ಅದಾನಿ ಗ್ರೂಪ್ ಹಲವಾರು ವಂಚನೆಗಳನ್ನು ಮಾಡಿದೆ ಎಂದು ಆರೋಪಿಸಿ ಹಿಂಡನ್‌ಬರ್ಗ್ ಮಾಡಿದ ವರದಿಯ ಬಳಿಕ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಹಲವಾರು ಬೆಳವಣಿಗೆಗಳು ಕಂಡುಬಂದಿದೆ. ಸಂಸ್ಥೆಯ ಷೇರು ನಿರಂತರವಾಗಿ ಕುಸಿತ ಕಾಣುತ್ತಿದೆ. ಈ ನಡುವೆ ಅದಾನಿ ಸಂಸ್ಥೆಯೊಂದಿಗೆ ಸಂಬಂಧವನ್ನು ಹೊಂದಿರುವ ಯುಕೆ ಮೂಲದ ಹೂಡಿಕೆ ಸಂಸ್ಥೆಯಲ್ಲಿ ಡೈರೆಕ್ಟರ್ ಸ್ಥಾನದಲ್ಲಿದ್ದ ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕಿರಿಯ ಸಹೋದರ ಲಾರ್ಡ್ ಜೋ ಜಾನ್ಸನ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಲಂಡನ್ ಮೂಲದ ಎಲಾರಾ ಕ್ಯಾಪಿಟಲ್ ಸಂಸ್ಥೆಯ ನಿರ್ವಾಹಕರಾಗಿ ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್‌ರ 51 ವರ್ಷದ ಕಿರಿಯ ಸಹೋದರ ಲಾರ್ಡ್ ಜೋ ಜಾನ್ಸನ್ ನೇಮಕಗೊಂಡಿದ್ದರು. ಆದರೆ ಬುಧವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಅದಾನಿ ಗ್ರೂಪ್ ಎಫ್‌ಪಿಒ ಅನ್ನು ಹಿಂಪಡೆಯುವ ಘೋಷಣೆ ಮಾಡಿದ ದಿನವೇ ಲಾರ್ಡ್ ಜೋ ಜಾನ್ಸನ್ ರಾಜೀನಾಮೆ ನೀಡಿದ್ದಾರೆ.
ಭಾರತದ ಕಾರ್ಪೋರೇಟ್ ಸಂಸ್ಥೆಗಳಿಗೆ ಫಂಡ್ ರೈಸ್ ಮಾಡುವ ಬಂಡವಾಳ ಮಾರುಕಟ್ಟೆ ವಹಿವಾಟನ್ನು ನಡೆಸುವ ಸಂಸ್ಥೆಯೇ ಎಲಾರಾ ಆಗಿದೆ. ಎಫ್‌ಪಿಒನಲ್ಲಿ ಪ್ರಮುಖ ಪಾತ್ರವನ್ನು ಈ ಸಂಸ್ಥೆ ವಹಿಸುತ್ತದೆ. ಸಂಸ್ಥೆಯ ಉತ್ತಮ ನಿರ್ಧಾರವನ್ನು ತಾನು ಗೌರವಿಸುತ್ತೇನೆ, ನಾನು ನನ್ನ ವೈಯಕ್ತಿಕ ಅನುಭವದ ಕೊರತೆಯಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಲಾರ್ಡ್ ಜೋ ಜಾನ್ಸನ್ ತಿಳಿಸಿದ್ದಾರೆ.

ಯುಕೆ ಮಾಜಿ ಪಿಎಂ ಬೋರಿಸ್ ಸಹೋದರ ಹೇಳುವುದೇನು?
"ಲಂಡನ್ ಮೂಲದ ಭಾರತದ ಮೇಲೆ ನಿರ್ದಿಷ್ಟ ಗುರಿ ಹೊಂದಿರುವ ಹೂಡಿಕೆ ಸಂಸ್ಥೆಯಾದ ಎಲಾರಾ ಕ್ಯಾಪಿಟಲ್‌ಗೆ ನಾವು ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕಳೆದ ಜೂನ್‌ನಲ್ಲಿ ಸೇರ್ಪಡೆಯಾದೆ. ಯುಕೆ-ಭಾರತ ವಹಿವಾಟು ಮತ್ತು ಹೂಡಿಕೆ ಒಪ್ಪಂದಗಳ ಬಗ್ಗೆ ಭರವಸೆಯೊಂದಿಗೆ ಸಂಸ್ಥೆಗೆ ಸೇರ್ಪಡೆಯಾದೆ," ಎಂದು ತನ್ನ ರಾಜೀನಾಮೆ ಪತ್ರದಲ್ಲಿ ಜೋ ಜಾನ್ಸನ್ ಬರೆದಿರುವುದಾಗಿ ಮಾಧ್ಯಮ ವರದಿ ಮಾಡಿದೆ.
"ಕಾನೂನು ಬಾಧ್ಯತೆಗಳಿಗೆ ಸಂಬಂಧಿಸಿ ದೂರು ಮತ್ತು ಇತರೆ ವಿಚಾರಗಳಲ್ಲಿ ನನಗೆ ಎಲಾರಾ ಕ್ಯಾಪಿಟಲ್‌ನಿಂದ ಭರವಸೆಯನ್ನು ನೀಡಲಾಗಿದೆ. ಈ ಸಂದರ್ಭದಲ್ಲೇ ನನಗೆ ಈಗ ಈ ಸ್ಥಾನಕ್ಕೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಹಣಕಾಸು ನಿಯಂತ್ರಣದ ಪರಿಣತಿ ಇರುವುದು ಅಗತ್ಯ ಎಂದು ತಿಳಿದುಬಂದಿದೆ. ಅದಕ್ಕಾಗಿ ನಾನೀಗ ರಾಜೀನಾಮೆಯನ್ನು ನೀಡಿದ್ದೇನೆ," ಎಂದು ಕೂಡಾ ಉಲ್ಲೇಖಿಸಿದ್ದಾರೆ.
ಮಾಧ್ಯಮಗಳ ಪ್ರಕಾರ ಈ ಲಂಡನ್ ಮೂಲದ ಎಲಾರಾ ಸಂಸ್ಥೆಯ ಆಸ್ತಿ ನಿರ್ವಹಣೆ ಮಾಡುವ ವಹಿವಾಟು ಅದಾನಿ ಗ್ರೂಪ್ ಬಗ್ಗೆ ಯುಎಸ್ ಸಂಸ್ಥೆ ಹಿಂಡನ್‌ಬರ್ಗ್ ವರದಿ ಮಾಡಿದ ಬಳಿಕ ಮುನ್ನಲೆಗೆ ಬಂದಿದೆ. ಇನ್ನು ಹಿಂಡನ್‌ಬರ್ಗ್ ವರದಿಯನ್ನು ಅದಾನಿ ಗ್ರೂಪ್ ನಿರಂತರವಾಗಿ ಖಂಡಿಸಿದೆ ಮತ್ತು ಅಲ್ಲಗಳೆದಿದೆ. ಇದು ಭಾರತದ ಮೇಲೆ ಮಾಡಿದ ಆರೋಪ ಎಂದು ಕೂಡಾ ಹೇಳಿದೆ.


Click it and Unblock the Notifications