ಅಭಿನವ್ ಆಸ್ಥಾನ ಅವರ ಜೀವನ ಕಥೆ, ಸಾಮಾನ್ಯವಾಗಿ ನಾವು ಕೇಳುವ ಯಶಸ್ಸಿನ ಕಥೆಗಳಿಗಿಂತ ಸ್ವಲ್ಪ ಭಿನ್ನವಾಗಿದೆ ಎನ್ನಬಹುದು. ಉತ್ತರ ಪ್ರದೇಶದ ಬಸ್ತಿ ಮತ್ತು ಲಖಿಂಪುರದಂಥ ಸಣ್ಣ ಪಟ್ಟಣಗಳಲ್ಲಿ ಬೆಳೆದ ಅವರು, 5ನೇ ತರಗತಿಯಲ್ಲಿಯೇ ಕಂಪ್ಯೂಟರ್‌ನೊಂದಿಗೆ ಸ್ನೇಹ ಬೆಳೆಸಿಕೊಂಡರು. ಹದಿಹರೆಯದಲ್ಲೇ ವೆಬ್‌ಸೈಟ್‌ಗಳನ್ನು ವಿನ್ಯಾಸಗೊಳಿಸಿ ಹಣ ಸಂಪಾದಿಸುವಲ್ಲಿ ಯಶಸ್ವಿಯಾದರು.
ಇಂದು, ಅಭಿನವ್ ಆಸ್ಥಾನ ಅವರು ಜಾಗತಿಕವಾಗಿ ಜನಪ್ರಿಯವಾಗಿರುವ API ಪ್ಲಾಟ್‌ಫಾರ್ಮ್ ಪೋಸ್ಟ್‌ಮ್ಯಾನ್‌ನ ಸಿಇಒ ಆಗಿದ್ದಾರೆ. ಮೆಟಾ, ಪೇಪಾಲ್, ಮೈಕ್ರೋಸಾಫ್ಟ್, ಟ್ವಿಟರ್‌ನಂತಹ ದೈತ್ಯ ಕಂಪನಿಗಳು ಪೋಸ್ಟ್‌ಮ್ಯಾನ್‌ನ ಗ್ರಾಹಕರಾಗಿದ್ದಾರೆ. ಅಷ್ಟೇ ಅಲ್ಲ, ಅಂಟಾರ್ಕ್ಟಿಕಾದಂತಹ ದೂರದ ಖಂಡದಲ್ಲಿಯೂ ಪೋಸ್ಟ್‌ಮ್ಯಾನ್‌ನನ್ನು ಬಳಸುವ ಡೆವಲಪರ್‌ಗಳಿದ್ದಾರೆ.
ಸರಳ ಆರಂಭ, ದೊಡ್ಡ ಕನಸು
ಅಭಿನವ್ ಆಸ್ಥಾನ ಅವರ ಬದುಕಿನ ಜರ್ನಿಯು ಉತ್ತರ ಪ್ರದೇಶದ ಒಂದು ಸಣ್ಣ ಪಟ್ಟಣದಿಂದ ಪ್ರಾರಂಭವಾಗುತ್ತದೆ. ಗೋವಾದ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನಿಂದ ಇಂಜಿನಿಯರಿಂಗ್ ಪದವಿ ಪಡೆದ ಅಭಿನವ್ ಅವರ ತಂದೆ ಸರ್ಕಾರಿ ಉದ್ಯೋಗಿಯಾಗಿದ್ದರು. ಕೆಲಸದ ನಿಮಿತ್ತ ಕುಟುಂಬ ಬೇರೆ ಬೇರೆ ನಗರಗಳಿಗೆ ಹೋಗಬೇಕಾಗುತ್ತಿತ್ತು. ಆದರೆ, ಅಭಿನವ್ ಅವರ ಆಸಕ್ತಿ ಮಾತ್ರ ಕಂಪ್ಯೂಟರ್‌ನತ್ತಲೇ ಇತ್ತು.

ಉತ್ತರ ಪ್ರದೇಶದಲ್ಲಿ ತಮ್ಮ ಬಾಲ್ಯ ಜೀವನದೊಂದಿಗೆ ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಂಡರು. ಬಳಿಕ ಗೋವಾದ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್(ಬಿಐಟಿಎಸ್) ಕ್ಯಾಂಪಸ್ನಿಂದ ಇಂಜಿನಿಯರಿಂಗ್ ಪದವಿ ಪಡೆದುಕೊಂಡರು. ಅಭಿನವ್ ಆಸ್ಥಾನ ಅವರು 5ನೇ ತರಗತಿಯಲ್ಲಿರುವಾಗಲೇ ಕಂಪ್ಯೂಟರ್ ಬಗ್ಗೆ ಕಲಿತುಕೊಂಡಿದ್ದರು. ಕಂಪ್ಯೂಟರ್ ಅವರನ್ನು ಒಬ್ಬ ಯಶಸ್ವಿ ಉದ್ಯಮಿಯಾಗಿ ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ತಮ್ಮ ಹದಿಹರೆಯದ ವಯಸ್ಸಿನಲ್ಲಿಯೇ ಅಭಿನವ್ ಅವರು ವೆಬ್ಸೈಟ್ಗಳನ್ನು ಡಿಸೈನ್ ಮಾಡುವ ಮೂಲಕ ಡಾಲರ್ ರೂಪದಲ್ಲಿ ಹಣ ಸಂಪಾದನೆಯನ್ನು ಮಾಡುತ್ತಿದ್ದರು. ಅಷ್ಟೇಅಲ್ಲ ಅವರು ಯಾಹೂ ಕ್ಲೋನ್ ಅನ್ನು ಕೂಡ ಅಭಿವೃದ್ಧಿಪಡಿಸಲು ಪ್ರಯತ್ನಿಸಿದ್ದರು. ಆದರೆ ಆ ಪ್ರಾಜೆಕ್ಟ್ ಕಾರ್ಯರೂಪಕ್ಕೆ ಬರುವಲ್ಲಿ ಯಶಸ್ವಿಯಾಗಿರಲಿಲ್ಲ.
ತಮ್ಮ ಹದಿಹರೆಯದ ಜೀವನದಲ್ಲೇ ವೆಬ್ಸೈಟ್ ಗಳನ್ನು ನಿರ್ಮಿಸಿದ ಬಳಿಕ ಅವರು ಕಾಲೇಜಿನಲ್ಲಿ BITS360 ಎಂಬ ಪ್ರಾಡೆಕ್ಟ್ ಅನ್ನು ಸ್ಥಾಪಿಸಿದ್ದರು. ಅವರು ತಮ್ಮ ವೃತ್ತಿ ಜೀವನವನ್ನು ಯಾಹೂನಲ್ಲಿ ಇಂಟರ್ನಿಯಾಗಿ ಪ್ರಾರಂಭಿಸಿದ್ದರು. ನಂತರ TeliportMe ಎಂಬ ಕಂಪೆನಿಯನ್ನು ಸ್ಥಾಪಿಸಿದರು. ತಾನು ನಿಜವಾಗಿಯೂ ಸಾಧಿಸಬೇಕಾದ ದಾರಿ ಬಹಳ ದೊಡ್ಡದಿದೆ ಅಂದುಕೊಂಡು, ಅದಕ್ಕಾಗಿ ಅಭಿನವ್ ಅವರು 2013ರಲ್ಲಿ CTO ಕೆಲಸವನ್ನು ತೊರೆಯಲು ನಿರ್ಧರಿಸಿದ್ದರು. ತಮ್ಮ ಖರ್ಚು-ವೆಚ್ಚದ ಬಿಲ್ಗಳನ್ನು ಪಾವತಿಸುವುದಕ್ಕೆ ತಂದೆಯ ನೆರವು ಪಡೆಯಲು ಬಯಸಿರಲಿಲ್ಲ. ಅದನ್ನು ಅವರು ಕನ್ಸಲ್ಟಿಂಗ್ ಪ್ರಾಜೆಕ್ಟ್ ಗಳ ಮೂಲಕ ನಿರ್ವಹಿಸಿದರು. ಈ ನಡುವೆ ಅಭಿನವ್ ಅವರು ಸೈಡ್ ಪ್ರಾಜೆಕ್ಟ್ ಆಗಿ ಪೋಸ್ಟ್ಮ್ಯಾನ್ ಅನ್ನು 2012ರಲ್ಲಿ ಪ್ರಾರಂಭಿಸಿದರು. ಅದನ್ನು ಪ್ರಾರಂಭಿಸಿದ ಕೂಡಲೇ ಅದರಲ್ಲಿರುವ ವಿಪುಲ ಅವಕಾಶಗಳನ್ನು ಮನಗಂಡರು. ಬಳಿಕ 2014ರಲ್ಲಿ ಅಭಿನವ್ ಅವರು ಅಭಿಜಿತ್ ಕೇನ್ ಹಾಗೂ ಅಂಕಿತ್ ಸೋಬಿತ್ ಎಂಬ ಇಬ್ಬರು ಸ್ಥಾಪಕರ ಜತೆ ಸೇರಿಕೊಂಡು ಪೂರ್ಣ ಪ್ರಮಾಣದ ಕಂಪೆನಿಯನ್ನು ಅಧಿಕೃತವಾಗಿ ಪ್ರಾರಂಭಿಸಿದರು. ಅಭಿಜಿತ್ ಅವರು TeliportMeಯಲ್ಲಿ ಪರಿಚಿತರಾಗಿದ್ದು, ಸೋಬಿತ್ ಅವರನ್ನು ಯಾಹೂನಲ್ಲಿ ಇಂಟರ್ನ್ಶಿಫ್ ಮಾಡುವಾಗ ಭೇಟಿಯಾಗಿದ್ದರು.
ಗೂಗಲ್ ಕ್ರೋಮ್ ವೆಬ್ ಸ್ಟೋರ್‌ನಲ್ಲಿ ಜನಪ್ರಿಯತೆ ಗಳಿಸಿದ ನಂತರ, ಪೋಸ್ಟ್‌ಮ್ಯಾನ್‌ನ ಬೆಳವಣಿಗೆಗೆ ವೇಗ ಸಿಕ್ಕಿತು. ದಿನೇ ದಿನೇ ಹೆಚ್ಚುತ್ತಿದ್ದ ಬಳಕೆದಾರರ ಸಂಖ್ಯೆ, ಹೂಡಿಕೆದಾರರನ್ನು ಆಕರ್ಷಿಸಿತು. ಕೇವಲ ಆರು ವರ್ಷಗಳಲ್ಲಿ ಪೋಸ್ಟ್‌ಮ್ಯಾನ್ ಬಿಲಿಯನ್ ಡಾಲರ್ ಕಂಪನಿಯಾಗಿ ಬೆಳೆಯಿತು. 2022ರ ಏಪ್ರಿಲ್‌ನಲ್ಲಿ, 20 ಮಿಲಿಯನ್‌ಗಿಂತಲೂ ಹೆಚ್ಚು ಜನರು ಪೋಸ್ಟ್‌ಮ್ಯಾನ್‌ನನ್ನು ಬಳಸುತ್ತಿದ್ದರು ಮತ್ತು ಕಂಪನಿಗೆ 433 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಹೂಡಿಕೆ ಬಂದಿತ್ತು. ಅಭಿನವ್ ಆಸ್ಥಾನ ಈಗ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಾಸವಾಗಿದ್ದು, ನೆಕ್ಸಸ್ ವೆಂಚರ್ ಪಾರ್ಟನರ್ಸ್, ಸಿಆರ್ವಿ ಮತ್ತು ಇನ್ಸೈಟ್ ಪಾರ್ಟನರ್ಸ್‌ನಂತಹ ಪ್ರತಿಷ್ಠಿತ ಹೂಡಿಕೆದಾರರು ಪೋಸ್ಟ್‌ಮ್ಯಾನ್‌ನ ಬೆಳವಣಿಗೆಯಲ್ಲಿ ನಂಬಿಕೆ ಇಟ್ಟಿದ್ದಾರೆ. $ 5.6 ಶತಕೋಟಿ ಮೌಲ್ಯದ ಕಂಪನಿಯ CEO ಆಗಿ ಸಂಸ್ಥೆಯನ್ನು ಯಶಸ್ನಿಯಾಗಿ ಮುನ್ನಡೆಸುತ್ತಿದ್ದಾರೆ.


Click it and Unblock the Notifications