ದೇಶದಲ್ಲಾಗುವ ಅಕ್ರಮ ಹಣ ವರ್ಗಾವಣೆ (Illegal money transfer), ವಂಚನೆ, ಕಪ್ಪು ಹಣ ಈ ಎಲ್ಲದರ ಬಗ್ಗೆ ತನಿಖೆ ನಡೆಸುವ ಕಾರ್ಯವನ್ನು ಇಡಿ ಅಥವಾ ಜಾರಿ ನಿರ್ದೇಶನಾಲಯ ಮಾಡುತ್ತದೆ. ಕರ್ನಾಟಕದಲ್ಲಿ ರಾಜಕಾರಣಿಗಳ ಮನೆ ಮೇಲೆ, ಸರ್ಕಾರಿ ಕಚೇರಿಗಳ ಮೇಳೆ ಇಡಿ ರೇಡ್ (Kerala ED Raid) ಆಗಿರುವುದನ್ನು ಕೇಳಿರುತ್ತೇವೆ. ಇದೀಗ ಕೇರಳದಲ್ಲಿ ಮತ್ತೆ ಇಡಿ ದಾಳಿ ಶುರುವಾಗಿದೆ. ಈಗಾಗಲೇ ಕೊಚ್ಚಿ ವಲಯ ಕಚೇರಿಯ ಜಾರಿ ನಿರ್ದೇಶನಾಲಯ, ನವೆಂಬರ್ 07, 2025 ರಂದು ತಿರುವನಂತಪುರಂನಲ್ಲಿ 5 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಬ್ಯಾಂಕ್ ಒಂದರಲ್ಲಿ ಹಣ ವಂಚನೆ, ಠೇವಣಿ ವಂಚನೆ ಮೂಲಕ 50 ಕೋಟಿ ರೂ. ವಂಚಿಸಿರುವುದು ಬಹಿರಂಗವಾಗಿದೆ.

ಏನಿದು ಪ್ರಕರಣ?
2002ರಲ್ಲಿ ಹಣ ವರ್ಗಾವಣೆ ತಡೆ ಕಾಯಿದೆ (PMLA) ಅಡಿಯಲ್ಲಿ ಇಡಿ ಅಧಿಕಾರಿಗಳು ನವೆಂಬರ್ 7 ರಂದು ಮೆಸರ್ಸ್ ನೆಮಮ್ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆ ಬ್ಯಾಂಕ್ ಹಣ ದುರುಪಯೋಗ ಮತ್ತು ಡೆಪಾಸಿಟ್‌ನಲ್ಲಾದ ವಂಚನೆಯ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆ ಇಡಿ ಶೋಧ ನಡೆಸಿತು.
ಇನ್ನು ಈ ಪ್ರಕರಣ ಕೇರಳ ಪೊಲೀಸರು, ಬ್ಯಾಂಕ್ ಮತ್ತು ಅದರ ಪದಾಧಿಕಾರಿಗಳ ವಿರುದ್ಧ ದಾಖಲಿಸಿದ 24 ಎಫ್‌ಐಆರ್ ಕೇಸ್‌ಗಳ ನಂತರ ಶುರುವಾಯಿತು. ಅಲ್ಲದೇ ಸಾರ್ವಜನಿಕರಿಂದ ಸಂಗ್ರಹಿಸಿದ ಠೇವಣಿ ಹಣಗಳನ್ನು ಹಿಂದಿರುಗಿಸಲು ಬ್ಯಾಂಕ್ ವಿಫಲವಾಗಿದೆ ಮತ್ತು ಇದರಿಂದ ಗ್ರಾಹಕರು ಅಪಾರ ನಷ್ಟ ಅನುಭವಿಸುವಂತಾಗಿದೆ ಎಂದು ಮಾಜಿ ಆಡಳಿತ ಮಂಡಳಿಯ ವಿರುದ್ಧ ದೂರುಗಳು ಕೇಳಿಬಂದಿತ್ತು.
ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 420 ಮತ್ತು 2023ರ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318(4) ರ ಅಡಿಯಲ್ಲಿ ದಾಖಲಾದ ಪ್ರಕರಣ, 2002ರ PMLA ನ ಅನುಸೂಚಿ (Schedule) 'ಎ' ಭಾಗದಲ್ಲಿ ನಿಗದಿಪಡಿಸಿದ ಅಪರಾಧಗಳ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು.
ತನಿಖೆಯ ಸಂದರ್ಭದಲ್ಲಿ, PMLA ನ ಸೆಕ್ಷನ್ 50 ರ ಅಡಿಯಲ್ಲಿ ದಾಖಲಾದ ಠೇವಣಿದಾರರ ಹೇಳಿಕೆಗಳು, ಅನೇಕ ಮನವಿಗಳ ಹೊರತಾಗಿಯೂ, ಸದಸ್ಯರಿಗೆ ಅವರ ಉಳಿತಾಯವನ್ನು ಹಿಂಪಡೆಯಲು ಅವಕಾಶ ನೀಡಲಾಗಿಲ್ಲ ಎಂದು ಹೇಳಲಾಗಿದೆ. ಈ ದೂರುಗಳು ಅಂದಿನ ಆಡಳಿತ ಮಂಡಳಿಯ ಆರ್ಥಿಕ ನಿರ್ವಹಣೆ ಮತ್ತು ನಿರ್ಧಾರಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಸಹಕಾರಿ ನಿಯಮಗಳು ಮತ್ತು ಸುತ್ತೋಲೆಗಳನ್ನು ಉಲ್ಲಂಘಿಸಿ ಠೇವಣಿಗಳನ್ನು ಸ್ವೀಕರಿಸುವುದು ಮತ್ತು ಸಾಲಗಳನ್ನು ಮಂಜೂರು ಮಾಡುವುದು ಅಪರಾಧ ಎಂದು ತನಿಖೆಯ ನಂತರ ಸಾಬೀತಾಗಿದೆ.
ಇದೀಗ ಕೊನೆಗೂ ಇಡಿ, ಸಿಪಿಎಂನ ಕೆಲವು ನಾಯಕರೊಂದಿಗೆ ಸಂಬಂಧ ಹೊಂದಿರುವ ತಿರುವನಂತಪುರಂನಲ್ಲಿರುವ ನೆಮೊಮ್ ಸಹಕಾರಿ ಬ್ಯಾಂಕಿನ ಮಂಡಳಿ ಸದಸ್ಯರು ಮತ್ತು ನಿರ್ದೇಶಕರ ವಿರುದ್ಧ ನಡೆಸಿದ ದಾಳಿಯಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಹಣವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಇಡಿ ಸೋಮವಾರ ಬಹಿರಂಗಪಡಿಸಿದೆ. ಇನ್ನು ವಂಚನೆಯಲ್ಲಿ ಆಗಿನ ಪದಾಧಿಕಾರಿಗಳು ದಾಖಲೆಗಳನ್ನು ನಕಲಿ ಮಾಡುವುದು, ಮಿತಿ ಮೀರಿ ಸಾಲ ಸೌಲಭ್ಯ ಒದಗಿಸುವುದು, ಅಕ್ರಮವಾಗಿ ಹಣ ವರ್ಗಾಯಿಸುವುದು ಹೀಗೆ ಹಲವು ರೀತಿಯಲ್ಲಿ ಗ್ರಾಹಕರ ಠೇವಣಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಬಯಲಾಗಿದೆ.


Click it and Unblock the Notifications