ಬೆಂಗಳೂರು: ಇತ್ತೀಚೆಗೆ ಬೆಂಗಳೂರು (Bengaluru) ಸೇರಿ ದೇಶದ ಹಲವು ರಾಜ್ಯಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿತ್ತು. ಕೆಲವು ಬಾರಿ 8 ರಿಂದ 9 ರೂ.ವರೆಗೂ ಹೆಚ್ಚಳವಾಗಿತ್ತು. ಆದ್ರೆ ಇದೀಗ ಇಸ್ರೇಲ್-ಅಮೆರಿಕಾ ಮತ್ತು ಇರಾನ್ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಮತ್ತೆ ಮೊಟ್ಟೆ ಮಾರುಕಟ್ಟೆ ಕುಸಿತದತ್ತ ಸಾಗುತ್ತಿದೆ. ಜನವರಿ, ಫೆಬ್ರವರಿ ತಿಂಗಳಲ್ಲಿ ಮೊಟ್ಟೆ ದರ ಭಾರೀ ಏರಿಕೆ (Egg Price) ಕಂಡು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿತ್ತು.

ಆದ್ರೆ ಇದೀಗ ಮಧ್ಯಪ್ರಾಚ್ಯದ ಸಂಘರ್ಷ (Middle East Conflict), ಭಾರತದ ಮೊಟ್ಟೆ ಮಾರುಕಟ್ಟೆಯ ಮೇಲೂ ಭಾರೀ ಪ್ರಭಾವ ಬೀರಿದೆ. ಈ ಹಿನ್ನೆಲೆ ಆಮದು, ರಫ್ತು ಸ್ಥಗಿತಗೊಂಡಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರವೂ ದಿಢೀರ್ ಇಳಿಕೆ ಕಂಡಿದೆ.
ಇಂದು ಎಷ್ಟಿದೆ ಮೊಟ್ಟೆ ದರ?
ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (NECC) ಪ್ರಕಾರ, ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಒಂದು ಮೊಟ್ಟೆಯ ಹೋಲ್‌ಸೇಲ್ ದರ ಸದ್ಯ 4.80 ರೂ.ಗೆ ಇಳಿಕೆ ಕಂಡಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ 4.50 ರಷ್ಟು ಕುಸಿತ ಕಂಡಿದೆ. ಅಂತೂ ಮೊಟ್ಟೆ ಪ್ರಿಯರಿಗೆ, ಜನಸಾಮಾನ್ಯರಿಗೆ ನಿಟ್ಟುಸಿರುಬಿಡುವಂತಾಗಿದೆ.
ಮೊಟ್ಟೆ ದರ ಇಳಿಕೆಯಾಗಲು ಕಾರಣವೇನು?
ಭಾರತದ ಮೊಟ್ಟೆ ಉತ್ಪಾದನೆಯಾಗುವ ಒಟ್ಟು ಮೊಟ್ಟೆಗಳಲ್ಲಿ ಸುಮಾರು ಶೇ.80% ರಷ್ಟು ಮೊಟ್ಟೆಗಳು ಕೊಲ್ಲಿ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಅಲ್ಲದೇ ಗಲ್ಫ್ ದೇಶಗಳಾದ ಯುಎಇ, ಒಮಾನ್, ಕತಾರ್, ಬಹ್ರೈನ್, ಕುವೈತ್ ಮತ್ತು ಸೌದಿ ಅರೇಬಿಯಾದಂತಹ ದೇಶಗಳಿದೆ, ಯುದ್ಧದ ಭೀತಿಯಿಂದಾಗಿ ರಫ್ತಿನ ಪ್ರಮಾಣ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಅಲ್ಲದೇ ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಶಿಪ್ಪಿಂಗ್ ಮಾರ್ಗಗಳಲ್ಲಿ ಆತಂಕ ಮನೆ ಮಾಡಿದ್ದು, ರಫ್ತು, ಆಮದು ನಿಲ್ಲಿಸಲಾಗಿದೆ. ಸಾಮಾನ್ಯವಾಗಿ ಭಾರತದಿಂದ, ಕರ್ನಾಟಕದಿಂದ ಸಾಕಷ್ಟು ಮೊಟ್ಟೆಗಳು ಈ ದೇಶಗಳಿಗೆ ಸಾಗಿಸಲಾಗುತ್ತಿತ್ತು. ಆದ್ರೆ ಇದೀಗ ರಾಜ್ಯದಲ್ಲಿ ರಫ್ತು ನಿಲ್ಲಿಸಲಾಗಿದ್ದು, ಅದೇ ಕಾರಣದಿಂದ ಮೊಟ್ಟೆ ದರ ಇಳಿಕೆಯಾಗಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಹೇಗಿದೆ ಮೊಟ್ಟೆ ದರ?
ಇನ್ನು ಬೆಂಗಳೂರಿನಲ್ಲಿ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಒಂದು ಟ್ರೇ ಅಂದರೆ 30 ಮೊಟ್ಟೆಗಳನ್ನು 144 ರೂ.ಗೆ ಮತ್ತು 100 ಮೊಟ್ಟೆಗಳು 480 ರೂ.ಗೆ ಖರೀದಿಗೆ ಲಭ್ಯವಿದೆ. ಅಲ್ಲದೇ ಕೆಲವು ಪ್ರದೇಶಗಳಲ್ಲಿ ಇನ್ನೂ ಕಮ್ಮಿ ಬೆಲೆಗೆ ಮೊಟ್ಟೆ ಖರೀದಿಸಲು ಲಭ್ಯವಿದೆ.
ಕಚ್ಚಾ ತೈಲ, ಇಂಧನ ಬೆಲೆ ಏರಿಕೆ!
ಅತ್ತ ಮೊಟ್ಟೆ ದರ ಇಳಿಕೆ ಕಂಡರೂ, ಇತ್ತ ಯುದ್ಧದ ತೀವ್ರತೆಯಿಂದಾಗಿ ಅಡುಗೆ ಎಣ್ಣೆ, ಕಚ್ಚಾ ತೈಲ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳು ಭಾರೀ ಏರಿಕೆ ಕಂಡಿದೆ.ಜ
ನಸಾಮಾನ್ಯರಿಗೆ ಸಂತಸ
ಕಳೆದೆರಡು ತಿಂಗಳ ಹಿಂದೆ ಮೊಟ್ಟೆ ಬೆಲೆ 7 ರಿಂದ 8 ರೂಪಾಯಿವರೆಗೆ ತಲುಪಿತ್ತು. ಆದ್ರೆ ಇದೀಗ ದಿಢೀರ್ ಕುಸಿತ ಕಂಡಿದ್ದು, ಜನಸಾಮಾನ್ಯರು ಸಂತಸಪಡುವಂತಾಗಿದೆ. 7 ರೂ.ನಿಂದ 5 ರೂಪಾಯಿವರೆಗೆ ಮೊಟ್ಟೆ ಬೆಲೆ ತಲುಪಿದೆ ಎಂದರೆ ಆಶ್ಚರ್ಯಪಡುವ ಸಂಗತಿಯೇ ಆಗಿದೆ.


Click it and Unblock the Notifications