025-26 ರ ದಿಕ್ಸೂಚಿಯಾಗಿಯೂ ಕಾರ್ಯ ನಿರ್ವಹಿಸುತ್ತದೆ. ಆರ್ಥಿಕ ಸಮೀಕ್ಷೆ ವರದಿ ಆರ್ಥಿಕತೆಯ ಅಲ್ಪಾವಧಿಯಿಂದ ಮಧ್ಯಮ ಅವಧಿಯ ಭವಿಷ್ಯದ ಅವಲೋಕನವನ್ನು ಸಹ ಒದಗಿಸುತ್ತದೆ.

ಪ್ರಪ್ರಥಮ ಆರ್ಥಿಕ ಸಮೀಕ್ಷೆ
ದೇಶದ ಮೊದಲ ಆರ್ಥಿಕ ಸಮೀಕ್ಷೆಯು 1950-51 ರಲ್ಲಿ ಬಜೆಟ್ ದಾಖಲೆಗಳ ಭಾಗವಾಗಿ ಅಸ್ತಿತ್ವಕ್ಕೆ ಬಂದಿತ್ತು. ಆದರೆ ಬಳಿಕ ಅಂದರೆ 1960 ರ ದಶಕದಲ್ಲಿ, ಇದನ್ನು ಕೇಂದ್ರ ಬಜೆಟ್‌ನಿಂದ ಪ್ರತ್ಯೇಕಿಸಲಾಯಿತು ಮತ್ತು ಬಜೆಟ್ ಮಂಡನೆಗೆ ಒಂದು ದಿನ ಮೊದಲು ಮಂಡಿಸಲಾಗುತ್ತದೆ.
ಆರ್ಥಿಕ ಸಮೀಕ್ಷೆಯನ್ನು ಯಾರು ಸಿದ್ಧಪಡಿಸುತ್ತಾರೆ?
ಹಣಕಾಸು ಸಚಿವಾಲಯದ ಅಡಿಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಮೀಕ್ಷೆಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊಂದಿದೆ. ಇದನ್ನು ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರು (Chief Economic Adviser - CEA) ಮೇಲ್ವಿಚಾರಣೆ ಮಾಡುತ್ತಾರೆ. ಪ್ರಸ್ತುತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ವಿ ಅನಂತ ನಾಗೇಶ್ವರನ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ನೇತೃತ್ವದಲ್ಲಿ 2024-25ರ ಸಾಲಿನ ಆರ್ಥಿಕ ಸಮೀಕ್ಷೆಯ ವರದಿ ಸಿದ್ಧವಾಗಿದೆ.
ಆರ್ಥಿಕ ಸಮೀಕ್ಷೆಯ ಪ್ರಾಮುಖ್ಯತೆ ಏನು?
ಆರ್ಥಿಕ ಸಮೀಕ್ಷೆಯು ಸರ್ಕಾರಕ್ಕೆ ಮತ್ತು ಜನರಿಗೆ ಬಹಳ ಮುಖ್ಯವಾಗಿದೆ. ಇದು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತದೆ, ಭವಿಷ್ಯದ ಆರ್ಥಿಕ ಮುನ್ನೋಟಗಳನ್ನು ವಿವರಿಸುತ್ತದೆ, ಆರ್ಥಿಕತೆಯ ವಿವಿಧ ಕ್ಷೇತ್ರಗಳ ಸ್ಥಿತಿಯನ್ನು ವಿಶ್ಲೇಷಿಸುತ್ತದೆ ಮತ್ತು ಸೂಕ್ತ ಆರ್ಥಿಕ ನೀತಿಗಳ ಬಗ್ಗೆ ಸಲಹೆಗಳನ್ನು ನೀಡುತ್ತದೆ. ಈ ವರದಿಯು ಸರ್ಕಾರದ ನೀತಿ ರೂಪಿಸುವ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.
ಆರ್ಥಿಕ ಸಮೀಕ್ಷೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
ವಿವಿಧ ಆರ್ಥಿಕ ವಲಯಗಳ (ಉದಾಹರಣೆಗೆ ಕೃಷಿ, ಕೈಗಾರಿಕೆ, ಸೇವೆಗಳು) ವಿವರವಾದ ವಿಶ್ಲೇಷಣೆ
ಪ್ರಸ್ತುತ ಆರ್ಥಿಕ ಆದ್ಯತೆಗಳು ಮತ್ತು ಉದಯೋನ್ಮುಖ ನೀತಿ ಕಾಳಜಿಗಳ ಬಗ್ಗೆ ಮಾಹಿತಿ
ಸರ್ಕಾರದ ಆರ್ಥಿಕ ದೃಷ್ಟಿಕೋನ ಮತ್ತು ಹಣಕಾಸು ಸಚಿವರ ಪ್ರಮುಖ ಪ್ರಕಟಣೆಗಳು
ಆರ್ಥಿಕ ಸಮೀಕ್ಷೆ 2025 : ದಿನಾಂಕ ಮತ್ತು ಸಮಯ
ಆರ್ಥಿಕ ಸಮೀಕ್ಷೆಯನ್ನು ಜ. 31 ರಂದು ಮಧ್ಯಾಹ್ನ 12:00 ರಿಂದ 1:00 ರವರೆಗೆ ಸಂಸತ್ತಿನಲ್ಲಿ ಮಂಡಿಸಲಾಗುವುದು. ನಂತರ, ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ಮಧ್ಯಾಹ್ನ 2:30 ಕ್ಕೆ ಮಾಧ್ಯಮದವರೊಂದಿಗೆ ಮಾತನಾಡಲಿದ್ದಾರೆ.


Click it and Unblock the Notifications