ಭಾರತೀಯ ಚಿತ್ರರಂಗದಲ್ಲಿ ಮಲಯಾಳಂ ಭಾಷೆಯ ಸಿನಿಮಾಗಳ ಪ್ರಭಾವ ದಿನೇ ದಿನೆ ಹೆಚ್ಚುತ್ತಿದೆ. ಅತ್ಯುತ್ತಮ ಚಲನಚಿತ್ರಗಳನ್ನೇ ನೀಡುತ್ತಾ ಬಂದಿರುವ ಮಲಯಾಳಂ ಚಿತ್ರಗಳನ್ನು ನೋಡಿದಾಗ ಎಲ್ಲರ ಅಭಿಪ್ರಾಯವೂ ಒಂದೇ ಆಗಿರುತ್ತದೆ. ಅದೇನೆಂದರೆ ಮಲಯಾಳಂ ಇಂಡಸ್ಟ್ರಿಯಲ್ಲಿ ಗ್ಲಾಮರ್‍ಗಿಂತ ಕಲೆ ಮತ್ತು ಕಲಾವಿದನ ಕೆಪಾಸಿಟಿಯನ್ನ ನೋಡ್ತಾರೆ ಅನ್ನೋದು. ಹೀಗೆ ಮಲಯಾಳಂ ಇಂಡಸ್ಟ್ರಿ ಎಂದರೆ ತಕ್ಷಣ ನೆನಪಾಗೋದು ನಟ ಮೋಹನ್ ಲಾಲ್ ಅವರು. ಆಕ್ಷನ್ ಥ್ರಿಲ್ಲರ್ ಆಗಿರಲಿ, ಸೆಂಟಿಮೆಂಟ್ ಸೀನ್ ಆಗಿರಲಿ ನೀರು ಕುಡಿದಷ್ಟೇ ಸುಲಭ ಅವರಿಗೆ. ಇದೀಗ ಅವರ ಬಹು ನಿರೀಕ್ಷಿತ ಚಿತ್ರ ಎಂಪುರಾನ್ ಮಾರ್ಚ್ 27ರಂದು ಬಿಡುಗಡೆಯಾಗ್ತಿದೆ.. ಇದರ ನಡುವೆ ಈ ಚಿತ್ರಕ್ಕೆ ಬೆಂಗಳೂರಿನ ಕಾಲೇಜೊಂದು ಈ ರೀತಿ ಗೌರವ ಸಲ್ಲಿಸೋಕೆ ಸೂಚಿಸಿದೆ.

ಹೌದು, ಮಾರ್ಚ್ 27ರಂದು ಎಂಪುರಾನ್ ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನೆಲೆ, ಬೆಂಗಳೂರಿನ ಗುಡ್ ಶೆಫರ್ಡ್ ಕಾಲೇಜು ಆ ದಿನ ರಜೆ ಘೋಷಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳು ಖುಷಿಯಾಗಿ ಎಂಪುರಾನ್ ಚಿತ್ರವನ್ನು ದೊಡ್ಡ ಪರದೆಯಲ್ಲಿ ಅನುಭವಿಸಬಹುದಾಗಿದೆ. ಕಾಲೇಜು ಆಡಳಿತ ಮಂಡಳಿಯು ತಮ್ಮ ಈ ನಿರ್ಧಾರವನ್ನು ಲೈಟ್ಸ್, ಕ್ಯಾಮೆರಾ ಹಾಲಿಡೇ ಎಂಬ ವಿಶೇಷ ಶೈಲಿಯಲ್ಲಿ ಘೋಷಣೆ ಮಾಡಿದೆ. ಈ ರಜೆಯ ಹಿಂದೆ ಅಧ್ಯಕ್ಷರ ಮೋಹನ್ ಲಾಲ್ ಬಗ್ಗೆ ಇರುವ ಪ್ರೀತಿ ಹಾಗೂ ಗೌರವವೇ ಕಾರಣವಾಗಿದೆ.
ಕೇವಲ ರಜೆಯಷ್ಟೇ ಅಲ್ಲ..ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಗುಡ್‌ಶೆಫರ್ಡ್ ಕಾಲೇಜು, ಸಿನಿಮಾದ ವಿಶೇಷ ಪ್ರದರ್ಶನವನ್ನು ಕೂಡ ಏರ್ಪಡಿಸಿದೆ. ರಾಜರಾಜೇಶ್ವರಿ ನಗರದ ವೈಜಿಆರ್ ಮಾಲ್‌ನ ಮೂವೀಟೈಮ್ ಸಿನಿಮಾಸ್ ನಲ್ಲಿ ಬೆಳಿಗ್ಗೆ 7 ಗಂಟೆಗೆ ಪ್ರದರ್ಶನವನ್ನು ಆಯೋಜಿಸಿದ್ದು, ಈ ಪ್ರದರ್ಶನಕ್ಕೆ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಟಿಕೆಟ್ಗಳನ್ನು ನೀಡುತ್ತಿದೆ. ಇದು ಮೋಹನ್ ಲಾಲ್ ಅವರ ಪ್ರತಿಭೆ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರ ನಿರ್ದೇಶನಕ್ಕೆ ಗೌರವ ಸೂಷಿಸಲು ಈ ವಿಶೇಷ ಪ್ರದರ್ಶನ ಎನ್ನಲಾಗಿದೆ. ಅಲ್ಲದೇ ಈ ಮೂಲಕ ಕಾಲೇಜು ಆಡಳಿತ ಮಂಡಳಿ ಹೇಳಿದ್ದೇನೆಂದು, ಇಂದು ಕೇವಲ ಸಿನಿಮಾ ಮಾತ್ರವಲ್ಲ, ಇದು ಒಂದು ವಿದ್ಯಮಾನ ಎಂದು.
ಇನ್ನು ಬೆಂಗಳೂರಿನಲ್ಲಿ ಈ ರೀತಿಯ ಫಿಲ್ಮ್ ಫೀವರ್ ಇದೇ ಮೊದಲೇನು ಕಂಡುಬಂದಿಲ್ಲ. ಇದಕ್ಕೂ ಮುಂಚೆ ಹಲವಾರು ಬಾರಿ ಕಂಡುಬಂದಿದೆ. 2023ರಲ್ಲಿ ರಜನಿಕಾಂತ್ ಅವರ "ಜೈಲರ್" ಬಿಡುಗಡೆಯಾದಾಗ ಚೆನ್ನೈ ಮತ್ತು ಬೆಂಗಳೂರಿನ ಹಲವಾರು ಕಂಪನಿಗಳು ಪ್ರೀಮಿಯರ್ ಶೋಗೆ ಅವರ ಉದ್ಯೋಗಿಗಳಿಗೆ ರಜೆ ನೀಡಿದ್ದವು. ಕೆಲವರು ಉಚಿತ ಟಿಕೆಟ್‌ಗಳನ್ನೂ ಹಂಚಿದ್ದರು. ಹಾಗೆಯೇ 2016ರಲ್ಲಿ ಕಬಾಲಿ ಬಿಡುಗಡೆಯಾದಾಗಲೂ ಇದೇ ರೀತಿಯ ಉತ್ಸಾಹವಿತ್ತು. ತಮಿಳುನಾಡು ಮತ್ತು ಕರ್ನಾಟಕದ ಹಲವಾರು ಕಾಲೇಜುಗಳು ರಜೆ ಘೋಷಿಸಲಾಗಿತ್ತು. ಇವುಗಳನ್ನು ಗಮನಿಸಿದರೆ, ಭಾರತೀಯ ಚಿತ್ರರಂಗದಲ್ಲಿ ಕೆಲವು ನಟರೊಬ್ಬರ ಪ್ರಭಾವ ಅದ್ಭುತ ಮಟ್ಟದಲ್ಲಿ ಇರಬಹುದು. ರಜನಿಕಾಂತ್, ಮೋಹನ್ ಲಾಲ್ ಮತ್ತು ಇತರ ಸೂಪರ್ ಸ್ಟಾರ್‌ಗಳ ಸಿನಿಮಾಗಳಿಗೆ ಅಭಿಮಾನಿಗಳು ಹಬ್ಬದಂತೆ ಕಾಯುವುದು ಈಗ ಸಾಮಾನ್ಯವಾಗಿದೆ.
ಇದು ಕೇವಲ ಒಂದು ಚಿತ್ರ ವೀಕ್ಷಣೆ ಎನ್ನುವುದಕ್ಕಿಂತ, ಇದು ಒಬ್ಬ ನಟನಿಗೆ ಅಭಿಮಾನಿಗಳಿಂದ ಸಿಗುವ ಗೌರವ ಎನ್ನಬಹುದು. ಅದರಲ್ಲೂ ಮಲಯಾಳಂ ನಟ ಮೋಹನ್ ಲಾಲ್ ಅವರ ಬಗ್ಗೆ ಅಭಿಮಾನಿಗಳಿಗಿರುವ ಹುಚ್ಚು ಅಂತಿಂಥದ್ದಲ್ಲ. ಈ ಸಿನಿಮಾ ಹಬ್ಬದ ವಾತಾವರಣ ಚಿತ್ರರಂಗ ಮತ್ತು ಅಭಿಮಾನಿಗಳ ನಡುವಿನ ಬೆಸುಗೆ ಪ್ರತಿಬಿಂಬಿಸುತ್ತದೆ. ಮಲಯಾಳಂ ಚಿತ್ರರಂಗ ಈಗ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷಾ ಪ್ರೇಕ್ಷಕರಿಗೂ ಕುತೂಹಲ ಮೂಡಿಸುತ್ತಿದೆ. ಭಾರತೀಯ ಚಿತ್ರರಂಗದ ಬಹುದೊಡ್ಡ ಬ್ಲಾಕ್ ಬಸ್ಟರ್‍ಗಳಲ್ಲಿ ಒಂದಾದ ಲೂಸಿಫರ್ ಚಿತ್ರದ, ಮುಂದುವರಿದ ಭಾಗ ಆಗಿರುವ ಎಂಪುರಾನ್‌ನತ್ತ ಎಲ್ಲರ ಕಣ್ಣೂ ನೆಟ್ಟಿದೆ.
ಇನ್ನು ಸಿನಿಮಾ ಎನ್ನುವುದು ಕೇವಲ ಮನರಂಜನೆಯಷ್ಟೇ ಅಲ್ಲ, ಕೆಲವೊಮ್ಮೆ ಅದು ಭಾವೋದ್ರೇಕವಾಗಿರುತ್ತದೆ. ಅಭಿಮಾನ, ಸಂಭ್ರಮ ಮತ್ತು ಸಂಸ್ಕೃತಿಯ ಪ್ರತೀಕವೂ ಆಗಿರುತ್ತದೆ. ಈ ರೀತಿ ಬೆಳೆಯುತ್ತಿರುವ ಚಿತ್ರರಂಗದ ಕ್ರೇಜ್‌ನ್ನು ನೋಡಿದರೆ, ಭಾರತೀಯ ಸಿನಿಮಾ ಕಲೆಯಷ್ಟೇ ಹೃದಯದಲ್ಲೂ ದೊಡ್ಡ ಪ್ರಭಾವ ಬೀರಬಲ್ಲದು ಎಂಬುದು ಸಾಬೀತಾಗುತ್ತದೆ.


Click it and Unblock the Notifications