ಬೆಂಗಳೂರು ಮೂಲದ ಕಂಪೆನಿಗೆ ಸೇರಿದ 8 ಕೋಟಿ ರುಪಾಯಿ ಆಸ್ತಿಯನ್ನು ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಜಪ್ತಿ ಮಾಡಿಕೊಳ್ಳಲಾಗಿದೆ. ಬಹುಕೋಟಿಯ ಪೊಂಜಿ ಅಥವಾ ಚಿಂಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇ.ಡಿ. ಮಂಗಳವಾರ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA Act) ಅಡಿಯಲ್ಲಿ ಅಜ್ಮೇರಾ ಗ್ರೂಪ್, ಪಾರ್ಟನರ್ ಗಳು ಮತ್ತು ಇತರರಿಗೆ ಸೇರಿದ ಕೃಷಿ ಭೂಮಿ, ವಸತಿ ನಿವೇಶನ, ಹದಿಮೂರು ಬ್ಯಾಂಕ್ ಖಾತೆ ಮತ್ತು ಡಿಮ್ಯಾಟ್ ಖಾತೆಯನ್ನು ಪ್ರಾವಿಷನಲಿ ಜಪ್ತಿ ಮಾಡಿಕೊಳ್ಳಲಾಗಿದೆ.
ಇ.ಡಿ.ಯಿಂದ ಕಂಪೆನಿ ಮತ್ತು ಅದರ ಪ್ರವರ್ತಕರಾದ ತಬ್ರೇಜ್ ಪಾಶಾ, ಅಬ್ದುಲ್ ದಸ್ತಗೀರ್, ತಬ್ರೇಜ್ ಉಲ್ಲಾ ಷರೀಫ್, ಸೈಯದ್ ಮುದಾಸಿರ್, ಸೈಯದ್ ಮುದಾಹಿರ್, ಫಿರೋಜ್ ಖಾನ್ ಎಂಬುವರು "ಕಾನೂನು ಬಾಹಿರವಾಗಿ" 1148 ಠೇವಣಿದಾರರಿಂದ ಹಣ ಸಂಗ್ರಹಿಸಿ, 29.17 ಕೋಟಿ ರುಪಾಯಿ ಹಿಂತಿರುಗಿಸಲು 'ವಿಫಲರಾಗಿದ್ದರು'.

ಕೆಪಿಐಡಿಎಫ್ ಇ ಕಾಯ್ದೆ 2004, ಪ್ರೈಸ್, ಚಿಟ್ಸ್ ಅಂಡ್ ಮನಿ ಸರ್ಕ್ಯುಲೇಟಿಂಗ್ ಬ್ಯಾನಿಂಗ್ ಆಕ್ಟ್ 1978 ರ ಅಡಿಯ ವಿವಿಧ ಸೆಕ್ಷನ್ ನಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. "ಅಜ್ಮೇರಾ ಗ್ರೂಪ್ ಕಾನೂನುಬಾಹಿರವಾಗಿ 256.06 ಕೋಟಿ ರುಪಾಯಿಯನ್ನು ಹೆಚ್ಚಿನ ಬಡ್ಡಿ ನೀಡುವ (ತಿಂಗಳಿಗೆ 20 ಪರ್ಸೆಂಟ್) ಭರವಸೆ ನೀಡಿ ವಸೂಲಿ ಮಾಡಿತ್ತು," ಎಂದು ಇ.ಡಿ. ಹೇಳಿಕೆಯಲ್ಲಿ ತಿಳಿಸಿದೆ.
ಸರಿಯಾದ ಮಾರ್ಗದಲ್ಲಿ ಇಷ್ಟು ದೊಡ್ಡ ಮೊತ್ತದ ಬಡ್ಡಿಯನ್ನು ನೀಡಲು ಸಾಧ್ಯವಿಲ್ಲ. ಆರೋಪಿ ಕಂಪೆನಿಯು ಠೇವಣಿದಾರರಿಗೆ 29.17 ಕೋಟಿ ರುಪಾಯಿ ಹಿಂತಿರುಗಿಸಲು ವಿಫಲವಾಗಿತ್ತು," ಎಂದು ಸಂಸ್ಥೆಯು ಹೇಳಿದೆ.


Click it and Unblock the Notifications