ದೇಶದೆಲ್ಲೆಡೆ ಈದ್-ಉಲ್-ಫಿತರ್ ಹಬ್ಬವನ್ನು ಒಂದು ದಿನ ಮುಂದೂಡಲಾಗಿದೆ. ರಂಜಾನ್ ಉಪವಾಸ ಮಾಸನ ಅಂತ್ಯವನ್ನು ಸೂಚಿಸುವ ಈ ಹಬ್ಬಕ್ಕೆ, ಚಂದ್ರ ಕಾಣಿಸುವುದು ಅತಿ ಮುಖ್ಯ. ಆದರೆ ಗುರುವಾರ ಸಂಜೆ ಚಂದ್ರ ಕಾಣಿಸದ ಕಾರಣ, ಇಂದು (ಶುಕ್ರವಾರ) ನಡೆಯಬೇಕಿದ್ದ ಈದ್ ಹಬ್ಬ ಶನಿವಾರಕ್ಕೆ ಮುಂದೂಡಲಾಗಿದೆ. ಫತೇಪುರಿ ಮಸೀದಿ ಇಮಾಮ್ ಮುಫ್ತಿ ಮುಕರಮ್ ಅಹ್ಮದ್ ತಿಳಿಸಿದಂತೆ, ರುಯೆಟ್-ಇ-ಹಿಲಾಲ್ ಸಮಿತಿಯು ಹಲವು ಸ್ಥಳಗಳಿಂದ ಮಾಹಿತಿ ಸಂಗ್ರಹಿಸಿದ್ದು, ಚಂದ್ರನ ದರ್ಶನವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಆದರೆ ಕೇರಳದಲ್ಲಿ ಮಾತ್ರ ಶುಕ್ರವಾರವೇ, ಅಂದರೆ ಮಾರ್ಚ್ 20, 2026ರಂದು ಈದ್ ಆಚರಣೆ ಮಾಡಲಾಗುವುದು ಎನ್ನಲಾಗ್ತಿದೆ. ಏಕೆಂದರೆ ಪರಪ್ಪನಂಗಡಿಯ ಚೆಟ್ಟಿಪ್ಪಾಡಿ ಪ್ರದೇಶದಲ್ಲಿ ಶವ್ವಾಲ್ ಚಂದ್ರ ಕಾಣಿಸಿಕೊಂಡಿದೆ ಎಂದು ಅಲ್ಲಿನ ಧಾರ್ಮಿಕ ಮುಖಂಡರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಗಳ್, ಸಯ್ಯಿದ್ ಜಿಫ್ರಿ ಮುತ್ತುಕ್ಕೋಯ ತಂಗಳ್, ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮತ್ತು ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ಸೇರಿದಂತೆ ಹಲವರು ಶುಕ್ರವಾರವೇ ಶವ್ವಾಲ್‌ನ ಮೊದಲ ದಿನ ಎಂದು ಘೋಷಿಸಿದರು.
ದೆಹಲಿಯ ಜಾಮಾ ಮಸೀದಿಯ ನಯಬ್ ಶಾಹಿ ಇಮಾಮ್ ಸೈಯದ್ ಶಬಾನ್ ಬುಖಾರಿ ಕೂಡ ಚಂದ್ರದರ್ಶನವಾಗಿಲ್ಲ ಎಂದು ಹೇಳಿ, ದೇಶದ ಹಲವೆಡೆ ಶನಿವಾರ ಈದ್ ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಅವರ ಪ್ರಕಾರ, ಶುಕ್ರವಾರವು ರಂಜಾನ್ ತಿಂಗಳ ಕೊನೆಯ ದಿನವಾಗಿದ್ದು, ಇದು 30ನೇ ಉಪವಾಸ ದಿನವಾಗಿದೆ.
ಈದ್-ಉಲ್-ಫಿತರ್ ಹಬ್ಬವನ್ನು ವಿಶ್ವದ ವಿವಿಧ ಭಾಗಗಳಲ್ಲಿ ಚಂದ್ರದರ್ಶನದ ಆಧಾರದಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸಲಾಗುತ್ತದೆ. ಇಸ್ಲಾಮಿಕ್ ಪಂಚಾಂಗದಲ್ಲಿ ಶವ್ವಾಲ್ ತಿಂಗಳ ಆರಂಭವನ್ನು ಚಂದ್ರನ ಕಾಣಿಕೆಯಿಂದ ನಿರ್ಧರಿಸಲಾಗುತ್ತದೆ. ಅದರಿಂದಲೇ ಕೆಲ ಕಡೆ ಒಂದು ದಿನ ಬೇಗ, ಇನ್ನೂ ಕೆಲವು ಕಡೆ ಒಂದು ದಿನ ತಡವಾಗಿ ಹಬ್ಬ ಬರುತ್ತದೆ.
ಕಳೆದ ವರ್ಷ ರಂಜಾನ್ 29 ದಿನಗಳಷ್ಟೇ ಇತ್ತು. ಆದರೆ ಈ ವರ್ಷ ರಂಜಾನ್ 30 ದಿನಗಳವರೆಗೆ ಮುಂದುವರಿದಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಪ್ರತಿ ತಿಂಗಳು 29 ಅಥವಾ 30 ದಿನಗಳಿರುತ್ತದೆ. ಇದು ಚಂದ್ರನ ದರ್ಶನದ ಮೇಲೆ ಅವಲಂಬಿತವಾಗಿರುತ್ತದೆ.
ರಂಜಾನ್ ತಿಂಗಳು ಮುಸ್ಲಿಮರಿಗಾಗಿ ಅತ್ಯಂತ ಪವಿತ್ರ ಕಾಲವಾಗಿದೆ. ಈ ತಿಂಗಳಲ್ಲಿ ಭಕ್ತರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಆಚರಿಸುತ್ತಾರೆ. ಆಹಾರವೂ ಬೇಡ, ನೀರೂ ಬೇಡ ಎಂಬ ನಿಯಮದೊಂದಿಗೆ ಪ್ರಾರ್ಥನೆ, ದಾನಧರ್ಮ ಮತ್ತು ಆತ್ಮಶುದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.
ಈದ್-ಉಲ್-ಫಿತರ್ ಅನ್ನು ಸಹೋದರತ್ವ, ಪ್ರೀತಿ ಮತ್ತು ಸಾಮರಸ್ಯದ ಹಬ್ಬವೆಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಕುಟುಂಬದವರೊಂದಿಗೆ ಮತ್ತು ಬಂಧು-ಬಳಗದವರೊಂದಿಗೆ ಸಂತೋಷ ಹಂಚಿಕೊಳ್ಳುತ್ತಾರೆ. ದೇಶದಲ್ಲಿ ಪ್ರೀತಿ, ಸೌಹಾರ್ದತೆ ಮತ್ತು ಒಗ್ಗಟ್ಟು ಇನ್ನಷ್ಟು ಬಲವಾಗಲಿ ಎಂಬ ಆಶಯವೂ ವ್ಯಕ್ತವಾಗುತ್ತಿದೆ.


Click it and Unblock the Notifications