ಟ್ವಿಟ್ಟರ್ ಮುಖ್ಯಸ್ಥ, ಬಿಲಿಯನೇರ್ ಮತ್ತು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುವುದನ್ನು ಆರಂಭಿಸಿದ್ದಾರೆ. ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ಒಟ್ಟಾಗಿ ಸುಮಾರು 195 ಮಂದಿಯನ್ನು ಫಾಲೋ ಮಾಡುತ್ತಿದ್ದು ಈ ಪೈಕಿ ಮೋದಿ ಕೂಡಾ ಒಬ್ಬರಾಗಿದ್ದಾರೆ. ಈ ಹಿಂದೆ ಎಲಾನ್ ಮಸ್ಕ್‌ನ ಫಾಲೋವರ್‌ಗಳ ಪಟ್ಟಿಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರು ಇರಲಿಲ್ಲ. ಆದರೆ ಈಗ ಕಾಣಿಸಿಕೊಂಡಿದ್ದು, ಟೆಸ್ಲಾ ಭಾರತಕ್ಕೆ ಬರುತ್ತಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಎಲಾನ್ ಮಸ್ಕ್ ಫಾಲೋ ಮಾಡುವ 195 ಮಂದಿಯ ಪಟ್ಟಿಯ ಸ್ಕ್ರೀನ್‌ಶಾಟ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವೈಯಕ್ತಿಕ ಅಧಿಕೃತ ಖಾತೆಯು ಕೂಡಾ ಸೋಮವಾರ ಕಾಣಿಸಿಕೊಂಡಿದೆ. ಈ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ಈಗ ಸಂಚಲನ ಮೂಡಿಸಿದೆ. ಟ್ವಿಟ್ಟರ್‌ನಲ್ಲಿ ಅತೀ ಹೆಚ್ಚು ಫಾಲೋ ಮಾಡಲಾಗುವ ವ್ಯಕ್ತಿ ಎಲಾನ್ ಮಸ್ಕ್ ಆಗಿದ್ದಾರೆ. ಎಲಾನ್ ಮಸ್ಕ್ ಅನ್ನು 134.3 ಮಿಲಿಯನ್ ಜನರು ಫಾಲೋ ಮಾಡುತ್ತಾರೆ. ಇನ್ನು ಕಳೆದ ಮಾರ್ಚ್ ತಿಂಗಳಿನಲ್ಲಿ ಯುಎಸ್‌ನ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರನ್ನು ಎಲಾನ್ ಮಸ್ಕ್ ಫಾಲೋ ಮಾಡಲು ಆರಂಭಿಸಿದ್ದಾರೆ.

ಇನ್ನು 87.7 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ ಅತೀ ಹೆಚ್ಚು ಫಾಲೋ ಮಾಡಲಾಗುವ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಎಲಾನ್ ಮಸ್ಕ್ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡಲು ಆರಂಭಿಸಿದ್ದಾರೆ ಎಂಬ ಸುದ್ದಿಯನ್ನು ಎಲಾನ್ ಅಲರ್ಟ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ಖಾತೆಯು ಟೆಸ್ಲಾದ ಮುಖ್ಯಸ್ಥರೂ ಆಗಿರುವ ಎಲಾನ್ ಮಸ್ಕ್‌ನ ಎಲ್ಲ ಅಪ್‌ಡೇಟ್‌ಗಳನ್ನು ನೀಡುತ್ತದೆ.
ಟೆಸ್ಲಾ ಭಾರತಕ್ಕೆ ಬರುತ್ತದೆಯೇ?
ಎಲಾನ್ ಮಸ್ಕ್ ಮೋದಿಯನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡಲು ಆರಂಭಿಸಿರುವ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಳಿಕ ಟೆಸ್ಲಾ ಸಂಸ್ಥೆಯ ಕಾರುಗಳು ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡುತ್ತಾ ಎಂಬ ಸುದ್ದಿಯಾಗುತ್ತಿದೆ. ಕೆಲವು ನೆಟ್ಟಿಗರು ಟೆಸ್ಲಾ ಭಾರತದ ಮಾರುಕಟ್ಟೆಗೆ ಬರಲಿದೆಯೇ ಎಂದು ಪ್ರಶ್ನಿಸಿದ್ದಾರೆ. "ಭಾರತದ ನರೇಂದ್ರ ಮೋದಿಯನ್ನು ಯಾವ ಕಾರಣದಿಂದಾಗಿ ಎಲಾನ್ ಮಸ್ಕ್ ಫಾಲೋ ಮಾಡಲು ಆರಂಭಿಸಿದ್ದಾರೆ?. ನಾವು ಟೆಸ್ಲಾದ ಫಾಕ್ಟರಿ ಭಾರತದಲ್ಲಿ ಆರಂಭವಾಗುವ ನಿರೀಕ್ಷೆ ಹೊಂದಬಹುದೇ?, ಏನಾಗುತ್ತದೆ ನೋಡೋಣ," ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಇನ್ನು ಕೆಲವು ನೆಟ್ಟಿಗರು ಆಶ್ಚರ್ಯವನ್ನು ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತದ ಬೆಳವಣಿಗೆಗಾಗಿ ಹಲವಾರು ಕಾರ್ಯಗಳನ್ನು ಮಾಡಿದ್ದಾರೆ. ಆದ್ದರಿಂದಾಗಿ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿದ್ದಾರೆ ಎಂದಿದ್ದಾರೆ. "ಧನ್ಯವಾದಗಳು ಎಲಾನ್ ಮಸ್ಕ್!, ನಮ್ಮ ದೇಶದ ಬೆಳವಣಿಗೆಗಾಗಿ, ಜನರ ಪ್ರಗತಿಗಾಗಿ ಪ್ರಧಾನಿ ಮೋದಿಜಿ ಕಾರ್ಯ ನಿರ್ವಹಣೆ ಮಾಡುತ್ತಿರುವಾಗ, ಎಲಾನ್ ಮಸ್ಕ್ ಉತ್ತಮ ಸಮಾಜ ಮತ್ತು ಇಂದಿನ ಮಕ್ಕಳಿಗೆ ಉತ್ತಮ ಭವಿಷ್ಯದ ಜೀವನಕ್ಕಾಗಿ ಶ್ರಮಿಸುತ್ತಿದ್ದಾರೆ. ಇಬ್ಬರಿಗೂ ಶುಭ ಹಾರೈಕೆಗಳು," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಗಿನೀಸ್ ವರ್ಲ್ಡ್ ರೆಕಾರ್ಡ್ ಪ್ರಕಾರ ಮಾಸಿಕವಾಗಿ 450 ಮಿಲಿಯನ್ ಮಂದಿ ಟ್ವಿಟ್ಟರ್‌ನ ಸಕ್ರಿಯ ಬಳಕೆದಾರರು ಆಗಿದ್ದಾರೆ. ಟ್ವಿಟ್ಟರ್‌ನ ಒಟ್ಟು ಬಳಕೆದಾರರ ಪೈಕಿ ಶೇಕಡ 30ರಷ್ಟು ಮಂದಿ ಎಲಾನ್ ಮಸ್ಕ್‌ರನ್ನು ಫಾಲೋ ಮಾಡುತ್ತಾರೆ. ಅಕ್ಟೋಬರ್‌ನಲ್ಲಿ ಎಲಾನ್ ಮಸ್ಕ್ ಟ್ವಿಟ್ಟರ್ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಎಲಾನ್ ಮಸ್ಕ್ ಫಾಲೋವರ್‌ಗಳ ಸಂಖ್ಯೆಯು 110 ಮಿಲಿಯನ್ ಆಗಿತ್ತು, ಆದರೆ ಕೆಲವೇ ತಿಂಗಳುಗಳಲ್ಲಿ ಈ ಸಂಖ್ಯೆಯು 133 ಮಿಲಿಯನ್‌ಗೆ ಏರಿಕೆಯಾಗಿದೆ. ಜಸ್ಟಿನ್ ಬೀಬರ್, ಬರಾಕ್ ಓಬಾಮಾ ಬಳಿಕ ಟ್ವಿಟ್ಟರ್‌ನಲ್ಲಿ ಅತೀ ಹೆಚ್ಚು ಫಾಲೋ ಮಾಡಲಾಗುತ್ತಿರುವ ಮೂರನೇ ವ್ಯಕ್ತಿ ಎಲಾನ್ ಮಸ್ಕ್ ಆಗಿದ್ದಾರೆ.


Click it and Unblock the Notifications