ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ವಿರುದ್ಧ ಕಠಿಣ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದರೂ, ಉದ್ಯಮಿಗಳಿಗೆ ಭಾರತದ ಮೇಲಿನ ನಂಬಿಕೆ ಮಾತ್ರ ಕಮ್ಮಿಯಾಗಿಲ್ಲ. ಡೊನಾಲ್ಡ್ ಟ್ರಂಪ್ ಇತ್ತೀಚೆಗಷ್ಟೇ ವೀಸಾದ ಮೇಲೆ ಕಠಿಣ ನೀತಿ, ಹೆಚ್1ಬಿ ವೀಸಾ ಶುಲ್ಕ 1 ಲಕ್ಷಕ್ಕೆ ಹೆಚ್ಚಿಸಿದ್ದರು. ಆದ್ರೆ ಇದೀಗ ಅಮೆರಿಕಾದ ಉದ್ಯಮಿಯೇ ಈ ನಿಯಮಕ್ಕೆ ಟಕ್ಕರ್ ಕೊಟ್ಟಿದ್ದಾರೆ. ಹೆಚ್-1ಬಿ ವೀಸಾಗೆ (H1B Visa) 1 ಲಕ್ಷ ಡಾಲರ್ ಶುಲ್ಕ ವಿಧಿಸಿದರೂ, ಅಷ್ಟೇ ಅಲ್ಲ ದಿನಕ್ಕೆ 1 ಲಕ್ಷ ಡಾಲರ್ ಕಟ್ಟಬೇಕಾಗಿ ಬಂದರೂ, ನಾವು ಭಾರತೀಯ ಟೆಕ್ಕಿಗಳನ್ನು ನೇಮಕ ಮಾಡುತ್ತೇವೆ ಎಂದು ಉದ್ಯಮಿಯೊಬ್ಬರು ಹೇಳಿದ್ದಾರೆ. ಸದ್ಯ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದಾಗಿನಿಂದ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇದ್ದಾರೆ. ಅಲ್ಲದೇ ಭಾರತದ ವಿರುದ್ಧ ಸುಂಕದ ಹೆಚ್ಚಳ, ವೀಸಾ ನಿಯಮ ಹೀಗೆ ಕ್ರಮ ಕೈಗೊಳ್ಳುತ್ತಲೇ ಇದ್ದಾರೆ. ಇದೀಗ ಅಮೆರಿಕ ಮೂಲದ ತಂತ್ರಜ್ಞಾನ ಕಂಪನಿಯ ಸಹ-ಸಂಸ್ಥಾಪಕರೊಬ್ಬರು ಭಾರತೀಯ ಟೆಕ್ಕಿಗಳ ಬಗ್ಗೆ ಅನುಕಂಪ ತೋರಿದ್ದಾರೆ. ಲಂಡನ್ ಮೂಲಕ ಪ್ರಧಾನ ಕಚೇರಿಯಾದ "ಮೆಟಾವ್ಯೂ ಎಐ" ಕಂಪನಿಯ ಸಿಟಿಒ ಶಹರಿಯಾರ್ ತಾಜ್‌ಬಕ್ಷ್, ಹೆಚ್1ಬಿ ವೀಸಾ ಶುಲ್ಕ ಏರಿಕೆಯಾದರೂ, ನಾವು ಭಾರತೀಯ ಉದ್ಯೋಗಿಗಳನ್ನು ನೇಮಕ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಪ್ರತಿದಿನ ಶುಲ್ಕ ಪಾವತಿಸಲು ಸಿದ್ಧ; ಅಮೆರಿಕ ಸಿಟಿಒ
ಅಮೆರಿಕ ಮೂಲದ ಮೆಟಾವ್ಯೂ ಎಐ (Metaview AI) ಸಹ-ಸಂಸ್ಥಾಪಕ ಮತ್ತು ಸಿಟಿಒ (CTO) ಶಹ್ರಿಯಾರ್ ತಾಜ್ಬಖ್ಶ್, ಪ್ರಸ್ತುತ "ಅಮೆರಿಕಾದ $100,000 ವಾರ್ಷಿಕ H-1B ವೀಸಾ ಶುಲ್ಕದ ಬಗ್ಗೆ ಯಾವುದೇ ಆತಂಕವಿಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೇಕಿದ್ದರೆ ಈ ಮೊತ್ತವನ್ನು "ಪ್ರತಿದಿನ" ಪಾವತಿಸಲು ತಾನು ಸಿದ್ಧ ಎಂದು ಅವರು ಹೇಳಿದ್ದಾರೆ. ಅಮೆರಿಕದಲ್ಲಿ H-1B ವಿರೋಧಿ ಭಾವನೆ ಹೆಚ್ಚುತ್ತಿರುವಾಗ, ವಿಶ್ವದ ಅತಿದೊಡ್ಡ H-1B ವೀಸಾ ಮಾರುಕಟ್ಟೆಯಾದ ಭಾರತದ ಮೇಲೆ ಮೆಟಾವ್ಯೂ ಹೇಳಿಕೆ ಭಾರೀ ಚರ್ಚೆಗೆ ಗುರಿಯಾಗಿದೆ.
H-1B ಶುಲ್ಕ ವರ್ಷಕ್ಕೆ $100,000 ಆಗಬೇಕು ಎಂದು X ಸಾಮಾಜಿಕ ಮಾಧ್ಯಮದ ಪೋಸ್ಟ್‌ಗೆ ಉತ್ತರಿಸಿದ ತಾಜ್ಬಖ್ಶ್, "ಅದನ್ನು ಪ್ರತಿದಿನ ಮಾಡಿ. ನಾನು ಆಟೋಮೆಟಿಕ್ ಪೇಮೆಂಟ್ ಸೆಟ್ ಅಪ್ ಮಾಡುತ್ತೇನೆ," ಎಂದು ಬರೆದಿದ್ದಾರೆ. "ಉತ್ತಮ ಪ್ರತಿಭೆಯುಳ್ಳ ತಂತ್ರಜ್ಞಾನ ನೌಕರರಿಂದ ಸಂಸ್ಥೆಗೆ ಬರುವ ಮೌಲ್ಯವು ಈ ವೆಚ್ಚಗಳಿಗಿಂತ ಹೆಚ್ಚು" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೆಟಾವ್ಯೂನ ನೇಮಕಾತಿ ಪೋಸ್ಟರ್‌ಗಳು ಈಗಾಗಲೇ ಭಾರತದಲ್ಲಿ ವೈರಲ್ ಆಗುತ್ತಿದೆ.ಈ ಮಧ್ಯೆ 'ಹೌದು, ನಾವು ಇನ್ನೂ H-1B ವೀಸಾಗಳನ್ನು ಸ್ಪಾನ್ಸರ್ ಮಾಡುತ್ತೇವೆ' ಎಂದು ಹೇಳಿದ್ದಾರೆ. ವೀಸಾ ಪ್ರಾಯೋಜಕತ್ವವನ್ನು ಹಲವು ಕಂಪನಿಗಳು ಹೊರೆ ಎಂದು ಪರಿಗಣಿಸುವ ಸಮಯದಲ್ಲೂ, ಮೆಟಾವ್ಯೂನ ಈ ನಿಲುವು ಆ ಹೇಳಿಕೆಯನ್ನು ತಳ್ಳಿಹಾಕಿದೆ.
ಇರಾನ್ ಮೂಲದ ತಂತ್ರಜ್ಞಾನ ಉದ್ಯಮಿ ಹಾಗೂ ಎಂಜಿನಿಯರ್ ಆದ ತಾಜ್ಬಖ್ಶ್ ಪ್ರಕಾರ, ಪರಿಣಾಮಕಾರಿ ಉತ್ಪನ್ನಗಳನ್ನು ನಿರ್ಮಿಸಲು ಕೌಶಲ್ಯಯುತ ಉದ್ಯೋಗಿಗಳು ಅಗತ್ಯ. "ಜನರ ಕಠಿಣ ಪರಿಶ್ರಮದಿಂದ ಸೃಷ್ಟಿಯಾಗುವ ಮೌಲ್ಯವನ್ನು ಒಟ್ಟುಗೂಡಿಸುವಾಗ, $100,000 ಏನೂ ಅಲ್ಲ," ಎಂದು ಅವರು ಈ ಹಿಂದೆಯೂ ಒಮ್ಮೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.


Click it and Unblock the Notifications