ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯು ಒಂದೂವರೆ ವರ್ಷ ಪೂರೈಸಿದ್ದು, ಈವರೆಗೂ ಬರೋಬ್ಬರಿ ಅಂದಾಜು ಪ್ರಕಾರ 9000 ಕೋಟಿ ರೂಪಾಯಿಗೂ ಅಧಿಕ ಉಚಿತ ವಿದ್ಯುತ್ ನೀಡಲಾಗಿದೆ. 1.70 ಕೋಟಿಗೂ ಅಧಿಕ ಗ್ರಾಹಕ ಕುಟುಂಬಗಳು ಈ ಯೋಜನೆ ಲಾಭ ಪಡೆದುಕೊಂಡಿದ್ದಾರೆ.
ರಾಜ್ಯ ಸರ್ಕಾರವು ಚುನಾವಣೆಯಲ್ಲಿ ನೀಡಿದ ಭರವಸೆಯಂತೆ200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ಯೋಜನೆಯನ್ನು 2023 ಆಗಸ್ಟ್‌ನಿಂದ ಆರಂಭಿಸಿತು. ಕಳೆದ ವರ್ಷ ಜೂನ್ 18 ರಿಂದ ನೋಂದಣಿ ಅವಕಾಶ ನೀಡಿತ್ತು. ಮೊದಲು 200 ಯೂನಿಟ್‌ವರೆಗೂ ಉಚಿತ ಎಂದು ಹೇಳಿ ಆ ಬಳಿಕ ವಾರ್ಷಿಕ ಸರಾಸರಿ ಮೇಲೆ ಶೇ. 10 ರಷ್ಟು ಯೂನಿಟ್‌ನಷ್ಟು ಮಾತ್ರ ಉಚಿತವಾಗಿ ನೀಡಿತು. ಕಳೆದ ಒಂದು ವರ್ಷದಿಂದ ಯಾವುದೇ ಸಮಸ್ಯೆ ಇಲ್ಲದೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸ ಬರಿದಾಗಿರುವುದು ಬಹಿರಂಗ ಸತ್ಯವಾದ್ರೂ ಅತ್ತ ಪಂಚ ಗ್ಯಾರಂಟಿ ಯೋಜನೆ ಸರ್ಕಾರಕ್ಕೆ ನುಂಗಲಾದ ಉಗುಳಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಹೀಗಿರುವಾಗ ಗೃಹಜ್ಯೋತಿ ಯೋಜನೆ ಹಳಿ ತಪ್ಪುತ್ತಾ ಅನ್ನುವ ಅನುಮಾನ ಕಾಡತೊಡಗಿದೆ. ಇದಕ್ಕೆ ಪ್ರಮುಖ ಕಾರಣ ರಾಜ್ಯದ ವಿವಿಧ ಎಸ್ಕಾಂಗಳು ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ(ಕೆಇಆರ್ ಸಿ) ಕ್ಕೆ ಮಾಡಿರುವ ಮನವಿ.!

ಗೃಹಜ್ಯೋತಿ ಯೋಜನೆಯಿಂದ ಸರ್ಕಾರಕ್ಕೆ ಮಾಸಿಕವೂ ಅಂದಾಜು 750 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ. ಇದನ್ನು ಸರ್ಕಾರ ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳಿಗೆ ಬಿಡುಗಡೆ ಮಾಡಬೇಕು. ಆದರೆ ಸಬ್ಸಿಡಿ ಹಣವನ್ನು ಸರ್ಕಾರ ಮುಂಗಡವಾಗಿ ಪಾವತಿಸದೇ ಇದ್ದರೆ ಅದನ್ನು ಜನರಿಂದಲೇ ವಸೂಲಿ ಮಾಡಲು ಅವಕಾಶ ನೀಡುವಂತೆ ವಿವಿಧ ಎಸ್ಕಾಂಗಳು ಕೆಇಆರ್ ಸಿ ಗೆ ಮನವಿ ಮಾಡಿದೆ.
ಒಂದು ವೇಳೆ ಈ ಪ್ರಸ್ತಾವನೆಯನ್ನು ಕೆಇಆರ್ ಸಿ ಒಪ್ಪಿಗೆ ನೀಡಿದರೆ, ಸರ್ಕಾರದಿಂದ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ತಮ್ಮ ವಿದ್ಯುತ್ ಬಿಲ್ ಅನ್ನು ಮೊದಲಿಗೆ ಎಸ್ಕಾಂಗಳಿಗೆ ಪಾವತಿಸಿ ಬಳಿಕ ಸರ್ಕಾರದಿಂದ ಕ್ಲೇಮು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರಲಿದೆ. ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ಜನರಿಗೆ ಮೊದಲು ವಿದ್ಯುತ್ ಬಿಲ್ ಪಾವತಿ ಮಾಡುವುದು ಅದನ್ನು ಸರ್ಕಾರದಿಂದ ಕ್ಲೈಮ್ ಮಾಡಿಕೊಳ್ಳುವುದು ಹೆಚ್ಚುವರಿ ತಲೆನೋವಾಗಲಿದೆ. ಸರ್ಕಾರ ಸಕಾಲಕ್ಕೆ ಹಣ ಪಾವತಿಯಾಗುತ್ತಿಲ್ಲ ಎಂಬ ಆಕ್ಷೇಪ ಬಂದಿರುವುದರಿಂದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಮುಂದಿನ ನಡೆ ಏನಿದೆ ಎಂದು ಕಾದು ನೋಡಬೇಕಿದೆ.
ದರ ಏರಿಕೆಗೂ ಮನವಿ:
ಕರ್ನಾಟಕದ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ಮುಂದಿನ ಮೂರು ವರ್ಷಗಳ ವಿದ್ಯುತ್ ದರವನ್ನು ಏಕಕಾಲದಲ್ಲಿ ಹೆಚ್ಚಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿವೆ. ಪ್ರತಿ ಯೂನಿಟ್ ಬೆಲೆಯನ್ನು 37 ಪೈಸೆಯಿಂದ 1.32 ರೂಪಾಯಿವರೆಗೆ ಹೆಚ್ಚಿಸುವಂತೆ ಕೋರಿವೆ.
ಕೆಇಆರ್‌ಸಿ ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದು, ಫೆಬ್ರವರಿ 27 ರಂದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಕಾರ್ಯವನ್ನು ಪೂರ್ಣಗೊಳಿಸಲಿದೆ. ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ, ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ವಿದ್ಯುತ್ ದರ ಹೆಚ್ಚಳವನ್ನು ಕೆಇಆರ್‌ಸಿ ಪ್ರಕಟಿಸುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ, ಕೆಇಆರ್‌ಸಿ ಮೂರು ವರ್ಷಗಳ ಹೆಚ್ಚಳವನ್ನು ಒಟ್ಟಿಗೆ ಪ್ರಕಟಿಸುತ್ತದೆಯೇ ಅಥವಾ 2025-26 ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ ಪ್ರಕಟಿಸುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.
ವಿದ್ಯುತ್ ಉತ್ಪಾದನೆ, ಖರೀದಿ, ಪ್ರಸರಣ ವೆಚ್ಚದಲ್ಲಿ ಏರಿಕೆಯಾಗಿದೆ. ಹೀಗಾಗಿ ವಿದ್ಯುತ್ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಮಾಡಬೇಕು ಎಂದು ಎಸ್ಕಾಂಗಳು ಮನವಿ ಮಾಡಿದ್ದು, ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ದರ ಹೆಚ್ಚಳಕ್ಕೆ ಮೊರೆ ಇಟ್ಟಿವೆ. ಈಗ 2027-28ನೇ ಸಾಲಿನವರೆಗೂ ದರ ಹೆಚ್ಚಳ ಮಾಡಿದರೂ ಮುಂದಿನ ವರ್ಷಗಳಲ್ಲೂ ನಿರ್ವಹಣಾ ವೆಚ್ಚ ಹೆಚ್ಚಳ ಹಾಗೂ ಇಂಧನ ನಿರ್ವಹಣ ವೆಚ್ಚದ ಅಡಿ ಮತ್ತೆ ದರ ಹೆಚ್ಚಳ ಮಾಡುವುದು ತಳ್ಳಿಹಾಕುವಂತಿಲ್ಲ. ಆಗ ಎರಡೆರಡು ಬಾರಿ ದರ ಏರಿಕೆ ಹೊರೆ ನೇರ ಗ್ರಾಹಕರ ಮೇಲೆ ಬೀಳಲಿದೆ.


Click it and Unblock the Notifications